ಹುಬ್ಬಳ್ಳಿ: ಶ್ರದ್ಧಾ ಭಕ್ತಿಯ ಹನುಮ ಜಯಂತಿ

ಹುಬ್ಬಳ್ಳಿ: ನಗರದಲ್ಲಿ ಹನುಮ ಜಯಂತಿಯನ್ನು ಶನಿವಾರ ಅದ್ಧೂರಿಯಾಗಿ ಆಚರಿಸಲಾಯಿತು. ಈ ಬಾರಿ ಶನಿವಾರವೇ ಹನುಮ ಜಯಂತಿ ಬಂದಿರುವ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು.
ಬೆಳಿಗ್ಗೆ 5 ಗಂಟೆಯಿಂದಲೇ ಕಮರಿಪೇಟೆಯ ಹನುಮಮಂದಿರ, ಮರಾಠ ಗಲ್ಲಿ ಹನುಮಮಂದಿರ ಸೇರಿದಂತೆ ನಗರದ ವಿವಿಧ ಹನುಮ ದೇವಸ್ಥಾನದಲ್ಲಿ ಭಕ್ತರು ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು.
ಕೋವಿಡ್ ಕಾರಣ ಎರಡು ವರ್ಷಗಳಿಂದ ಹನುಮ ಜಯಂತಿ ಕಳೆಗುಂದಿತ್ತು. ಈ ವರ್ಷ ಪ್ರಕರಣಗಳ ಸಂಖ್ಯೆ ಇಳಿಕೆಯಾದ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಹನುಮ ಮಂದಿರಗಳಲ್ಲಿ ತೊಟ್ಟಿಲೋತ್ಸವ, ದೇವರ ಮೂರ್ತಿಗೆ ಬೆಣ್ಣೆ ಸೇರಿದಂತೆ ವಿವಿಧ ಪದಾರ್ಥಗಳನ್ನು ಬಳಸಿ ವಿಶೇಷ ಅಲಂಕಾರ ಮಾಡಿದ್ದರು. ಮರಾಠಗಲ್ಲಿ, ವಿದ್ಯಾನಗರದ ಓಣಿಗಳಲ್ಲಿರುವ ಹನುಮಂದಿರದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ಹನುಮ ಮೂರ್ತಿ ಮೆರವಣಿಗೆ: ಹನುಮ ಜಯಂತಿ ಅಂಗವಾಗಿ ಎಸ್.ಎಸ್.ಕೆ ತುಳಜಾಭವಾನಿ ದೇವಸ್ಥಾನ ಕೇಂದ್ರ ಪಂಚ ಸಮಿತಿ ಆಶ್ರಯದಲ್ಲಿ ಬೃಹತ್ ಹನುಮ ಮೂರ್ತಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ನೂರಾರು ಜನ ಭಕ್ತರು ಪಾಲ್ಗೊಂಡಿದ್ದರು. ಜೈ ಹನುಮ ಎಂದು ಘೋಷಣೆ ಕೂಗಿದರು. ಯುವಕರು ಹನುಮನ ಹಾಡುಗಳಿಗೆ ಹೆಜ್ಜೆ ಹಾಕಿದರು. ದಾಜೀಬಾನಪೇಟೆಯಿಂದ ಪ್ರಾರಂಭವಾದ ಮೆರವಣಿಗೆ ದುರ್ಗದ ಬೈಲ್, ನ್ಯೂ ಮೈಸೂರು ಸ್ಟೋರ್ಟ್, ಮಹಾವೀರ ಗಲ್ಲಿ ಮೂಲಕ ಸಾಗಿ ದಾಜೀಬಾನಪೇಟೆಯ ತುಳಜಾಭವಾನಿ ದೇವಸ್ಥಾನಕ್ಕೆ ತಲುಪುವ ಮೂಲಕ ಅಂತ್ಯವಾಯಿತು.
ಗೋಪನಕೊಪ್ಪದ ಮಾರುತೇಶ್ವರ ದೇವರ ರಥೋತ್ಸವ ಸಡಗರದಿಂದ ನಡೆಯಿತು. ಪಾಲಿಕೆಯ ಸದಸ್ಯ ಶಿವಕುಮಾರ ರಾಯನಗೌಡ್ರ, ಪಿ.ಕೆ.ರಾಯನಗೌಡ್ರ ಹಾಗೂ ಗೋಪನಕೊಪ್ಪ, ದೇವಾಂಗಪೇಟೆ, ಬೆಂಗೇರಿ, ನಾಗಶೆಟ್ಟಿಕೊಪ್ಪದ ಭಕ್ತರು ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.