ಹುಬ್ಬಳ್ಳಿ: ‘ಸಿದ್ಧಾರೂಢ ಸ್ವಾಮಿಯ 94ನೇ ಪುಣ್ಯಾರಾಧನೆ ಅಂಗವಾಗಿ ಆ.26ರಿಂದ ಸೆ.1ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮಿಟಿಯ ಚೇರ್ಮನ್ ಬಸವರಾಜ ಸಿ.ಕಲ್ಯಾಣಶೆಟ್ಟರ ತಿಳಿಸಿದರು.
‘ಆ.26ರಂದು ಮುಂಜಾನೆ ಸ್ವಾಮಿಯ ಸಮಾಧಿಗೆ ರುದ್ರಾಭಿಷೇಕ ಮಾಡುವ ಮೂಲಕ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು. ನಿತ್ಯ ಬೆಳಿಗ್ಗೆ ಶ್ರೀಮಠದ ಕೈಲಾಸ ಮಂಟಪದಲ್ಲಿ ಪುರಾಣ ಪಠಣ. ಸಂಜೆ ಕೀರ್ತನೆ ಕಾರ್ಯಕ್ರಮಗಳು ನಡೆಯಲಿವೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಆ.26ರಂದು ಶನಿವಾರ ‘ಹರನಡಿವಿಡಿ ಶಾಂತರೊಡನಾಡು’ ವಿಷಯ ಕುರಿತು ಉಪನ್ಯಾಸ. ಆ.27ರಂದು ‘ಸುಮ್ಮನೆ ಕಾಲವನು ಕಳೆದು ಸಾವುದುಚಿತವೆ’. ಆ.28ರಂದು ‘ಶಮೆಯಿಂದೆ ಮುಕುತಿ ಸಾಧನೆ ಪೆರತುಂಟೆ’. ಆ.29ರಂದು ‘ಗುರುಪಾದ ಸೇವೆಯನೊಲವಿಂದೆ ಮಾಡದೆ’. ಆ.30ರಂದು ‘ಈಶಾವಾಸ್ಯಮೀದಂ ಸರ್ವಂ’. ಆ.31ರಂದು ‘ಜಗವಿದು ಪುಸಿಯೆಂದು ಮಿಗೆತಿಳಿದ ಆರೂಢನಿಗೆ’ ಹಾಗೂ ಸೆ.1ರಂದು ‘ಜಗದ್ಗುರು ಸಿದ್ಧಾರೂಢರ ಮಹಿಮೆ’ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ನಾಡಿನ ವಿವಿಧ ಮಠಗಳ ಮಾಠಾಧೀಶರು ಸಾನ್ನಿಧ್ಯ ವಹಿಸುವರು’ ಎಂದು ತಿಳಿಸಿದರು.
‘ಸೆ.1ರಂದು ಸಿದ್ಧಾರೂಢ ಸ್ವಾಮಿಯ ಪುಣ್ಯತಿಥಿಯ ಪ್ರಯುಕ್ತ ಬೆಳಿಗ್ಗೆ ವಾದ್ಯವೈಭವದೊಂದಿಗೆ ಸ್ವಾಮಿಯ ಪಲ್ಲಕ್ಕಿ ಉತ್ಸವ ನಡೆಯಲಿದೆ. ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಠದ ಆವರಣದಲ್ಲಿನ ಪುಷ್ಕರಣೆಯಲ್ಲಿ ಸಿದ್ಧಾರೂಢ ಸ್ವಾಮಿಯ ಜಲರಥೋತ್ಸವ (ತೆಪ್ಪದ ತೇರು) ನಡೆಯಲಿದೆ. ರಥೋತ್ಸವದಲ್ಲಿ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಆಂಧ್ರ ಪ್ರದೇಶ ಹಾಗೂ ಗೋವಾ ರಾಜ್ಯದಿಂದ ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ತೆಪ್ಪದ ರಥೋತ್ಸವದ ನಂತರ ಮಹಾಪೂಜೆ ಸಲ್ಲಿಸುವ ಮೂಲಕ ಸಿದ್ಧಾರೂಢ ಸ್ವಾಮಿಯ ಪುಣ್ಯಾರಾಧನೆ ಉತ್ಸವವನ್ನು ಸಮಾಪ್ತಿ ಮಾಡಲಾಗುವುದು’ ಎಂದು ತಿಳಿಸಿದರು.
ರಥೋತ್ಸವದಲ್ಲಿ ಭಾಗವಹಿಸುವ ಎಲ್ಲಾ ಭಕ್ತರಿಗೆ ಪ್ರಸಾದ ವ್ಯವಸ್ಥೆ, ಕುಡಿಯುವ ನೀರು, ಗಣ್ಯರಿಗೆ ವಸತಿ ಸೌಲಭ್ಯ ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
‘ಮಠದಲ್ಲಿ ಈಗಾಗಲೇ ನಿತ್ಯ ಬೆಳಿಗ್ಗೆ 9ರಿಂದ ನಡೆಯುತ್ತಿರುವ ಕೋಟಿ ಜಪ ಯಜ್ಞ ಕಾರ್ಯಕ್ರಮವು ಸೆ.19ರ ತನಕವೂ ನಡೆಯಲಿದ್ದು, ಆಸಕ್ತ ಭಕ್ತರು ಭಾಗವಹಿಸಬಹುದು’ ಎಂದು ಹೇಳಿದರು.
ಮಠದ ಅಭಿವೃದ್ಧಿ ಕಾರ್ಯಕ್ಕೆ ಕ್ರಮ: ‘ಶ್ರೀಮಠದ ಆವರಣದಲ್ಲಿ ಈಗಾಗಲೇ ಜ್ಞಾನ ಮಂದಿರ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇದರೊಂದಿಗೆ ಸಮುದಾಯ ಭವನ ನಿರ್ಮಾಣ, ವೇದ ಗ್ರಂಥಾಲಯ ಸ್ಥಾಪನೆಯ ಚಿಂತನೆಯೂ ಇದೆ. ಪುಷ್ಕರಣಿಯ ಜೀರ್ಣೋದ್ಧಾರ ಮಾಡಲೂ ಕ್ರಮಕೈಗೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.
ಕಮಿಟಿಯ ಪ್ರಮುಖರಾದ ಉದಯಕುಮಾರ ಡಿ.ನಾಯ್ಕ, ಸರ್ವಮಂಗಳಾ ಎನ್.ಪಾಠಕ, ರಮೇಶ ಶಿ.ಬೆಳಗಾವಿ, ಮಂಜುನಾಥ ಶ.ಮುನವಳ್ಳಿ,. ವಿ.ವಿ.ಮಲ್ಲಾಪುರ, ಗೋವಿಂದ ಮಣ್ಣೂರ, ಬಾಳು ಟಿ.ಮಗಜಿಕೊಂಡಿ, ವಿನಾಯಕ ಘೋಡ್ಕೆ, ಚನ್ನವೀರ, ಕೆ.ಎಲ್.ಪಾಟೀಲ ಹಾಗೂ ಟ್ರಸ್ಟ್‌ನ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಜಲರಥೋತ್ಸವದ ಪ್ರಯುಕ್ತ ಆ.26ರಂದು ಸಂಜೆ 4ಕ್ಕೆ ಶ್ರಿಮಠದ ಹತ್ತಿಮತ್ತೂರ ದಾಸೋಹ ಭವನದಲ್ಲಿ ಮೇಲ್ಮನೆ ಸಭೆ ನಡೆಯಲಿದೆ. ಭಕ್ತರು ಭಾಗವಹಿಸಿ ಸಲಹೆ ಸೂಚನೆ ನೀಡಬಹುದು.ಬಸವರಾಜ ಸಿ. ಕಲ್ಯಾಣಶೆಟ್ಟರ ಚೇರ್ಮನ್ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮಿಟಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.