ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಕನ್ನಡ ಮಾತೃಭಾಷೆ ಅಲ್ಲ, ರಾಜ್ಯ ಭಾಷೆ: ಎಸ್.ಜಿ.ಸಿದ್ದರಾಮಯ್ಯ

ಧಾರವಾಡ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯ
Last Updated 26 ಮಾರ್ಚ್ 2023, 9:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಮಾತೃ ಭಾಷೆ ಹೆಸರಿನಲ್ಲಿ ಪ್ರಾದೇಶಿಕ ಭಾಷೆಗಳಿಗೆ ಅನ್ಯಾಯವಾಗುತ್ತಿದೆ. ಕನ್ನಡವು ರಾಜ್ಯ ಭಾಷೆಯೇ ಹೊರತು ಮಾತೃ ಭಾಷೆ ಅಲ್ಲ’ ಎಂದು ಸಾಹಿತಿ ಪ್ರೊ.ಎಸ್.ಜಿ.‌ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಇಲ್ಲಿನ ಸವಾಯಿ ಗಂಧರ್ವ ಕಲಾ ಭವನದಲ್ಲಿ ಶನಿವಾರ ನಡೆದ ಧಾರವಾಡ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಅವರು, ‘ಪ್ರಾದೇಶಿಕ ಭಾಷೆಗಳು ಕೊನೆಯುಸಿರೆಳೆಯುತ್ತಿರುವ ಸಮಯ ಇದು’ ಎಂದರು.

‘1–7ನೇ ತರಗತಿ ವರೆಗೆ ಪ್ರಥಮ/ದ್ವಿತೀಯ ಭಾಷೆಯಾಗಿ ಕನ್ನಡ ಕಲಿಸುವ ನೀತಿ ಸಮರ್ಪಕವಾಗಿ ಅನುಷ್ಠಾನಕ್ಕೆ ಬರಲೇ ಇಲ್ಲ. ಶಿಕ್ಷಣದ ಖಾಸಗೀಕರಣದಿಂದ ಕನ್ನಡ ಕಳೆದುಹೋಗುತ್ತಿದೆ. ಇದು ಮುಂದುವರಿದರೆ ಕನ್ನಡ ಆಡಳಿತ ಭಾಷೆಯಾಗಿರಲು ಸಾಧ್ಯವಿಲ್ಲ’ ಎಂದರು.

ಎಲ್ಲರನ್ನೂ ಒಳಗೊಳ್ಳಲಿ: ‘ಸಾಹಿತ್ಯವು ಗೆದ್ದೆತ್ತಿನ ಬಾಲ ಹಿಡಿಯಬಾರದು. ಸೋತೆತ್ತಿನ ಕೊಂಬು ಹಿಡಿದು ಮೇಲಕ್ಕೆ ಎತ್ತಬೇಕು. ಕನ್ನಡ ಸಾಹಿತ್ಯ ಪರಿಷತ್ತು ಕೂಡ ಯಾರನ್ನೂ ಹೊರಗಿಡದೆ ಎಲ್ಲರನ್ನೂ ಒಳಗೊಳ್ಳುವಂತಾಗಬೇಕು’ ಎಂದು ಆಶಿಸಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಲ್. ಪಾಟೀಲ, ‘ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ಸಿಕ್ಕರೆ ಉತ್ತಮ ಆಡಳಿತ ನಿರ್ವಹಿಸಲು ಸಾಧ್ಯವಾಗುತ್ತದೆ’ ಎಂದರು.

‘ಕೃಷಿಯ ಎಲ್ಲ ಪಠ್ಯಗಳನ್ನು ಕನ್ನಡೀಕರಣಗೊಳಿಸುವ ಪ್ರಯತ್ನ ನಡೆಯುತ್ತಿದೆ. ಆದರೆ, ಈ ಪಠ್ಯಗಳು ದಕ್ಷಿಣ ಕರ್ನಾಟಕದ ಗ್ರಾಂಥಿಕ ಭಾಷೆಯಲ್ಲಿವೆ. ಇವುಗಳನ್ನು ಉತ್ತರ ಕರ್ನಾಟಕದ ಆಡು ಭಾಷೆಗೆ ಅಳವಡಿಸಲು ಸಾಹಿತಿಗಳು ಮುಂದಾಗಬೇಕು’ ಎಂದು ಕೋರಿದರು.

ಕವಯಿತ್ರಿ ಕಾವ್ಯಾ ಕಡಮೆ ಅವರ ‘ಮಾಕೋನ ಏಕಾಂತ’ ಕೃತಿಗೆ ಕಸಾಪ ಯುವ ಕತೆಗಾರ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ₹5 ಸಾವಿರ ನಗದು, ಪ್ರಶಸ್ತಿ ಪತ್ರ ಒಳಗೊಂಡಿದೆ. ಸಮ್ಮೇಳನದ ಅಧ್ಯಕ್ಷ ಧರಣೇಂದ್ರ ಕುರಕುರಿ ಅವರನ್ನು ಸನ್ಮಾನಿಸಲಾಯಿತು.

ಪ್ರಹ್ಲಾದ ಗೆಜ್ಜಿ, ಎಸ್.ಎಫ್. ಸಿದ್ದನಗೌಡರ, ಶಶಿಧರ ಸಾಲಿ, ಎಸ್.ಕೆ. ಆದಪ್ಪನವರ, ಗಂಗಾಧರ ದೊಡವಾಡ, ಜಯಶ್ರೀ ಜಾತಿಕರ್ತ ಇದ್ದರು.

‘ಕನ್ನಡ ಶ್ರೀಮಂತ ಭಾಷೆ’: ‘ಚಿಂತನೆ’ ಗೋಷ್ಠಿಯಲ್ಲಿ ‘ತಮಿಳು-ಕನ್ನಡ ಭಾಷಾ ಮತ್ತು ಸಾಂಸ್ಕೃತಿಕ ಬಾಂಧವ್ಯ’ ಕುರಿತು ಮಾತನಾಡಿದ ತಮಿಳುನಾಡು ಘಟಕದ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷೆ ಡಾ.ತಮಿಳು ಸೆಲ್ವಿ, ‘ಪಂಚದ್ರಾವಿಡ ಭಾಷೆಗಳಿಗೆ ಒಂದೇ ಮೂಲಭಾಷೆ. ತಮಿಳು–ಕನ್ನಡ ಅದರ ಎರಡು ಕವಲುಗಳು’ ಎಂದರು.

‘ಕನ್ನಡ ಜಾನಪದ ಮತ್ತು ಆಧುನಿಕತೆ’ ಕುರಿತು ಮಾತನಾಡಿದ ಕಸಾಪ ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ, ‘ಶ್ರಮ ಸಂಸ್ಕೃತಿ ಕಳೆದುಕೊಂಡು ಸುಖದ ಬೆನ್ನು ಬಿದ್ದಿರುವ ಜನರ ಆಧುನಿಕ ಜೀವನವು ನಿಸ್ಸಾರ ಮತ್ತು ನಿಷ್ಕ್ರಿಯವಾಗಿದೆ’ ಎಂದರು.

ಕವಿಗೋಷ್ಠಿ: ‘ಆಯ್ಕೆ ಮಾಡುವ ವಸ್ತು, ಹೇಳುವ ಮತ್ತು ಕವಿತೆ ಕಟ್ಟುವ ಕ್ರಮ, ಸೂಕ್ತ ಶಬ್ದಗಳ ಆಯ್ಕೆ ಕವಿತೆ ರಚನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ’ ಎಂದು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್.ಪುಷ್ಪಾ ಹೇಳಿದರು.

‘ಕನ್ನಡ ಅಲ್ಲದೇ ಭಾರತೀಯ ಭಾಷೆಗಳು ಮತ್ತು ಜಗತ್ತಿನ ವಿವಿಧ ದೇಶಗಳ ಉತ್ತಮ ಕವಿಗಳ ಕವಿತೆಗಳನ್ನು ಅಧ್ಯಯನ ಮಾಡಿ’ ಎಂದು ಕಿವಿಮಾತು ಹೇಳಿದರು.

30 ಕವಿಗಳು ಕವನ ವಾಚಿಸಿದರು.

**

‘ಕೆಆರ್‌ಎಸ್ ಕಟ್ಟಿದ್ದು ವಿಶ್ವೇಶ್ವರಯ್ಯ ಅಲ್ಲ’

‘ಕಾವೇರಿಯನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ, ಕನ್ನಂಬಾಡಿಯ ಕಟ್ಟದಿದ್ದರೆ... ಎಂದು ಚಿತ್ರಗೀತೆಯಲ್ಲಿ ಇತಿಹಾಸ ತಿರುಚಲಾಗಿದೆ’ ಎಂದು ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಹೇಳಿದರು.

‘ಕನ್ನಂಬಾಡಿ ಕಟ್ಟೆ (ಕೆಆರ್‌ಎಸ್) ಕಟ್ಟುವ ಟಿಪ್ಪು ಸುಲ್ತಾನನ ಯೋಜನೆಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅನುಷ್ಠಾನಕ್ಕೆ ತಂದರು. ಜರ್ಮನಿಯ ಎಂಜಿನಿಯರ್ ಒಬ್ಬರು 1911ರಲ್ಲಿ ನಿರ್ಮಾಣ ಆರಂಭಿಸಿದ್ದರು. ಪ್ರವಾಹದಲ್ಲಿ ಅವರು ಕೊಚ್ಚಿಹೋಗಿ ಮೃತರಾದ ನಂತರ ಸರ್.ಎಂ. ವಿಶ್ವೇಶ್ವರಯ್ಯ ಅವರನ್ನು ಒಡೆಯರ್ ಅವರು ಈ ಕಾರ್ಯಕ್ಕೆ ಎಂಜಿನಿಯರ್ ಆಗಿ 1915ರಲ್ಲಿ ನೇಮಿಸಿದರು. ಅವರ ಕಾರ್ಯಕ್ಷಮತೆಯ ಫಲವಾಗಿ ದಿವಾನ್ ಆಗಿ ನೇಮಕಗೊಂಡರು’ ಎಂದು ಅವರು ಹೇಳಿದರು.

‘ನಂತರ ಒಡೆಯರ್ ಅವರು ಮೀಸಲಾತಿ ಅನುಷ್ಠಾನಕ್ಕೆ ಮುಂದಾದಾಗ ಅದನ್ನು ವಿರೋಧಿಸಿ ವಿಶ್ವೇಶ್ವರಯ್ಯನವರು ದಿವಾನ್ ಹುದ್ದೆಗೆ 1918ರಲ್ಲಿ ರಾಜೀನಾಮೆ ನೀಡಿ ಹೊರಬಂದರು. ಅಣೆಕಟ್ಟು ನಿರ್ಮಾಣ ಪೂರ್ಣಗೊಂಡಿದ್ದು 1932ರಲ್ಲಿ. ವಿಶ್ವೇಶ್ವರಯ್ಯ ಅವರು ಈ ಅಣೆಕಟ್ಟೆ ನಿರ್ಮಾಣ ಪ್ರಕ್ರಿಯೆಯ ಭಾಗವಾಗಿದ್ದು ಕೆಲವೇ ವರ್ಷಗಳು ಮಾತ್ರ’ ಎಂದು ಅವರು ಪ್ರತಿಪಾದಿಸಿದರು.

**

‘ಮಹೇಶ ಜೋಶಿಗೆ ಧಿಕ್ಕಾರ’

‘ಬೆಂಗಳೂರಿನ ಕಸಾಪ ಕೇಂದ್ರ ಕಚೇರಿ ಎದುರಿನ ಪಂಪ ಮಹಾಕವಿ ರಸ್ತೆಯ ಹೆಸರು ಬದಲಿಸಲು ಮುಂದಾಗಿದ್ದ ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರಿಗೆ ನನ್ನ ಧಿಕ್ಕಾರ’ ಎಂದು ಸಮ್ಮೇಳನದ ಅಧ್ಯಕ್ಷ ಧರಣೇಂದ್ರ ಕುರಕುರಿ ವೇದಿಕೆಯಲ್ಲೇ ಆಕ್ರೋಶ ವ್ಯಕ್ತಪಡಿಸಿದರು.

‘ಕಸಾಪ ಜಿಲ್ಲಾ ಘಟಕಗಳ ಅಧ್ಯಕ್ಷರುಗಳ ಮೇಲೆ ಮಹೇಶ ಜೋಶಿ ದಬ್ಬಾಳಿಕೆ ನಡೆಸುತ್ತಿರುವುದು ಖಂಡನೀಯ. ಅವರಿಗೆ ನೈತಿಕತೆ ಇಲ್ಲದ್ದರಿಂದ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿಲ್ಲ’ ಎಂದರು.

**

ಸಮ್ಮೇಳನದ ನಿರ್ಣಯಗಳು

l ಶಾಲಾ ಹಂತದ ಶಿಕ್ಷಣದಲ್ಲಿ ಮಕ್ಕಳಲ್ಲಿ ಸೌಹಾರ್ದ ಸಂಬಂಧ, ಭಾವೈಕ್ಯ ಮನೋಭಾವ ಬೆಳೆಸುವಂತಹ ಪಠ್ಯ–ಪುಸ್ತಕ ರಚಿಸಬೇಕು

l ಹೊಸ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆಗಳ ಅಸ್ತಿತ್ವಕ್ಕೆ ಮಾನ್ಯತೆ ನೀಡುವ ಸಮಗ್ರ ಶಿಕ್ಷಣ ನೀತಿ ಜಾರಿಮಾಡಬೇಕು

l ಗಡಿನಾಡ ಮತ್ತು ಹೊರನಾಡು ಕನ್ನಡಿಗರ ಮಕ್ಕಳಿಗಾಗಿ ಮೂಲಸೌಕರ್ಯ ಒದಗಿಸಿ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಬೇಕು

l ಗಡಿನಾಡು ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳು ಗಡಿನಾಡಿನಲ್ಲಿ ಕನ್ನಡ ಪ್ರಜ್ಞೆಯನ್ನು ಜಾಗೃತಗೊಳಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಗಟ್ಟಿಗೊಳಿಸಬೇಕು

l ಪಂಪ ಪ್ರಶಸ್ತಿಯನ್ನು ಪಂಪನ ಹುಟ್ಟೂರಾದ ಅಣ್ಣಿಗೇರಿಯಲ್ಲೇ ಪ್ರದಾನ ಮಾಡುವಂತಾಗಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT