ಶನಿವಾರ, ಏಪ್ರಿಲ್ 1, 2023
29 °C

Budget | ಧಾರವಾಡ ಕಸೂತಿ ಕಲೆಯಿರುವ ಸೀರೆಯುಟ್ಟು ಸಂಸತ್ತಿಗೆ ಬಂದ ಸಚಿವೆ ನಿರ್ಮಲಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 5ನೇ ಬಜೆಟ್ ಮಂಡನೆಗಾಗಿ ಧಾರವಾಡ ಜಿಲ್ಲೆಯ ನವಲಗುಂದ ಕಸೂತಿ ಕಲೆ ಇರುವ ಕೆಂಪು (ಮರೂನ್ ಕಲರ್) ಬಣ್ಣದ ಸೀರೆಯುಟ್ಟು ಬಂದರು.

ಈ ಸೀರೆಗೆ ಕಸೂತಿ ಹಾಕಿ ವಿಶೇಷವಾಗಿ ರೂಪಿಸಿದ್ದು ಧಾರವಾಡ ನಗರದ ನಾರಾಯಣಪುರದ ಆರತಿ ಹಿರೇಮಠ ಮಾಲೀಕತ್ವದ ಆರತಿ ಕ್ರಾಪ್ಟ್ಸ್‌ನ ಮಹಿಳಾಮಣಿಗಳು ಅನ್ನುವುದು ವಿಶೇಷ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ನವಲಗುಂದ ಕಸೂತಿ ಕಲೆ ಬಗ್ಗೆ, ಸಾಂಸ್ಕೃತಿಕ ಶ್ರೀಮಂತಿಕೆ ಬಗ್ಗೆ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕಾರ್ಯಕ್ರಮ ಒಂದರಲ್ಲಿ ವಿವರಿಸಿ, ಈ ಸೀರೆಗಳನ್ನು ಜಿಲ್ಲೆಯ ಉಡುಗೊರೆಯಾಗಿ ನೀಡುವುದಾಗಿ ಹೇಳಿದ್ದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಕೈಮಗ್ಗ ಮತ್ತು ಜವಳಿ ಇಲಾಖೆ ಅಧಿಕಾರಿ ಸೈಯದ್ ನಯೀಮ್ ಅಹ್ಮದ ಮೂಲಕ ಕಸೂತಿ ಪರಿಣಿತರನ್ನು ಗುರುತಿಸಿ, ಕಸೂತಿ ಸೀರೆ ತಯ್ಯಾರಿಗೆ ಸೂಚಿಸಿದ್ದರು.

ಕಳೆದ 32 ವರ್ಷಗಳಿಂದ ಕಸೂತಿ ಕ್ಷೇತ್ರದಲ್ಲಿ ತೊಡಗಿ ಕೊಂಡಿರುವ ಆರತಿ ಅವರು, ಸುಮಾರು 210 ಜನ ಮಹಿಳೆಯರ ತಂಡ ಕಟ್ಟಿಕೊಂಡು, ಅವರಿಗೆ ಅಗತ್ಯವಿರುವ ಕಸೂತಿ ತರಬೇತಿ ನೀಡಿ, ಸ್ವಯಂ ಉದ್ಯೋಗ ನೀಡಿದ್ದಾರೆ. 

ಗ್ರಾಹಕರಿಂದ ಕಸೂತಿ ಸೀರೆ, ಶಲ್ಯೆ, ಉಡುಗೆಗಳ ಬೇಡಿಕೆ ಪಡೆಯುವ ಆರತಿ ಹಿರೇಮಠ ಅವರು ಕಸೂತಿ ಮಾಡುವ ತಮ್ಮ ಮಹಿಳಾ ಸಿಬ್ಬಂದಿ ಮನೆಗೆ ತೆರಳಿ, ಪರಿಕರ ಪೂರೈಸುತ್ತಾರೆ ಮತ್ತು ಸಿದ್ದವಾದ ವಸ್ತುಗಳನ್ನು ತಾವೇ ಕಲೆಕ್ಟ್ ಮಾಡುತ್ತಾರೆ.

ನಿರ್ಮಲಾ ಸೀತಾರಾಮನ್ ಅವರಿಗೆ ಕಳುಹಿಸಿದ್ದ ಸೀರೆಗಳ ವಿಶೇಷತೆ: ನಿರ್ಮಲಾ ಸೀತಾರಾಮ್ ಅವರ ಆಸಕ್ತಿಯ ಬೇಡಿಕೆಯಂತೆ ಸೀರೆಗಳನ್ನು ಕಳುಹಿಸಲಾಗಿದ್ದು, ಅದರಲ್ಲಿ ಇಂದು ಅವರು ತೊಟ್ಟಿರುವ ಕೇಂಪು(ಮರೂನ್) ಬಣ್ಣದ ಸೀರೆಯು ಸೇರಿದೆ.

ಸೀರೆ ವಿಶೇಷತೆ: ಕೈಮಗ್ಗದಲ್ಲಿ ನೇಯ್ದ ಇಳಕಲ್ಲ ರೇಷ್ಮೆ ಸೀರೆಗಳಿಗೆ ಸಾಂಪ್ರದಾಯಿಕ ಧಾರವಾಡ ಕಸೂತಿ ಹಾಕಲಾಗಿದೆ. ಐದುವರೇ ಮೀಟರ್ ಉದ್ದದ ಇಳಕಲ್ಲ ಸೀರೆಗೆ ಚಿಕ್ಕಪರಾಸ್ ದಡಿಯಿದ್ದು, ತೇರು, ಗೋಪುರ, ನವಿಲು, ಕಮಲದ ಚಿತ್ರಗಳ ಕಸೂತಿ ಹಾಕಲಾಗಿದೆ.

ಇವನ್ನೂ ಓದಿ


    ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

    ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

    ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

    ಈ ವಿಭಾಗದಿಂದ ಇನ್ನಷ್ಟು