ಬುಧವಾರ, ಜುಲೈ 28, 2021
21 °C

ಹುಬ್ಬಳ್ಳಿ: ನೌಕರಿ ಕೊಡಿಸುವುದಾಗಿ ₹6 ಲಕ್ಷ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಉರ್ದು ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಹುದ್ದೆ ಕಾಯಂ ಮಾಡಿಸಿಕೊಡುವುದಾಗಿ ಹೇಳಿ, ₹3 ಲಕ್ಷ ನಗದು ಹಾಗೂ ₹3 ಲಕ್ಷ ಮೌಲ್ಯದ ಚೆಕ್‌ ಪಡೆದು ಶಿಕ್ಷಕರೊಬ್ಬರಿಗೆ ವಂಚಿಸಿದ ಶಾಲೆ ಆಡಳಿತ ಮಂಡಳಿ ಕಾರ್ಯದರ್ಶಿ, ಮುಖ್ಯ ಶಿಕ್ಷಕಿ ಸೇರಿ ಮೂವರ ವಿರುದ್ಧ ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಟೂರ ರಸ್ತೆ ಮಿಲತ್‌ನಗರದಲ್ಲಿರುವ ರಿಯಾಜುಲ್‌ ಉಲೂಮ್‌ ಉರ್ದು ಪ್ರೌಢಶಾಲೆ ಆಡಳಿತ ಮಂಡಳಿಯ ಕಾರ್ಯದರ್ಶಿ ಅಹ್ಮದ್‌ಜಲಾಲ್‌ ಫೈಜಾಬಾದಿ, ಮುಖ್ಯ ಶಿಕ್ಷಕಿ ಬಿ.ಎ. ಶೇಖ ಮತ್ತು ಬಾಬು ವಂಚಿಸಿದ ಆರೋಪಿಗಳು. ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ ಕಾಯಂ ಮಾಡುವುದಾಗಿ ಹೇಳಿ 2016ರ ಸೆ.8ರಂದು ಆರೋಪಿಗಳು ₹3 ಲಕ್ಷ ನಗದು ಪಡೆದಿದ್ದರು. ಇತ್ತೀಚೆಗೆ ಚೆಕ್‌ ರೂಪದಲ್ಲಿಯೂ ₹3 ಲಕ್ಷ ಪಡೆದಿದ್ದರು. ಅಲ್ಲದೆ, ಕಳೆದ ಆರು ತಿಂಗಳಿನಿಂದ ತಿಂಗಳ ವೇತನವನ್ನೂ ನೀಡಿಲ್ಲ. ಹುದ್ದೆಯನ್ನು ಕಾಯಂ ಸಹ ಮಾಡಿಲ್ಲ ಎಂದು ವಂಚನೆಗೆ ಒಳಗಾದ ತಾಜನಗರದ ಶಿಕ್ಷಕ ಜಾಕೀರಹುಸೇನ್‌ ಮುದೇನೂರ ದೂರಿನಲ್ಲಿ ತಿಳಿಸಿದ್ದಾರೆ.

ಆನ್‌ಲೈನ್‌ನಲ್ಲಿ ₹63 ಸಾವಿರ ವಂಚನೆ: 24 ಗಂಟೆಯೊಳಗೆ ಬ್ಯಾಂಕ್‌ ಖಾತೆಗೆ ನೀಡಿರುವ ದಾಖಲೆಗಳನ್ನು ಅಪ್‌ಡೇಟ್‌ ಮಾಡದಿದ್ದರೆ ಖಾತೆ ಬಂದ್‌ ಆಗುತ್ತದೆ ಎಂದು ಅರವಿಂದನಗರದ ಚಂದ್ರಕಾಂತ ಪಾಲನಕರ ಅವರಿಗೆ ಕರೆ ಮಾಡಿದ ವಂಚಕ, ಆನ್‌ಲೈನ್‌ನಲ್ಲಿ ₹63,986 ವರ್ಗಾಯಿಸಿಕೊಂಡಿದ್ದಾನೆ.

ಎಸ್‌ಬಿಐ ಖಾತೆ ವ್ಯವಸ್ಥಾಪಕ ಎಂದು ವಂಚಕ ಕರೆ ಮಾಡಿ, ಅವರ ಮೊಬೈಲ್‌ಗೆ ಬಂದ ಒಟಿಪಿ ಪಡೆದು ಹಣ ವರ್ಗಾಯಿಸಿಕೊಂಡಿದ್ದಾನೆ. ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ ಕಳವು: ಆನಂದನಗರದ ಗಣೇಶ ಗುಡಿಯ ಮನೆ ಎದುರು ನಿಲ್ಲಿಸಿದ್ದ ಆನಂದ ಉಪ್ಪಾರ ಅವರ ಬಜಾಜ್‌ ಡಿಸ್ಕವರಿ ಬೈಕ್‌ ಕಳುವಾಗಿದೆ. ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಂಟು ಮಂದಿ ಬಂಧನ: ಹಳೇಹುಬ್ಬಳ್ಳಿ ಚನ್ನಬಸವೇಶ್ವರ ಮಠದ ಸಮೀಪದ ಬಯಲು ಜಾಗದಲ್ಲಿ ಇಸ್ಪೀಟ್‌ ಆಡುತ್ತಿದ್ದ ಎಂಟು ಮಂದಿಯನ್ನು ಕಸಬಾ ಠಾಣೆ ಪೊಲೀಸರು ಬಂಧಿಸಿ, ₹23 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.

ಸಾಲ ಮರಳಿ ನೀಡಿದ್ದಕ್ಕೆ ಹಲ್ಲೆ
ಹುಬ್ಬಳ್ಳಿ:
ಕೈಗಡವಾಗಿ ಪಡೆದ ಸಾಲ ಮರಳಿ ನೀಡಿಲಿಲ್ಲ ಎಂದು ಮಂಟೂರ ರಸ್ತೆಯ ತೌಸಿಫ್‌ ಮುಲ್ಲಾ ಅವರನ್ನು ಶೆಡ್‌ನಲ್ಲಿ ಕೂಡಿಹಾಕಿ ಮೂವರು ಹಲ್ಲೆ ನಡೆಸಿದ್ದಾರೆ.

ಈ ಕುರಿತು ಸೆಟ್ಲಮೆಂಟ್‌ ನಿವಾಸಿಗಳಾದ ರಾಹುಲ್‌, ಶಿವು ಮತ್ತು ಹುಲಗೇಶ ವಿರುದ್ಧ ಬೆಂಡಿಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಟೊ ಚಾಲಕ ತೌಸಿಫ್‌ ಆರೋಪಿಗಳಿಂದ ಸಾಲ ಪಡೆದಿದ್ದರು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮರಳಿ ನೀಡಿರಲಿಲ್ಲ. ಇದರಿಂದ ಕೋಪಗೊಂಡ ಮೂವರು ಬುಧವಾರ ಬೆಳಿಗ್ಗೆ ತೌಸಿಫ್‌ನನ್ನು ಕೃಷಿ ಕಾರ್ಮಿಕ ನಗರದಲ್ಲಿರುವ ಶೆಡ್ ಒಂದರಲ್ಲಿ ಬಲವಂತವಾಗಿ ಕೂಡಿ ಹಾಕಿದ್ದಾರೆ.ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಮಾಡುವ ಬೆದರಿಕೆಯೊಡ್ಡಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು