ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ರಾಜ ನಾಲೆ ಆವರಿಸಿದ ತ್ಯಾಜ್ಯ: ಸಾಂಕ್ರಾಮಿಕ ರೋಗಭೀತಿಯಲ್ಲಿ ಸ್ಥಳೀಯರು

ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಸ್ಥಳೀಯರು
Last Updated 19 ಫೆಬ್ರುವರಿ 2020, 20:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೊಳಚೆ ನೀರು ಸರಾಗವಾಗಿ ಹರಿಯಬೇಕಾದ ನಾಲೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಕಟ್ಟಿಕೊಂಡು ಇನ್ನಿಲ್ಲದ ಸಮಸ್ಯೆ ಸೃಷ್ಟಿಸಿದೆ. ಕಣ್ಣೆದುರಿನ ಸಮಸ್ಯೆಯನ್ನು ಕಂಡರೂ, ಕಾಣದಂತೆ ಸ್ಥಳೀಯ ಅಧಿಕಾರಿಗಳು ಕುಳಿತಿದ್ದಾರೆ. ಇದರಿಂದಾಗಿ, ನಾಲೆ ಒಂದು ರೀತಿಯಲ್ಲಿ ತಿಪ್ಪೆಯಾಗಿ ಮಾರ್ಪಟ್ಟಿದೆ.

– ನಗರದ ನ್ಯೂ ಮೇದಾರ ಓಣಿಯಲ್ಲಿರುವ ರಾಜ ನಾಲಾದ ಚಿತ್ರಣವಿದು.

ಐದು ತಿಂಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ, ನಾಲೆ ಮೇಲಿದ್ದ ಪಾಲಿಕೆಯ ಹಳೇಯ ವಾಣಿಜ್ಯ ಸಂಕೀರ್ಣ ಶಿಥಿಲಗೊಂಡು ಒಂದು ಭಾಗ ವಾಲಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಪಾಲಿಕೆ, ಇಡೀ ಕಟ್ಟಡವನ್ನು ತೆರವುಗೊಳಿಸಿತು. ಆದರೆ, ನಾಲೆಗೆ ಅಕ್ಕಪಕ್ಕ ತಡೆಗೋಡೆ ನಿರ್ಮಿಸದಿರುವುದು ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ.

ಅಂಗಡಿಗಳ ತ್ಯಾಜ್ಯವೇ ಹೆಚ್ಚು:ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ನಾಲಾ ಅಕ್ಕಪಕ್ಕ ಸಿಮೆಂಟ್, ಹಾರ್ಡ್‌ವೇರ್, ದಿನಸಿ ಸೇರಿದಂತೆ ವಿವಿಧ ರೀತಿಯ ಅಂಗಡಿಗಳಿವೆ. ಜತೆಗೆ, ಉಸುಕು ಹಾಗೂ ಇಟ್ಟಿಗೆಗಳನ್ನು ಸಹ ನಾಲಾ ಪಕ್ಕವೇ ತಂದು ಮಾರಾಟ ಮಾಡುತ್ತಾರೆ. ಅಂಗಡಿಗಳ ತ್ಯಾಜ್ಯ, ಅಳಿದುಳಿದ ಉಸುಕು ಹಾಗೂ ಇಟ್ಟಿಗೆ ಚೂರಿನ ತ್ಯಾಜ್ಯ ನಾಲೆಯನ್ನು ಸೇರುತ್ತಿದೆ. ಇದರಿಂದಾಗಿ, ನಾಲೆ ಕಟ್ಟಿಕೊಂಡು ಗಬ್ಬುನಾತ ಬೀರುತ್ತಿದೆ.

‘ತಿಂಗಳುಗಳಿಂದ ಕಟ್ಟಿಕೊಂಡಿರುವ ನಾಲೆಯನ್ನು ಸ್ವಚ್ಛಗೊಳಿಸದೆ ಪಾಲಿಕೆ ನಿರ್ಲಕ್ಷ್ಯ ತೋರಿದೆ. ಹಾಗಾಗಿ, ನಾಲೆಯಲ್ಲಿ ಸಂಗ್ರಹವಾಗುತ್ತಿರುವ ತ್ಯಾಜ್ಯದ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದೆ’ ಎಂದು ಸ್ಥಳೀಯ ನಿವಾಸಿ ಪ್ರಕಾಶ ಬುರಬುರೆ ದೂರಿದರು.

‘ಸಂಜೆಯಾದರೆ ನಾಲೆಯ ಪಕ್ಕವೇ ಕೆಲವರು ಗಾಡಿಗಳಲ್ಲಿ ಚಾಟ್ಸ್ ವ್ಯಾಪಾರ ಮಾಡುತ್ತಾರೆ. ಅಲ್ಲಿಯ ತ್ಯಾಜ್ಯವೂ ನಾಲೆ ಸೇರುತ್ತಿದೆ. ಕೆಲವರು ರಾತ್ರೊರಾತ್ರಿ ತಂದು ತ್ಯಾಜ್ಯ ಸುರಿದು ಹೋಗುತ್ತಾರೆ. ಇದನ್ನು ಪ್ರಶ್ನಿಸುವವರೇ ಇಲ್ಲವಾಗಿದೆ. ಗಬ್ಬುನಾತ ಬೀರುವ ಕೊಳಚೆಯಿಂದಾಗಿ, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಅಪಾಯಕಾರಿ ರಸ್ತೆ:ರಸ್ತೆ ಕಡೆಯಿಂದ ನಾಲೆ ದಾಟಿ ಹೋಗುವ ಜಾಗ ಅತ್ಯಂತ ಕಿರಿದಾಗಿದ್ದು, ಅಪಾಯ ಆಹ್ವಾನಿಸುತ್ತಿದೆ. ಅಲ್ಲೇ, ಜನ ಓಡಾಡುವ ಜತೆಗೆ, ವಾಹನಗಳೂ ಸಂಚರಿಸುತ್ತವೆ. ಈ ವೇಳೆ ಸ್ವಲ್ಪ ಎಚ್ಚರ ತಪ್ಪಿದರೂ, ನಾಲೆಯೊಳಕ್ಕೆ ಬೀಳುವ ಸಾಧ್ಯತೆಯೇ ಹೆಚ್ಚು.

‘ಐದು ತಿಂಗಳಾದರೂ ನಾಲೆಯ ಎರಡೂ ಬದಿ ತಡೆಗೋಡೆ ನಿರ್ಮಿಸಿಲ್ಲ. ಕೆಲ ದಿನಗಳ ಹಿಂದೆ ಬೈಕೊಂದು ಬಿದ್ದಿತ್ತು. ಅದೃಷ್ಟಕ್ಕೆ ಸವಾರ ಅಪಾಯದಿಂದ ಪಾರಾದ. ಇನ್ನು ಮಕ್ಕಳು ಸೇರಿದಂತೆ, ಸ್ಥಳೀಯರು ಇಲ್ಲಿ ಓಡಾಡುವಾಗ ಏನಾದರೂ ತೊಂದರೆಯಾದರೆ ಯಾರು ಜವಾಬ್ದಾರಿ?’ ಎಂದು ವ್ಯಾಪಾರಿ ಹಿತೇಶ್ ಕುಮಾರ್ ರಾಥೋಡ್ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT