ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ– ಧಾರವಾಡ ಪಾಲಿಕೆ ಚುನಾವಣೆ: ‘ಸೆಂಟ್ರಲ್– ಲೋಕಲ್’ ಅಭಿವೃದ್ಧಿ ಹಣಾಹಣಿ

ಹೊಸ ಮುಖಗಳಿಗೆ ಮಣೆ; ಮೂಲಸೌಕರ್ಯವೇ ಚುನಾವಣಾ ವಿಷಯ
Last Updated 30 ಆಗಸ್ಟ್ 2021, 8:23 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪೂರ್ವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್‌ಗಳಲ್ಲಿ ‘ಅಭಿವೃದ್ಧಿ’ಯದ್ದೇ ಸದ್ದು. ಕ್ಷೇತ್ರದಲ್ಲಿ ಹಿಂದೆಂದೂ ಕಾಣದ ಅಭಿವೃದ್ಧಿಯಾಗಿದೆ ಎಂದು ಸ್ಥಳೀಯ ಶಾಸಕ ಪ್ರಸಾದ ಅಬ್ಬಯ್ಯ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಯೂ ಪ್ರಗತಿಯ ಜಪ ಮಾಡುತ್ತಿದೆ, ಕೇಂದ್ರ ಸರ್ಕಾರದ ಯೋಜನೆಗಳನ್ನು ಉಲ್ಲೇಖಿಸುತ್ತಿದೆ. ಆದ್ದರಿಂದ ಈ ಕ್ಷೇತ್ರದಲ್ಲಿ ಅಕ್ಷರಶಃ ‘ಅಭಿವೃದ್ಧಿಯ ಹಣಾಹಣಿ’ ನಡೆಯುತ್ತಿದೆ.

ಹಳೇ ಹುಬ್ಬಳ್ಳಿಯ ಬಹುತೇಕ ಭಾಗವನ್ನೊಳಗೊಂಡ ಕ್ಷೇತ್ರ, ಸರ್ವ ಸಮುದಾಯಗಳ ನೆಲೆ. ಶ್ರಮಿಕ ಹಾಗೂ ಮಧ್ಯಮ ವರ್ಗವೇ ಹೆಚ್ಚಾಗಿರುವ ಪ್ರದೇಶ. ನಗರದ ಮಧ್ಯಭಾಗದಿಂದ ಆರಂಭಗೊಂಡು ಹೊರವಲಯದವರೆಗೆ ಚಾಚಿಕೊಂಡಿರುವ ಕ್ಷೇತ್ರದಲ್ಲಿ ಓಡಾಡಿದರೆ ನಗರದ ನೈಜ ದರ್ಶನವಾಗುತ್ತದೆ.

ಹಿಂದಿನಿಂದಲೂ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆಯೇ ಪ್ರಬಲ ಪೈಪೋಟಿ. 2013ರ ಚುನಾವಣೆಯಲ್ಲಿ ಮೂರು ಹೋಳಾಗಿದ್ದ ಬಿಜೆಪಿ (ಬಿಜೆಪಿ, ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್) 8 ಸ್ಥಾನಗಳನ್ನು ಗೆದ್ದಿತ್ತು. ಕೆಜೆಪಿಯಿಂದ ಸ್ಪರ್ಧಿಸಿ ಜಯ ಗಳಿಸಿದ್ದ ಅಭ್ಯರ್ಥಿಯೊಬ್ಬರು ನಂತರ ಬಿಜೆಪಿಯ ಭಾಗವಾದರು. ಅಂದಿನ ಅನುಕೂಲಕರ ಸ್ಥಿತಿಯಲ್ಲೂ ಕಾಂಗ್ರೆಸ್ 7 ಸ್ಥಾನಗಳನ್ನಷ್ಟೇ ಗಳಿಸಿತ್ತು. ಜೆಡಿಎಸ್‌ ಮೂರರಲ್ಲಿ ಹಾಗೂ ಪಕ್ಷೇತರರೊಬ್ಬರು ಆಯ್ಕೆಯಾಗಿದ್ದರು.

ಬದಲಾದ ಅಖಾಡ

ವಾರ್ಡ್‌ಗಳ ಪುನರ್‌ವಿಂಗಡಣೆ ಬಳಿಕ, ಕ್ಷೇತ್ರದ ಚಿತ್ರಣ ಬದಲಾಗಿದೆ. ಹಿಂದೆ ಇದ್ದ 20 ವಾರ್ಡ್‌ಗಳ ಸಂಖ್ಯೆ ಈಗ 23ಕ್ಕೆ ಏರಿಕೆಯಾಗಿದೆ. 14 ಸಾಮಾನ್ಯ, 6 ಹಿಂದುಳಿದ ವರ್ಗ ಹಾಗೂ 3 ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಒಟ್ಟು ಸ್ಥಾನಗಳಲ್ಲಿ 18 ಮಹಿಳೆಯರಿಗೆ ಮೀಸಲಾಗಿವೆ. ಕ್ಷೇತ್ರದಲ್ಲಿ ಮುಸ್ಲಿಂ, ಲಿಂಗಾಯತರು, ಪರಿಶಿಷ್ಟರು ಹಾಗೂ ಹಿಂದುಳಿದ ವರ್ಗಗಳ ಮತದಾರರು ಹೆಚ್ಚಾಗಿದ್ದಾರೆ.

ಬಿಜೆಪಿ ಕೆಲ ಹಳೇ ಮುಖಗಳ ಜತೆಗೆ ಹೊಸ ಮುಖಗಳಿಗೂ ಮಣೆ ಹಾಕಿದೆ. ಲಿಂಗಾಯತರ ಮತಬುಟ್ಟಿ ಮೇಲೆ ಕಣ್ಣಿಟ್ಟಿರುವ ಪಕ್ಷ ಆ ಸಮುದಾಯದ 8 ಮಂದಿಗೆ ಟಿಕೆಟ್ ಕೊಟ್ಟಿದೆ. ಎಸ್‌ಎಸ್‌ಕೆ ಮತ್ತು ಬ್ರಾಹ್ಮಣ ಸಮುದಾಯದ ತಲಾ ಇಬ್ಬರು ಸೇರಿದಂತೆ ಇತರ ಹಿಂದುಳಿದ ವರ್ಗಗದವರಿಗೂ ಪ್ರಾತಿನಿಧ್ಯ ನೀಡಿದೆ. ಆ ಪೈಕಿ, ಒರ್ವ ಮುಸ್ಲಿಂ ಅಭ್ಯರ್ಥಿಯೂ ಇದ್ದಾರೆ.

ಕಾಂಗ್ರೆಸ್‌ನಲ್ಲಿ ಹಳಬರ ಜೊತೆಗೆ, ಮಾಜಿ ಸದಸ್ಯರ ಕುಟುಂಬದವರಿಗೆ ಟಿಕೆಟ್ ನೀಡಲಾಗಿದೆ. ಕ್ಷೇತ್ರದ ತನ್ನ ಪ್ರಮುಖ ವೋಟ್ ಬ್ಯಾಂಕ್ ಆಗಿರುವ ಮುಸ್ಲಿಂ ಸಮುದಾಯಕ್ಕೆ 9, ಲಿಂಗಾಯತ 4, ಎಸ್‌ಎಸ್‌ಕೆ ಸಮುದಾಯದ ಇಬ್ಬರ ಜೊತೆಗೆ ಇತರ ಹಿಂದುಳಿದ ವರ್ಗಗಳಿಗೆ ತಲಾ ಒಂದೊಂದು ಟಿಕೆಟ್ ನೀಡಿದೆ. ಮೀಸಲಾತಿಯಿಂದಾಗಿ ಎರಡೂ ಪಕ್ಷಗಳಿಂದ ತಲಾ ಮೂವರು ಎಸ್‌ಸಿಗಳಿಗೆ ಟಿಕೆಟ್ ಸಿಕ್ಕಿದೆ. ಕಾಂಗ್ರೆಸ್‌ನಲ್ಲಿ ಹೆಚ್ಚುವರಿಯಾಗಿ ಒಬ್ಬರು ಟಿಕೆಟ್ ಗಿಟ್ಟಿಸಿದ್ದಾರೆ.

ಮಾಜಿಗಳಿಲ್ಲದ ಜೆಡಿಎಸ್‌ 13 ವಾರ್ಡ್‌ಗಳಿಗಷ್ಟೇ ಹೊಸ ಮುಖಗಳನ್ನು ಕಣಕ್ಕಿಳಿಸಿದೆ. ಮೊದಲ ಸಲ ಚುನಾವಣಾ ಕಣಕ್ಕಿಳಿದಿರುವ ಎಎಪಿ 11 ಹಾಗೂ ಎಐಎಂಐಎಂ 9 ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಎರಡೂ ಪಕ್ಷಗಳು ಮುಸ್ಲಿಮರಿಗೇ ಹೆಚ್ಚಿನ ಟಿಕೆಟ್ ನೀಡಿವೆ. ಬಿಎಸ್‌ಪಿ ಎರಡು ವಾರ್ಡ್‌ಗಳಲ್ಲಿ ಸ್ಪರ್ಧಿಸಿದೆ.

ಕೇಂದ್ರ–ಸ್ಥಳೀಯ ಅಭಿವೃದ್ಧಿ

ಬಿಜೆಪಿ ಪ್ರಚಾರದ ಅಸ್ತ್ರ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಕೇಂದ್ರಿತವಾಗಿದೆ. ಸಿಆರ್‌ಎಫ್ ರಸ್ತೆ, ಸ್ಮಾರ್ಟ್‌ ಸಿಟಿ, ವಿಮಾನ ನಿಲ್ದಾಣ, ಐಐಟಿ, ಮೇಲ್ಸೇತುವೆ ರಸ್ತೆಯಂತಹ ಯೋಜನೆಗಳ ಶ್ರೇಯಸ್ಸನ್ನು ಸ್ಥಳೀಯ ಸಚಿವರು ಹಾಗೂ ಶಾಸಕರಿಗೆ ತಳುಕು ಹಾಕಿ, ಅಭ್ಯರ್ಥಿಗಳು ಪ್ರಚಾರ ಮಾಡುತ್ತಿದ್ದಾರೆ.

ಕಾಂಗ್ರೆಸ್‌ನವರು ಸ್ಥಳೀಯ ಶಾಸಕ ಪ್ರಸಾದ ಅಬ್ಬಯ್ಯ ಅವರ ಅಭಿವೃದ್ಧಿ ಕಾರ್ಯಗಳು ಹಾಗೂ ಬಿಜೆಪಿ ವಿರೋಧಿ ಅಲೆಯನ್ನೇ ಪ್ರಮುಖವನ್ನಾಗಿಸಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಕಾಂಕ್ರೀಟ್ ಕಂಡಿರುವ ಓಣಿ ರಸ್ತೆಗಳು, ಸಮುದಾಯ ಭವನ, ಹೊಸ ರಸ್ತೆಗಳ ನಿರ್ಮಾಣ ಸೇರಿದಂತೆ ಮೂಲಸೌಕರ್ಯದಲ್ಲಿ ಆಗಿರುವ ಕೆಲ ಬದಲಾವಣೆಗಳನ್ನು ಉಲ್ಲೇಖಿಸಿ ಮತ ಯಾಚಿಸುತ್ತಿದ್ದಾರೆ.

ಅಬ್ಬಯ್ಯ ಅವರು ಶಾಸಕರಾದ ಬಳಿಕ, ನಡೆಯುತ್ತಿರುವ ಮೊದಲ ಪಾಲಿಕೆ ಚುನಾವಣೆ ಇದು. ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ದಕ್ಕಿಸಿ ಕೊಡಬೇಕಾದ ಜವಾಬ್ದಾರಿಯೂ ಅವರ ಮೇಲಿದೆ. ಸತತ ಮೂರನೇ ಸಲ ಪಾಲಿಕೆ ಗದ್ದುಗೆ ಹಿಡಿಯಲು ಹೆಚ್ಚಿನ ಸ್ಥಾನ ಗೆಲ್ಲಬೇಕಾದ ಅನಿವಾರ್ಯ ಬಿಜೆಪಿಯದು. ಇವೆರಡರ ಜೊತೆಗೆ, ಉಳಿದ ಪಕ್ಷಗಳು ಹಾಗೂ ಬಂಡಾಯ ಅಭ್ಯರ್ಥಿಗಳನ್ನು ಕಡೆಗಣಿಸುವಂತಿಲ್ಲ.

ಸಮಸ್ಯೆ ಮುಕ್ತವಾಗಿಲ್ಲ

ನಗರಕ್ಕೆ ಸ್ಮಾರ್ಟ್‌ಸಿಟಿ ಗರಿ ಬಂದಿದ್ದರೂ ಕ್ಷೇತ್ರ ಸಮಸ್ಯೆಗಳಿಂದ ಮುಕ್ತವಾಗಿಲ್ಲ. ಕುಡಿಯುವ ನೀರಿನ ಸಮಸ್ಯೆ, ಮೂಲಸೌಕರ್ಯ ಕಾಣದ ಹೊರವಲಯದ ಬಡಾವಣೆಗಳು, ಮಳೆಗೆ ತುಂಬಿ ಮನೆಗಳಿಗೆ ನುಗ್ಗುವ ಚರಂಡಿ ಮತ್ತು ಕಾಲುವೆ ನೀರು, ಅಭಿವೃದ್ಧಿ ಕಾಣದ ಮಾರುಕಟ್ಟೆ ಪ್ರದೇಶ ಸೇರಿದಂತೆ ಹಲವು ಸಮಸ್ಯೆಗಳು ಇಂದಿಗೂ ಜೀವಂತವಾಗಿವೆ.

ಬಂಡಾಯದ ಬಿಸಿ; ಒಳ ಏಟಿನ ಆತಂಕ

ಟಿಕೆಟ್ ಹಂಚಿಕೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಬಂಡಾಯದ ಬಿಸಿ ಎದುರಿಸಿವೆ. ಮುಖಂಡರು ಬಹುತೇಕ ಬಂಡಾಯಗಾರರ ಮನವೊಲಿಸಿ ಉಮೇದುವಾರಿಕೆ ಹಿಂಪಡೆಯುವಂತೆ ಮಾಡಿದ್ದರೂ, ಅದಕ್ಕೂ ಬಗ್ಗದ ಕೆಲವರು ಪಕ್ಷೇತರರಾಗಿ ಕಣದಲ್ಲುಳಿದು ಸವಾಲು ಹಾಕಿದ್ದಾರೆ. ಹಾಗಾಗಿ, ಬಂಡಾಯದ ಬಿಸಿಯ ಒಳ ಏಟು ಎರಡೂ ಪಕ್ಷಗಳ ಅಭ್ಯರ್ಥಿಗಳನ್ನು ಕಾಡುತ್ತಿದೆ.

ಬಿಜೆಪಿ ಪ್ರಮುಖವಾಗಿ ಲಿಂಗಾಯತ ಹಾಗೂ ಕಾಂಗ್ರೆಸ್‌ ಮುಸ್ಲಿಂ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಿರುವಂತೆ ಕಾಣುತ್ತಿದೆ. ಎಐಎಂಐಎಂ ಸೇರಿದಂತೆ ಇತರ ಪಕ್ಷಗಳು ಎಲ್ಲಿ ಅದರ ಮತಬುಟ್ಟಿಗೆ ಕೈ ಹಾಕುವುದೊ ಎಂಬ ಆತಂಕ ಕಾಂಗ್ರೆಸ್‌ಗಿದೆ. ಉಳಿದಂತೆ ಪರಿಶಿಷ್ಟ ಜಾತಿ, ಹಿಂದುಳಿದ ಹಾಗೂ ಇತರ ಸಮುದಾಯಗಳ ಒಲವು ಎರಡೂ ಪಕ್ಷಗಳ ಕಡೆಗಿದ್ದರೂ, ಅಭ್ಯರ್ಥಿಗಳ ಜಾತಿ ಹಾಗೂ ಹಿನ್ನೆಲೆ ಇವರ ಮೇಲೆ ಪರಿಣಾಮ ಬೀರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT