ಮಂಗಳವಾರ, ಸೆಪ್ಟೆಂಬರ್ 29, 2020
27 °C

ಹುಬ್ಬಳ್ಳಿ | ರೌಡಿಶೀಟರ್ ಫ್ರೂಟ್‌ ಇರ್ಫಾನ್‌ ಮೇಲೆ ಗುಂಡಿನ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಮಗನ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಾಪಸ್‌ ಹೊರಟಿದ್ದ ರೌಡಿಶೀಟರ್‌, ಧಾರವಾಡದ ಫ್ರೂಟ್‌ ಇರ್ಫಾನ್‌ (41) ಮೇಲೆ ಗುರುವಾರ ಸಂಜೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.

ನಗರದ ಕಾರವಾರ ರಸ್ತೆಯ ಗುಡಿಹಾಳ ಕ್ರಾಸ್‌ನಲ್ಲಿರುವ ಆಲ್‌ ತಾಜ್‌ ಹೋಟೆಲ್‌ನಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಹೊರಬಂದು ಇರ್ಫಾನ್‌ ಕಾರು ಏರಲು ಸಿದ್ಧರಾದಾಗ, ಕಪ್ಪು ಬಟ್ಟೆಗಳನ್ನು ಧರಿಸಿದ್ದ ನಾಲ್ವರು ದುಷ್ಕರ್ಮಿಗಳು ಮನಬಂದಂತೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇರ್ಫಾನ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಇರ್ಫಾನ್‌ ನಿಂತಿದ್ದ ಕಾರಿನ ಸಮೀಪ ಕಪ್ಪು ಜಾಕೆಟ್‌ ಧರಿಸಿದ್ದ ವ್ಯಕ್ತಿಯೊಬ್ಬ ಹಿಂದಿನಿಂದ ಬಂದು ಮೊದಲು ಗುಂಡು ಹಾರಿಸಿದ್ದು, ಆ ವ್ಯಕ್ತಿಯ ಮುಂದೆ ಬುಲೆಟ್‌ ಬೈಕ್‌ ಮೇಲೆ ಬಂದ ಇನ್ನಿಬ್ಬ ದುಷ್ಕರ್ಮಿಗಳು ಕೂಡ ಗುಂಡಿನ ಮಳೆ ಸುರಿಸಿದರು. ಬಳಿಕ ಮೂವರೂ ಸೇರಿ ಒಂದೇ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಅಲ್ಲೇ ಇದ್ದ ನಾಲ್ಕನೇ ದುಷ್ಕರ್ಮಿ ಬೈಕ್‌ ಏರಿ ಓಡಿ ಹೋಗಲು ಪ್ರಯತ್ನಿಸಿದರೂ ತಕ್ಷಣಕ್ಕೆ ಯಾವ ಬೈಕ್ ಸಿಗಲಿಲ್ಲ. ಆಗ ಆತ ದುರ್ಗಾ ಬಾರ್‌ ಮತ್ತು ಗುಡಿಹಾಳ ಕ್ರಾಸ್‌ನ ರಸ್ತೆಯಲ್ಲಿ ಸುತ್ತಲೂ ಓಡಾಡಿ ಕಲಘಟಗಿ ರಸ್ತೆಯಿಂದ ಬಂದ ಬೈಕ್‌ ಏರಿ ಪರಾರಿಯಾಗಿದ್ದಾನೆ. ಈ ಎಲ್ಲಾ ದೃಶ್ಯಗಳು ಅಲ್‌ ತಾಜ್‌ ಹೋಟೆಲ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಸಾಮಾಜಿಕ ತಾಣದಲ್ಲಿಯೂ ಹರಿದಾಡುತ್ತಿವೆ.


ಇರ್ಫಾನ್ ರೌಡಿಶೀಟರ್

ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರ್‌ ಆರ್‌. ದಿಲೀಪ್‌ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿ ಪರಿಶೀಲಿಸಿದರು.

ಇರ್ಫಾನ್‌ ವಿರುದ್ಧ ಸಾಕ್ಷಿದಾರರಿಗೆ ಬೆದರಿಕೆ, ಬಡ್ಡಿ ವ್ಯವಹಾರ, ಅಕ್ರಮ ಭೂ ಕಬಳಿಕೆ ಕೃತ್ಯಗಳಲ್ಲಿ ತೊಡಗಿಕೊಂಡಿದ್ದ ಬಗ್ಗೆ ಆರೋಪಗಳಿದ್ದವು. ಆದ್ದರಿಂದ 2020ರ ಅಕ್ಟೋಬರ್‌ 21ರ ತನಕ ಚಾಮರಾಜನಗರ ಜಿಲ್ಲೆಗೆ ಗಡಿಪಾರು ಮಾಡಲಾಗಿತ್ತು. ಗಡಿಪಾರಿಗೆ ಆತ ಧಾರವಾಡ ಜಿಲ್ಲಾ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದ.

ಆತಂಕಗೊಂಡ ಜನ: ಜನನಿಬಿಡ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದ ಕಾರಣ ಜನ ಆತಂಕಕ್ಕೆ ಒಳಗಾಗಿದ್ದರು. ನೋಡನೋಡುತ್ತಿದ್ದಂತೆಯೇ ಗುಂಡಿನ ಸದ್ದು ಮೊಳಗಿದ್ದು, ಸಂಜೆ 5.30ಕ್ಕೆ ಘಟನೆ ಜರುಗಿದ್ದು ಜನರಲ್ಲಿ ಭಯದ ವಾತಾವರಣ ಮೂಡಿಸಿದೆ.

‘ನಮ್ಮ ಹೋಟೆಲ್‌ಗೆ ನಿತ್ಯ ಸಾಕಷ್ಟು ಜನ ಬರುತ್ತಾರೆ. ಹೋಟೆಲ್‌ನಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಹೊರಹೋಗುತ್ತಿದ್ದ ಇರ್ಫಾನ್‌ ಮೇಲೆ ಹಠಾತ್ತನೆ ದಾಳಿ ನಡೆಯಿತು. ಕೈಯಿಂದ ರಕ್ತ ಸೋರುತ್ತಿದ್ದ ಕಾರಣ ಅಕ್ಕಪಕ್ಕದಲ್ಲಿದ್ದ ಆಪ್ತರು ನೆರವಾದರು. ದಿಢೀರನೆ ಜನಸಂಚಾರ ಕಡಿಮೆಯಾಯಿತು’ ಎಂದು ಆಲ್‌ ತಾಜ್‌ ಹೋಟಲ್‌ ಸಿಬ್ಬಂದಿ ತಿಳಿಸಿದರು.

ತನಿಖೆಗೆ ಆರು ತಂಡ ರಚನೆ: ದಿಲೀಪ್‌

ಗುಂಡಿನ ದಾಳಿ ಕುರಿತು ತನಿಖೆ ನಡೆಸಲು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಆರ್‌.ಬಿ. ಬಸರಗಿ ನೇತೃತ್ವದಲ್ಲಿ ಆರು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್‌ ಕಮಿಷನರ್‌ ದಿಲೀಪ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳುವಂತಿಲ್ಲ. ತೆಗೆದುಕೊಂಡವರು ಎಷ್ಟೇ ಪ್ರಭಾವಿಯಾಗಿದ್ದರೂ ಸುಮ್ಮನಿರುವುದಿಲ್ಲ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು