ಹುಬ್ಬಳ್ಳಿ: ‘ಸಾಂಕ್ರಾಮಿಕವಲ್ಲದ ರೋಗಗಳಿಂದ ಮೃತಪಡುವವರ ಸಂಖ್ಯೆ ಹೆಚ್ಚಾಗಿದೆ. ಇದನ್ನು ತಡೆಗಟ್ಟಲು ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸಲು ವಿಶೇಷ ಯೋಜನೆ ರೂಪಿಸಲಾಗುತ್ತಿದ್ದು, ಎರಡು ತಿಂಗಳಲ್ಲಿ ಅನುಷ್ಠಾನಗೊಳಿಸಲಾಗುವುದು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
‘ಇದಕ್ಕಾಗಿ 70 ವಾಹನಗಳ ಖರೀದಿಗೆ ಶೀಘ್ರ ಟೆಂಡರ್ ಕರೆಯಲಾಗುವುದು. ಹ್ಯಾಂಡ್ ಹೆಲ್ಡ್ ಎಕ್ಸ್–ರೇ ಯಂತ್ರಗಳನ್ನು ಖರೀದಿಸಲಾಗುತ್ತಿದ್ದು, ಎಂಟು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ತರಲಾಗುವುದು. ನಂತರ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು‘ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ವೈದ್ಯರು, ಶುಶ್ರೂಷಕರು, ತಂತಜ್ಞರು ಈ ತಂಡದಲ್ಲಿ ಇರುತ್ತಾರೆ. ದಂತ, ನೇತ್ರ, ರಕ್ತದೊತ್ತಡ, ಕ್ಯಾನ್ಸರ್ ತಪಾಸಣೆ ಮಾಡಿ ಔಷಧ, ಕನ್ನಡಕಗಳನ್ನು ಉಚಿತವಾಗಿ ವಿತರಿಸಲಾಗುವುದು. ಹಿಂದಿನ ಸರ್ಕಾರ ಆರಂಭಿಸಿದ್ದ ‘ನಮ್ಮ ಕ್ಲಿನಿಕ್’ಗಳನ್ನು ಮುಂದುವರಿಸಿ, ಅವುಗಳ ಸುಧಾರಣೆಗೂ ಕ್ರಮ ಕೈಗೊಳ್ಳಲಾಗುವುದು. ಜನರ ಅನುಕೂಲಕ್ಕಾಗಿ ಇವು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಕಾರ್ಯನಿರ್ವಹಿಸುವಂತೆ ಮಾಡಲಾಗುವುದು’ ಎಂದು ತಿಳಿಸಿದರು.
ಎಲ್ಲ ಅವ್ಯವಹಾರಗಳ ತನಿಖೆ:
‘ಹಿಂದಿನ ಸರ್ಕಾರದಲ್ಲಿ ನಡೆದಿದ್ದ ಭ್ರಷ್ಟಾಚಾರ, ಹಗರಣಗಳನ್ನು ಜನರ ಮುಂದಿಟ್ಟಿದ್ದೆವು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು, ಪ್ರಕರಣವನ್ನು ತಾರ್ಕಿಕ ಅಂತ್ಯಗೊಳಿಸಬೇಕು ಎಂಬ ಉದ್ದೇಶದಿಂದ ಕೋವಿಡ್ ಹಗರಣದ ತನಿಖೆಗೆ ಸರ್ಕಾರ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸರ್ಕಾರ ವಿಚಾರಣಾ ಆಯೋಗ ರಚಿಸಿದೆ’ ಎಂದು ಹೇಳಿದರು.
‘ತನಿಖೆಗೆ ಆದೇಶ ಮಾಡದಿದ್ದರೆ ಸುಮ್ಮನೆ ಆರೋಪ ಮಾಡುತ್ತಾರೆ ಎಂದು ಬಿಜೆಪಿಯವರು ದೂರುತ್ತಾರೆ. ತನಿಖೆ ಮಾಡಿಸಿದರೆ ದ್ವೇಷದ ರಾಜಕಾರಣ ಎನ್ನುತ್ತಾರೆ. ಈ ಹಿಂದೆ ನಾವು ಆರೋಪ ಮಾಡಿರುವ ಪ್ರಕಾರ ಈಗ ತನಿಖೆಗೆ ಆದೇಶಿಸಲಾಗಿದೆ. ತಪ್ಪು ಮಾಡಿಲ್ಲವಾದರೆ ಬಿಜೆಪಿ ನಾಯಕರಿಗೆ ಭಯವೇಕೆ’ ಎಂದು ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.