ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್‌ಸಿ: ತಪ್ಪು ಕಲ್ಪನೆ ಬಿಡಿ: ಐಆರ್‌ಎಸ್‌ ಅಧಿಕಾರಿ ಸುಧೀರ್ ಪಾಟೀಲ್

Last Updated 31 ಆಗಸ್ಟ್ 2019, 14:43 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಲೋಕಸೇವಾ ಆಯೋಗದ ಪರೀಕ್ಷೆ (ಯುಪಿಎಸ್‌ಸಿ) ಬಗ್ಗೆ ಹಲವರು ತಪ್ಪು ಕಲ್ಪನೆಗಳನ್ನು ಇಟ್ಟುಕೊಂಡಿದ್ದಾರೆ. ಮೊದಲು ಅದರಿಂದ ಹೊರ ಬರಬೇಕು. ಇಲ್ಲದಿದ್ದರೆ ಗುರಿ ಸಾಧನೆ ಅಸಾಧ್ಯ’ ಎಂದು ಐಆರ್‌ಎಸ್‌ ಅಧಿಕಾರಿ ಸುಧೀರ ಪಾಟೀಲ ಅಭಿಪ್ರಾಯಪಟ್ಟರು.

ಬೆಳಗಾವಿ ಜಿಲ್ಲೆಯವರಾದ ಸುಧೀರ ಪಾಟೀಲ, ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರ. ಪದವಿ ಬಳಿಕ, ಯುಪಿಎಸ್‌ಸಿ ಪರೀಕ್ಷೆಯತ್ತ ತಮ್ಮ ಚಿತ್ತ ನೆಟ್ಟ ಅವರು, ಮೂರನೇ ಪ್ರಯತ್ನದಲ್ಲಿ ಯಶಸ್ಸು ಕಂಡವರು.

ಸದ್ಯ ಹುಬ್ಬಳ್ಳಿಯಲ್ಲಿ ಆದಾಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರಾಗಿರುವ ಅವರು, ತಮ್ಮ ಪರೀಕ್ಷೆ ತಯಾರಿಯ ಅನುಭವವನ್ನು ‘ಎಜು ಎಕ್ಸ್‌ಪೊ’ದಲ್ಲಿ ಹಂಚಿಕೊಂಡರು.

ಯುಪಿಎಸ್‌ಸಿಗೆ ತಯಾರಿ ನಡೆಸುವವರಲ್ಲಿ ಸಾಮಾನ್ಯವಾಗಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಅವರು ನೀಡಿದ ಅಮೂಲ್ಯ ಟಿಪ್ಸ್‌ಗಳು ಹೀಗಿವೆ.

* ಯುಪಿಎಸ್‌ಸಿ ಪರೀಕ್ಷೆ ಎದುರಿಸಲು ಸ್ವಯಂ ಪ್ರೇರಣೆ ಹಾಗೂ ಕಠಿಣ ಪರಿಶ್ರಮ ಅಗತ್ಯ. ಇದು ನೂರು ಮೀಟರ್ ಓಟವಲ್ಲ. ಬದಲಿಗೆ ಮ್ಯಾರಥಾನ್. ಸ್ಥಿರತೆ ಕಾಯ್ದುಕೊಳ್ಳುವುದು ಅತಿ ಮುಖ್ಯ.

* ಪರೀಕ್ಷೆಗೆ ಇಂಗ್ಲಿಷ್‌ನಲ್ಲೇ ಓದಬೇಕಿಲ್ಲ. ಕನ್ನಡ ಭಾಷೆಯಲ್ಲಿ ಜ್ಞಾನ ಹಾಗೂ ಬರವಣಿಗೆಯ ಹಿಡಿತ ಇದ್ದರೆ, ಅದೇ ಭಾಷೆಯಲ್ಲಿ ಪರೀಕ್ಷೆ ಬರೆಯಬೇಕು. ಯಾವ ಭಾಷೆಯಲ್ಲಿ ಪರೀಕ್ಷೆಯಲ್ಲಿ ಬರೆಯುತ್ತೇವೆ ಎಂಬುದಕ್ಕಿಂತ, ಹೇಗೆ ಬರೆಯುತ್ತೇವೆ ಎಂಬುದು ಮುಖ್ಯ.

* ಇಂಗ್ಲಿಷ್ ಕಷ್ಟ ಎಂಬ ಭಾವನೆಯಿಂದ ಹೊರಬರಲು, ನಿತ್ಯ ಇಂಗ್ಲಿಷ್ ದಿನಪತ್ರಿಕೆ ಓದಲು ಆರಂಭಿಸಿ. ಅರ್ಥವಾಗದ ಪದಗಳಿಗೆ ಶಬ್ದಕೋಶ ನೋಡಿ. ಧೀರ್ಘ ಅಭ್ಯಾಸದಿಂದ ಇಂಗ್ಲಿಷ್‌ ಜ್ಞಾನ ವೃದ್ಧಿಯಾಗುತ್ತದೆ.

* ಯುಪಿಎಸ್‌ಸಿ ಪರೀಕ್ಷೆ ನಮ್ಮಂತವರಿಗಲ್ಲ. ಅದೇನಿದ್ದರೂ ಐಐಟಿ, ಐಐಎಂ ಮಾಡಿದವರಿಗೆ ಎಂಬ ಮನೋಭಾವನೆ ಬಿಡಬೇಕು. ಅವಕಾಶಗಳು ಎಲ್ಲರಿಗೂ ಸಮಾನವಾಗಿರುತ್ತವೆ ಎಂಬುದನ್ನು ಅರಿಯಬೇಕು.

* ಮಾಡಿದ ತಪ್ಪು ಪುನರಾವರ್ತನೆಯಾದರೆ, ಪ್ಲಾನ್ ಬದಲಿಸಿಕೊಳ್ಳಬೇಕು. ಸೂಕ್ತ ಮಾರ್ಗದರ್ಶಕರಿಂದ ಅಗತ್ಯ ಸಲಹೆ ಪಡೆಯಬೇಕು.

* ಮೂರು ತಿಂಗಳಿರುವಾಗಲೇ ಎಲ್ಲ ಪಠ್ಯಕ್ರಮವನ್ನು (ಸಿಲಬಸ್) ಓದಿ ಮುಗಿಸಿ, ಪುನರ್‌ಮನನ (ರಿವೀಜನ್) ಆರಂಭಿಸಬೇಕು. ಇಲ್ಲದಿದ್ದರೆ, ಓದು ಅಪೂರ್ಣವಾಗುತ್ತದೆ.

* ಯಾವ ವಿಷಯದಲ್ಲಿ ಜ್ಞಾನ ಇರುತ್ತದೊ ಅದನ್ನೇ, ಐಚ್ಛಿಕ ವಿಷಯವಾಗಿ ಆರಿಸಿಕೊಳ್ಳಬೇಕು. ಆ ವಿಷಯದಲ್ಲಿ ಪ್ರತಿ ವರ್ಷ ಆಗುತ್ತಿರುವ ಬದಲಾವಣೆ ಬಗ್ಗೆ ತಿಳಿದುಕೊಳ್ಳಬೇಕು. ಯಾರೋ ಹೇಳಿದರು ಅಥವಾ ಸ್ನೇಹಿತರು ಆರಿಸಿಕೊಂಡರು ಎಂದು ಗೊತ್ತಿಲ್ಲದ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಾರದು.

* ಗಂಭೀರ ಅಧ್ಯಯನದ ಜತೆಗೆ, ಹಳೇ ಪ್ರಶ್ನೆ ಪತ್ರಿಕೆಗಳನ್ನು ಪರಿಹರಿಸುತ್ತಿರಬೇಕು. ಸಿ ಸ್ಯಾಟ್ ಪರೀಕ್ಷೆಗೂ ಹೀಗೆಯೇ ತಯಾರಿ ನಡೆಸಬೇಕು. ಆನ್‌ಲೈನ್ ಪರೀಕ್ಷೆಗಳನ್ನು ತೆಗೆದುಕೊಳ್ಳುವುದು ಇನ್ನೂ ಉತ್ತಮ.

* ಪರೀಕ್ಷೆಯಲ್ಲಿ ಮೊದಲು ಗೊತ್ತಿರುವ ಪ್ರಶ್ನೆಗಳಿಗೆ ಉತ್ತರಿಸಬೇಕು. ಆಗ, ಭಾಗಶಃ ಉತ್ತರ ಗೊತ್ತಿರುವ ಪ್ರಶ್ನೆಗಳಿಗೆ ಯೋಚಿಸಿ ಉತ್ತರಿಸಲು ಸಮಯ ಸಿಗುತ್ತದೆ.

* ಪ್ರಚಲಿತ ಪ್ರಬಂಧ ವಿಷಯಗಳ ಪಟ್ಟಿ ಮಾಡಿಕೊಂಡು, ಸಮಯದ ಮಿತಿಯಲ್ಲಿ ಪ್ರಬಂಧ ಬರೆಯುವುದನ್ನು ಅಭ್ಯಾಸ ಮಾಡಬೇಕು.

* ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆದಿದ್ದರೂ, ಸಂದರ್ಶನದಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡಲು ನನ್ನಿಂದಾಗುವುದಿಲ್ಲ ಎಂಬ ಆತಂಕ ಇರುತ್ತದೆ. ಅಂತಹ ಸಂದರ್ಭದಲ್ಲಿ ಕನ್ನಡದಲ್ಲೇ ಸಂದರ್ಶನ ನೀಡಬಹುದು. ಅದಕ್ಕಾಗಿ ಭಾಷಾಂತರಕಾರರು ಇರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT