ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 75ರಷ್ಟು ಹಾಸಿಗೆ ಕೋವಿಡ್ ರೋಗಿಗಳಿಗೆ ಬಳಕೆಯಾಗಲಿ: ಸಚಿವ ಡಾ.ಕೆ.ಸುಧಾಕರ್‌

Last Updated 22 ಮೇ 2021, 10:25 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಆರೋಗ್ಯ ವ್ಯವಸ್ಥೆಯ ಕೇಂದ್ರದಂತೆ ಕಾರ್ಯನಿರ್ವಹಿಸುತ್ತಿರುವ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಕೋವಿಡ್‌ ವಿಷಯದಲ್ಲಿ ನಿರೀಕ್ಷೆಗೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಗರದ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಭೇಟಿ ನೀಡಿ, ಕೋವಿಡ್‌ ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆ ಮತ್ತು ಸಂಸ್ಥೆಯ ಕಾರ್ಯ ನಿರ್ವಹಣೆ ಪರಿಶೀಲಿಸಿದ ಬಳಿಕ ಸಂಸ್ಥೆಯ ಮುಖ್ಯಸ್ಥರು ಹಾಗೂ ನಾನಾ ವಿಭಾಗಗಳ ಮುಖ್ಯಸ್ಥರನ್ನು ಉದ್ದೇಶಿಸಿ ಶನಿವಾರ ಸಚಿವರು ಮಾತನಾಡಿದರು.

ಸಂಸ್ಥೆಯಲ್ಲಿ ಒಂದು ಸಾವಿರ ಮಂದಿ ವೈದ್ಯರು ಇದ್ದಾರೆ. 1030 ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರಮಾಣದಲ್ಲಿ ವೈದ್ಯರು ರೋಗಿಗಳ ಅನುಪಾತ ಯಾವ ದೇಶದಲ್ಲೂ ಇಲ್ಲ. ಎಷ್ಟು ಪರಿಣಾಮಕಾರಿಯಾಗಿ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದೇವೆ ಎಂಬುದನ್ನು ನೀವೇ ಪ್ರಶ್ನೆ ಮಾಡಿಕೊಳ್ಳಬೇಕು‌. ಇತರೆ, ಸಿಬ್ಬಂದಿಯನ್ನು ಲೆಕ್ಕ ಹಾಕಿದರೆ ಒಟ್ಟು ಎರಡು ಸಾವಿರಕ್ಕೂ ಹೆಚ್ಚು ಮಂದಿ ಇದ್ದೀರಿ. ಆದರೆ, ನಿರೀಕ್ಷಿತ ಪ್ರಮಾಣದ ಆರೋಗ್ಯ ಸೇವೆ ದೊರಕುತ್ತಿಲ್ಲ ಎಂದರು.

ಆಮ್ಲಜನಕ ಮತ್ತು ಸ್ಟಿರಾಯ್ಡ್‌ ನ್ಯಾಯ ಸಮ್ಮತ ಬಳಕೆ ಆಗಬೇಕು. ಅದಕ್ಕಾಗಿ ತಜ್ಞರ ಸಮಿತಿ ರಚನೆ ಮಾಡಬೇಕು. ಪ್ರತಿದಿನ ಇವುಗಳ ಆಡಿಟ್‌ ಮಾಡಬೇಕು. ಸಾಮಾನ್ಯ ರೋಗಿಗಳಿಗೆ ತುರ್ತು ಇದ್ದಲ್ಲಿ ಮಾತ್ರ ಚಿಕಿತ್ಸೆಗೆ ತೆಗೆದುಕೊಳ್ಳಬೇಕು. ಈ ಭಾಗದಲ್ಲಿ ಕಿಮ್ಸ್‌ ಪ್ರಾದೇಶಿಕ ಆರೋಗ್ಯ ಕೇಂದ್ರ ಆಗಿರುವುದರಿಂದ ಶೇ‌ 75 ರಷ್ಟು ಹಾಸಿಗೆ ಕೋವಿಡ್‌ಗೆ ಬಳಕೆ ಮಾಡಬೇಕು ಎಂದು ಸೂಚನೆ ನೀಡಿದರು.

ಹಿರಿಯ ವೈದ್ಯರು, ತಜ್ಞರು, ಬೇರೆ ಬೇರೆ ವಿಭಾಗಗಳ ಮುಖ್ಯಸ್ಥರು ಕೋವಿಡ್‌ ವಾರ್ಡ್'ಗಳಿಗೆ ಭೇಟಿ ನೀಡುತ್ತಿಲ್ಲ ಎಂಬ ದೂರುಗಳು ಬಂದಿವೆ. ಅದು ನಿಜವೂ ಹೌದು. ಕೆಲವರು ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವವರು ಬಂದು ಸಹಿ ಮಾಡಿ ಹೋಗುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಕೆಲವರಿಂದ ಇಡೀ ಸಂಸ್ಥೆಗೆ ಕೆಟ್ಟ ಹೆಸರು ಬರುತ್ತಿದೆ. ಇಂತವರ ಬಗ್ಗೆ ನಿರ್ದೇಶಕರು ತಕ್ಷಣ ಕ್ರಮ ಕೈಗೊಳ್ಳಬೇಕು. ಇಂತಹವರು ಎಷ್ಟೇ ದೊಡ್ಡವರಿದ್ದರೂ ಸರಿಯೇ ಮುಲಾಜಿಲ್ಲದೆ, ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಿ ಎಂದು ನಿರ್ದೇಶಕರಿಗೆ ಸೂಚನೆ ನೀಡಿದರು.

ಇನ್ನೊಂದು ತಿಂಗಳು ಕಷ್ಟಪಟ್ಟು ಕೆಲಸ ಮಾಡಿ. ಸಾವುಗಳನ್ನು ತಪ್ಪಿಸಿ. ಪ್ರತಿ ಜೀವಕ್ಕೂ ಬೆಲೆಯಿದೆ. ನಾವ್ಯಾರು ಬಲವಂತದಿಂದ ವೈದ್ಯ ವೃತ್ತಿಗೆ ಬಂದಿಲ್ಲ. ಇಷ್ಟಪಟ್ಟು ಬಂದಿರುವಾಗ ಲೋಪಗಳಿಲ್ಲದಂತೆ ಕೆಲಸ ಮಾಡಬೇಕು. ಆತ್ಮ ವಂಚನೆ ಮಾಡಿಕೊಳ್ಳದೆ ಕೆಲಸ ಮಾಡಿ. ಕೆಲವರು ಮಾಡುವ ತಪ್ಪಿಗೆ ಎಲ್ಲರೂ ತಲೆತಗ್ಗಿಸುವಂತೆ ಆಗಬಾರದು ಎಂದು ಕಿವಿಮಾತು ಹೇಳಿದರು.

ವಿಭಾಗಗಳು ಮುಖ್ಯಸ್ಥರು ತಮ್ಮ ತಮ್ಮ ವಿಭಾಗಗಳಲ್ಲಿ ಶಿಸ್ತು ರೂಢಿಸುವ ನಿಟ್ಟಿನಲ್ಲಿ ಕ್ರಿಯಾಶೀಲರಾಗಿ ಕೆಲಸ ಮಾಡಿ. ಅತ್ಯುತ್ತಮ ಗುಣಮಟ್ಟದ ಉಪಕರಣಗಳನ್ನು ನೀಡಲಾಗಿದೆ. ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಔಷಧಗಳನ್ನು ರವಾನಿಸಲಾಗಿದೆ. ಕೊರತೆ ಇರುವುದನ್ನೂ ಒಂದೆರಡು ದಿನದಲ್ಲಿ ಕೊಡಲಾಗುತ್ತದೆ. ಇವೆಲ್ಲವನ್ನೂ ಪರಿಣಾಮಕಾರಿಯಾಗಿ ಬಳಕೆ ಮಾಡಿ. ಏನೇ ಸಮಸ್ಯೆ ಇದ್ದರೂ ಸ್ಥಳೀಯ ಸಚಿವರು, ಚುನಾಯಿತ ಪ್ರತಿನಿಧಿಗಳ ಸಹಕಾರ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ಆಕ್ಸಿಜನ್‌ ಆಡಿಟ್‌ ಆಗಬೇಕು: ಪ್ರತಿ ರೋಗಿಗೆ ನೀಡುತ್ತಿರುವ ಆಕ್ಸಿಜನ್‌ ಆಡಿಟ್‌ ಆಗಲೇ ಬೇಕು. ಇಲ್ಲಿ ಅಧಿಕವಾಗಿ ಬಳಕೆ ಆಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ತಜ್ಞ ಸಿಬ್ಬಂದಿ ಇರುವುದರಿಂದ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ನಿಯೋಜನೆ ಮಾಡಿ ಅಲ್ಲಿನ ಸಿಬ್ಬಂದಿಗೆ ತರಬೇತಿ ಕೊಡಿಸುವ ವ್ಯವಸ್ಥೆ ಆಗಬೇಕು. ಜಿಲ್ಲಾಧಿಕಾರಿ ಅವರು ತಕ್ಷಣ ಈ ಬಗ್ಗೆ ಅಗತ್ಯ ಸೂಚನೆಗಳನ್ನು ನೀಡಬೇಕು ಎಂದು ಆದೇಶಿಸಿದರು.

ಹಗಲು ರಾತ್ರಿ ಪಾಳಿ ನಿಯೋಜನೆ ಮಾಡಬೇಕು. ಪ್ರತಿಯೊಂದು ಆಸ್ಪತ್ರೆಯಲ್ಲಿ ಅಲ್ಲಿಸ ಸಿಬ್ಬಂದಿ, ಹಾಸಿಗೆಯ ವಿವರಗಳನ್ನು ಫಲಕಗಳಲ್ಲಿ ಪ್ರದರ್ಶಿಸಬೇಕು. ಸಿಸಿಟಿವಿ ಕಡ್ಡಾಯವಾಗಿ ಅಳವಡಿಸಬೇಕು. ಸಂಸ್ಥೆಗೆ ತಕ್ಷಣವೇ ನೋಡಲ್‌ ಅಧಿಕಾರಿ ನೇಮಕ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮರಣ ಪ್ರಮಾಣ ಕಡಿಮೆ ಆಗಲೇಬೇಕು. ಪ್ರತಿದಿನ ನಲವತ್ತು ಸಾವುಗಳು ಸಂಭವಿಸುತ್ತಿವೆ. ಅದರೆ ಅವುಗಳಿಗೆ ಬೇರೆ ಬೇರೆ ಕಾರಣಗಳನ್ನು ನೀಡುತ್ತಿರುವುದು ಗಮನಕ್ಕೆ ಬಂದಿದೆ. ದಾಖಲು ಮಾಡಿದ ಎಷ್ಟೇಷ್ಟು ತಾಸುಗಳಲ್ಲಿ ಸಾವು ಸಂಭವಿಸಿವೆ ಎಂಬ ವಿವರ, ಡೆತ್‌ ಆಡಿಟ್‌ ವರದಿಗಳು ಆಯಾ ದಿನವೇ ಸಿದ್ಧಪಡಿಸಿ ಕಳುಹಿಸಿಕೊಡಬೇಕು ಎಂದು ಸಂಸ್ಥೆಯ ನಿರ್ದೇಶಕರಿಗೆ ಸೂಚನೆ ನೀಡಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವ ಜಗದೀಶ‌ ಶೆಟ್ಟರ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ, ಡಿಎಚ್ಒ ಯಶವಂತ ಮದಿನಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT