ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಡ್ರಗ್ಸ್‌ ಮುಕ್ತ ನಗರಕ್ಕೆ ಆರು ತಿಂಗಳ ಅವಕಾಶ

ಗುರಿ ಸಾಧಿಸದಿದ್ದರೆ ಕ್ರಮ: ಗೃಹ ಸಚಿವ ಜಿ.ಪರಮೇಶ್ವರ ಎಚ್ಚರಿಕೆ
Published 18 ಆಗಸ್ಟ್ 2023, 15:45 IST
Last Updated 18 ಆಗಸ್ಟ್ 2023, 15:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಹುಬ್ಬಳ್ಳಿ–ಧಾರವಾಡ ಮಹಾನಗರ ಡ್ರಗ್ಸ್ ಮುಕ್ತ ಮಾಡಲು ಪೊಲೀಸ್‌ ಅಧಿಕಾರಿಗಳಿಗೆ ಆರು ತಿಂಗಳ ಕಾಲಾವಕಾಶ ನೀಡಿದ್ದು, ಅಷ್ಟರಲ್ಲಿ ಗುರಿ ಸಾಧಿಸದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದ್ದೇನೆ’ ಎಂದು ಗೃಹಸಚಿವ ಜಿ.ಪರಮೇಶ್ವರ ಹೇಳಿದರು.

ನವನಗರದ ಹುಬ್ಬಳ್ಳಿ–ಧಾರವಾಡ ಮಹಾನಗರ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ, ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

‘ಡ್ರಗ್ಸ್‌ ಮುಕ್ತ ರಾಜ್ಯವನ್ನಾಗಿ ಮಾಡುವುದು ನಮ್ಮ ಸರ್ಕಾರದ ಉದ್ದೇಶ. ಅದೇ ರೀತಿ ಅವಳಿ ನಗರದಲ್ಲಿಯೂ ಡ್ರಗ್ಸ್‌ ಇಲ್ಲ ಎಂದು ಸಾರ್ವಜನಿಕರು ಹೇಳಬೇಕು. ಗೋವಾ, ಒಡಿಶಾ ಸೇರಿದಂತೆ ವಿವಿಧ ರಾಜ್ಯಗಳಿಂದ ನಗರಕ್ಕೆ ಡ್ರಗ್ಸ್‌ ಸಾಗಾಟವಾಗಬಹುದು. ಅವುಗಳನ್ನು ತಡೆಯಲು ಯಾವೆಲ್ಲ ಕಾನೂನು ಬಳಕೆ ಮಾಡಿಕೊಳ್ಳಬಹುದೋ, ಅವೆಲ್ಲವನ್ನು ಬಳಸಲು ಸೂಚನೆ ನೀಡಿದ್ದೇನೆ’ ಎಂದು ತಿಳಿಸಿದರು.

‘ಸಬ್‌ ಇನ್‌ಸ್ಪೆಕ್ಟರ್‌ ಹಾಗೂ ಅವರ ಮೇಲಿನ ಹುದ್ದೆಯ ಅಧಿಕಾರಿಗಳ ತಂಡ ಅವಳಿನಗರದ ಶಾಲಾ–ಕಾಲೇಜುಗಳಿಗೆ ತಿಂಗಳಲ್ಲಿ ಒಂದು ದಿನ ಭೇಟಿ ನೀಡಿ, ‘ಪೊಲೀಸ್‌ ದಿನ’ ಆಚರಿಸಬೇಕು. ಸಂಚಾರ ನಿಯಮ, ಪೊಲೀಸ್‌ ಕರ್ತವ್ಯ, ಕಾನೂನು ಹಾಗೂ ತುರ್ತು ಸಮಯದಲ್ಲಿ ಪೊಲೀಸರು ಹೇಗೆ ನೆರವಿಗೆ ಬರುತ್ತಾರೆ ಎನ್ನುವ ಮಾಹಿತಿ ನೀಡಬೇಕು. ಈ ಕಾರ್ಯಕ್ರಮಗಳ ದಾಖಲೆಗಳನ್ನು ಸಂಗ್ರಹಿಸಿಡಬೇಕು. ಮಕ್ಕಳಿಗೆ ಪೊಲೀಸರ ಬಗ್ಗೆ ಕೆಟ್ಟ ಅಭಿಪ್ರಾಯ ಬರಬಾರದು ಹಾಗೂ ಜನಸ್ನೇಹಿ ಪೊಲೀಸ್‌ ಆಗಬೇಕು ಎನ್ನುವುದು ಇದರ ಉದ್ದೇಶ’ ಎಂದರು.

‘ಶೋಷಿತರು ಮತ್ತು ಬಡವರಿಗೆ ಆಗುತ್ತಿರುವ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡಲು ಸೂಚಿಸಿದ್ದೇನೆ. ದಾಖಲಾಗುವ ಎಸ್‌ಸಿ, ಎಸ್‌ಟಿ ಪ್ರಕರಣಗಳನ್ನು ಪರಿಶೀಲಿಸಲು ಠಾಣಾ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ಸಭೆ ನಡೆಸಬೇಕು. ಅವರ ಅಹವಾಲು ಸ್ವೀಕರಿಸಿ ನ್ಯಾಯ ಒದಗಿಸಲು ಕ್ರಮಕೈಗೊಳ್ಳಬೇಕು. ನಂತರ ಕಮಿಷನರೇಟ್‌ ಕಚೇರಿಯಲ್ಲಿಯೂ ಸಭೆ ನಡೆಸಿ, ದಾಖಲೆಗಳನ್ನು ಇಡಬೇಕು ಎಂದು ಸೂಚಿಸಲಾಗಿದೆ‘ ಎಂದರು.

‘ಕೇಂದ್ರ ಸರ್ಕಾರದಿಂದ ಸರಿಯಾಗಿ ಉನ್ನತ ಅಧಿಕಾರಿಗಳ ಹುದ್ದೆ ಹಂಚಿಕೆಯಾಗುತ್ತಿಲ್ಲ. ಇದ್ದ ಅಧಿಕಾರಿಗಳಿಗೂ ಸರಿಯಾಗಿ ಬಡ್ತಿ ಸಿಕ್ಕಿಲ್ಲ. ಹುಬ್ಬಳ್ಳಿ–ಧಾರವಾಡ ಮಹಾನಗರ ಕಮಿಷನರ್‌ ಹುದ್ದೆ ಡಿಐಜಿ ರ‍್ಯಾಂಕ್‌ ಆಗಿದ್ದು, ಅವರ ಕೊರತೆಯಿಂದಾಗಿ, ಹಿರಿಯ ಐಪಿಎಸ್‌ ಅಧಿಕಾರಿ ರೇಣುಕಾ ಸುಕುಮಾರ ಅವರನ್ನು ಕಮಿಷನರ್‌ ಆಗಿ ನೇಮಕ ಮಾಡಲಾಗಿದೆ’ ಎಂದರು.

ಹಳೇಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಅಮಾಯಕರು ಬಂಧನವಾಗಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಅಮಾಯಕರು ಬಂಧನವಾಗಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು

-ಜಿ.ಪರಮೇಶ್ವರ, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT