ಬುಧವಾರ, ಸೆಪ್ಟೆಂಬರ್ 22, 2021
23 °C

ನವಲಗುಂದ: ಬೆಣ್ಣೆಹಳ್ಳ ಪ್ರವಾಹ- ನೆಲಕಚ್ಚಿದ ಮನೆಗಳು 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವಲಗುಂದ: ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳಗಳು ಉಕ್ಕಿ ಹರಿಯುತ್ತಿದ್ದು ಹಳ್ಳದ ಪಾತ್ರದ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆಹಾನಿ ಸಂಭವಿಸಿದೆ. 100ಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ.

ತಾಲ್ಲೂಕಿನ ಮೊರಬ, ಶಿರಕೋಳ, ಆಯಟ್ಟಿ, ಶಿರೂರ, ಗುಮ್ಮಗೋಳ, ಜಾವೂರ, ಹನಸಿ, ಬ್ಯಾಲ್ಯಾಳ, ಹೆಬ್ಬಾಳ, ನವಲಗುಂದ, ಗುಡಿಸಾಗರ, ನಾಗನೂರ, ಕಡದಳ್ಳಿ, ಅಮರಗೋಳ ಹಾಗೂ ಬೆಳವಟಗಿ ಸೇರಿದಂತೆ ಅನೇಕ ಗ್ರಾಮಗಳ ಜಮೀನುಗಳಲ್ಲಿ ಬೆಣ್ಣೆಹಳ್ಳದ ನೀರು ನುಗ್ಗಿದೆ. ಪರಿಣಾಮ ಹೆಸರು, ಹತ್ತಿ, ಗೋವಿನಜೋಳ ಹಾಗೂ ಈರುಳ್ಳಿ ಬೆಳೆಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದೆ. 

ರೋಹಿಣಿ ಮಳೆ ಚೆನ್ನಾಗಿ ಆಗಿದ್ದರಿಂದ  ರೈತರು ಬಿತ್ತನೆ ಮಾಡಿದ್ದರು. ಫಸಲು ಕೂಡ ಚೆನ್ನಾಗಿ ಬೆಳೆದು ನಿಂತಿತ್ತು. ಆದರೆ, ಈಗ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ತಕ್ಷಣವೇ ಸರ್ಕಾರ ಎಕರೆಗೆ ₹30 ಸಾವಿರ ಬೆಳೆಹಾನಿ ಪರಿಹಾರ ಘೋಷಣೆ ಮಾಡಬೇಕು ಎಂದು ರೈತ ಮುಖಂಡರಾದ ಲೋಕನಾಥ ಹೆಬಸೂರ, ಪರಶುರಾಮ ಹಕ್ಕರಕಿ, ನಾಗನಗೌಡ ಪಾಟೀಲ, ಕೊಟ್ರೇಶ ಶಿರೂರ, ಶಂಕ್ರಪ್ಪ ಅಂಬಲಿ ಒತ್ತಾಯಿಸಿದ್ದಾರೆ.

ದಾಖಲೆ ಸಲ್ಲಿಸಿ: ಬೆಳೆ ಹಾನಿಯಾಗಿದ್ದರೆ ಬೆಳೆವಿಮಾ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲು ಅವಕಾಶ ನೀಡಲಾಗಿದೆ. ರೈತರು ಬೆಳೆವಿಮೆ ಕಟ್ಟಿದ ರಶೀದಿಯೊಂದಿಗೆ 72 ಗಂಟೆಯ ಒಳಗಾಗಿ ರೈತ ಸಂಪರ್ಕ ಕೇಂದ್ರಕ್ಕೆ ಅರ್ಜಿ ಸಲ್ಲಿಸಬೇಕು.

ನವಲಗುಂದ ರೈತರು ಬೆಳೆವಿಮಾ ಕಂಪನಿಯ ಪ್ರತಿನಿಧಿ ಶಂಕರ ಪಾಟೀಲ (9590928886), ಅಣ್ಣಿಗೇರಿಯ ಮುತ್ತು ಹಿರೇಗೌಡರ (6360335368) ಸಂಪರ್ಕಿಸಬೇಕು. ಇನ್ನಷ್ಟು ಮಾಹಿತಿಗೆ ಕೃಷಿ ಅಧಿಕಾರಿಗಳಾದ ಎಂ.ಕಳ್ಳಿಮನಿ ಮೊ.8277931311 ಹಾಗೂ ರವಿ ಕಿರಣ್ ಮೊ.8277931361 ಸಂಪರ್ಕಿಸಬೇಕೆಂದು ಸಹಾಯಕ ಕೃಷಿ ನಿರ್ದೇಶಕ ಶ್ರೀನಾಥ ಚಿಮ್ಮಲಗಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು