ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸ್ಸಿಗೆ ನೋವಾಗಿದೆ: ರಾಜಯೋಗೀಂದ್ರ ಸ್ವಾಮೀಜಿ

Last Updated 24 ಡಿಸೆಂಬರ್ 2020, 20:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಮೂರುಸಾವಿರ ಮಠದ ಗೌರವ ಕಾಪಾಡಿದ್ದೇನೆ.ಸಮಾಜಕ್ಕೆ ವಂಚನೆ ಮಾಡಿಲ್ಲ. ಆದರೂ, ಮಠ ಹಾಗೂ ನನ್ನ ಬಗೆಗೆ ಇಲ್ಲ–ಸಲ್ಲದ ಅಪಪ್ರಚಾರ ಮಾಡುತ್ತಾರೆ. ಇದರಿಂದ ಮನಸ್ಸಿಗೆ ನೋವಾಗಿದೆ’ ಎಂದು ಮೂರುಸಾವಿರ ಮಠದ ಪೀಠಾಧಿಪತಿ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಭಾವುಕರಾಗಿ ಹೇಳಿದರು.

ಇಲ್ಲಿ ಗುರುವಾರ ನಡೆದ ಕೆಎಲ್ಇ ಸಂಸ್ಥೆಯ ಜಗದ್ಗುರು ಗಂಗಾಧರ ಸ್ವಾಮೀಜಿ ಮೂರುಸಾವಿರ ಮಠ ಮಹಾವಿದ್ಯಾಲಯ ಮತ್ತು ಕೆಎಲ್ಇ ಆಸ್ಪತ್ರೆಯ ಶಂಕುಸ್ಥಾಪನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಕೆಲವರು ಆಸ್ತಿ ಮಾರಾಟ ಮಾಡಿದ್ದೇವೆ ಎಂದು ಆರೋಪ ಮಾಡುತ್ತಿದ್ದಾರೆ. ಎಲ್ಲಿ ಮಾರಾಟ ಮಾಡಿದ್ದೇವೆ? ಮಠಕ್ಕೆ ಸಮಸ್ಯೆ ಎದುರಾದಾಗ ಭಕ್ತರು ಮಠದ ಪರವಾಗಿ ನಿಲ್ಲುತ್ತಿಲ್ಲ’ ಎಂದು ಭಕ್ತರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

‘ಮಠಕ್ಕಾಗಿ ಸಮಾಜದಿಂದ ಪಡೆಯುವ, ಸಮಾಜದ ಒಳ್ಳೆಯದಕ್ಕಾಗಿ ಮಠದ ಆಸ್ತಿ ನೀಡುವ ಹಕ್ಕು ಮಠಾಧೀಶರಿಗಿದೆ. ಸತ್ಯ, ಪ್ರಾಮಾಣಿಕತೆಯಿಂದ ನಡೆದಿದ್ದೇವೆ. ಮಠಕ್ಕೆ ಅನ್ಯಾಯ ಮಾಡಿಲ್ಲ. ನ್ಯಾಯ ಒದಗಿಸಿದ್ದೇವೆ’ ಎಂದರು.

‘ಸಮಾಜದ ಒಳ್ಳೆಯದಕ್ಕಾಗಿ ಕೆಎಲ್ ಇ ಸಂಸ್ಥೆಗೆ ಭೂಮಿ ನೀಡಿದ್ದೇವೆ. ಯಾವುದೇ ವ್ಯಕ್ತಿಗಲ್ಲ. ಗುರುಗಳಾದ ಗಂಗಾಧರ ಸ್ವಾಮೀಜಿ ಭೂಮಿ ನೀಡಿದ್ದಾರೆ. ಶಿಷ್ಯರಾಗಿ ಅವರ ಸಂಕಲ್ಪ ಈಡೇರಿಸಿದ್ದೇವೆ. ಬೇರೆ ಯಾವ ಮಠವೂ ಜಾಗ ನೀಡಿಲ್ಲವೇ’ ಎಂದು ಪ್ರಶ್ನಿಸಿದರು.

ಭೂ ಪರಿವರ್ತನೆಗೆ ಆರು ವರ್ಷ
ಹುಬ್ಬಳ್ಳಿ: ಕಾಲೇಜು ನಿರ್ಮಾಣಕ್ಕಾಗಿ ಭೂ ಪರಿವರ್ತನೆ ಮಾಡಿಸಿಕೊಳ್ಳಲು ಏಳೆಂಟು ವರ್ಷ ಹಿಡಿದಿದೆ. ಕೆಎಲ್‌ಇ ಅಂತಹ ದೊಡ್ಡ ಸಂಸ್ಥೆಗೆ ಹೀಗಾದರೆ, ಜನ ಸಾಮಾನ್ಯರ ಸ್ಥಿತಿ ಹೇಗಿರಬೇಡ? ಅಧಿಕಾರಿಗಳು ಸದಾ ಅಡ್ಡಗಾಲು ಹಾಕುತ್ತಿರುತ್ತಾರೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ಸಚಿವರು, ಜನಪ್ರತಿನಿಧಿಗಳು ಹೇಳಿದ ಮೇಲೂ ಇಷ್ಟು ವರ್ಷ ಹಿಡಿದಿದೆ. ಅಭಿವೃದ್ಧಿ ಕಾರ್ಯಗಳಿಗೆ ಅಧಿಕಾರಿಗಳು, ಸರ್ಕಾರ ತ್ವರಿತವಾಗಿ ಸ್ಪಂದಿಸಬೇಕು ಎಂದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಕಾಲೇಜು ಕಟ್ಟಡ ನಿರ್ಮಾಣ ಆರಂಭಿಸಲು ಎಂಟು ವರ್ಷ ಅಲೆದಾಡಬೇಕಾಯಿತು. ಸರ್ಕಾರ ಯಾವ ಪಕ್ಷದ್ದೆಂದು ಟೀಕಿಸುವುದಿಲ್ಲ. ಸರ್ಕಾರಿ ವ್ಯವಸ್ಥೆ ಹೇಗಿದೆ ಎಂಬುದಕ್ಕೆ ಇದು ಉದಾಹರಣೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT