ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಲು ಒತ್ತಾಯ

Last Updated 12 ಡಿಸೆಂಬರ್ 2020, 11:13 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಂಧನ ಇಲಾಖೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ರಾಜ್ಯದ 30 ಸಾವಿರ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಬೇಕು, ಅವರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ತಡೆಯಬೇಕು ಎಂದು ಕರ್ನಾಟಕ ರಾಜ್ಯ ವಿದ್ಯುತ್‌ ಕಾರ್ಮಿಕರ ಫೆಡರೇಷನ್‌ ಗೌರವ ಅಧ್ಯಕ್ಷೆ ಎಸ್‌. ವರಲಕ್ಷ್ಮಿ ಆಗ್ರಹಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ರಾಜ್ಯಕ್ಕೆ ಬೆಳಕು ನೀಡಲು ಕೆಪಿಟಿಸಿಎಲ್‌, ಬಿಟಿಪಿಎಸ್‌, ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ ಮತ್ತು ಸೆಸ್ಕಾಂ ವಿದ್ಯುತ್‌ ಕಂಪನಿಗಳ ಅಡಿಯಲ್ಲಿ ಗುತ್ತಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆದರೆ, ಕಾರ್ಮಿಕರ ಬದುಕೇ ಕತ್ತಲಾಗಿದೆ. ಅವರನ್ನು ಕಾಯಂ ಮಾಡಬೇಕು ಎಂದು ಹಲವು ವರ್ಷಗಳಿಂದ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಗುತ್ತಿಗೆದಾರರ ಮೂಲಕ ಈ ಕಾರ್ಮಿಕರಿಗೆ ವೇತನ ಪಾವತಿಯಾಗುತ್ತಿರುವ ಕಾರಣ ದೌರ್ಜನ್ಯವೂ ತಪ್ಪಿಲ್ಲ’ ಎಂದು ಆರೋಪಿಸಿದರು.

‘ಕಾರ್ಮಿಕರ ಕೈಯಲ್ಲಿನ ಶಕ್ತಿ ಬಳಸಿಕೊಂಡು ನಂತರ ಅವರನ್ನು ಕೆಲಸಕ್ಕೆ ಬಾರದವರಂತೆ ನಡೆಸಿಕೊಳ್ಳುತ್ತಿರುವ ಸರ್ಕಾರದ ನೀತಿ ಸರಿಯಲ್ಲ. ಕರ್ನಾಟಕದಲ್ಲಿರುವ 1,100 ಉಪ ಸ್ಟೇಷನ್‌ಗಳ ಪೈಕಿ 800 ಸ್ಟೇಷನ್‌ಗಳನ್ನು ಮತ್ತು ವಿವಿಧ ಕಂಪನಿಗಳ ಅಡಿ ಇರುವ 360 ಸ್ಟೇಷನ್‌ಗಳನ್ನು ಗುತ್ತಿಗೆ ಕಾರ್ಮಿಕರೇ ನಿರ್ವಹಣೆ ಮಾಡುತ್ತಿದ್ದಾರೆ. 1970ರ ಗುತ್ತಿಗೆ ಕಾರ್ಮಿಕ ಕಾಯ್ದೆ ಪ್ರಕಾರ ಹತ್ತು ವರ್ಷಗಳ ಕಾಲ ಸತತವಾಗಿ ಕೆಲಸ ಮಾಡಿದ ಕಾರ್ಮಿಕರನ್ನು ಕಾಯಂ ಮಾಡಬೇಕು ಎಂದು ನಿಯಮವೇ ಇದೆ. ಸರ್ಕಾರ ಇದನ್ನು ಪಾಲಿಸುತ್ತಿಲ್ಲ’ ಎಂದು ದೂರಿದರು.

‘ನಗರಸಭೆ, ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವ ಅನೇಕ ಗುತ್ತಿಗೆದಾರರನ್ನು ರಾಜ್ಯ ಸರ್ಕಾರ ಹಿಂದೆ ಕಾಯಂ ಮಾಡಿದೆ. ತಮಿಳುನಾಡು, ಕೇರಳ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ 75 ಸಾವಿರ ಗುತ್ತಿಗೆ ಕಾರ್ಮಿಕರನ್ನು ಆಯಾ ಸರ್ಕಾರಗಳು ಕಾಯಂ ಮಾಡಿ ಸುಭದ್ರ ಬದುಕಿಗೆ ಅನುವು ಮಾಡಿಕೊಡಲಾಗಿದೆ. ಕರ್ನಾಟಕ ಸರ್ಕಾರ ಕೂಡ ಸೇವಾಜೇಷ್ಠತೆ ಆಧಾರದ ಮೇಲೆ ಕಾಯಂ ಮಾಡಬೇಕು’ ಎಂದು ಒತ್ತಾಯಿಸಿದರು.

ಸಂಘಟನೆಯ ಪ್ರಮುಖರಾದ ಬಿ.ಐ. ಈಳಿಗೇರ, ವೀರೇಶ ಕುಂಬಾರ, ದೊಡ್ಡಪ್ಪ ಬೋಳಿಕಟ್ಟಿ, ಬಿ.ಐ. ಇಳಗಿ, ಎಚ್‌.ಎಸ್‌. ಸುನಂದಾ, ಮಾಲಿನಿ ಮೇಸ್ತ ಮತ್ತು ಲಲಿತಾ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT