ಭಾನುವಾರ, ಫೆಬ್ರವರಿ 23, 2020
19 °C
ಹೂಗಳಿಂದ ಅಲಂಕೃತಗೊಂಡಿದ್ದ ದೇವಿ, ಭಕ್ತಾದಿಗಳ ಸಂಭ್ರಮ

ಬನಶಂಕರಿ ರಥೋತ್ಸವದಲ್ಲಿ ಜನ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ವಿದ್ಯಾನಗರದ ಬನಶಂಕರಿ ಬಡಾವಣೆಯಲ್ಲಿರುವ ಬನಶಂಕರಿ ದೇವಸ್ಥಾನದಲ್ಲಿ ಭಾನುವಾರ ಸಂಜೆ ಸಂಭ್ರಮದಿಂದ ರಥೋತ್ಸವ ನಡೆಯಿತು. ಸಾವಿರಾರು ಜನ ಈ ಸಡಗರದಲ್ಲಿ ಭಾಗಿಯಾದರು.

ಈ ದೇವಸ್ಥಾನದಲ್ಲಿ ಎರಡು ದಿನಗಳಿಂದ ನಿರಂತರವಾಗಿ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದವು. ಭಾನುವಾರ ಭಾರತ ಹುಣ್ಣಿಮೆಯಾದ ಕಾರಣ ಸಾಮೂಹಿಕ ಸತ್ಯನಾರಾಯಣ ಪೂಜೆ, ನವಗ್ರಹ ಸಹಿತ ಚಂಡಿ ಹೋಮ, ಕುಂಕುಮಾರ್ಚನೆ, ಪೂರ್ಣಾಹುತಿ, ದೇವಿಯ ಬೆಳ್ಳಿ ಪಲ್ಲಕ್ಕಿ ಮೆರವಣಿಗೆ ನಡೆದವು.

ಬೆಳಿಗ್ಗೆನಿಂದಲೇ ತಂಡೋಪತಂಡವಾಗಿ ದೇವಸ್ಥಾನಕ್ಕೆ ಬಂದ ಭಕ್ತರು ಹೂವಿನಿಂದ ಸುಂದರವಾಗಿ ಅಲಂಕೃತಗೊಂಡಿದ್ದ ದೇವಿಯ ದರ್ಶನ ಪಡೆದರು. ತರಹೇವಾರು ಹೂವು, ಲಿಂಬೆಹಣ್ಣಿನಿಂದ ಅಲಂಕರಿಸಲಾಗಿದ್ದ ತೇರಿನಲ್ಲಿ ಬನಶಂಕರಿ ದೇವಿಯನ್ನು ಕೂಡಿಸಿದ ಬಳಿಕ ರಥೋತ್ಸವ ಜರುಗಿತು. ದೇವಸ್ಥಾನದಿಂದ ಪಾದಗಟ್ಟೆಯ ತನಕ ಮೊದಲು ಪುರುಷರು ತೇರು ಎಳೆದರೆ, ಬರುವಾಗ ಮಹಿಳೆಯರು ತೇರು ಎಳೆದು ಸಂಭ್ರಮಿಸಿದರು. ಭಕ್ತರು ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಅರ್ಪಿಸಿದರು.

ದೇವಸ್ಥಾನವನ್ನು ಬಣ್ಣಬಣ್ಣದ ದೀಪಗಳಿಂದ ಅಲಂಕರಿಸಿದ್ದರಿಂದ ದೇವಾಲಯ, ಪ್ರಾಂಗಣ ಮತ್ತು ಸುತ್ತಮುತ್ತಲಿನ ವಾತಾವರಣದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ವಿವಿಧ ತಿನಿಸುಗಳ ಅಂಗಡಿಗಳು ಮತ್ತು ಆಟಿಕೆಗಳು ಬಂದಿದ್ದರಿಂದ ಮಕ್ಕಳ ಹುಮ್ಮಸ್ಸು ಜೋರಾಗಿತ್ತು. ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ಶಾಟ್‌ ಸರ್ಕಿಟ್‌

ರಥೋತ್ಸವ ವೇಳೆ ದೇವಸ್ಥಾನದ ಕಾಂಪೌಂಡ್‌ಗೆ ಸಮೀಪದಲ್ಲಿ ಹಾಕಿರುವ ವಿದ್ಯುತ್‌ ಪರಿವರ್ತಕದಲ್ಲಿ ಶಾಟ್‌ ಸರ್ಕಿಟ್‌ ಕಂಡುಬಂದು ಬೆಂಕಿ ಹೊತ್ತಿಕೊಂಡ ಕಾರಣ ಭಕ್ತರಲ್ಲಿ ಕೆಲ ಹೊತ್ತು ಆತಂಕ ಮನೆ ಮಾಡಿತ್ತು. ಕೆಲ ಹೊತ್ತಿನಲ್ಲಿಯೇ ಹೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಬಂದು ವಿದ್ಯುತ್‌ ಸಂಪರ್ಕ ಕಲ್ಪಿಸಿದರು.

ಸೋಮವಾರ ಸಂಜೆ ಐದು ಗಂಟೆಗೆ ಕಡುಬಿನ ಕಾಳಗ ನಡೆಯಲಿದ್ದು, ಇದರ ಮೂಲಕ ಜಾತ್ರೆಯ ಸಡಗರಕ್ಕೆ ತೆರೆ ಬೀಳಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು