ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃತರಿಗೆ ಕೊಟ್ಟಿದ್ದ ಪರಿಹಾರ ವಸೂಲಿ ಮಾಡಿದ್ರಾ?: ವೇದವ್ಯಾಸ ಕೌಲಗಿ ಪ್ರಶ್ನೆ

Last Updated 27 ಡಿಸೆಂಬರ್ 2019, 5:21 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘2009ರಲ್ಲಿ ಹಾವೇರಿಯಲ್ಲಿ ನಡೆದ ಗೋಲಿಬಾರ್‌ಗೆ ಬಲಿಯಾದ ಇಬ್ಬರು ರೈತರೇ ಅಲ್ಲ. ಸಮಾಜಘಾತಕ ಶಕ್ತಿಗಳೆಂದು ನಿವೃತ್ತ ನ್ಯಾಯಾಧೀಶ ಕೆ. ಜಗನ್ನಾಥ ಶೆಟ್ಟಿ ನೇತೃತ್ವದ ತನಿಖಾ ಆಯೋಗ ವರದಿ ನೀಡಿತ್ತು. ಆ ಆಧಾರದ ಮೇಲೆ, ಅಂದಿನ ಬಿಜೆಪಿ ಸರ್ಕಾರ ಮೃತರ ಕುಟುಂಬಕ್ಕೆ ನೀಡಿದ್ದ ಪರಿಹಾರವನ್ನು ವಸೂಲಿ ಮಾಡಿತ್ತೇ?’ ಎಂದು ಧಾರವಾಡ ಜಿಲ್ಲಾ ಕಾಂಗ್ರೆಸ್ ವಕ್ತಾರ ವೇದವ್ಯಾಸ ಕೌಲಗಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಸಿಎಎ ವಿರುದ್ಧ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪೊಲೀಸ್ ಗುಂಡೇಟಿಗೆ ಬಲಿಯಾದವರ ಕುಟುಂಬಕ್ಕೆ ಘೋಷಿಸಿದ್ದ ಪರಿಹಾರಕ್ಕೆ, ರಾಜ್ಯ ಸರ್ಕಾರ ತಡೆ ನೀಡಿರುವುದರ ಕುರಿತು ಅವರು ಪ್ರತಿಕ್ರಿಯೆ ನೀಡಿರುವ ಅವರು, ‘ಆಗ ಮೃತರ ಕುಟುಂಬಕ್ಕೆ ನೀಡಿದ್ದ ಪರಿಹಾರ ವಾಪಸ್ ಪಡೆಯದ ಇದೇ ಬಿಜೆಪಿ ಸರ್ಕಾರ, ಈಗ ಯಾವ ನೈತಿಕತೆ ಆಧಾರದ ಮೇಲೆ ಮಂಗಳೂರಿನಲ್ಲಿ ಮೃತಪಟ್ಟವರಿಗೆ ಘೋಷಿಸಿದ್ದ ಪರಿಹಾರಕ್ಕೆ ತಡೆ ಹಿಡಿದಿದೆ’ ಎಂದಿದ್ದಾರೆ.

‘ಗೊಬ್ಬರ ಮತ್ತು ಬೀಜಕ್ಕಾಗಿ ಅಂದು ಪ್ರತಿಭಟನೆ ನಡೆದಿತ್ತು. ಮೃತ ರೈತರಲ್ಲಿ ಒಬ್ಬನಾದ ಸಿದ್ಧಪ್ಪ ಚೂರಿ, ಹಾಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಸಂಬಂಧಿಯಾಗಿದ್ದ. ಹಾಗಾಗಿ, ವಿಶೇಷ ಮುತುವರ್ಜಿ ವಹಿಸಿ, ಪರಿಹಾರದ ಜತೆಗೆ ಸಿದ್ದಪ್ಪ ಪತ್ನಿಗೆ ಸರ್ಕಾರಿ ನೌಕರಿಯನ್ನೂ ಕೊಡಿಸಿದ್ದರು. ಸಿದ್ಧಪ್ಪನ ಪುತ್ಥಳಿ ಸ್ಥಾಪನೆಗೆ ಅಂದಿನ ಸರ್ಕಾರ ಭರವಸೆಯನ್ನೂ ನೀಡಿತ್ತು’ ಎಂದು ಗಮನ ಸೆಳೆದಿದ್ದಾರೆ.

‘ಮಂಗಳೂರಿನಲ್ಲಿ ಮೃತಪಟ್ಟವರು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ಕುಮಾರ ಕಟೀಲ್ ಮತ್ತು ಆರ್‌ಎಸ್‌ಎಸ್‌ನ ಕಲ್ಲಡ್ಕ ಪ್ರಭಾಕರ ಭಟ್ ಹಿಂದುತ್ವವಾದಿಗಳು. ಇಬ್ಬರಿಗೂ ಅಲ್ಪಸಂಖ್ಯಾತರ ಮೇಲೆ ದ್ವೇಷವಿದೆ. ಹಾಗಾಗಿ, ಪರಿಹಾರ ನೀಡದಂತೆ ತಡೆಯೊಡ್ಡಿದ್ದಾರೆ’ ಎಂದು ಆರೋಪಿಸಿದರು.

‘ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೆಲವರು ಆತ್ಮಹತ್ಯೆಯಾಯಿತು. ಇನ್ನುಳಿದವರ ಹತ್ಯೆ ನಡೆಯಿತು. ಆಗ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು, ಅವರೆಲ್ಲಾ ಕೋಮು ದ್ವೇಷದಿಂದ ಮೃತಪಟ್ಟಿದ್ದಾರೆ ಎಂದು ಸರ್ಕಾರದಿಂದ ಪರಿಹಾರ ಕೊಡಿಸಿದರು. ಆದರೆ, ಮಂಗಳೂರಿನಲ್ಲಿ ಮೃತಪಟ್ಟವರ ಪರಿಹಾರದ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ನೈತಿಕತೆ ಇದ್ದರೆ, ಘೋಷಣೆ ಮಾಡಿದಂತೆ ಅವರಿಬ್ಬರ ಕುಟುಂಬಕ್ಕೆ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT