ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಟಿ ಗೀತಾ ಯಜ್ಞ ಅಭಿಯಾನ: ಪುತ್ತಿಗೆಶ್ರೀ

ಉಡುಪಿಯ ಪುತ್ತಿಗೆ ಶ್ರೀಗಳ ನಾಲ್ಕನೆ ಪರ್ಯಾಯ ಆರಂಭ ಜ. 18ರಿಂದ
Published 29 ಡಿಸೆಂಬರ್ 2023, 15:30 IST
Last Updated 29 ಡಿಸೆಂಬರ್ 2023, 15:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಉಡುಪಿಯ ಪುತ್ತಿಗೆ ಮಠದ ಸುಗುಣೇಂದ್ರತೀರ್ಥರ ಚತುರ್ಥ ಪರ್ಯಾಯದ ಅಂಗವಾಗಿ ಶ್ರೀಕೃಷ್ಣನಿಗೆ ಅರ್ಪಿಸುವ ‘ಕೋಟಿ ಗೀತಾ ಲೇಖನ ಯಜ್ಞ’ ಜಾಗತಿಕ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪುತ್ತಿಗೆ ಶ್ರೀಗಳು, ‘ಪ್ರತಿ ಪರ್ಯಾಯದಲ್ಲೂ ಒಂದೊಂದು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುತ್ತದೆ. ನನ್ನ ನಾಲ್ಕನೇ ಪರ್ಯಾಯದಲ್ಲಿ ವಿಶ್ವದಾದ್ಯಂತ ಭಗವದ್ಗೀತೆ ಪಸರಿಸಬೇಕು ಎಂದು ಗೀತಾ ಪರ್ಯಾಯ ಹಮ್ಮಿಕೊಳ್ಳಲಾಗಿದೆ. ಅದಕ್ಕೆ ಕೋಟಿ ಗೀತಾ ಲೇಖನ ಯಜ್ಞ ಹೆಸರಿಟ್ಟು, ಅಭಿಯಾನಕ್ಕೆ ಚಾಲನೆ ನೀಡಲಾಗಿದೆ’ ಎಂದರು.

‘ಒಂದು ಕೋಟಿ ಮಂದಿ ಭಗವದ್ಗೀತೆ ಶ್ಲೋಕಗಳನ್ನು ಬರೆದು ಕೃಷ್ಣನಿಗೆ ಸಮರ್ಪಿಸುವುದು ಈ ಅಭಿಯಾನದ ಉದ್ದೇಶ. ಎಲ್ಲ ಭಾಷೆಗಳಲ್ಲಿ ಭಗವದ್ಗೀತೆ ಶ್ಲೋಕಗಳನ್ನು ಮುದ್ರಿಸಿದ್ದು, ನಿರ್ದಿಷ್ಟ ಪುಸ್ತಕದಲ್ಲಿಯೇ ಅವುಗಳನ್ನು ಬರೆಯಬೇಕು. ದಿನಕ್ಕೆ ಎರಡು ಶ್ಲೋಕಗಳನ್ನು ಓದಿ ಅರ್ಥಮಾಡಿಕೊಂಡು ಬರೆಯಬೇಕು. ಬರೆಯುವಾಗ ಕೆಟ್ಟದ್ದನ್ನು ಬಿಡುವ ಅಥವಾ ಒಳ್ಳೆಯದನ್ನು ಅಳವಡಿಸಿಕೊಳ್ಳುವ ಎರಡು ದೃಢಸಂಕಲ್ಪ ಮಾಡಬೇಕು. ಪರ್ಯಾಯ ಮುಕ್ತಾಯವಾಗುವ 2026 ಜನವರೆ ಒಳಗೆ ಉಡುಪಿ ಮಠಕ್ಕೆ ಶ್ಲೋಕ ಬರೆದ ಪುಸ್ತಕ ಕಳುಹಿಸಬೇಕು. ಅದನ್ನು ಶ್ರೀಕೃಷ್ಣಗೆ ಅರ್ಪಿಸಿ, ಪುನಃ ಬರೆದವರಿಗೆ ನೀಡಲಾಗುವುದು’ ಎಂದು ವಿವರಿಸಿದರು.

‘ಮೊಬೈಲ್ ಫೋನ್‌ನಿಂದ ಬದುಕು ಅಸ್ತವ್ಯಸ್ತವಾಗಿದೆ. ಬೆಳಿಗ್ಗೆ ಏಳುವಾಗಲೇ ಮೊಬೈಲ್‌ ಹಿಡಿಯುತ್ತೇವೆ. ಧಾರ್ಮಿಕ ಕಾರ್ಯಗಳನ್ನು ಮರೆತಿದ್ದೇವೆ. ನಮ್ಮ ಪರಂಪರೆ ಹಾಗೂ ಸಂಸ್ಕೃತಿಯನ್ನು ಮರೆಯಬಾರದು. ಈ ಹಿನ್ನೆಲೆಯಲ್ಲಿ ಭಗವದ್ಗೀತೆ ಶ್ಲೋಕ ಬರೆಯುವ ಮೂಲಕ ಧಾರ್ಮಿಕ ಭಾವನೆ ಉದ್ದೀಪನಗೊಳಿಸಬಹುದು. ಬರೆಯುವವರಿಗೆ ದೀಕ್ಷಾ ಸೂತ್ರ ನೀಡಲಾಗುತ್ತದೆ. ಆರಂಭದಲ್ಲಿ ಬರೆಯುವಾಗ, ಪುಸ್ತಕವನ್ನು ವಾಟ್ಸ್‌ಆ್ಯಪ್‌ ಸ್ಟೇಟಸ್‌ ಇಟ್ಟು ಪ್ರಚಾರ ಮಾಡಬೇಕು’ ಎಂದು ವಿನಂತಿಸಿದರು.

‘ಪರ್ಯಾಯದ ಅಂಗವಾಗಿ ವಿಶ್ವಸಂಚಾರ ನಡೆಸಿದ್ದು, ಆರು ತಿಂಗಳ ಹಿಂದೆ ಭಾರತಕ್ಕೆ ಬಂದಿದ್ದೇನೆ. ಎರಡು ತಿಂಗಳಿನಿಂದ ಕರ್ನಾಟಕ ಸಂಚರಿಸುತ್ತಿದ್ದು, 2024ರ ಜ. 8ರಂದು ಉಡುಪಿ ಪುರ ಪ್ರವೇಶವಿದೆ. ಜ. 18ರಿಂದ ಪರ್ಯಾಯ ಆರಂಭವಾಗಲಿದೆ. 2025ರ ಡಿಸೆಂಬರ್‌ನಲ್ಲಿ ಗೀತಯಜ್ಞ ಸಮರ್ಪಣಾ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗುವುದು’ ಎಂದು ತಿಳಿಸಿದರು.

ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಅಧ್ಯಕ್ಷ ಅನಂತ ಪದ್ಮನಾಭ ಐತಾಳ, ಅನಂತರಾಜ ಭಟ್, ವಾದಿರಾಜ ಭಟ್‌, ಸುರೇಶ ಕೆಮ್ತೂರ, ಎನ್‌. ರಾಮಚಂದ್ರ ಉಪಾಧ್ಯಾಯ, ಮನೋಹರ ಪರ್ವತಿ ಇದ್ದರು.

‘ಪಠ್ಯದಲ್ಲಿ ಭಗವದ್ಗೀತೆ ಅಳವಡಿಸಿ’ ‘ನಮ್ಮ ಶಿಕ್ಷಣ ಪಠ್ಯ–ಪುಸ್ತಕದಲ್ಲಿ ಭಗವದ್ಗೀತೆಗಳನ್ನು ಅಳವಡಿಸಬೇಕು. ಜಾತ್ಯತೀತ ರಾಷ್ಟ್ರ ಎಂದು ಎಲ್ಲಿಯೂ ಪರಿಚಯಿಸುತ್ತಿಲ್ಲ’ ಎಂದು ಪುತ್ತಿಗೆ ಶ್ರೀ ಅಸಮಾಧಾನ ವ್ಯಕ್ತಪಡಿಸಿದರು. ‘ಬೇರೆ ರಾಷ್ಟ್ರಗಳಲ್ಲಿ ಅವರ ಧರ್ಮದ‌ ಕುರಿತು ಪಠ್ಯದಲ್ಲಿ ಮಾಹಿತಿ ನೀಡಲಾಗುತ್ತದೆ. ನಮ್ಮ ದೇಶದಲ್ಲೂ ಅದು ಜಾರಿಗೆ ಬರಬೇಕು. ಗೀತಾ ಜಯಂತಿ ಹಾಗೂ ಕೃಷ್ಣಾಷ್ಟಮಿ ದಿನದಂದು ಸಾರ್ವತ್ರಿಕ ರಜೆ ಘೋಷಣೆ ಮಾಡಬೇಕು. ನಮ್ಮ ಭವ್ಯ ಸಂಸ್ಕೃತಿಯ ಮೂಲವೇ ಕೃಷ್ಣ ಮತ್ತು ರಾಮ. ಈ ಕುರಿತು 2025ರ ಡಿಸೆಂಬರ್‌ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಎಲ್ಲ ಮಠಾಧೀಶರ ಜೊತೆ ಧ್ವನಿ ಎತ್ತಲಾಗುವುದು. ಭಗವದ್ಗೀತೆ ಮೂಲಕ ಸಮಾಜ ಸಂಘಟಿಸಬೇಕಿದೆ. ಗೀತೆಯಲ್ಲಿ ಮತೀಯ ಅಂಶಗಳೇನೂ ಇಲ್ಲ’ ಎಂದರು. ‘ವಿದೇಶದಲ್ಲಿ ಮುಚ್ಚುವ ಸ್ಥಿತಿಯಲ್ಲಿದ್ದ ಚರ್ಚಗಳನ್ನು ಮಂದಿರಗಳನ್ನಾಗಿ ಮಾಡುವ ಕಾರ್ಯ ಚಾಲನೆಯಲ್ಲಿದ್ದು ಈಗಾಗಲೇ 15 ಮಂದಿರಗಳನ್ನು ನಿರ್ಮಿಸಲಾಗಿದೆ. ಅಮೆರಿಕಾ ಆಸ್ಟ್ರೇಲಿಯಾ ಕೆನಡಾ ಲಂಡನ್‌ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿನ ಚರ್ಚಗಳನ್ನು ಖರೀದಿಸಿ ಮಂದಿರ ನಿರ್ಮಿಸಲಾಗಿದೆ. ಅಲ್ಲಿನ ಯುವಕರು ಚರ್ಚಗಳಿಗೆ ಬರುತ್ತಿಲ್ಲ ಹಾಗಾಗಿ ಅವು ಪಾಳು ಬೀಳುತ್ತಿವೆ. 108 ಮಂದಿರ ಮಾಡುವ ಸಂಕಲ್ಪವಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT