ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಬೆಲೆ ಏರಿಕೆಯಾದರೂ ಹೆಚ್ಚದ ಖರೀದಿ

ಬೆಂಬಲ ಬೆಲೆಯಡಿ ಕಡಲೆ ಖರೀದಿ: ಹಣ ಪಾವತಿ ವಿಳಂಬ ಆರೋಪ
Last Updated 14 ಏಪ್ರಿಲ್ 2023, 4:56 IST
ಅಕ್ಷರ ಗಾತ್ರ

ಧಾರವಾಡ: ಕಳೆದ ವರ್ಷಕ್ಕಿಂತ ಈ ಬಾರಿ ಪ್ರತಿ ಕ್ವಿಂಟಲ್‌ಗೆ ₹105 ಹೆಚ್ಚಳವಾಗಿದ್ದರೂ ಬೆಂಬಲ ಬೆಲೆಯಡಿ ತೆರೆದಿರುವ ಖರೀದಿ ಕೇಂದ್ರಗಳಲ್ಲಿ ಕಡಲೆ ಮಾರಾಟ ಮಾಡಲು ರೈತರು ಹಿಂದೇಟು ಹಾಕಿದ್ದಾರೆ. ಪರಿಣಾಮ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಕಡಲೆ ಖರೀದಿ ಆಗಿಲ್ಲ.

ಈ ಬಾರಿ ಇಳುವರಿ ಕಡಿಮೆ ಆಗಿದ್ದರಿಂದ ಸಾಕಷ್ಟು ರೈತರು ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು. ಆದರೆ, ಮಾರು
ಕಟ್ಟೆ ಮತ್ತು ಖರೀದಿ ಕೇಂದ್ರದ ದರ ಹೆಚ್ಚೂ ಕಡಿಮೆ ಸಮನಾಗಿದೆ. ಈ ಹಿನ್ನೆಲೆಯಲ್ಲಿ ಬೆಳೆಯನ್ನು ಮಾರುಕಟ್ಟೆಯಲ್ಲಿಮಾರಾಟ ಮಾಡಲು ಹೆಚ್ಚಿನ ಉತ್ಸಾಹ ತೋರಿದ್ದಾರೆ. ಖರೀದಿ ಕೇಂದ್ರದಲ್ಲಿ ಹಣ ಪಾವತಿ ವಿಳಂಬ ಮತ್ತು ಗುಣಮಟ್ಟದ ಹೆಸರಿ
ನಲ್ಲಿ ಸತಾಯಿಸುತ್ತಿರುವುದೇ ರೈತರ ಈ ನಿರ್ಧಾರಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ.

ಕಳೆದ ಬಾರಿ ಸಮಯಕ್ಕೆ ಸರಿಯಾಗಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ, ಕೇಂದ್ರ ಸರ್ಕಾರದ ಬೆಂಬಲ ಬೆಲೆಯಡಿ ಎಫ್ಎಕ್ಯೂ ಗುಣಮಟ್ಟದ ಪ್ರತಿ ಕ್ವಿಂಟಲ್ ಕಡಲೆಯನ್ನು ₹5,230ಕ್ಕೆ ಖರೀದಿ ಮಾಡಲಾಗಿತ್ತು. ಈ ಬಾರಿ ಅದನ್ನು ₹5,335ಕ್ಕೆ ಏರಿಕೆ ಮಾಡ
ಲಾಗಿದೆ. ಆದರೂ, ಜಿಲ್ಲೆಯಲ್ಲಿ ನೋಂದಾ
ಯಿಸಿಕೊಂಡ 19,335 ರೈತರಲ್ಲಿ ಈವರೆಗೆ 6,737 ಜನರು ಮಾತ್ರ 83,526 ಕ್ಟಿಂಟಲ್ ಕಡಲೆ ಮಾರಾಟ ಮಾಡಿದ್ದಾರೆ.

ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹5,200ರವರೆಗೆ ಕಡಲೆ ಮಾರಾಟವಾಗುತ್ತಿದೆ. ದರ ಇನ್ನೂ ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿರುವ ರೈತರು ಕಡಲೆ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಕೆಲವರು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಖರೀದಿಗೆ ನೀಡಿದ್ದ ಸಮಯ ಮುಗಿಯುತ್ತ ಬಂದರೂ ನಿರೀಕ್ಷಿತ ಮಟ್ಟದಲ್ಲಿ ಕಡಲೆ ಖರೀದಿ ಆಗಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಕಡಿಮೆ ಇಳುವರಿ: ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ಉತ್ತಮ ಇಳುವರಿ ಪಡೆದಿದ್ದರು. ಆದರೆ, ಹಿಂಗಾರು ಹಂಗಾಮಿನಲ್ಲಿ ಸರಿಯಾಗಿ ಮಳೆ ಆಗದ ಪರಿಣಾಮ ಒಂದು ಎಕರೆಗೆ ಕನಿಷ್ಠ 2 ರಿಂದ ಗರಿಷ್ಠ 4 ಕ್ವಿಂಟಲ್‌ನಷ್ಟು ಕಡಲೆ ಒಕ್ಕಣೆ ಮಾಡಲಾಗಿದ್ದು, ಕಳೆದ ಮೂರು ವರ್ಷಗಳಲ್ಲಿ ಅತ್ಯಂತ ಕಡಿಮೆ ಇಳುವರಿ ದಾಖಲಾಗಿದೆ.

‘ಕಳೆದ ವರ್ಷದಂತೆ ಈ ಬಾರಿಯೂ ಗುಣಮಟ್ಟದ ನೆಪವೊಡ್ಡಿ ರೈತರಿಂದ ಖರೀದಿ ಮಾಡಿ ಗೋದಾಮುಗಳಿಗೆ ಸಾಗಿಸಿದ್ದ 30 ಟನ್ ಕಡಲೆಯನ್ನು ಖರೀದಿ ಕೇಂದ್ರಗಳಿಗೆ ವಾಪಸ್ ಮಾಡಲಾಗಿದೆ. ಅವೆಲ್ಲವನ್ನೂ ರೈತರ ಸಮ್ಮುಖದಲ್ಲಿ ಮತ್ತೆ ಸಂಸ್ಕರಿಸಿ, ವಾಪಸ್ ಕಳುಹಿಸಲಾಗಿದೆ. ಮತ್ತೊಮ್ಮೆ ವಾಪಸ್ಸಾದರೆ, ಅದು ಸರ್ಕಾರದ ಜವಾಬ್ದಾರಿ’ ಎಂದು ಟಿಎಪಿಸಿಎಂಎಸ್‌ನ ಸಿಇಒ ಶಿವಾನಂದ ಕೆಲಗೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT