ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಹೋರಾಟ, ದಿಕ್ಕು ತಪ್ಪಿಸುವ ಇತಿಹಾಸ: ಪ್ರಲ್ಹಾದ ಜೋಶಿ

ದೇಶ ವಿಭಜನೆಯ ಕರಾಳ ನೆನಪಿನ ದಿನದ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ
Last Updated 14 ಆಗಸ್ಟ್ 2022, 8:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಸ್ವಾತಂತ್ರ್ಯ ಹೋರಾಟವನ್ನು ಸಿಪಾಯಿ ಧಂಗೆ‌ ಎಂದು ಕರೆದರು. ಸ್ವಾತಂತ್ರ್ಯ ಬಂದ ನಂತರ ದೇಶ ಒಂದಾಯಿತು ಎಂದು ಸುಳ್ಳು ಹೇಳಿದರು. ದೇಶದ ಇತಿಹಾಸ ತಿಳಿಸುವ ನಿಟ್ಟಿನಲ್ಲಿ ದಿಕ್ಕು ತಪ್ಪಿಸುವ ಕೆಲಸ ನಡೆದಿತ್ತು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸಂವಹನ ಇಲಾಖೆ ಮತ್ತು ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ವತಿಯಿಂದ ಭಾನುವಾರ ನಗರದ ಬಿವಿಬಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯದ ಅಮೃತ‌ ಮಹೋತ್ಸವ ಹಾಗೂ ದೇಶ ವಿಭಜನೆಯ ಕರಾಳ ನೆನಪಿನ ದಿನದ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಪೂರ್ವ ದೇಶ ಒಂದಾಗಿರಲಿಲ್ಲ, ಒಡೆದು ಚೂರಾಗಿತ್ತು ಎಂದು ಹೇಳಲಾಗುತ್ತಿದೆ. ಆದರೆ, 1921ರಲ್ಲಿಯೇ ಕಿತ್ತೂರು ರಾಣಿ ಚನ್ನಮ್ಮ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿದ್ದಳು. ಸ್ವಾತಂತ್ರ್ಯಕ್ಕಾಗಿ ಗಾಂಧೀಜಿ ಅಹಿಂಸಾತ್ಮಕ ಹೋರಾಟ ನಡೆಸಿದರೆ, ಭಗತ್ ಸಿಂಗ್, ಚಂದ್ರಶೇಖರ ಆಜಾದ್, ರಾಜಗುರು ಅವರು ಕ್ರಾಂತಿಕಾರಿ ನಡೆಯ ಮೂಲಕ ಹೋರಾಟ ನಡೆಸಿದ್ದರು. ಕನಸು ಕಾಣುವ ವಯಸ್ಸಲ್ಲಿ ಲೆಕ್ಕವಿಲ್ಲದಷ್ಟು ಯುವಕರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ದೇಶ ಒಂದಾಗಿಲ್ಲದಿದ್ದರೆ ಈ ಹೋರಾಟಗಳು ಹೇಗೆ ನಡೆಯುತ್ತಿತ್ತು? ಮೆಕಾಲೆ ಶಿಕ್ಷಣ ದೇಶದ ಜನತೆ ಬುದ್ದಿಯನ್ನೇ ಕೆಡಿಸುವ ಕೆಲಸ ಮಾಡಿದೆ’ ಎಂದರು.

‘ಆಂಗ್ಲ ಭಾಷೆ ಕಲಿಯಲೇಬೇಕು ಎಂದು ಬ್ರಿಟೀಷರು ಒತ್ತಡ ಹಾಕಲು ಯತ್ನಿಸಿದರು. ಅದನ್ನು ಕಲಿಯದಿದ್ದರೆ ಅಸ್ತಿತ್ವವೇ ಇಲ್ಲ ಎಂದು ಸ್ವಾತಂತ್ರ್ಯಾನಂತರವೂ ಮುಂದುವರಿಸಿಕೊಂಡು ಬಂದರು. ನಮ್ಮ ದೇಶದ ಭಾಷೆಗೆ ಹಾಗೂ ಅದರ ಮಣ್ಣಿಗೆ ವಿಶೇಷ ಗುಣವಿದೆ. ಇವುಗಳ ಸೂಕ್ಷ್ಮ ‌ಅರಿಯಬೇಕು. ದೇಶಕ್ಕೆ ಹೇಗೆ ಸ್ವಾತಂತ್ರ್ಯ ಬಂದಿದೆ? ದೇಶ ವಿಭಜನೆ ಸಂದರ್ಭದಲ್ಲಿ ಏನೆಲ್ಲ ಕಹಿ ಘಟನೆಗಳು ನಡೆದವು? ಎಷ್ಟು ಮಂದಿ ಮೃತಪಟ್ಟಿದ್ದಾರೆ? ಎಂದು ಇತಿಹಾಸ ತಿಳಿಯಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸಂವಹನ ಇಲಾಖೆ ದೇಶದ ಇತಿಹಾಸ ಹಾಗೂ ಕರಾಳ ದಿನಗಳನ್ನು ಪರಿಚಯಿಸುವ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿದೆ’ ಎಂದರು.

‘ದೇಶ ವಿಭಜನೆಯ ಕರಾಳ ನೆನಪಿನ ದಿನಗಳು’ ವಿಷಯ ಕುರಿತು ಜಿಲ್ಲಾ ಎನ್.ಎಸ್.ಎಸ್. ನೋಡಲ್ ಅಧಿಕಾರಿ ಡಾ. ಚಂದ್ರಶೇಖರ ವೈ.ಉಪನ್ಯಾಸ ನೀಡಿದರು. ಅತಿಥಿಗಳಾಗಿ ಮೇಯರ್ ಈರೇಶ ಅಂಚಟಗೇರಿ, ಬೆಂಗಳೂರಿನ ಕೇಂದ್ರ ಸಂವಹನ ಇಲಾಖೆ ನಿರ್ದೇಶಕಿ ಪಲ್ಲವಿ ಚಿಣ್ಯ, ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾಚಾರ್ಯ ಡಾ.‌ ಪಿ.ಜಿ. ತೇವರಿ, ಶೃತಿ ಎಸ್.ಟಿ. ಪಾಲ್ಗೊಂಡಿದ್ದರು. ಹಿರೇಮಠ ಕಲಾವಿದರ ತಂಡದ ಕಲಾವಿದರು ಜಾನಪದ ಗೀತೆ, ದೇಶ ಭಕ್ತಿಗೀತೆ ಪ್ರಸ್ತುತ ಪಡಿಸಿದರು.

‘ರಾಷ್ಟ್ರಧ್ವಜ ಹಾರಿಸುವುದು ದೊಡ್ಡ ಅವಕಾಶ’
‘ಮನೆ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವುದರಿಂದ ರಾಷ್ಟ್ರಧ್ವಜದ ಕಿಮ್ಮತ್ತು ಕಡಿಮೆಯಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೆಲವರು ಟೀಕಿಸುತ್ತಿದ್ದಾರೆ. ಧ್ವಜ ಹಾರಿಸಿ ಮನೆಯಲ್ಲಿ ಕುಳಿತಕೊಳ್ಳಿ ಎಂದು ಪ್ರಧಾನಿ ಹೇಳಿಲ್ಲ; ದೇಶಕ್ಕೆ ಹೇಗೆ ಸ್ವಾತಂತ್ರ್ಯ ದೊರೆಯಿತು ಎನ್ನುವ ಇತಿಹಾಸ ತಿಳಿಯಿರಿ ಎಂದು ಹೇಳಿದರು. ಮನೆಯಲ್ಲಿ ಮೂರು ದಿನ ರಾಷ್ಟ್ರಧ್ವಜ ಹಾರುತ್ತದೆ ಎಂದರೆ, ಅದಕ್ಕಿಂತ ದೊಡ್ಡ ಅವಕಾಶ ಇನ್ನೇನಿದೆ’ ಎಂದು ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT