ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಈದ್ಗಾ ಮೈದಾನದಲ್ಲಿ ಗಣೇಶೋತ್ಸವ: ಭದ್ರತೆಗೆ 230 ಪೊಲೀಸ್ ಸಿಬ್ಬಂದಿ

ನಾಲ್ಕು ಎಸಿಪಿ ನೇತೃತ್ವದಲ್ಲಿ ಎಂಟು ತಂಡ; ಡ್ರೋಣ್ ಕ್ಯಾಮೆರಾದಿಂದ ವಿಡಿಯೊ ಚಿತ್ರೀಕರಣ
Published 17 ಸೆಪ್ಟೆಂಬರ್ 2023, 8:07 IST
Last Updated 17 ಸೆಪ್ಟೆಂಬರ್ 2023, 8:07 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ರಾಣಿ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಮೂರು ದಿನ ನಡೆಯಲಿರುವ ಗಣೇಶೋತ್ಸವಕ್ಕೆ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

ಮೈದಾನದ ಸುತ್ತಮುತ್ತ ಬಿಗಿ ಭದ್ರತೆಗೆ ನಾಲ್ವರು ಎಸಿಪಿ ನೇತೃತ್ವದಲ್ಲಿ ಎಂಟು ತಂಡಗಳನ್ನು‌ ರಚಿಸಿ, ಎಂಟು ಸ್ಥಳಗಳನ್ನು ನಿಗದಿಪಡಿಸಿದೆ. ಒಟ್ಟು 230 ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ.

6 ಪಿಐ, 15 ಪಿಎಸ್ಐ, 25 ಎಎಸ್ಐ, 35 ಹೆಡ್ ಕಾನ್'ಸ್ಟೆಬಲ್, 10 ಮಹಿಳಾ ಹೆಡ್ ಕಾನ್'ಸ್ಟೆಬಲ್, 80 ಕಾನ್'ಸ್ಟೆಬಲ್, 15 ಮಹಿಳಾ ಕಾನ್'ಸ್ಟೆಬಲ್‌, 40 ಗೃಹರಕ್ಷಕ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರ ಹೊರತಾಗಿ, 2 ಕ್ಷಿಪ್ರ ಕಾರ್ಯಪಡೆ, 2 ರಾಜ್ಯ ಸಶಸ್ತ್ರ ಮೀಸಲು ಪಡೆ, 4 ಕೇಂದ್ರ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ಸಹ ಭದ್ರತೆಯಲ್ಲಿ ನಿರತವಾಗಲಿವೆ.

ಮೈದಾನದ ಮುಖ್ಯದ್ವಾರ(ಪೂರ್ವ ಗೇಟ್) 32, ಗಣೇಶ ಪೆಂಡಾಲ್ ಬಳಿ 29, ಮೈದಾನದ ಆವರಣದಲ್ಲಿ 31 ಹಾಗೂ ಮೈದಾನದ ಸುತ್ತ 32 ಸಿಬ್ಬಂದಿ‌ಯನ್ನು ನಾಲ್ವರು ಎಸಿಪಿ ನೇತೃತ್ವದಲ್ಲಿ ಭದ್ರತೆಗೆ ನಿಯೋಜಿಸಲಾಗಿದೆ.

ಗಣೇಶ ಪೆಂಡಾಲ್‌ ಎಡಭಾಗದಲ್ಲಿ ಪಿಎಸ್ಐ ನೇತೃತ್ವದಲ್ಲಿ 26, ಬಲಭಾಗದಲ್ಲಿ ಇಬ್ಬರು ಪಿಎಸ್ಐ ನೇತೃತ್ವದಲ್ಲಿ‌ 27, ಮೈದಾನದ ಮುಖ್ಯದ್ವಾರದಿಂದ‌ ಕಾಮತ್ ಹೋಟೆಲ್'ವರೆಗೆ ಪಿಐ ನೇತೃತ್ವದಲ್ಲಿ 3 ಮತ್ತು ಮೈದಾನದ ಉತ್ತರ ಗೇಟ್(ಪ್ರಭು ಮೆಡಿಕಲ್ ಶಾಪ್ ಎದುರು) ಬಳಿ‌ ಪಿಐ ನೇತೃತ್ವದಲ್ಲಿ 20 ಸಿಬ್ಬಂದಿ ಭದ್ರತೆಗೆ ನಿಯೋಜನೆಗೊಂಡಿದ್ದಾರೆ.

ಪೊಲೀಸ್ ಇಲಾಖೆ ಈಗಾಗಲೇ ಮೈದಾನದ ಒಳಭಾಗದಲ್ಲಿ ಐದು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಪಾಲಿಕೆ ಸಹ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಿದೆ. ಡ್ರೋಣ್ ಕ್ಯಾಮೆರಾದಿಂದ ವಿಡಿಯೋ ಚಿತ್ರೀಕರಣ ಮಾಡಿ, ಮೈದಾನದ ಸುತ್ತಮುತ್ತಲಿನ ಚಟುವಟಿಕೆಗಳ ಮೇಲೆ ನಿಗಾ ಇಡಲು ಇಲಾಖೆ ಮುಂದಾಗಿದೆ.

'ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಈದ್ಗಾ ಮೈದಾನದ ಸುತ್ತಲೂ ಅಗತ್ಯಕ್ಕೆ ತಕ್ಕಷ್ಟು ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಎಲ್ಲರೂ ಶಾಂತಿಯಿಂದ ಹಬ್ಬ ಆಚರಿಸಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು' ಎಂದು ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ತಿಳಿಸಿದರು.
ರೇಣುಕಾ ಸುಕುಮಾರ್, ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT