ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ಸಿಬ್ಬಂದಿ ಪ್ರಾಮಾಣಿಕತೆ; ಎಂಡಿ ಮೆಚ್ಚುಗೆ

Published 3 ಜೂನ್ 2023, 14:05 IST
Last Updated 3 ಜೂನ್ 2023, 14:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಚಿಕ್ಕಮಗಳೂರಿನಿಂದ ಕಾರವಾರಕ್ಕೆ ತೆರಳುತ್ತಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಪ್ರಯಾಣಿಕರೊಬ್ಬರು  ಬಿಟ್ಟುಹೋಗಿದ್ದ ₹3.50 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹1 ಲಕ್ಷ ನಗದು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ನಿರ್ವಾಹಕ ಮತ್ತು ಚಾಲಕರನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ಅಭಿನಂದಿಸಿದ್ದಾರೆ.

ಉತ್ತರ ಕನ್ನಡ ವಿಭಾಗದ ಕಾರವಾರ ಬಸ್ ಡಿಪೊ ನಿರ್ವಾಹಕ ಹರೀಶ್ ಎನ್. ಹಾಗೂ ಚಾಲಕ ಸ್ಟೀಫನ್‌ ಫರ್ನಾಂಡೀಸ್ ಮೆಚ್ಚುಗೆಗೆ ಪಾತ್ರರಾದ ಸಿಬ್ಬಂದಿ. ಮೇ 29 ರಂದು ಚಿಕ್ಕಮಗಳೂರಿನಿಂದ ಕಾರವಾರಕ್ಕೆ ಬರುತ್ತಿದ್ದ ಬಸ್‌ ಕುಮಟಾ ನಿಲ್ದಾಣದಲ್ಲಿ ನಿಂತಿತ್ತು. ಕುಟುಂಬದೊಂದಿಗೆ ಕಾರವಾರಕ್ಕೆ ತೆರಳಲು ಬ್ಯಾಗ್‌ಗಳೊಂದಿಗೆ ಬಸ್‌ ಹತ್ತಿದ್ದ ಕಾರವಾರದ ನಿವಾಸಿ ಅಬ್ದುಲ್ ಶೇಖ್, ಆಸನಗಳು ಇಲ್ಲವೆಂದು ಇಳಿದು ಬೇರೆ ಬಸ್‌ ಕಡೆ ತೆರಳಿದ್ದರು. ನಿರ್ವಾಹಕ ಹರೀಶ್ ಆಸನದ ಬಳಿ ಬ್ಯಾಗ್‌ ಗಮನಿಸಿದ್ದು, ಪ್ರಯಾಣಿಕರನ್ನು ವಿಚಾರಿಸಿದಾಗ ಅವರ‍್ಯಾರದ್ದೂ ಅಲ್ಲ ಎಂದು ತಿಳಿದು ಬಂದಿದೆ. ಬ್ಯಾಗ್‌ ಒಳಗಡೆ ಚಿನ್ನಾಭರಣ ಹಾಗೂ ನಗದು ಕಂಡು ಬಂದಿದ್ದು, ಕುಮಟಾದಲ್ಲಿ ಪ್ರಯಾಣಿಕರೊಬ್ಬರು ಹತ್ತಿ ಇಳಿದಿದ್ದು ನೆನಪಾಗಿದೆ. ತಕ್ಷಣ ಅಲ್ಲಿಯ ಡಿಪೊಗೆ ಬ್ಯಾಗ್‌ ದೊರೆತಿರುವ ಮಾಹಿತಿ ನೀಡಿದರು.

ಬೇರೆ ಬಸ್‌ ಹತ್ತಿದ್ದ ಅಬ್ದುಲ್‌ ಶೇಖ್‌ ಟಿಕೆಟ್‌ಗೆ ಹಣ ತೆಗೆಯಲು ನೋಡಿದಾಗ, ಬ್ಯಾಗ್‌ ಬಸ್‌ನಲ್ಲಿ ಬಿಟ್ಟಿರುವುದು ತಿಳಿದು ಗಾಬರಿಯಾದರು. ಕುಮಟಾ ಬಸ್ ನಿಲ್ದಾಣದ ಅಧಿಕಾರಿಗಳಿಗೆ ಸಂಪರ್ಕಿಸಿದಾಗ, ಬ್ಯಾಗ್ ಸುರಕ್ಷಿತವಾಗಿರುವುದು ಗೊತ್ತಾಯಿತು.  ನಂತರ, ಅಲ್ಲಿಯ ಸಿಬ್ಬಂದಿ ಕಾರವಾರ ಬಸ್ ಡಿಪೊಗೆ ತೆರಳಿ ಅಧಿಕಾರಿಗಳ ಸಮ್ಮುಖದಲ್ಲಿ ಬ್ಯಾಗ್ ಮರಳಿಸಿದರು.

ಹಿರಿಯ ಅಧಿಕಾರಿಗಳಾದ ರಾಜೇಶ ಹುದ್ದಾರ, ವಿಜಯಶ್ರೀ ನರಗುಂದ, ಜಗದಂಬಾ, ಎಚ್. ರಾಮನಗೌಡರ, ಶಶಿಧರ ಕುಂಬಾರ, ಐ.ಎ.ಕಂದಗಲ್ಲ, ದಶರಥ ಕೆಳಗೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT