ಲಾಡು ವಿವಾದ: ಬಂಧಿಸಿ, ಜೈಲಿಗೆ ಕಳುಹಿಸಿ
ವಿಜಯಪುರ: ‘ತಿರುಪತಿ ಲಡ್ಡು ವಿಷಯದಲ್ಲಿ ವಿದೇಶಿ ಕ್ರಿಶ್ಚಿಯನ್ ಮಿಷನರಿಗಳ ಕೈವಾಡ ಇದೆ. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿರುವ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಅವರು ಜಗತ್ತಿನ ಹಿಂದುಗಳಿಗೆ ಮಾಡಿರುವ ದೊಡ್ಡ ದ್ರೋಹ ಇದಾಗಿದೆ. ಅವರ ವಿರುದ್ಧ ಎಫ್‌ಐಆರ್ ಹಾಕಿ, ಬಂಧಿಸಿ, ಜೈಲಿಗೆ ಕಳುಹಿಸಬೇಕು’ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.
ಲಾಡುವಿನಲ್ಲಿ ಪ್ರಾಣಿ ಕೊಬ್ಬು ಬೆರಸಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ಮಾಡಲಾಗಿದೆ. ಹಿಂದೂಗಳ ಶ್ರದ್ಧಾಕೇಂದ್ರಕ್ಕೆ ಅಪಮಾನ ಮಾಡಲಾಗಿದೆ. ಸಿಬಿಐ ತನಿಖೆಯಾಗಬೇಕು, ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು’ ಎಂದರು.
‘ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೂ ಇದೇ ಜಗನ್ ಮೋಹನ್ ರೆಡ್ಡಿ ಎರಡು ಲಕ್ಷ ಲಡ್ಡು ಕಳುಹಿಸಿದ್ದರು. ಅಲ್ಲಿಯೂ ಭಕ್ತರಿಗೆ ವಿತರಣೆ ಮಾಡಲಾಗಿತ್ತು’ ಎಂದು ಈಶ್ವರಪ್ಪ ಹೇಳಿದರು.