ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೈಲ್ವಾನರ ಊರು ಸಿಂಗನಹಳ್ಳಿ...

Last Updated 30 ಮೇ 2021, 12:11 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆ ಊರಿನ ಯಾವುದೇ ಮನೆಗೆ ಭೇಟಿ ನೀಡಿದರೂ ಕನಿಷ್ಠ ಒಬ್ಬ ಕುಸ್ತಿ ಪಟು ನಿಮಗೆ ಎದುರುಗೊಳ್ಳುತ್ತಾನೆ. ಅಪ್ಪನಿಂದ ಕುಸ್ತಿ ಕಲಿತ ಮಗ, ಅಣ್ಣನಿಂದ ಪಟ್ಟು ರೂಢಿಸಿಕೊಂಡ ತಮ್ಮ.. ಹೀಗೆ ಒಬ್ಬರಲ್ಲ ಒಬ್ಬರು ಪೈಲ್ವಾನ್‌ ಪರಂಪರೆ ಮುಂದುವರಿಸಿಕೊಂಡು ಬಂದ ಊರು ಇದು.

ಧಾರವಾಡ ತಾಲ್ಲೂಕಿನ ಸಿಂಗನಹಳ್ಳಿಯೇ ಈ ವಿಶೇಷಣ ಹೊಂದಿರುವ ಗ್ರಾಮ. ಅಲ್ಲಿ ‘ಮೇಲಿನ’ ಹಾಗೂ ‘ಕೆಳಗಿನ’ ಎನ್ನುವ ಎರಡು ಗರಡಿ ಮನೆಗಳಿದ್ದು, ಗರಗದ ಮಡಿವಾಳೇಶ್ವರ, ಕಲ್ಲೂರಿನ ಉಡಚಮ್ಮ ದೇವಸ್ಥಾನದ ಜಾತ್ರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜಾತ್ರೆ ನಡೆದಾಗ ಸಿಂಗನಹಳ್ಳಿ ಗ್ರಾಮದ ಕುಸ್ತಿ ಪಟುಗಳು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ರಫೀಕ್‌ ಹೊಳಿ ಇದೇ ಊರಿನವರು. 2016ರ ಕಾಮನ್‌ವೆಲ್ತ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಸಿಂಗನಹಳ್ಳಿ ಗರಡಿಮನೆ ಮತ್ತು ಧಾರವಾಡ ಜ್ಯೋತಿ ತಾಲೀಮಿನಲ್ಲಿ ಕುಸ್ತಿ ಪಟ್ಟುಗಳನ್ನು ಕಲಿತವರು. ರಫೀಕ್‌ ತಂದೆ ರಾಜಾಸಾಬ್ ಹೊಳಿ, ಸಹೋದರರಾದ ರಹಮಾನ್‌, ಶಬ್ಬೀರ್‌ ಪೈಲ್ವಾನರು. ರಹಮಾನ್‌ ಹೊಳಿ ‘ಮಲೆನಾಡ ಕೇಸರಿ’ ಗೌರವ ಪಡೆದಿದ್ದಾರೆ.

ಅದೇ ಗ್ರಾಮದ ಮೌಲಾಸಾಬ್‌ ಅವರ ಕುಟುಂಬದಲ್ಲಿ ನಾಲ್ವರು ಪೈಲ್ವಾನರಿದ್ದಾರೆ. ನಬಿಸಾಬ್‌, ಮಕ್ತೂಮ್‌ಸಾಬ್‌ ಹಾಗೂ ಇಸ್ಮಾಯಿಲ್‌ ಮಣ್ಣಿನ ಅಖಾಡದಲ್ಲಿ ಸಾಧನೆಯ ಹೊಳಪು ಮೂಡಿಸಿದ್ದಾರೆ.

ಇವೆಲ್ಲ ಉದಾಹರಣೆಗಳಷ್ಟೇ. ಹೀಗೆ ಒಂದೇ ಕುಟುಂಬದಲ್ಲಿ ಮೂರ್ನಾಲ್ಕು ಜನ ಕುಸ್ತಿ ಕ್ರೀಡೆಯಲ್ಲಿ ಸಾಧನೆ ಮಾಡಿದ ಅನೇಕ ಮನೆತನಗಳು ಸಿಂಗನಹಳ್ಳಿ ಗ್ರಾಮದಲ್ಲಿವೆ. ಇದೇ ಗ್ರಾಮದ ಗಿರಣಿ ಮಕ್ತೂಮ್‌, ಸೈನ್ಯದಲ್ಲಿದ್ದ ಶಂಕರ ಕಡತಾಳ, ಬಸವನಗೌಡ ದಳವಾಯಿ, ಮುಕ್ತಮ್‌ ಕಂಬಾರಗಣವಿ ಹೀಗೆ ಅನೇಕ ಜನ ಪೈಲ್ವಾನರು ರಾಜ್ಯಮಟ್ಟದಲ್ಲಿ ಗ್ರಾಮದ ಕೀರ್ತಿ ಬೆಳಗಿದ್ದಾರೆ.

ಈ ಗ್ರಾಮದಲ್ಲಿ ಮೊದಲಿನಿಂದಲೂ ಕುಸ್ತಿ ಬಗ್ಗೆ ಅಪಾರ ಪ್ರೀತಿಯಿದೆ. ತಮ್ಮ ಮನೆಯ ಒಬ್ಬ ಸದಸ್ಯರನ್ನಾದರೂ ಪೈಲ್ವಾನರನ್ನಾಗಿ ಮಾಡಬೇಕು, ಸುತ್ತಮುತ್ತಲಿನ ಊರುಗಳಲ್ಲಿ ಜಾತ್ರೆ ವೇಳೆ ನಡೆಯುವ ಕುಸ್ತಿಗಳಲ್ಲಿ ತಮ್ಮ ಕುಟುಂಬದ ಕುಡಿ ಗೆಲುವಿನ ಕೇಕೆ ಹಾಕಬೇಕು ಎನ್ನುವ ಆಸೆಗಾಗಿ ಪೋಷಕರು, ತಮ್ಮ ಮಕ್ಕಳಿಗೆ ಕುಸ್ತಿ ಕಲಿಯಲು ಪ್ರೋತ್ಸಾಹಿಸುತ್ತಾರೆ.

‘ನಮ್ಮೂರಿನಲ್ಲಿ ಹಾಲಿನ ಮುಕ್ತುಮ್‌ ಎನ್ನುವವರು ಬಹುತೇಕರಿಗೆ ಕುಸ್ತಿ ಕೌಶಲಗಳನ್ನು ಕಲಿಸಿದ್ದಾರೆ. ಅವರು ಹಾಲು ಮಾರಾಟ ಮಾಡುತ್ತಿದ್ದರಿಂದ ಅವರಿಗೆ ಹಾಲಿನ ಮುಕ್ತಮ್‌ ಎಂದು ಕರೆಯಲಾಗುತ್ತಿತ್ತು. ಅನೇಕ ಜನ ಪೈಲ್ವಾನರಿಗೆ ಕುಡಿಯಲು ಹಾಲುಕೊಟ್ಟಿದ್ದಾರೆ. ನನ್ನ ತಂದೆಯಿಂದ ಬಳುವಳಿಯಾಗಿ ನಾನು ಕುಸ್ತಿ ಕಲಿತಂತೆಯೇ ನನ್ನ ಮಗನಿಗೂ ಕುಸ್ತಿ ಕಲಿಸಬೇಕು ಎನ್ನುವ ಆಸೆಯಿದೆ. ಹೀಗೆ ಆಸೆ ಹೊಂದಿರುವ ಅನೇಕ ಕುಟುಂಬಗಳು ಈಗಲೂ ಗ್ರಾಮದಲ್ಲಿವೆ‌‘ ಎನ್ನುತ್ತಾರೆ ರಫೀಕ್‌ ಹೊಳಿ.

ನೌಕರಿಯ ಸೆಳೆತವೂ ಕಾರಣ

ಕುಸ್ತಿಗಾಗಿ ಕಟ್ಟುಮಸ್ತು ತಯಾರಿ ನಡೆಸಿದರೆ ಪೊಲೀಸ್‌ ಅಥವಾ ಸೈನ್ಯದಲ್ಲಿ ಕೆಲಸಕ್ಕೆ ಸೇರಲು ಅನುಕೂಲವಾಗುತ್ತದೆ ಎನ್ನುವ ಕಾರಣವೂ ಸಿಂಗನಹಳ್ಳಿ ಗ್ರಾಮದಲ್ಲಿ ಕುಸ್ತಿ ಯುವಕರನ್ನು ಚುಂಬಕ ಶಕ್ತಿಯಂತೆ ಸೆಳೆಯುತ್ತಿದೆ.

ಬೇಕಿದೆ ಕಾಯಕಲ್ಪ: ಗ್ರಾಮದಲ್ಲಿರುವ ಎರಡೂ ಗರಡಿ ಮನೆಗಳ ಕೆಲ ಭಾಗ ಕುಸಿದು ಬಿದ್ದಿದ್ದು, ಈಗ ಪೈಲ್ವಾನರು ತಾವೇ ಒಂದು ಜಾಗ ಗೊತ್ತು ಮಾಡಿಕೊಂಡು ಅಭ್ಯಾಸ ಮಾಡುತ್ತಿದ್ದಾರೆ. ಕುಸ್ತಿ ಪರಂಪರೆ ನಶಿಸಿ ಹೋಗುತ್ತಿರುವ ಆಧುನಿಕ ಕಾಲದಲ್ಲಿ ಇರುವ ಗರಡಿ ಮನೆಯನ್ನು ಸರ್ಕಾರ ದುರಸ್ತಿ ಮಾಡಿಸಿಕೊಡಬೇಕು ಎನ್ನುವುದು ಗ್ರಾಮದ ಪೈಲ್ವಾನರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT