ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ವೈದ್ಯರ ಕೊರತೆ; ಸಿಗದ ಸಮರ್ಪಕ ಚಿಕಿತ್ಸೆ

ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ವೈದ್ಯರ ನೇಮಕಕ್ಕೆ ಒತ್ತಾಯ; ಮೂಲಸೌಲಭ್ಯಕ್ಕೆ ಒತ್ತಾಯ
Published 30 ಅಕ್ಟೋಬರ್ 2023, 5:41 IST
Last Updated 30 ಅಕ್ಟೋಬರ್ 2023, 5:41 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜನಸಾಮಾನ್ಯರ  ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ಜನಸಂಖ್ಯೆಗೆ ತಕ್ಕಂತೆ ಜಿಲ್ಲೆಯ ವಿವಿಧೆಡೆ  ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ, ಜಿಲ್ಲಾಸ್ಪತ್ರೆ ನಿರ್ಮಿಸಿ, ವೈದ್ಯರನ್ನು ನೇಮಿಸಿದೆ. ಆದರೆ ಕೆಲ ಕಡೆ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದ ರೋಗಿಗಳು ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ. ಕೆಲ ಕಡೆ ವೈದ್ಯರನ್ನು ನೇಮಿಸಿದ್ದರೂ, ಅವರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳೂ ಇವೆ. 

ಜಿಲ್ಲೆಯಲ್ಲಿ ಒಟ್ಟು 52 ಪ್ರಾಥಮಿಕ ಹಾಗೂ 19 ನಗರ ಆರೋಗ್ಯ ಕೇಂದ್ರಗಳಿವೆ, ಆದರೆ ಅಲ್ಲಿ ಕಾರ್ಯನಿರ್ವಹಿಸುತ್ತಿರುವುದು ತುಂಬಾ ಕಡಿಮೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ. ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರಿಲ್ಲದೆ, ಅಲ್ಲಿನ ಬಡ ಜನರು ಅನಿವಾರ್ಯವಾಗಿ ಕೆಲವೊಮ್ಮೆ ಖಾಸಗಿ ಆಸ್ಪತ್ರೆಗೆ ಹೋಗಬೇಕಾಗುತ್ತದೆ. ವೈದ್ಯರನ್ನು ನೇಮಿಸಿದರೆ ಅನುಕೂಲವಾಗುತ್ತದೆ ಎಂಬುದು ಅವರ ಒತ್ತಾಸೆಯಾಗಿದೆ. 

‘ನಿತ್ಯ ನೂರಕ್ಕೂ ಹೆಚ್ಚು ರೋಗಿಗಳು ಆಸ್ಪತ್ರೆಗೆ ಬರುತ್ತಾರೆ. ಐವರು ನರ್ಸ್, ಇಬ್ಬರು ಸ್ಟಾಫ್ ನರ್ಸ್‍ಗಳು ಕಾರ್ಯನಿರ್ವಹಿಸುತ್ತಾರೆ. ಒಟ್ಟು ನಾಲ್ಕು ವಾರ್ಡ್‍ಗಳ 6 ಸಾವಿರಕ್ಕೂ ಹೆಚ್ಚು ಜನರು ಇಲ್ಲಿ ಬರುತ್ತಾರೆ. ಎಚ್‍ಐಒ (ಹೆಲ್ತ್ ಇನ್‍ಸ್ಪೆಕ್ಟರ್ ಆಫಿಸರ್) ಇಬ್ಬರು ಇರಬೇಕಿತ್ತು, ಆದರೆ ಒಬ್ಬರೇ ಇದ್ದಾರೆ. ಕಟ್ಟಡ ಸ್ವಲ್ಪ ಚಿಕ್ಕದಾಗಿದ್ದು, ನಾಲ್ಕು ಹಾಸಿಗೆ ವ್ಯವಸ್ಥೆಯಿದೆ. ನಾಲ್ಕಕ್ಕಿಂತ ಹೆಚ್ಚಿನ ರೋಗಿಗಳು ದಾಖಲಾಗಬೇಕಿರುವ ಸಂದರ್ಭದಲ್ಲಿ ಇಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಕಿಮ್ಸ್‌ಗೆ ಕಳಿಸಲಾಗುತ್ತದೆ’ ಎಂದು ಹೆಗ್ಗೇರಿ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿದ್ಯಾಶ್ರೀ ಆರ್ ಮಾಹಿತಿ ನೀಡಿದರು.

‘ಸದಾ ಜನರಿಂದ ತುಂಬಿರುವ ಕಿಮ್ಸ್‌ನಲ್ಲಿ ಉತ್ತರ ಕರ್ನಾಟಕದ ಏಳು ಜಿಲ್ಲೆಗಳು ಮಾತ್ರವಲ್ಲದೇ ಕೆಲವೊಮ್ಮೆ ಮಹಾರಾಷ್ಟ್ರ, ಪುಣೆ, ಬೆಂಗೂರಿನಿಂದಲೂ ರೋಗಿಗಳು ಬರುತ್ತಾರೆ. ನಿತ್ಯ ಎರಡರಿಂದ ಎರಡೂವರೆ ಸಾವಿರ ಹೊರರೋಗಿಗಳ ತಪಾಸಣೆ ಮಾಡಲಾಗುತ್ತಿದ್ದು, 250 ರಿಂದ 300 ಜನ ರೋಗಿಗಳನ್ನು ದಾಖಲಿಸಲಾಗುತ್ತಿದೆ. 500 ಜನ ವೈದ್ತರು, 500ಕ್ಕೂ ಹೆಚ್ಚು ನರ್ಸ್‍ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಔಷಧಿಯ ದಾಸ್ತಾನು ಇದೆ’ ಎನ್ನುತ್ತಾರೆ ಕಿಮ್ಸ್‌ನ ವೈದ್ಯಕಿಐ ಅಧೀಕ್ಷಕ ಡಾ.ಅರುಣಕುಮಾರ ಸಿ.

ಅಲೆದಾಟ ಹೆಚ್ಚು:

‘ಬಡವರು ಸರ್ಕಾರಿ ಆಸ್ಪತ್ರೆಗೆ ಬರುವುದು ಅನಿವಾರ್ಯ. ಆದರೆ ಕೆಲವೊಮ್ಮೆ ಅಲೆದಾಟವೇ ಹೆಚ್ಚಾಗುತ್ತದೆ. ವೈದ್ಯರು ಸಕಾಲಕ್ಕೆ ಸಿಗುವುದಿಲ್ಲ. ಕಿಮ್ಸ್‌ಗೆ ಬಂದರೆ ಇಡೀ ದಿನ ಇಲ್ಲೆ ಇರಬೇಕು. ಒಮ್ಮೊಮ್ಮೆ ಚಿಕಿತ್ಸೆಗಾಗಿ ವಾರಪೂರ್ತಿ ಓಡಾಡಬೇಕಾಗುತ್ತದೆ’ ಎಂದು ಕಿಮ್ಸ್‌ಗೆ ಬಂದಿದ್ದ ಕುಂಕೂರಿನ ಬಸವಂತಪ್ಪ ಮಾಡಕವರ ಬೇಸರ ವ್ಯಕ್ತಪಡಿಸಿದರು.

ಬೇರೆ ಆಸ್ಪತ್ರೆಗೆ ಶಿಫಾರಸು: 

ಗಂಭೀರ ಕಾಯಿಲೆಗಳಿಗೆ ಕೆಲ ವೈದ್ಯರು ಚಿಕಿತ್ಸೆ ನೀಡಲು ವಿಳಂಬ ಮಾಡಿ, ತಮ್ಮದೇ ಅಥವಾ ತಾವು ಕಾರ್ಯನಿರ್ವಹಿಸುತ್ತಿರುವ ಮತ್ತೊಂದು ಆಸ್ಪತ್ರೆಗೆ ಶಿಫಾರಸು ಮಾಡುತ್ತಾರೆ. ಇಲ್ಲಿ ಕಡಿಮೆ ಹಣದಲ್ಲಿ ಆಗುವ ತಪಾಸಣೆ, ಚಿಕಿತ್ಸೆಗೆ ಅಲ್ಲಿ ಹೆಚ್ಚು ಹಣ ವ್ಯಯಿಸಿ, ಕೊನೆಗೆ ರೋಗಿ ಉಳಿಯುವ ಸ್ಥಿತಿಯಲ್ಲಿರದಿದ್ದಾಗ ಪುನಃ ಕಿಮ್ಸ್‌ಗೆ ಕಳಿಸುತ್ತಾರೆ. ಇದರಿಂದ ಬಡವರು ಹಣ ಮತ್ತು ವ್ಯಕ್ತಿ ಎರಡನ್ನೂ ಕಳೆದುಕೊಳ್ಳಬೇಕಾಗುತ್ತದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಳ್ಳಬೇಕು’ ಎಂದು ಹೆಸರು ಹೇಳಲಿಚ್ಛಿಸದ ರೋಗಿಯ ಸಂಬಂಧಿಕರೊಬ್ಬರು ಅಳಲು ತೋಡಿಕೊಂಡರು.

ಸಿಬ್ಬಂದಿ ನಿರ್ಲಕ್ಷ್ಯ:

ಮನ್ಯಾಗ ಅಚಾನಕ್ ಕಾಲ ಜಾರಿ ಬಿದ್ದು ಸೊಂಟಕ್ಕ ಪೆಟ್ಟಾಗಿತ್ತು. ತೋರಸಾಕ ಕಿಮ್ಸ್‌ಗ ಬಂದಿದ್ದೆ, ಅದೇನೊ ಎಕ್ಸರಾ ಅಂತ ಅದನ್ನ ಮಾಡಿಸ್ರಿ ಅಂದ್ರು. ಚೀಟಿ ಬರಸ್ಕೊಂಡ ಹೋದೆ. ಅಲ್ಲಿದ್ದಂವ ಎಡಕ್ಕ ನೋವಾಗೇತಿ ಅಂದ್ರ ಯಾರದ ಜೊತಿಗ ಮಾತಾಡ್ಕೋತ ಬಲಕ್ಕ ಎಕ್ಸರಾ ಮಾಡಿ ಕಳ್ಸಿದ. ಅದನ್ನ ನೋಡಿದ ಡಾಕ್ಟರ್ ಏನೂ ಆಗಿಲ್ರಿ ಆರಾಮ ಅದಿರಿ ಅಂತ ವಾಪಸ್ ಕಳ್ಸಿದ್ರ. ಮತ್ತ ಮಾರನೇ ದಿನ ತೋರಸ್ಕೊಂಡ ಬಂದೆ... ಹಿಂಗಾಗಿ ಕೆಮ್ಸಿ ಅಂದ್ರ ಒಮ್ಮೊಮ್ಮೆ ಅಂಜಿಕಿ ಬರ್ತದವಾ...ಎಂದು ಕಿಮ್ಸ್ ಸಿಬ್ಬಂದಿ ನಿರ್ಲಕ್ಷದ ಬಗ್ಗೆ ಮಾಹಿತಿ ನೀಡಿದರು ಶಾಂತಮ್ಮ.

ಕಿಮ್ಸ್ ಆವರಣದಲ್ಲಿ ಅನೈರ್ಮಲ್ಯ:

ಕಿಮ್ಸ್‌ಗೆ ದಾಖಲಾದ ರೋಗಿಗಳ ಸಂಬಂಧಿಕರು ಕಿಮ್ಸ್ ಆವರಣದಲ್ಲೇ ಕಾಲ ಕಳೆಯುತ್ತಾರೆ. ಹಾಗೂ ಅಲ್ಲಿಯೇ ಊಟ ಮಾಡುತ್ತಾರೆ.  ಆದರೆ ಆವರಣದಲ್ಲಿಯ ಕೆಲ ಬೆಂಚ್‍ಗಳು ಮುರಿದಿವೆ, ಅಲ್ಲಲ್ಲಿ ಕಸ ಬಿದ್ದಿರುತ್ತದೆ.   ಈಚೆಗೆ  ನಿರ್ಮಿಸಿದ ಸೂಪರ್ ಸ್ಪೆಷಾಲಿಟಿ ಆಸ್ಪತೆ ಆವರಣದಲ್ಲಿ ರೋಗಿಗಳಿಗೆ ಬಳಸಿದ ಯೂರಿನ್ ಕವರ್‌ಗಳು, ಆಸ್ಪತ್ರೆಯ ಇತರೆ ತ್ಯಾಜ್ಯ ಅಲ್ಲಲ್ಲಿ ಬಿದ್ದಿರುವುದು ಕಂಡು ಬಂತು. 

ತಪಾಸಣೆ, ದಂಡ

ಕಿಮ್ಸ್‌ನಲ್ಲಿ ಸ್ವಚ್ಛತೆ ಕಾಪಾಡಬೇಕೆನ್ನುವ ಉದ್ದೇಶದಿಂದ ಒಳರೋಗಿಗಳ ವಿಭಾಗಗಕ್ಕೆ ರೋಗಿಗಳ ಸಂಬಂಧಿಕರು ಭೇಟಿ ನೀಡುವ ಸಂದರ್ಭದಲ್ಲಿ ಗೇಟ್‍ನಲ್ಲಿ ತಪಾಸಣೆ ಮಾಡುತ್ತೇವೆ. ಎಲೆ, ಅಡಿಕೆ, ತಂಬಾಕು ಹಾಗೂ ಕೆಲವರು ಮದ್ಯದ ಬಾಟಲಿಗಳನ್ನು ಚೀಲದಲ್ಲಿ ತಂದಿರುತ್ತಾರೆ. ಅವುಗಳನ್ನು ಕಸಿದುಕೊಂಡು ಕಸದ ಬುಟ್ಟಿಗೆ ಎಸೆಯಲಾಗುತ್ತದೆ. ಒಮ್ಮ್ಮೊಮ್ಮೆ ದಂಡ ಸಹ ಹಾಕುತ್ತೇವೆ’ ಎಂದು ಇನ್‍ಚಾರ್ಜ್ ಸೂಪರ್‌ವೈಸರ್ ಇಬ್ರಾಹಿಂ ಬಡಿಗೇರ ತಿಳಿಸಿದರು.

ಅಂಗವಿಕಲರಿಗೆ ಮಾಹಿತಿ:

ಕಿಮ್ಸ್‌ನ ಹೊರರೋಗಿಗಳ ವಿಭಾಗದಲ್ಲಿ ಮಜೇಥಿಯಾ ಫೌಂಡೇಷನ್‌ ವತಿಯಿಂದ ಒಂದೂವರೆ ವರ್ಷದಿಂದ ದಿವ್ಯಾಂಗ ಸೇವಾ ಕೇಂದ್ರ ಆರಂಭಿಸಲಾಗಿದ್ದು,ಇಲ್ಲಿ ಅಂಗವಿಕಲರಿಗೆ ಇರುವ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿ, ಯುಡಿಐಡಿ  ಕಾರ್ಡ್‌ ಮಾಡಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.  ಈವರೆಗೂ ಸಾವಿರಕ್ಕೂ ಹೆಚ್ಚು ಜನ ಕಾರ್ಡ್‌ ಮಾಡಿಸಿಕೊಂಡಿದ್ದಾರೆ ಎಂದು ಕೇಂದ್ರದ ಪ್ರತಿನಿಧಿ ಕುಮಾರ ಶಿವಳ್ಳಿ ತಿಳಿಸಿದರು.

ಉಪ್ಪಿನಬೆಟಗೇರಿ ವರದಿ: ಇಲ್ಲಿನ ಗ್ರಾಮೀಣ ಭಾಗದ ಕೆಲವು ಹಿರಿಯ ಮತ್ತು ಕಿರಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ಕೊರತೆ ಇದೆ. ಉಪ್ಪಿನಬೆಟಗೇರಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸದ್ಯ ಸಿಬ್ಬಂದಿ ಕೊರತೆ ಇಲ್ಲ ಎಂದು ವೈದ್ಯಾಧಿಕಾರಿ ಪ್ರಿಯಾಂಕಾ ಚವ್ಹಾಣ ತಿಳಿಸಿದ್ದಾರೆ.

ಕಾಯಂ ವೈದ್ಯರ ನೇಮಕಕ್ಕೆ ಆಗ್ರಹ

ಅಣ್ಣಿಗೇರಿ: ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯಾಧಿಕಾರಿಯಿಲ್ಲದೇ ರೋಗಿಗಳು  ಅಲೆದಾಡುವಂತಾಗಿದೆ. ಸಿಬ್ಬಂದಿಗಳ ಕೊರತೆಯೂ ಇದೆ.

ಪಟ್ಟಣ ತಾಲ್ಲೂಕಾಗಿ ಪರಿವರ್ತನೆಯಾದರೂ ತಾಲ್ಲೂಕು ಆಸ್ಪತ್ರೆ  ನಿರ್ಮಿಸಿಲ್ಲ. ಕಾಟಾಚಾರಕ್ಕೆ ಆಯುಷ್ಯ ವೈದ್ಯರನ್ನು ನೇಮಿಸಲಾಗಿದೆ. ದಾಖಲೆಗಳ ನಿರ್ವಹಣೆಗೆ  ಪಕ್ಕದ ಶಲವಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಶೋಕ ಅಗರವಾಲ್ ಅವರನ್ನು ತಾತ್ಕಾಲಿಕ ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗಿದೆ.

‘ಇಲ್ಲಿ ಸರಿಯಾದ ಚಿಕಿತ್ಸೆ ಸಿಗದೇ  ಗದಗ, ಹುಬ್ಬಳ್ಳಿ ನಗರಗಳಿಗೆ ಹೋಗಬೇಕಾಗುತ್ತದೆ’ ಎಂದು ಸ್ಥಳೀಯ ನಿವಾಸಿ ಮಹಾಂತೇಶ ನಾವಳ್ಳಿ ತಿಳಿಸಿದರು.

‘ಇಲ್ಲಿ ಮೂಲಸೌಕರ್ಯಗಳ ಕೊರತೆ ಹಾಗೂ ವೈದ್ಯಾಧಿಕಾರಿಗಳ ಕೊರತೆ ಕುರಿತು ಮತ್ತು ತಾಲ್ಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಸಚಿವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಸ್ಥಳೀಯ ನಿವಾಸಿ ಬಸವರಾಜ ಬೆಟಗೇರಿ ದೂರಿದರು.

ಪೂರಕ ಮಾಹಿತಿ: ಬಿ.ಜೆ.ಧನ್ಯಪ್ರಸಾದ್‌, ರಾಜಶೇಖರ ಸುಣಗಾರ, ವಾಸುದೇವ ಎಸ್‌. ಮುರಗಿ, ರಮೇಶ ಓರಣಕರ, ಜಗದೀಶ ಗಾಣಿಗೇರ.

ಹುಬ್ಬಳ್ಳಿಯ ಕಿಮ್ಸ್‌ ಆವರಣದಲ್ಲಿ ಊಟ ಮಾಡಿದ ಜನರು. ಪಕ್ಕದಲೇ ಬೆಂಚ್‌ವೊಂದು ಮುರಿದಿದೆ
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ಕಿಮ್ಸ್‌ ಆವರಣದಲ್ಲಿ ಊಟ ಮಾಡಿದ ಜನರು. ಪಕ್ಕದಲೇ ಬೆಂಚ್‌ವೊಂದು ಮುರಿದಿದೆ ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹಳೇ ಹುಬ್ಬಳ್ಳಿಯ ಹೆಗ್ಗೇರಿ ನಗರ ಆರೊಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಡಾ.ವಿದ್ಯಾ ಆರ್‌ ರೋಗಿಗಳ ತಪಾಸಣೆ ಮಾಡಿದರು
ಹಳೇ ಹುಬ್ಬಳ್ಳಿಯ ಹೆಗ್ಗೇರಿ ನಗರ ಆರೊಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಡಾ.ವಿದ್ಯಾ ಆರ್‌ ರೋಗಿಗಳ ತಪಾಸಣೆ ಮಾಡಿದರು
ಹಳೇ ಹುಬ್ಬಳ್ಳಿಯ ಹೆಗ್ಗೇರಿ ನಗರ ಆರೊಗ್ಯ ಕೇಂದ್ರ
ಹಳೇ ಹುಬ್ಬಳ್ಳಿಯ ಹೆಗ್ಗೇರಿ ನಗರ ಆರೊಗ್ಯ ಕೇಂದ್ರ
ಅಳ್ನಾವರದಲ್ಲಿರುವ ಪ್ರಾಥಮಿಕ ಆರೊಗ್ಯ ಕೇಂದ್ರ
ಅಳ್ನಾವರದಲ್ಲಿರುವ ಪ್ರಾಥಮಿಕ ಆರೊಗ್ಯ ಕೇಂದ್ರ
ಧಾರವಾಡ ಜಿಲ್ಲಾಸ್ಪತ್ರೆ ಆವರಣದಲ್ಲಿನ ಅನುಪಯುಕ್ತ ವಸ್ತುಗಳ ಸಂಗ್ರಹ ಸ್ಥಳದಲ್ಲಿದ್ದ ಗುಜರಿ ರಾಶಿ ಹಾಕಿರುವುದು
ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ಧಾರವಾಡ ಜಿಲ್ಲಾಸ್ಪತ್ರೆ ಆವರಣದಲ್ಲಿನ ಅನುಪಯುಕ್ತ ವಸ್ತುಗಳ ಸಂಗ್ರಹ ಸ್ಥಳದಲ್ಲಿದ್ದ ಗುಜರಿ ರಾಶಿ ಹಾಕಿರುವುದು ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ಧಾರವಾಡ ಜಿಲ್ಲಾಸ್ಪತ್ರೆಯ ವಿಶೇಷ ನವಜಾತ ಶಿಶುಗಳ ಚಿಕಿತ್ಸಾ ಘಟಕದ ಹಳೆಯ ಕಟ್ಟಡದಲ್ಲಿ ಹಳೆಯ ಮಂಚ ಹಾಸಿಗೆ ಡ್ರಮ್ಮು ಅಗ್ನಿನಂದಕ ಮೂಲೆ ಪಾಲಾಗಿರುವುದು
ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ಧಾರವಾಡ ಜಿಲ್ಲಾಸ್ಪತ್ರೆಯ ವಿಶೇಷ ನವಜಾತ ಶಿಶುಗಳ ಚಿಕಿತ್ಸಾ ಘಟಕದ ಹಳೆಯ ಕಟ್ಟಡದಲ್ಲಿ ಹಳೆಯ ಮಂಚ ಹಾಸಿಗೆ ಡ್ರಮ್ಮು ಅಗ್ನಿನಂದಕ ಮೂಲೆ ಪಾಲಾಗಿರುವುದು ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ವಾರ್ಡ್‌ಗಳಲ್ಲಿ ಚಾವಣಿ ಭಾಗ ಗೋಡೆಗಳು ಮಾಸಿವೆ. ಸುಣ್ಣಬಣ್ಣ ಬಳಿಯಲು ಸಂಬಂಧಪಟ್ಟವರು ಕ್ರಮ ವಹಿಸಬೇಕು.
ಸ್ವಚ್ಛತೆಗೆ ಆದ್ಯತೆ ನೀಡಬೇಕು ನಳಿನಿ ರೋಗಿ
ಶೀಘ್ರದಲ್ಲೇ ತಾಲ್ಲೂಕು ಆಸ್ಪತ್ರೆಯನ್ನಾಗಿ ಮಾಡಿ ಇಲ್ಲಿಯೇ ಹೆಚ್ಚಿನ ವೈದ್ಯಕೀಯ ಸೇವೆ ನೀಡಲಾಗುವದು
ಎನ್.ಎಚ್.ಕೋನರಡ್ಡಿ ಶಾಸಕ ನವಲಗುಂದ
ಸದ್ಯ 14 ವೈದ್ಯರ ಹುದ್ದೆಗಳು ಖಾಲಿಯಿದ್ದು ಅದರಲ್ಲಿ 5 ಜನ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗಿದೆ
ಡಾ.ಶಶಿ ಪಾಟೀಲ ಜಿಲ್ಲಾ ಆರೋಗ್ಯಾಧಿಕಾರಿ ಧಾರವಾಡ
ಕಿಮ್ಸ್‌ನಲ್ಲಿ ಸ್ಪೆಷಲಿಸ್ಟ್ ಸೂಪರ್ ಸ್ಪೆಷಲಿಸ್ಟ್ ಸೇರಿ 8ರಿಂದ 10 ಹುದ್ದೆಗೆ ವೈದ್ಯರ ನೇಮಕ ಬಾಕಿ ಇದ್ದು ವೈದ್ಯರು ಬರುತ್ತಿಲ್ಲ
ಡಾ.ಅರುಣಕುಮಾರ ಸಿ ಕಿಮ್ಸ್ ವೈದ್ಯಕೀಯ ಅಧೀಕ್ಷಕ
ಜನಸಂಖ್ಯೆ ಹೆಚ್ಚಿರುವುದರಿಂದ ಕೆಲವೊಮ್ಮೆ ಔಷಧಿಯ ಕೊರತೆ ಉಂಟಾಗುತ್ತದೆ. ಅನುದಾನ ಹೆಚ್ಚು ನೀಡಿದರೆ ಅನುಕೂಲವಾಗುತ್ತದೆ
ಡಾ.ವಿದ್ಯಾಶ್ರೀ ಆರ್ ವೈದ್ಯಾಧಿಕಾರಿ ನಗರ ಆರೋಗ್ಯ ಕೇಂದ್ರ ಹೆಗ್ಗೇರಿ
ಬಡವರಿಗೆ ಕಿಮ್ಸ್ ವರದಾನವಾಗಿದೆ. ಎಲ್ಲಾ ಕಾಯಿಲೆಗಳಿಗೂ ಇಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿದೆ. ಸಿಬ್ಬಂದಿಯೂ ಸೌಜನ್ಯದಿಂದ ವರ್ತಿಸುತ್ತಾರೆ
ಲಕ್ಷ್ಮವ್ವ ಬಡಿಗೇರ ರೋಗಿಯ ಸಂಬಂಧಿ ಯಲಿವಾಳ

ಜಿಲ್ಲಾಸ್ಪತ್ರೆ: ಡಯಾಲಿಸಿಸ್‌ ಘಟಕ ಭಾಗದಲ್ಲಿ ದುರ್ವಾಸನೆ ಧಾರವಾಡ: ನಗರದ ಜಿಲ್ಲಾಸ್ಪತ್ರೆಯ ಕಟ್ಟಡಗಳ ಕೆಲವು ಕಿಟಕಿಗಳ ಗಾಜುಗಳು ಒಡೆದಿವೆ. ಇನ್ನು ಕೆಲವು ಕಿಟಿಕಿಗಳಿಗೆ ಗಾಜುಗಳೇ ಇಲ್ಲ. ಡಯಾಲಿಸ್‌ ಘಟಕದ ಭಾಗ ದುರ್ನಾತದ ಕೊಂಪೆಯಾಗಿದೆ.  ಡಯಾಲಿಸ್‌ ಘಟಕದ ಕಡಗೆ ಸಾಗುವ ಬಾಗಿಲಿನ ಕದಗಳು ಹಾಳಾಗಿವೆ. ಕಟ್ಟಿಗೆ ಪೀಸ್‌ ಬಡಿದು ತೇಪೆ ಹಾಕಲಾಗಿದೆ. ಅನುಪಯುಕ್ತ ವಸ್ತುಗಳ ಸಂಗ್ರಹಣ ಸ್ಥಳದಲ್ಲಿ ಹಳೆಯ ವಸ್ತುಗಳ  ರಾಶಿ ಬಿದ್ದಿವೆ. ವಿಶೇಷ ನವಜಾಥ ಶಿಶುಗಳ ಚಿಕಿತ್ಸಾ ಘಟಕದ ಹಳೆಯ ಕಟ್ಟಡದಲ್ಲಿ ಹಳೆಯ ಕುರ್ಚಿ ಮೇಜು ಮಂಚ ಮೊದಲಾದವು ಮೂಲೆ ಸೇರಿವೆ. ಆಸ್ಪತ್ರೆಯಲ್ಲಿನ ಕೆಲವು ಕಬ್ಬಿಣದ ಉಪಕರಣಗಳು ಬೆಂಚುಗಳು ತುಕ್ಕು ಹಿಡಿದಿವೆ. ತಜ್ಞ ವೈದ್ಯರ 31 ಮಂಜೂರು ಹುದ್ದೆಗಳ (ರಾಜ್ಯ ಬಜೆಟ್‌) ಪೈಕಿ ಐದು ಖಾಲಿ ಇವೆ. ತಾಂತ್ರಿಕ ಸಿಬ್ಬಂದಿ ಕಚೇರಿ ಸಿಬ್ಬಂದಿ ಮತ್ತು ಗ್ರೂಪ್‌ ‘ಡಿ‘ಯ ಒಟ್ಟು 241 ಹುದ್ದೆಗಳ ಪೈಕಿ 110 ಖಾಲಿ ಇವೆ. ಜಿಲ್ಲೆಯ ವಿವಿಧೆಡೆಯಿಂದ ರೋಗಿಗಳು ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಬರುತ್ತಾರೆ. ವೈದ್ಯರು ಸಿಬ್ಬಂದಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬ ಬೇಡಿಕೆ ಇದೆ.   

ಆರೋಗ್ಯ ಜಾಗೃತಿ: ಮನೆ ಮನೆಗೆ ಭೇಟಿ ಮನೆಯ ಸುತ್ತ-ಮುತ್ತಲೂ ಸ್ವಚ್ಛತೆ ಕಾಪಾಡುವಂತೆ ಹಾಗೂ ಡೆಂಗಿ ಮಲೇರಿಯಾ ಟಿಬಿ ಇತರೆ ಕಾಯಿಲೆಗಳ ಕುರಿತು ಆಶಾ ಕಾರ್ಯಕರ್ತೆಯರು ನಿತ್ಯ ಮನೆ ಮನೆಗೂ ಹೋಗಿ ಜಾಗೃತಿ ಮೂಡಿಸುತ್ತಿದ್ದಾರೆ. ಸಂದೇಹಗಳಿದ್ದಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಿಕೊಳ್ಳುವಂತೆ ತಿಳಿಸುತ್ತಾರೆ. ಅಲ್ಲದೇ ಪ್ರಾಥಮಿಕ ಹಾಗೂ ನಗರ ಆರೊಗ್ಯ ಕೇಂದ್ರದ ಕಾಂಪೌಂಡ್‌ ಮೇಲೆ ವಿವಿಧ ಚಿಕಿತ್ಸೆಗಳ ಬಗ್ಗೆ ಚಿತ್ರಸಮೇತ ಮಾಹಿತಿ ಬರೆಯಲಾಗಿದೆ. ಇದರಿಂದ ಸಹ ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸಲಾಗುತ್ತಿದೆ ಎನ್ನುತ್ತಾರೆ ಧಾರವಾಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿ ಪಾಟೀಲ.

ಗುಣಮಟ್ಟದ ಚಿಕಿತ್ಸೆ ಮರೀಚಿಕೆ ಗುಡಗೇರಿ: ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೂಲ ಸೌಲಭ್ಯಗಳು ಇದ್ದರೂ ವೈದ್ಯರ ಕೊರತೆಯಿಂದಾಗಿ ರೋಗಿಗಳು ಪರದಾಡುವಂತಾಗಿದೆ. ತಾಲ್ಲೂಕಿನಲ್ಲಿ ಎರಡನೇ ದೊಡ್ಡ ಗ್ರಾಮವಾದ ಗುಡಗೇರಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು ಈ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರ ಮಾಡುವಂತೆ ಅನೇಕ  ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ನಿತ್ಯ 150-200 ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡು ವೈದ್ಯರ ಹುದ್ದೆ ಇದ್ದು ಎಂಬಿಬಿಎಸ್ ಹಾಗೂ ಬಿಎಂಎಸ್ ವೈದ್ಯರು ಕಾರ್ಯನಿರ್ವಹಿಸಬೇಕಿತ್ತು. ಆದರೆ ಕೆವಲ ಆಯುಷ್ಯ ವೈದ್ಯರು ಸೇವೆ ಸಲ್ಲಿಸುತ್ತಿರುವುದರಿಂದ ಈ ಭಾಗದ ಜನರಿಗೆ ಗುಣಮಟ್ಟದ ಚಿಕಿತ್ಸೆ ಮರೀಚಿಕೆಯಾಗಿದೆ. ಈ ಕೇಂದ್ರಕ್ಕೆ 6 ಉಪಕೇಂದ್ರಗಳು ಇದ್ದು ಕಳಸ-ಬಿ ಕೇಂದ್ರದಲ್ಲಿ ನರ್ಸ್‌ ಹುದ್ದೆ ಖಾಲಿ ಇದೆ ಹಾಗೂ ಇಲ್ಲಿನ ಲ್ಯಾಬ್ ಚಿಕ್ಕದಾ‌ಗಿದ್ದು ಕಾರ್ಯನಿರ್ವಹಿಸಲು ಅನಾನುಕೂಲ ಉಂಟಾಗಿದೆ.  ಔಷಧ ವಿತರಕರ ಹುದ್ದೆ ಸಹ ಖಾಲಿ ಇದ್ದು ನರ್ಸಗಳೇ ಈ ಕೆಲಸವನ್ನು ನಿಭಾಯಿಸುವಂತಾಗಿದೆ.

ತಾಲ್ಲೂಕು ಆಸ್ಪತ್ರೆಗೆ ಬೇಡಿಕೆ ಅಳ್ನಾವರ: ಹೊಸದಾಗಿ ಅಸ್ವಿತ್ವಕ್ಕೆ ಬಂದ ತಾಲ್ಲೂಕು ಕೇಂದ್ರದಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ತಾಲ್ಲೂಕು ಆಸ್ಪತ್ರೆ ಮಾಡಬೇಕು ಎಂಬ ಬೇಡಿಕೆಇದೆ. ಧಾರವಾಡ ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಗಡಿ ಭಾಗಕ್ಕೆ ಹೊಂದಿಕೊಂಡ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿತ್ಯ ಸಾವಿರಾರು ರೋಗಿಗಳು ಬರುತ್ತಾರೆ. ಆದ್ದರಿಂದ ತಾಲ್ಲೂಕು ಆಸ್ಪತ್ರೆ ಮಾಡಿದ್ದಲ್ಲಿ ನುರಿತ ವೈದ್ಯರ ತಂಡ ಎಲ್ಲ ಬಗೆಯ ತಪಾಸಣಾ ಯಂತ್ರಗಳು  ಲಭಿಸುತ್ತವೆ ಎನ್ನುತ್ತಾರೆ ಶಿವಾಜಿ ಡೊಳ್ಳಿನ. ‘ಸದ್ಯ ಇಲ್ಲಿ  ಆಯುಷ್ಯ ವೈದ್ಯ ಹಾಗೂ ಎಂಬಿಬಿಎಸ್ ಡಾಕ್ಟರ್ ಸೇವೆ ಇದೆ. ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಸ್ಥಾನಕ್ಕೆ 7 ಹುದ್ದೆ ಇದ್ದು ಕೇವಲ ಇಬ್ಬರು ಹಾಗೂ 4 ಆರೋಗ್ಯ ನಿರೀಕ್ಷಾಣಾಧಿಕಾರಿ ಹುದ್ದೆಗೆ ಕೇವಲ ಒಬ್ಬರು ಕಾರ್ಯನಿರ್ವಹಿಸುತ್ತಿದ್ದಾರೆ. ಈಚೆಗೆ ₹1.80 ಕೋಟಿ ವೆಚ್ಚದಲ್ಲಿ ಹೊಸದಾಗಿ ಆಸ್ಪತ್ರೆ ಕಟ್ಟಲಾಗಿದ್ದು ಇನ್ನೂ ಹೆಚ್ಚಿನ ವ್ಯವಸ್ಥೆ ಬೇಕು ಎಂಬ ಬೇಡಿಕೆ ಇದೆ. ಪಟ್ಟಣಕ್ಕೆ ನಮ್ಮ ಕ್ಲಿನಿಕ್ ಮಂಜೂರು ಆಗಿದ್ದು ಇನ್ನೂ ಕಾರ್ಯಾರಂಭ ಮಾಡಿಲ್ಲ. ಅದನ್ನು ತಕ್ಷಣ ಆರಂಭಿಸಬೇಕು ಎಂಬ ಒತ್ತಾಯವು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT