ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಜಿಲ್ಲೆಯ ಐತಿಹಾಸಿಕ ತಾಣಗಳು

Published 31 ಆಗಸ್ಟ್ 2023, 5:53 IST
Last Updated 31 ಆಗಸ್ಟ್ 2023, 5:53 IST
ಅಕ್ಷರ ಗಾತ್ರ

ಕೃಷ್ಣಿ ಶಿರೂರ

ಮಲೆನಾಡಿನ ಚುಂಗು ಹಿಡಿದ ಧಾರವಾಡ ಜಿಲ್ಲೆಯಲ್ಲಿ ಅರೆಬಯಲು ಸೀಮೆಯೂ ಹಾಸುಹೊದ್ದಿದೆ. ಶಿಕ್ಷಣದ ಕಾಶಿಯಾಗಿ, ಸಾಹಿತ್ಯದ ತವರೂರೆನಿಸಿ, ಆಧ್ಯಾತ್ಮಿಕತೆಯ ನೆಲೆವೀಡಾಗಿ, ಪ್ರಾಚೀನ ಮಠ–ಮಂದಿರಗಳ ತಾಣವಾಗಿ, ಐತಿಹಾಸಿಕ ನೆಲೆ, ಕೆರೆಗಳಿಗೆ ಪ್ರಸಿದ್ಧಿಯಾಗಿ, ಹಸಿರ ಗುಡ್ಡಗಳಿಂದ ಕಂಗೊಳಿಸುತ್ತ ಪ್ರವಾಸಿಕೇಂದ್ರವಾಗಿಯೂ ಪ್ರಸಿದ್ಧಿಯೆನಿಸಿದೆ ನಮ್ಮ ಧಾರವಾಡ ಜಿಲ್ಲೆ. ಬನ್ನಿ ಜಿಲ್ಲೆಯ ಪ್ರಮುಖ ಕೆಲವು ಪ್ರವಾಸಿ ತಾಣಗಳ ಸುತ್ತಾಡಿ ಬರೋಣ.

ಅಮೃತೇಶ್ವರ ದೇಗುಲ

ನವಲಗುಂದ ತಾಲ್ಲೂಕಿನ ಅಣ್ಣೀಗೆರಿಯ ಅಮೃತೇಶ್ವರ ದೇಗುಲ ಚಾಲುಕ್ಯ ದೊರೆ ಒಂದನೇ ಸೋಮೇಶ್ವರನ ಕಾಲದಲ್ಲಿ ನಿರ್ಮಾಣಗೊಂಡಿತು. ಹುಬ್ಬಳ್ಳಿ-ಗದಗ ರಸ್ತೆಯಲ್ಲಿ ಹುಬ್ಬಳ್ಳಿಯಿಂದ 35 ಕಿ.ಮೀ. ದೂರದಲ್ಲಿದೆ. ಆದಿಕವಿ ಪಂಪನ ಜನ್ಮಸ್ಥಳವಾಗಿಯೂ ಅಣ್ಣಿಗೇರಿ ಪ್ರಸಿದ್ಧಿ. ನಾಲ್ಕನೇ ಸೋಮೇಶ್ವರನ ರಾಜಧಾನಿಯಾಗಿ ಮತ್ತು ಹೊಯ್ಸಳ ದೊರೆ ವೀರ ಬಲ್ಲಾಳನ ಉಪರಾಜಧಾನಿಯಾಗಿಯೂ ಹಾಗೂ ದಕ್ಷಿಣದ ವಾರಾಣಾಸಿಯಾಗಿ ಅಣ್ಣಿಗೇರಿ ಪ್ರಸಿದ್ಧಿ ಪಡೆದಿತ್ತು. ಅಣ್ಣಿಗೇರಿಯಲ್ಲಿನ ಅಮೃತೇಶ್ವರ ದೇವಸ್ಥಾನ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ. ಕಲ್ಯಾಣಿ ಚಾಲುಕ್ಯರ ಶೈಲಿಯ ದೇವಸ್ಥಾನವಾಗಿದೆ. 26 ಕಂಬಗಳ ಗರ್ಭಗೃಹ ಅಂತರಾಳ, ನವರಂಗ, ಸಭಾಮಂಟಪ ಮತ್ತು ಗಜಲಕ್ಷ್ಮಿ ಶಿಲ್ಪಗಳನ್ನು ಒಳಗೊಂಡಿದೆ. 

ಚಂದ್ರಮೌಳೇಶ್ವರ ದೇವಸ್ಥಾನ

ಕ್ರಿ.ಶ. 9ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರಿಂದ ನಿರ್ಮಾಣವಾದ ಚಂದ್ರಮೌಳೇಶ್ವರ ದೇವಸ್ಥಾನ ಇತರೆ ಶಿವ ದೇವಾಲಯಗಳಿಗಿಂತ ವಿಭಿನ್ನವಾಗಿದೆ. ಎರಡು ದೊಡ್ಡ ಶಿವಲಿಂಗಗಳನ್ನು ಹೊಂದಿದೆ. ಹುಬ್ಬಳ್ಳಿ ತಾಲ್ಲೂಕಿನ ಉಣಕಲ್ ಗ್ರಾಮದಲ್ಲಿದೆ. ಚಂದ್ರಮೌಳೇಶ್ವರ ಶಿವನ ಮತ್ತೊಂದು ಹೆಸರು. ದೇವಾಲಯ ಕಪ್ಪು ಗ್ರಾನೈಟ್ ಸ್ತಂಭಗಳಿಂದ ಕೂಡಿದೆ. ವಾಸ್ತುಶೈಲಿಯ ಉತ್ತಮ ಉದಾಹರಣೆ. ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ. 

ಶಂಭುಲಿಂಗೇಶ್ವರ ದೇವಸ್ಥಾನ ಕುಂದಗೋಳ

ಹುಬ್ಬಳ್ಳಿಯಿಂದ 20 ಕಿ.ಮೀ. ಧಾರವಾಡದಿಂದ 40 ಕಿ.ಮೀ ದೂರದಲ್ಲಿರುವ ಕುಂದಗೋಳದ ಶಂಭುಲಿಂಗೇಶ್ವರ ದೇವಸ್ಥಾನ ಹಾಗೂ ಬ್ರಹ್ಮ ದೇವಾಲಯಗಳು ಪ್ರಮುಖ ಆಕರ್ಷಣಿಯ ಕೇಂದ್ರ ಬಿಂದುವಾಗಿದೆ. ಕಮಡೊಳ್ಳಿ ಗ್ರಾಮದಲ್ಲಿನ ಪ್ರಾಚೀನ ರಾಮೇಶ್ವರ, ಬಸವಣ್ಣ, ಕಲ್ಮೇಶ್ವರ ಹಾಗೂ ಸಿದ್ದಲಿಂಗೇಶ್ವರ ದೇವಸ್ಥಾನಗಳು ಕೂಡ ಪ್ರಮುಖವಾಗಿವೆ. ರಾಮೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ನಕ್ಷತ್ರಾ ಕಾರದಲ್ಲಿ ಬೃಹತ್ತಾದ ಶಿವಲಿಂಗವಿದೆ. ಸಭಾಮಂಟಪದಲ್ಲಿ ರಾಮಲಕ್ಷ್ಮಣರ 4.5 ಅಡಿ ಎತ್ತರದ ಶಿಲ್ಪಗಳಿವೆ. ಕುಂದಗೋಳದ ಶಂಭುಲಿಂಗೇಶ್ವರ ದೇವಾಲಯ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ ಬೃಹತ್ತಾಕಾರದ ಶಂಭುಲಿಂಗೇಶ್ವರ ದೇವಸ್ಥಾನ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿದೆಯೋ ಅಥವಾ ಹೊಯ್ಸಳರ ಕಾಲದಲ್ಲಿ ನಿರ್ಮಾಣಗೊಂಡಿತೋ ಎಂಬುದು ಸ್ಪಸ್ಟವಾಗಿಲ್ಲ. ದೇವಾಲಯದ ಎಲ್ಲ ಕಡೆಯೂ ಹೊಯ್ಸಳ ಲಾಂಛನ ಸಿಂಹಗಳೇ ರಾರಾಜಿಸುತ್ತದೆ ಮುಖಮಂಟಪದ ಒಳಭಾಗದ ಚಾವಣಿಯ ಎಲ್ಲಲ್ಲಿಯೂ ಕಲ್ಯಾಣಿ ಚಾಲುಕ್ಯರ ಸಂಕೇತವಾದ ತಾವರೆಗಳ ಕೆತ್ತನೆ ಇದೆ.

ತಂಬೂರ ಬಸವಣ್ಣನ ದೇವಸ್ಥಾನ

ತಂಬೂರ ಗ್ರಾಮವು ಕಲಘಟಗಿ-ಯಲ್ಲಾಪುರ ಮಾರ್ಗದಲ್ಲಿ10 ಕಿ.ಮೀ. ಅಂತರದಲ್ಲಿ. ಅಮರಶಿಲ್ಪಿ ಜಕಣಾಚಾರ್ಯ ನಿರ್ಮಿಸಿದ ಶಿವ ದೇವಾಲಯ ತಂಬೂರ ಗ್ರಾಮದ ಆಕರ್ಷಕ ತಾಣ. ಇಲ್ಲಿನ ಶಿವ ದೇವಾಲಯ ತಂಬೂರ ಬಸವಣ್ಣನ ದೇಗುಲವೆಂದೇ ಪ್ರಖ್ಯಾತಗೊಂಡಿದೆ. ದೇವಾಲಯದ ಪ್ರವೇಶ ದ್ವಾರದಲ್ಲಿ ಆಕರ್ಷಕ ನವರಂಗ ಹಾಗೂ ಗರ್ಭಗುಡಿ ಇದೆ. ಚಾಲುಕ್ಯರ ಕಾಲದಲ್ಲಿ ಈ ದೇವಾಲಯ ನಿರ್ಮಾಣಗೊಂಡಿತೆಂದು ಇತಿಹಾಸ ಹೇಳುತ್ತದೆ. ಕಲಘಟಗಿ ಚಿತ್ತಾಕರ್ಷಕ ಮರದ ತೊಟ್ಟಿಲು ಹಾಗೂ ಮೂರ್ತಿಗಳ ತಯಾರಿಕೆಗೆ ಖ್ಯಾತಿ ಪಡೆದಿದೆ. ಇಲ್ಲಿ ಎರಡು ಜೈನ ಬಸದಿಗಳಿವೆ. ಪದ್ಮಾಸೀನ ಶಾಂತಿನಾಥ ತೀರ್ಥಂಕರರು ಕಾಯಸ್ತಭಂಗಿಯಲ್ಲಿ ನಿಂತ ಪಾರ್ಶ್ವನಾಥ ಮೂರ್ತಿ ಆಕರ್ಷಕವಾಗಿದ್ದು, ಕಲ್ಯಾಣ ಚಾಲುಕ್ಯರ ಕಾಲದ್ದೆಂದು ಗುರುತಿಸಲಾಗಿದೆ.

ಸಾಧನಕೇರಿ ಉದ್ಯಾನವನ

ಜ್ಞಾನಪೀಠ ಪುರಸ್ಕೃತ ಡಾ. ದ.ರಾ.ಬೇಂದ್ರೆ ಗೌರವಿಸುವ ಉದ್ಯಾನವನ. ಧಾರವಾಡದಿಂದ 3 ಕಿ.ಮೀ. ಅಂತರದಲ್ಲಿರುವ ಸಾಧನಕೇರಿಯನ್ನು ಮೈಸೂರು ಆಫ್ ಝಿಯಾನ್ ಗಾರ್ಡನ್ಸ್ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ತಪೋವನ

ಅಧ್ಯಾತ್ಮ, ಸಾಂಸ್ಕೃತಿಕ ಯೋಗ ಕೇಂದ್ರವಾಗಿ ಸದಾ ಶಾಂತಿ ಹಾಗೂ ತನ್ಮಯತೆಯ ವಾತಾವರಣ ಹೊರಸೂಸುವ ತಪೋವನ, ತನ್ನದೇ ಆದ ಮಹತ್ವ ಹೊಂದಿದೆ. ಯೋಗ ಮತ್ತು ಆಧ್ಯಾತ್ಮದಲ್ಲಿ ಅಂತರರಾಷ್ಟ್ರೀಯ ಖ್ಯಾತಿ ಪಡೆದ ಈ ತಪೋವನವನ್ನು ಕುಮಾರ ಸ್ವಾಮೀಜಿ 1965ರಲ್ಲಿ ಸ್ಥಾಪಿಸಿದರು. ಧಾರವಾಡದಿಂದ 6 ಕಿ.ಮೀ ದೂರದಲ್ಲಿದೆ. 

ಉಣಕಲ್‌ ಕೆರೆ

ಹುಬ್ಬಳ್ಳಿ–ಧಾರವಾಡ ಮಾರ್ಗದ ನಡುವೆ 200 ಎಕರೆ ಪ್ರದೇಶದಲ್ಲಿ ಆಕರ್ಷಿಸುವ ಉಣಕಲ್‌ ಕೆರೆ ಪ್ರಕೃತಿ ಪ್ರಿಯರ ನೆಚ್ಚಿನ ತಾಣವೆನಿಸಿದೆ. 110 ವರ್ಷಗಳ ಇತಿಹಾಸ ಹೊಂದಿದ ಉಣಕಲ್ ಕೆರೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದ  ಅತಿ ದೊಡ್ಡ ಕೆರೆಯೆನಿಸಿದೆ.

ಹುಬ್ಬಳ್ಳಿಯ ತೋಳನಕೆರೆ ಕೂಡ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸೌಂದರ್ಯ ವೃದ್ಧಿಸಿಕೊಂಡು ಜನರನ್ನು ಚುಂಬಕದಂತೆ ಸೆಳೆಯುತ್ತಿದೆ. ಧಾರವಾಡದ ಕೆಲಗೇರಿ ಕೆರೆ ಕೂಡ ದೊಡ್ಡ ಕೆರೆಯಾಗಿ ಗುರುತಿಸಿಕೊಂಡಿದ್ದು, ಸೂರ್ಯೋದಯ, ಸೂರ್ಯಾಸ್ತ ವೀಕ್ಷಣೆಗೆ ಅದ್ಭುತ ತಾಣವೆನಿಸಿದೆ.

ನೃಪತುಂಗ ಬೆಟ್ಟ

ಹುಬ್ಬಳ್ಳಿ ಮಹಾನಗರ ಮೇರು ಪರ್ವತವೆಂಬ ಹಿರಿಮೆ ನೃಪತುಂಗ ಬೆಟ್ಟದ್ದು. ಮಹಾನಗರ ವಾಸಿಗಳ ಪಾಲಿನ ಹಿಲ್‌ ಸ್ಟೇಷನ್‌ ಎಂದರೂ ತಪ್ಪಿಲ್ಲ. ಬೆಟ್ಟದ ತುದಿಯಲ್ಲಿ ನಿಂತರೆ ಇಡೀ ಹುಬ್ಬಳ್ಳಿಯ  ಅದ್ಭುತ ನೋಟವನ್ನು ಕಣ್ತುಂಬಿಕೊಳ್ಳಬಹುದು. ಬೆಳಗಿನ ವಾಕಿಂಗ್‌ಗೆ, ಸಂಜೆ ಸಮಯ ಕಳೆಯಲು ಹೇಳಿಮಾಡಿಸಿದ ಹಸಿರು ತಾಣ.

ನೃಪತುಂಗ ಬೆಟ್ಟದಂತೆ ಹುಬ್ಬಳ್ಳಿ–ಧಾರವಾಡ ನಡುವಿನ ಸತ್ತೂರ ಸಮೀಪದ ಸಂಜೀವಿನಿ ಟ್ರಿಪಾರ್ಕ್‌ ಕೂಡ ತನ್ನ ಹಸಿರ ಸಿರಿಯ ಮೂಲಕ ಪ್ರವಾಸಿಗರನ್ನು ಸೆಳೆಯಲಿದೆ. ಹುಬ್ಬಳ್ಳಿ–ಕಲಘಟಗಿ ಹೆದ್ಧಾರಿಯ ಪಕ್ಕದಲ್ಲೇ ಸಿಗುವ ಬೂದನಗುಡ್ಡ ಕೂಡ ವೀಕೆಂಡ್‌ ಟ್ರೆಕ್‌ಗೆ ಹೇಳಿ ಮಾಡಿಸಿದ ಸ್ಥಳ.

ಇವು ಮಾತ್ರವಲ್ಲದೆ, ಸಿದ್ಧಾರೂಢ ಮಠ, ಮೂರು ಸಾವಿರ ಮಠ, ಮುರಘಾ ಮಠ, ಸಿದ್ಧಪ್ಪಜ್ಜನ ಮಠ, ಇಸ್ಕಾನ್‌ ಟೆಂಪಲ್‌, ವರೂರಿನ ನವಗ್ರಹ ತೀರ್ಥ, ಹಜರತ್ ಸೈಯದ್ ಫತೇ ಶಹವಾಲಿ ದರ್ಗಾ,  ಹೆಬಿಚ್ ಮೆಮೋರಿಯಲ್ ಚರ್ಚ್, ಹೋಲಿ ನೇಮ್ ಕ್ಯಾಥೆಡ್ರಲ್ ಚರ್ಚ್ ಕೂಡ ಪ್ರವಾಸಿ ತಾಣವಾಗಿ ಪ್ರಸಿದ್ಧಿ ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT