ಹುಬ್ಬಳ್ಳಿ: ಗಣೇಶ ಚತುರ್ಥಿ ಹಬ್ಬದ ಸಂಭ್ರಮವು ನಗರದೆಲ್ಲೆಡೆ ಮನೆ ಮಾಡಿದೆ. ಇದಕ್ಕೆ ಪೂರಕವಾಗಿ ಗಣೇಶಮೂರ್ತಿಗಳ ವಿಸರ್ಜನೆ ಹಿನ್ನೆಲೆಯಲ್ಲಿ ಪಾಲಿಕೆಯು ಈಗಾಗಲೇ ನಗರದ ಪ್ರಮುಖ ಹೊಸೂರು ಕ್ರಾಸ್ ಹತ್ತಿರದ ಬಾವಿ ಹಾಗೂ ಇಂದಿರಾಗಾಂಧಿ ಗಾಜಿನ ಮನೆ ಆವರಣದಲ್ಲಿರುವ ಬಾವಿಯನ್ನು ಸ್ವಚ್ಛಗೊಳಿಸುವ ಮೂಲಕ ಗಣೇಶ ಮೂರ್ತಿಗಳ ವಿಸರ್ಜನೆಗೆ ಅನುಕೂಲ ಕಲ್ಪಿಸಿದೆ.
ಪಾಲಿಕೆ ಮೇಯರ್ ರಾಮಪ್ಪ ಬಡಿಗೇರ, ಆಯುಕ್ತ ಈಶ್ವರ ಉಳ್ಳಾಗಡ್ಡಿ ಹಾಗೂ ಅಧಿಕಾರಿಗಳ ತಂಡವು ಬಾವಿಗಳ ಸ್ಥಳಗಳಿಗೆ ಭೇಟಿ ನೀಡಿ, ಬಾವಿಗಳ ನೀರಿನ ಸಂಗ್ರಹ, ಸ್ವಚ್ಛತೆ, ವಿದ್ಯುತ್ ದೀಪ ಅಳವಡಿಕೆ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದೆ.
ಹೊಸೂರು ಬಾವಿ ಹಾಗೂ ಇಂದಿರಾಗಾಂಧಿ ಗಾಜಿನ ಮನೆ ಬಳಿಯ ಬಾವಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಅಗತ್ಯವಿರುವಷ್ಟು ನೀರಿನ ಸಂಗ್ರಹ ಮಾಡಲಾಗಿದೆ.
ಬಾಗಿನ ಅರ್ಪಣೆ: ನಗರದ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮಹಾ ಮಂಡಳದ ವತಿಯಿಂದ ಹೊಸೂರಿನ ಬಾವಿಗೆ ಶುಕ್ರವಾರ ವಿಶೇಷ ಪೂಜೆ ಸಲ್ಲಿಸುವ ಮೂಲಕ ಬಾಗಿನ ಅರ್ಪಿಸಲಾಯಿತು.
ಚಂದ್ರಪ್ರಭಾ ಪೂಜಾರ, ಸುಮಾ ಶೀಲವಂತರ, ದ್ರಾಕ್ಷಾಯಿಣಿ ಕವಿಶೆಟ್ಟಿ, ಕೋಮಲ್ ಕಾಟವೆ ಅವರು ಬಾಗಿನ ಅರ್ಪಿಸಿದರು.
ಈ ವೇಳೆ ಮಾತನಾಡಿದ ಚಂದ್ರಪ್ರಭಾ ಪೂಜಾರ, ’ಗಣೇಶ ಚತುರ್ಥಿಯನ್ನು ಎಲ್ಲರೂ ಸಂಭ್ರಮ ಹಾಗೂ ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು. ಗಣೇಶ ಮೂರ್ತಿಗಳ ವಿಸರ್ಜನೆ ವೇಳೆಯಲ್ಲಿ ಜಾಗೃತಿ, ಎಚ್ಚರಿಕೆ ವಹಿಸಬೇಕು’ ಎಂದರು.
‘ಭೂಮಿ, ಗಂಗೆ, ಅಗ್ನಿ ಇವುಗಳನ್ನು ಪೂಜೆ ಮಾಡುವುದರಿಂದ ನಮ್ಮಲ್ಲಿ ದುಷ್ಟ ಭಾವನೆಗಳು ದೂರಾಗಿ ಮಾನವೀಯ ಮೌಲ್ಯಗಳು ಬೆಳೆಯುತ್ತವೆ. ಜೊತೆಗೆ ಮನಸ್ಸಿಗೆ ನೆಮ್ಮದಿ, ಶಾಂತಿ ಸಿಗುತ್ತದೆ’ ಎಂದರು.
‘ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಧಾರ್ಮಿಕತೆಯನ್ನು ಪೋಷಿಸುವ ನಿಟ್ಟಿನಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮಹಾ ಮಂಡಳವು ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾ ಬಂದಿರುವುದು ಅರ್ಥಪೂರ್ಣವಾಗಿದೆ’ ಎಂದು ದ್ರಾಕ್ಷಾಯಿಣಿ ಕವಿಶೆಟ್ಟಿ ಹೇಳಿದರು.
ಸುಮಾ ಹಿರೇಮಠ, ಕೋಮಲ್ ಕಾಟವೆ, ನೀಲಕಂಠಸ್ವಾಮಿ ಹಿರೇಮಠ ಮಾತನಾಡಿದರು.
ಮಂಜುಳಾ ಹತ್ತಿಮತ್ತೂರ್, ಅಕ್ಕಮಹದೇವಿ ಅಂದೇಲಿಮಠ, ಸಂಗೀತ ಜಡಿ, ಗಾಯತ್ರಿ ನೆಲ್ಲಿಕೊಪ್ಪ, ವಿಜಯಲಕ್ಷ್ಮಿ ಏಕಬೋಟೆ, ಸರಸ್ವತಿ ಮೆಹರವಾಡೆ, ರೂಪಾ ಅಂಗಡಿ, ರತ್ನಾ ಬಸಾಪುರ, ಅನಿತಾ ಜಡಿ, ಪಾರ್ವತಿ ಹಿರೇಮಠ, ಅನಿಲ ಬೇವಿನಕಟ್ಟಿ, ಅರುಣ ಹಚಡದ, ಅನಿಲ ಕವಿಶೆಟ್ಟಿ, ಚಂದ್ರಶೇಖರ ಗಾಣಿಗೇರ ಉಪಸ್ಥಿತರಿದ್ದರು.
ಗಣೇಶ ಮೂರ್ತಿ ವಿಸರ್ಜನಾ ಬಾವಿಗಳ ಸ್ವಚ್ಛತೆ ಹೊಸೂರು ಬಾವಿಗೆ ಗಣೇಶ ಮೂರ್ತಿ ವಿಸರ್ಜನಾ ಯಂತ್ರ ಅಳವಡಿಕೆ ಶಾಂತಿ, ಸೌಹಾರ್ದತೆಯಿಂದ ಹಬ್ಬ ಆಚರಿಸಲು ಮನವಿ
ಕನ್‌ವೆಯರ್ ಬೆಲ್ಟ್ ಯಂತ್ರ ಅಳವಡಿಕೆ
ನಗರದ ಮನೆಗಳಲ್ಲಿ ಪ್ರತಿಷ್ಠಾಪಿಸುವ ಚಿಕ್ಕ ಚಿಕ್ಕ ಗಣೇಶ ಮೂರ್ತಿಗಳ ವಿಸರ್ಜನೆಗೆ ಅನುಕೂಲಕ್ಕಾಗಿ ಹಾಗೂ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಪಾಲಿಕೆಯು ಹೊಸೂರು ಕ್ರಾಸ್‌ನ ಬಾವಿಗೆ ಕನ್‌ವೆಯರ್ ಬೆಲ್ಟ್ ಯಂತ್ರವನ್ನು ಅಳವಡಿಸಿದೆ. ‘ಬಾವಿಯಲ್ಲಿ ಚಿಕ್ಕ ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ಮಕ್ಕಳು ಮಹಿಳೆಯರು ಸೇರಿದಂತೆ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಸುರಕ್ಷತೆಗೆ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮಹಾಮಂಡಳವು ಪಾಲಿಕೆಗೆ ಮನವಿ ಮಾಡಿತ್ತು. ಈ ಹಿನ್ನೆಯಲ್ಲಿ ಬೆಳಗಾವಿಯ ಎಂಜಿನಿಯರ್ ಬಳಿಯಿದ್ದ ಕನ್‌ವೆಯರ್ ಬೆಲ್ಟ್ ಯಂತ್ರವನ್ನು ಬಾಡಿಗೆ ರೂಪದಲ್ಲಿ ತರಿಸಿ ಹೊಸೂರು ಕ್ರಾಸ್ ಬಾವಿಗೆ ಅಳವಡಿಸಲಾಗಿದೆ ಎಂದು’ ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯಕುಮಾರ್ ‘ಪ್ರಜಾವಾಣಿ‘ಗೆ ಮಾಹಿತಿ ನೀಡಿದರು. ‘ಹೊಸ ಕನ್‌ವೆಯರ್ ಬೆಲ್ಟ್ ಯಂತ್ರ ಖರೀದಿಗೆ ಸುಮಾರು ₹15 ಲಕ್ಷ ವ್ಯಯಿಸಬೇಕಾಗುತ್ತದೆ. ಆದರೆ ವರ್ಷಕ್ಕೆ ಒಮ್ಮೆ ಮಾತ್ರ ಇದರ ಬಳಕೆಯಾಗುತ್ತದೆ. ಈ ಕಾರಣದಿಂದಾಗಿ ಯಂತ್ರವನ್ನು ಹಬ್ಬದ ಅವಧಿಗೆ ಪ್ಯಾಕೇಜ್ ಆಧಾರದಲ್ಲಿ ಬಾಡಿಗೆಗೆ ತರಲಾಗಿದೆ. ಬಾವಿಯ ಬಳಿ ಹಬ್ಬ ಮುಗಿಯುವ ತನಕ ಇದನ್ನು ಇಡಲಾಗುವುದು. ಸಾರ್ವಜನಿಕರು ಬಾವಿಯ ಕಟ್ಟೆಯವರೆಗೆ ಹೋಗದೇ ಯಂತ್ರದಲ್ಲಿ ಗಣೇಶ ಮೂರ್ತಿಗಳನ್ನಿಟ್ಟರೆ ಯಂತ್ರದ ಮೂಲಕ ಬಾವಿಯಲ್ಲಿ ಮೂರ್ತಿಗಳ ವಿಸರ್ಜನೆಯಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.