ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ವಿಧಾನಸಭಾ ಕ್ಷೇತ್ರ: ಹೋರಾಟದ ಮೂಲಕವೇ ಗಮನ ಸೆಳೆದ ಕ್ಷೇತ್ರ

ಧಾರವಾಡ ವಿಧಾನಸಭಾ ಕ್ಷೇತ್ರ, ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಪೈಪೋಟಿ
Last Updated 31 ಮಾರ್ಚ್ 2023, 6:30 IST
ಅಕ್ಷರ ಗಾತ್ರ

ಧಾರವಾಡ: ಆರಂಭದಿಂದಲೂ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಧಾರವಾಡ ಗ್ರಾಮೀಣ ಕ್ಷೇತ್ರ, ರೈತ ಹೋರಾಟದ ಕಣವಾಗುವ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿತು. ನಂತರದಲ್ಲಿ ಮಹದಾಯಿ, ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಸೇರಿದಂತೆ ಹಲವು ಹೋರಾಟಗಳಿಗೆ ಈ ಕ್ಷೇತ್ರ ಸಾಕ್ಷಿಯಾಗುತ್ತಲೇ ಬಂದಿರುವುದು ವಿಶೇಷ.

80ರ ದಶಕದವರೆಗೂ ಕಾಂಗ್ರೆಸ್‌ಗೆ ನಿಚ್ಚಳ ಗೆಲುವು ತಂದುಕೊಡುತ್ತಿದ್ದ ಈ ಕ್ಷೇತ್ರದಲ್ಲಿ, ನರಗುಂದ ಬಂಡಾಯವು ರಾಜಕೀಯ ಲೆಕ್ಕಾಚಾರವನ್ನೇ ಬುಡಮೇಲು ಮಾಡಿತು. ಅವೈಜ್ಞಾನಿಕ ಲೇವಿ ಪದ್ಧತಿ ವಿರುದ್ಧ ಸಿಡಿದೆದ್ದ ರೈತರು ನಡೆಸಿದ ಧರಣಿ, ಹೆದ್ದಾರಿ ಬಂದ್ ರಾಷ್ಟ್ರದ ಗಮನ ಸೆಳೆದಿದ್ದವು.

ರೈತ ಚಳವಳಿ ಮೂಲಕ ನಾಯಕರಾಗಿ ಹೊರಹೊಮ್ಮಿದ ಬಾಬಾಗೌಡ ಪಾಟೀಲ, ಈ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದರು. 1989ರಲ್ಲಿ ನೆರೆಯ ಕಿತ್ತೂರು ಹಾಗೂ ಧಾರವಾಡ ಎರಡೂ ಕ್ಷೇತ್ರಗಳಲ್ಲಿ ಗೆದ್ದ ಅವರು, ನಂತರ ಧಾರವಾಡ ಕ್ಷೇತ್ರವನ್ನು ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರಿಗೆ ಬಿಟ್ಟುಕೊಟ್ಟು, ಅವರನ್ನೂ ಆರಿಸಿ ತಂದರು. ಅಷ್ಟರ ಮಟ್ಟಿಗೆ ರೈತ ಚಳವಳಿ ಈ ಕ್ಷೇತ್ರದ ಮೇಲೆ ಪ್ರಭಾವ ಬೀರಿತ್ತು.

ಆದರೆ, ಅದು ಹೆಚ್ಚು ಕಾಲ ಉಳಿಯಲಿಲ್ಲ. ರೈತ ಸಂಘದೊಳಗಿನ ಆಂತರಿಕ ಭಿನ್ನಾಭಿಪ್ರಾಯದಿಂದ ಸಂಘಟನೆ ದುರ್ಬಲಗೊಂಡಿತು. ಆದರೂ ರೈತರ ಹೆಸರಿನಲ್ಲೇ ಶ್ರೀಕಾಂತ ಅಂಬಡಗಟ್ಟಿ, ಶಶಿಧರ ಅಂಬಡಗಟ್ಟಿ ಹಾಗೂ ಶಿವಾನಂದ ಅಂಬಡಗಟ್ಟಿ ಈ ಕ್ಷೇತ್ರದಿಂದ ಗೆದ್ದು ಬಂದರು. ಅಷ್ಟೇ ಏಕೆ, ವಿನಯ ಕುಲಕರ್ಣಿ ಅವರೂ ಆರಂಭದಲ್ಲಿ ರೈತರ ಹೆಸರಿನಲ್ಲೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಇದೇ ಕ್ಷೇತ್ರದಿಂದ ಆಯ್ಕೆಯಾದವರು.

ಸುಮತಿ ಮಡಿಮನ್ ಹಾಗೂ ಸಿ.ವಿ.ಪುಡಕಲಕಟ್ಟಿ ಅವರನ್ನು ಹೊರತುಪಡಿಸಿದರೆ ನಂತರದಲ್ಲಿ ಸತತವಾಗಿ ಎರಡನೇ ಬಾರಿಗೆ ಒಬ್ಬರೇ ಆಯ್ಕೆಯಾದ ಉದಾಹರಣೆ ಇಲ್ಲ.

ಆರಂಭದಲ್ಲಿ ಧಾರವಾಡ ಗ್ರಾಮೀಣ ಹಾಗೂ ಕಲಘಟಗಿ ಕ್ಷೇತ್ರದ ಕೆಲ ಭಾಗಗಳನ್ನು ಹೊಂದಿದ್ದ ಕ್ಷೇತ್ರ ವಿಂಗಡನೆ ನಂತರ ಧಾರವಾಡ ನಗರದ ಪಾಲಿಕೆ ವ್ಯಾಪ್ತಿಯ 9 ವಾರ್ಡ್‌ಗಳನ್ನು ಪಡೆಯಿತು. ಇದರಿಂದಾಗಿ ಗ್ರಾಮೀಣದ ಸೊಗಡು ಹಾಗೂ ನಗರದ ಮತದಾರರನ್ನು ಹೊಂದಿದೆ.

2018ರ ಚುನಾವಣೆಯಲ್ಲಿ ಯೋಗೀಶ ಗೌಡ ಕೊಲೆ ಪ್ರಕರಣ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟವೇ ಪ್ರಮುಖ ವಿಷಯವಾಗಿತ್ತು. ಆಗ ಬಿಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಪಕ್ಷದ ಅಭ್ಯರ್ಥಿ ಅಮೃತ ದೇಸಾಯಿ ಗೆದ್ದರೆ, ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವುದಾಗಿ ಭರವಸೆ ನೀಡಿದ್ದರು. ಗೆದ್ದ ನಂತರ ಹಾಗೇ ಆಯಿತು. ವಿನಯ ಕುಲಕರ್ಣಿ ಅವರಿಗೆ ಜಿಲ್ಲೆಯ ಭೇಟಿಗೆ ನ್ಯಾಯಾಲಯ ನಿರ್ಬಂಧ ವಿಧಿಸಿದೆ. ಹೀಗಿದ್ದರೂ ಈ ಬಾರಿ ಈ ಕ್ಷೇತ್ರದಿಂದಲೇ ಸ್ಪರ್ಧಿಸುವರೇ ಎಂಬುದನ್ನು ಕುತೂಹಲ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT