ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರುಸಾವಿರ ಮಠಕ್ಕೆ ಶೇ 25ರಷ್ಟು ಸೀಟು ನೀಡಿ

ಕೆಎಲ್‌ಇ ಸಂಸ್ಥೆಗೆ ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟ ಆಗ್ರಹ
Last Updated 27 ಡಿಸೆಂಬರ್ 2020, 16:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಮೂರುಸಾವಿರ ಮಠದಿಂದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ನಿರ್ಮಾಣಕ್ಕಾಗಿ 24 ಎಕರೆ 23 ಗುಂಟೆ ಭೂಮಿಯನ್ನು ದಾನವಾಗಿ ಪಡೆದಿರುವ ಕೆಎಲ್‌ಇ ಸಂಸ್ಥೆಯು, ಮಠಕ್ಕೆ ಶೇ 25ರಷ್ಟು ಸೀಟುಗಳನ್ನು ಉಚಿತವಾಗಿ ನೀಡಬೇಕು ಎಂದು ರಾಜ್ಯ ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟ ಆಗ್ರಹಿಸಿದೆ.

ಸಮುದಾಯದ ಹಿರಿಯರು ನೂರಾರು ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದರಿಂದ, ಸಂಸ್ಥೆಯು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ರಾಷ್ಟ್ರಮಟ್ಟದಲ್ಲಿ ಬೆಳೆದಿದೆ. ವೈದ್ಯಕೀಯ ಸೀಟು ಪಡೆಯಲು ಸಮುದಾಯದ ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಕಷ್ಟಪಡುತ್ತಿದ್ದಾರೆ. ಹಾಗಾಗಿ, ಒಕ್ಕೂಟ ಕೆಲ ನಿರ್ಣಯಗಳನ್ನು ಕೈಗೊಂಡಿದ್ದು ಸಂಸ್ಥೆ ಅದನ್ನು ಪಾಲಿಸಬೇಕು ಎಂದು ಒಕ್ಕೂಟದ ಅಧ್ಯಕ್ಷ ಡಾ. ಶರಣಪ್ಪ ಕೋಟಗಿ, ಪದಾಧಿಕಾರಿಗಳಾದ ಬಂಗಾರೇಶ ಹಿರೇಮಠ, ರಾಜಶೇಖರ ಮೆಣಸಿನಕಾಯಿ, ಸುರೇಶ ಸವಣೂರ, ಪ್ರಕಾಶಗೌಡ ಪಾಟೀಲ, ಡಾ. ಶಿವಯೋಗಿ ತೆಂಗಿನಕಾಯಿ, ಎಂ.ಪಿ. ಶಿವಕುಮಾರ್, ಶೈಲಜಾ ಹಿರೇಮಠ, ರಾಜಶೇಖರ್ ಕಲ್ಯಾಣಶೆಟ್ಟರ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಕಾಲೇಜಿನಲ್ಲಿ ಉದ್ಯೋಗ ಕಲ್ಪಿಸುವಾಗ ಧಾರವಾಡ ಜಿಲ್ಲೆಯವರಿಗೆ ಹೆಚ್ಚಿನ ಒತ್ತು ನೀಡಬೇಕು. ವೀರಶೈವ ಲಿಂಗಾಯತ ಸಮಾಜಕ್ಕೆ ಸಾಮಾಜಿಕ ನ್ಯಾಯದಡಿ ಉದ್ಯೋಗ ಕಲ್ಪಿಸಬೇಕು, ವೀರಶೈವ ಲಿಂಗಾಯತದ ಒಳ ಪಂಗಡಗಳ ಬಡ ರೋಗಿಗಳಿಗೆ ಉಚಿತವಾಗಿ ವೈದ್ಯಕೀಯ ಸೇವೆ ಒದಗಿಸಬೇಕು, ಸಮಾಜದ ಇತರರಿಗೆ ರಿಯಾಯಿತಿ ನೀಡಬೇಕು. ಇದಕ್ಕಾಗಿ ಸಂಸ್ಥೆಯ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯವರು ಮಠಕ್ಕೆ ಮುಚ್ಚಳಿಕೆ ಪತ್ರ ಬರೆದು ಕೊಡಬೇಕು ಎಂದು ಹೇಳಿದ್ದಾರೆ.

ಪತ್ರದ ಅನುಸಾರವಾಗಿ, ಜಿಲ್ಲೆಯ ಎಲ್ಲಾ ಒಳಪಂಗಡಗಳ ಸಮಾಜದವರ ಹಿರಿಯರನ್ನು ಒಳಗೊಂಡ ಸಮಿತಿ ಹಾಗೂ ಹಿರಿಯ ಜನಪ್ರತಿನಿಧಿಗಳ ಕೋರ್ ಕಮಿಟಿಯನ್ನು ರಚಿಸಬೇಕು. ಈ ನಿರ್ಣಯಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT