ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ ರೈಲ್ವೆ ನಿಲ್ದಾಣ ಇನ್ನೂ ಆಧುನೀಕರಣ: ಪ್ರಲ್ಹಾದ ಜೋಶಿ

ಅಣ್ಣಿಗೇರಿ ಬಳಿ ನವಲಗುಂದ ಮಾರ್ಗದಲ್ಲಿ ರೈಲ್ವೆ ಮೇಲ್ಸೆತುವೆ ಕಾಮಗಾರಿಗೆ ಚಾಲನೆ
Published 26 ಫೆಬ್ರುವರಿ 2024, 16:31 IST
Last Updated 26 ಫೆಬ್ರುವರಿ 2024, 16:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಹುಬ್ಬಳ್ಳಿ ರೈಲ್ವೆ ನಿಲ್ದಾಣವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಮಾಡಲು ಮತ್ತು ರೈಲ್ವೆಗಳ ಸಂಖ್ಯೆ ಹೆಚ್ಚಳ ಮಾಡುವುದಕ್ಕೆ ಯೋಜಿಸಲಾಗಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಸಮೀಪದ ಅಣ್ಣಿಗೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ರೈಲ್ವೆ ಮೇಲ್ಸೆತುವೆ ಕಾಮಗಾರಿಗೆ ಶಿಲಾನ್ಯಾಸ ಮಾಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಅಣ್ಣಿಗೇರಿ ಬಳಿ ₹58 ಕೋಟಿ ವೆಚ್ಚದಲ್ಲಿ ರೈಲ್ವೆ ಮೇಲ್ಸೆತುವೆ ಮತ್ತು ಹಳ್ಳಿಕೇರಿ ಬಳಿ ₹30 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಇದಲ್ಲದೆ ಅಣ್ಣಿಗೇರಿಯಲ್ಲಿ ಸಿಎಸ್‌ಆರ್‌ ಅನುದಾನ ₹5 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. ಅಣ್ಣಿಗೇರಿಯಲ್ಲಿ 10 ಶಾಲಾ ಕೋಣೆಗಳನ್ನು ನಿರ್ಮಿಸಿದ್ದೇನೆ. ಅಣ್ಣಿಗೇರಿ ಅಭಿವೃದ್ಧಿ ಮಾಡುವಲ್ಲಿ ಹಿಂದೆ ಬಿದ್ದಿಲ್ಲ’ ಎಂದರು.

’ದೇಶದಲ್ಲಿ 70 ಸಾವಿರ ಕಿ.ಮೀ ಮಾರ್ಗ ಹೊಂದಿರುವ ಭಾರತೀಯ ರೈಲ್ವೆಯಲ್ಲಿ ಈಗ ಕ್ರಾಂತಿಕಾರಕ ಬದಲಾವಣೆಗಳು ಆಗುತ್ತಿವೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಪೂರ್ವ ದೇಶದಲ್ಲಿ ಒಟ್ಟು 21,413 ಕಿ.ಮೀ ಮಾರ್ಗ ವಿದ್ಯುದ್ದೀಕರಣ ಮಾಡಲಾಗಿತ್ತು. ಕಳೆದ 10 ವರ್ಷಗಳಲ್ಲಿ 39 ಸಾವಿರ ಕಿಲೋ ಮೀಟರ್‌ ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಮಾಡಲಾಗಿದೆ. ಒಟ್ಟಾರೆ ದೇಶದಲ್ಲಿರುವ ಮಾನವ ರಹಿತ ಲೆವೆಲ್ ಕ್ರಾಸಿಂಗ್‌ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲಾಗುತ್ತಿದೆ’ ಎಂದು ಹೇಳಿದರು.

’ಒಂದು ರೈಲ್ವೆ ಸೇತುವೆ ಪಡೆಯುವುದಕ್ಕೆ ಕಾಂಗ್ರೆಸ್‌ ಅಧಿಕಾರದಲ್ಲಿದ್ದ ಅವಧಿಯಲ್ಲಿ ಐದು ವರ್ಷ ಬೆನ್ನುಬೀಳುವ ಸ್ಥಿತಿ ಇತ್ತು. ಆದರೆ, ಬಿಜೆಪಿ ಸರ್ಕಾರದಲ್ಲಿ ಏಕಕಾಲಕ್ಕೆ 1500 ರೈಲ್ವೆ ಸೇತುವೆಗಳು ನಿರ್ಮಾಣವಾಗುತ್ತಿವೆ. ಹುಬ್ಬಳ್ಳಿ ವಿಭಾಗ ವ್ಯಾಪ್ತಿಯಲ್ಲಿ 31 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ ಏಕಕಾಲಕ್ಕೆ ಆರಂಭಿಸಲಾಗಿದೆ’ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಅಣ್ಣಿಗೇರಿ ದಾಸೋಹ ಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ, ‘ಸ್ಥಳೀಯ ರೈತರು ಮತ್ತು ವಾಹನಗಳ ಓಡಾಟಕ್ಕೆ ತೊಂದರೆ ಆಗುತ್ತಿದ್ದು, ರೈಲ್ವೆ ಕೆಳಸೇತುವೆ ಮಾಡಿಕೊಡುವಂತೆ ಕೇಂದ್ರ ಸಚಿವರನ್ನು ಕೋರಲಾಗಿತ್ತು. ಇದೀಗ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಸಚಿವರು ಕಲ್ಪಿಸಿದ್ದಾರೆ‘ ಎಂದರು.

ಆನ್‌ಲೈನ್‌ ಮೂಲಕ ಶಿಲಾನ್ಯಾಸ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಣ್ಣಿಗೇರಿ ಸೇರಿದಂತೆ ದೇಶದ ವಿವಿಧೆಡೆಯಲ್ಲಿ ಸೇತುವೆಗಳ ನಿರ್ಮಾಣಕ್ಕೆ ಆನ್‌ಲೈನ್‌ ಮೂಲಕ ಏಕಕಾಲಕ್ಕೆ ಚಾಲನೆ ನೀಡಿದರು.

ನೈರುತ್ಯ ರೈಲ್ವೆ ವಿಭಾಗದಿಂದ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು. ನೈರುತ್ಯ ರೈಲ್ವೆ ವಿಭಾಗದ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಾಸಕ ಮಹೇಶ ಟೆಂಗಿನಕಾಯಿ ಹಾಗೂ ಅಣ್ಣಿಗೇರಿ ಪಟ್ಟಣ ಪಂಚಾಯಿತಿ ಸದಸ್ಯರು ಇದ್ದರು. ನೈರುತ್ಯ ರೈಲ್ವೆ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಹೇಮರಾಜ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT