ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಆಕರ್ಷಣೆ; ಈ ‘ಗೊಂಬೆ ಮನೆ’

ತೊಗಲುಗೊಂಬೆ ಆಟ, ರಂಗಭೂಮಿಯಲ್ಲಿ ವಿಭಿನ್ನ ಪ್ರಯೋಗಕ್ಕೆ ಹೆಸರಾದ ‘ಮನೆ’
Last Updated 8 ಅಕ್ಟೋಬರ್ 2022, 6:27 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಂದಿನ ಮಕ್ಕಳು, ಯುವಕರಲ್ಲಿ ತೊಗಲುಗೊಂಬೆ ಆಟ ಹಾಗೂ ರಂಗಭೂಮಿಯ ಕುರಿತು ಅಷ್ಟಾಗಿ ಆಸಕ್ತಿ ಇರುವುದಿಲ್ಲ. ಅಂಥವರನ್ನೂ ಸೆಳೆಯುವ ಉದ್ದೇಶದಿಂದ 25 ವರ್ಷಗಳಿಂದ ವಿವಿಧ ಹೊಸ ಪ್ರಯೋಗಗಳ ಮೂಲಕ ರಂಗಸೇವೆ ಸಲ್ಲಿಸುತ್ತಿದೆ ಧಾರವಾಡದ ಗೊಂಬೆಮನೆ (ಪಪೆಟ್‌ಹೌಸ್‌).

ರಂಗಭೂಮಿ ನಟ, ನಿರ್ದೇಶಕ, ನಾಟಕಕಾರರೂ ಆದ ಡಾ. ಪ್ರಕಾಶ ಗರುಡ ಹಾಗೂ ಅವರ ಪತ್ನಿ ರಜನಿ ಗರುಡ ಅವರ ಪರಿಶ್ರಮದ ಫಲವಾಗಿ ಗೊಂಬೆಮನೆ ಮೂಲಕ ಪ್ರದರ್ಶನಗೊಳ್ಳುತ್ತಿರುವ ಕಾರ್ಯಕ್ರಮಗಳು ಯಶಸ್ಸು ಕಾಣುತ್ತಿವೆ. ಬಿ.ವಿ. ಕಾರಂತರ ಸಂಗೀತ, ಪ್ರಮುಖ ರಂಗಭೂಮಿ ನಿರ್ದೇಶಕರ ನಿರ್ದೇಶನ ಗೊಂಬೆಮನೆಯ ಹಲವು ನಾಟಕಗಳಿಗೆ ದೊರೆತಿದೆ.

‘1998ರಲ್ಲಿ ಗೊಂಬೆಮನೆ ಸ್ಥಾಪಿಸಲಾಯಿತು. ಗಾರ್ದಪ ಮನುಷ್ಯ ಪ್ರಹಸನ, ಹಕ್ಕಿ ಹಾಡು, ಪಾಪು ಗಾಂಧಿ ಬಾಪು ಗಾಂಧಿ ಆದ ಕಥೆ, ಅಕಟವಿಕಟ ವಿಲಕ್ಷಣ, ಕೆಂಪು ಹೂ ಪ್ರಮುಖ ತೊಗಲುಗೊಂಬೆ ಪ್ರದರ್ಶನಗಳು. ದೆಹಲಿ, ಉದಯಪುರ, ಜೈಪುರ, ಪೂನಾದಲ್ಲಿ ಗೊಂಬೆಯಾಟದ ಕಾರ್ಯಾಗಾರ ನಡೆಸಲಾಗಿದೆ’ ಎನ್ನುತ್ತಾರೆ ಪ್ರಕಾಶ ಗರುಡ.

‘ಮಹಾಮಾಯಿ, ಚೂರಿಕಟ್ಟೆ, ಜಡಭರತನ ಕನಸುಗಳು, ಶೂದ್ರತಪಸ್ವಿ, ಅಂಜುಮಲ್ಲಿಗೆ, ಬೆತ್ತಲೆವೇಷ ಶಿವರಾತ್ರಿ ಮೊದಲಾದ ನಾಟಕಗಳು, ಪುಷ್ಪರಾಣಿ, ಅಕಟವಿಕಟ ವಿಲಕ್ಷಣ, ರಂಗೀಲಾ ರಾಜನ ರಂಗು ರಂಗಿನ ವೇಷ, ದಾಂ ಧೂಂ ಸುಂಟರಗಾಳಿ, ಹಕ್ಕಿ ಹಾಡು ಇತ್ಯಾದಿ ಮಕ್ಕಳ ನಾಟಕಗಳು ಸೇರಿದಂತೆ 40ಕ್ಕೂ ಹೆಚ್ಚು ನಾಟಕಗಳನ್ನು ಪ್ರದರ್ಶಿಸಲಾಗಿದೆ’ ಎಂದು ವಿವರಿಸಿದರು.

‘ಬೇಂದ್ರೆ ಅವರ ಬಹುತೇಕ ನಾಟಕಗಳ ಪ್ರದರ್ಶನ–ಬೆಳಗು ಯುವರಂಗೋತ್ಸವವನ್ನುಧಾರವಾಡದಲ್ಲಿ ಆಯೋಜಿಸಲಾಗಿತ್ತು. ‘ಪಂಚರಂಗಿ’ ಹೆಸರಿನಲ್ಲಿ ಮಕ್ಕಳ ಬೇಸಿಗೆ ಶಿಬಿರ, ‘ಛಾಯಾಚಲನೆ’ ಹೆಸರಿನಲ್ಲಿ ವಿವಿಧೆಡೆ ತೆರಳಿ, ನಾಟಕಗಳ ಪ್ರದರ್ಶನ ಮಾಡಲಾಗಿದೆ. ವಿಷಮ ವಿವಾಹ, ಮಹಾತ್ಮ ಯೇಸು, ಪಾದುಕಾ ಪಟ್ಟಾಭಿಷೇಕ ಮೊದಲಾದ ಸಂಗೀತ ನಾಟಕಗಳ ಪ್ರದರ್ಶನವನ್ನೂ ಮಾಡಲಾಗಿದೆ’ ಎಂದರು.

ಪ್ರಕಾಶ ಗರುಡ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ, ಕೆ.ವಿ. ಸುಬ್ಬಣ್ಣ ಪ್ರಶಸ್ತಿ ದೊರೆತಿವೆ. ‘ಕಂಪನಿ ನಾಟಕ ಅರ್ಥತ್‌ ವೃತ್ತಿ ರಂಗಭೂಮಿಯ ಸ್ವರೂಪ’ ಕೃತಿಯನ್ನು ರಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT