ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಮುಗಿಯದ ಕಾಮಗಾರಿ; 24X7 ನೀರು ವಿಳಂಬ

ಯೋಜನೆ ಪೂರ್ಣಗೊಂಡರೆ 1.45 ಲಕ್ಷ ಮನೆಗಳಿಗೆ ನಿರಂತರ ನೀರು
Published 26 ನವೆಂಬರ್ 2023, 6:35 IST
Last Updated 26 ನವೆಂಬರ್ 2023, 6:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅವಳಿನಗರದ 46 ವಾರ್ಡ್‌ಗಳಲ್ಲಿ 24x7 ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ವಿಳಂಬದಿಂದ ಜನರಿಗೆ ತೊಂದರೆಯಾಗುತ್ತಿದೆ.

ವಿಶ್ವ ಬ್ಯಾಂಕ್‌, ರಾಜ್ಯ ಸರ್ಕಾರ, ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಒಟ್ಟು ₹931 ಕೋಟಿ ಅನುದಾನದಲ್ಲಿ 2020ರಲ್ಲಿ ಕಾಮಗಾರಿ ಆರಂಭವಾಗಿದ್ದು, 2025ರಲ್ಲಿ ಕಾಮಗಾರಿ ಮುಗಿಯಬೇಕಾಗಿತ್ತು. ಕೋವಿಡ್‌ನಿಂದಾಗಿ ಕಾಮಗಾರಿ ಆರಂಭದಲ್ಲಿ ಒಂದು ವರ್ಷ ತಡವಾಗಿ ಆರಂಭವಾಗಿತ್ತು. ಈವರೆಗೆ ಶೇ 35ರಷ್ಟು ಕಾಮಗಾರಿ ಮಾತ್ರ ನಡೆದಿದೆ. ಹೀಗಾಗಿ ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಯುವುದು ಅನುಮಾನವಾಗಿದೆ.

ಕಾಮಗಾರಿ ಗುತ್ತಿಗೆಯನ್ನು ಎಲ್‌ ಆ್ಯಂಡ್‌ ಕಂಪನಿಗೆ ವಹಿಸಲಾಗಿದ್ದು, ಹು–ಧಾ ಮಹಾನಗರ ಪಾಲಿಕೆಯಿಂದ ಅನುಷ್ಠಾನ ಮಾಡಲಾಗುತ್ತಿದೆ. ಕೆಯುಐಡಿಎಫ್‌ಸಿಯನ್ನು ಯೋಜನೆಯ ನೋಡಲ್‌ ಏಜೆನ್ಸಿಯಾಗಿ ನೇಮಕ ಮಾಡಲಾಗಿದೆ. ಸದ್ಯ ಪೈಪ್‌ಲೈನ್ ಅಳವಡಿಕೆ, ಓವರ್‌ಹೆಡ್‌ ಟ್ಯಾಂಕ್ ಹಾಗೂ ನೆಲಮಟ್ಟದ ಟ್ಯಾಂಕ್ ನಿರ್ಮಾಣ ಕಾಮಗಾರಿಗಳು ನಡೆಯುತ್ತಿವೆ.

ಕೆಲವೆಡೆ ಪೈಪ್‌ ಅಳವಡಿಕೆಗೆ ರಸ್ತೆ ಅಗೆದು ಹಾಗೆಯೇ ಬಿಡಲಾಗಿದೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತದೆ. ಇನ್ನೂ ಕೆಲವೆಡೆ ಸಮರ್ಪಕವಾಗಿ ನೀರು ಪೈರೈಕೆಯಾಗುತ್ತಿಲ್ಲ. ಕಲುಷಿತ ನೀರು ಪೊರೈಕೆಯಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.

ಅವಳಿ ನಗರಕ್ಕೆ ಮಲಪ್ರಭಾ ನದಿಯಿಂದ ಕುಡಿಯುವ ನೀರು ಪೂರೈಸಲಾಗುತ್ತದೆ. ನದಿ ನೀರನ್ನು ಅಮ್ಮಿನಬಾವಿಯ ನೀರು ಶುದ್ಧೀಕರಣ ಘಟಕದಲ್ಲಿ ಶುದ್ಧೀಕರಿಸಲಾಗುತ್ತದೆ. ಅಲ್ಲಿಂದ ಅವಳಿ ನಗರಕ್ಕೆ ನೀರು ಪೂರೈಸಲಾಗುತ್ತದೆ.

ಶುದ್ಧೀಕರಿಸಿದ ನೀರನ್ನು ಸಂಗ್ರಹಿಸಲು ಅವಳಿನಗರದಲ್ಲಿ 15 ಮೇಲ್ಮಟ್ಟದ ಜಲಸಂಗ್ರಹಗಾರ, 8 ನೆಲಮಟ್ಟದ ಜಲಸಂಗ್ರಹಗಾರ ನಿರ್ಮಾಣ ಮಾಡಲಾಗುತ್ತಿದೆ. 1,690 ಕಿ.ಮೀ ಪೈಪ್‌ಲೈನ್‌ ಅಳವಡಿಸಲಾಗುತ್ತಿದೆ. ಯೋಜನೆ ಪೂರ್ಣಗೊಂಡರೆ 1,45,700 ಮನೆಗಳಿಗೆ 24X7 ನೀರು ಪೂರೈಕೆಯಾಗಲಿದೆ ಎಂದು ಕೆಯುಐಡಿಎಫ್‌ಸಿ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರತಿಭಾಮಠ ಹೇಳಿದರು.

ಈಗಾಗಲೇ ನಿರ್ಮಾಣ ಮಾಡಿರುವ 35 ಮೇಲ್ಮಟ್ಟದ ಜಲಸಂಗ್ರಹಗಾರಗಳು, 19 ನೆಲಮಟ್ಟದ ಜಲಸಂಗ್ರಹಗಾರಗಳಿವೆ. ಹೊಸ ಜಲಸಂಗ್ರಹಗಾರಗಳು ನಿರ್ಮಾಣವಾದ ನಂತರ  ಧಾರವಾಡದ ಮೃತ್ಯುಂಜಯ ನಗರದಲ್ಲಿ ನೀರು ಸರಬರಾಜಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಅವರು.

ಈ ಯೋಜನೆಯ ವಿನ್ಯಾಸ ಮತ್ತು ನಿರ್ಮಾಣದ ಅವಧಿ 5  ವರ್ಷ. ಅದು ಮುಗಿದ ಬಳಿಕವೂ ಮುಂದಿನ ಏಳು ವರ್ಷ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಎಲ್‌ ಆ್ಯಂಡ್ ಟಿ ಕಂಪನಿಗೆ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಾಯೋಗಿಕವಾಗಿ 11 ವಾರ್ಡ್‌ಗಳಲ್ಲಿ ಜಾರಿ:  13 ವರ್ಷಗಳ ಹಿಂದೆ ಅವಳಿ ನಗರದ 8 ವಾರ್ಡ್‌ಗಳಲ್ಲಿ (ಮರುವಿಂಗಡಣೆ ನಂತರ 11 ವಾರ್ಡ್‌) ಪ್ರಾಯೋಗಿಕವಾಗಿ 24X7 ಕುಡಿಯುವ ನೀರು ಪೂರೈಕೆ ಯೋಜನೆ ಜಾರಿಗೆ ತರಲಾಗಿದ್ದು, 16,786 ಮನೆಗಳಿಗೆ ಮನೆಗಳಿಗೆ ನೀರು ಪೂರೈಸಲಾಗುತ್ತಿದೆ.

ಬಡವರು, ಮಧ್ಯಮವರ್ಗದವರು, ಕೊಳೆಗೇರಿ ನಿವಾಸಿಗಳು, ಶ್ರೀಮಂತರು ಸೇರಿದಂತೆ ಎಲ್ಲ ವರ್ಗದವರು ಇರುವ ವಾರ್ಡ್‌ಗಳನ್ನು ಯೋಜನೆಗೆ ಆಯ್ಕೆ ಮಾಡಲಾಗಿತ್ತು. ಪ್ರಾಯೋಗಿಕ ಯೋಜನೆ ಯಶಸ್ವಿಯಾದ ನಂತರ ಉಳಿದ ವಾರ್ಡ್‌ಗಳಿಗೂ ವಿಸ್ತರಿಸಲಾಗುತ್ತಿದೆ.

ಫೇಸ್‌–1, ಪ್ರಾಜೆಕ್ಟ್‌–1, ಫೇಸ್‌–1 ಪ್ರಾಜೆಕ್ಟ್‌–2 ಯೋಜನೆ ಅಡಿ ರಾಜ್ಯ ಸರ್ಕಾರದ ಅನುದಾನದಲ್ಲಿ ಜಲಮಂಡಳಿಯಿಂದ 25 ವಾರ್ಡ್‌ಗಳಲ್ಲಿ ಪ್ರತಿ ದಿನ ನೀರು ಪೂರೈಕೆಯಾಗುತ್ತಿದೆ. ಈಗ ಅವಳಿ ನಗರದಲ್ಲಿ ಕುಡಿಯುವ ನೀರಿನ ಸಂಪೂರ್ಣ ಹೊಣೆಯನ್ನು ಎಲ್‌ ಆ್ಯಂಡ್ ಟಿ ಕಂಪನಿಗೆ ವಹಿಸಲಾಗಿದೆ.

24X7 ಕುಡಿಯುವ ನೀರಿನ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಕಾಮಗಾರಿ ಚುರುಕುಗೊಳಿಸಲು ಎಲ್‌ ಆ್ಯಂಡ್ ಟಿ ಕಂಪನಿಗೆ ಸೂಚಿಸಲಾಗಿದೆ
- ಡಾ.ಈಶ್ವರ ಉಳ್ಳಾಗಡ್ಡಿ ಆಯುಕ್ತ, ಹು–ಧಾ ಮಹಾನಗರ ಪಾಲಿಕೆ
ಅವಳಿ ನಗರದ ಚಿತ್ರಣ
ವಾರ್ಡ್‌ 82 ಕಾಮಗಾರಿ ಪೂರ್ಣಗೊಂಡರೆ ಮನೆಗಳಿಗೆ ಸಿಗುವ ನೀರಿನ ಸಂಪರ್ಕ 200934 ಕಿ.ಮೀ ಪೈಪ್‌ಲೈನ್‌ ಅಳವಡಿಕೆ ಕಾರ್ಯ ಪ್ರಗತಿಯಲ್ಲಿ 1690 ಯೋಜನೆಯ ಒಟ್ಟು ಮೊತ್ತ ₹931 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT