ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗೆ ನೀರು; ಗ್ರಾಮಸ್ಥರಲ್ಲಿ ಹರ್ಷ

ದುಬ್ಬನಮರಡಿ ಗ್ರಾಮದ ಕೆರೆ ಪುನಶ್ಚೇತನ: ಜಾನುವಾರುಗಳಿಗೆ ನೀರಿನ ವ್ಯವಸ್ಥೆ
Published 22 ಮಾರ್ಚ್ 2024, 5:46 IST
Last Updated 22 ಮಾರ್ಚ್ 2024, 5:46 IST
ಅಕ್ಷರ ಗಾತ್ರ

ಧಾರವಾಡ: ತಾಲ್ಲೂಕಿನ ದುಬ್ಬನಮರಡಿ ಗ್ರಾಮದ ಕೆರೆಯ ಹೂಳು ತೆಗೆದು ಪುನಶ್ಚೇತನಗೊಳಿಸಲಾಗಿದೆ. ಅಂಗಳದೊಳಗೆ ಒಂದು ಎಕರೆ ಪ್ರದೇಶದಲ್ಲಿ ಗುಂಡಿ ನಿರ್ಮಿಸಿ, ಕೊಳವೆ ಬಾವಿಗಳಿಂದ ನೀರು ಪೂರೈಸಿ ಜಾನುವಾರುಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಮಾಡಿರುವುದು ಗ್ರಾಮಸ್ಥರಲ್ಲಿ ಹರ್ಷ ಮೂಡಿಸಿದೆ.

ಹಂಗರಕಿ ಗ್ರಾಮ ಪಂಚಾಯಿತಿ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದಡಿ ಕೆರೆ ಪುನಶ್ಚೇತನಗೊಳಿಸಲಾಗಿದೆ. ಕೆರೆ ಗುಂಡಿಯ ನೀರು ದುಬ್ಬನಮರಡಿ ಮತ್ತು ಸುತ್ತಲಿನ ಗ್ರಾಮಗಳ ಜಾನುವಾರುಗಳು, ಪಕ್ಷಿಗಳಿಗೆ ಕುಡಿಯಲು ಆಸರೆಯಾಗಿದೆ.

ಕೆರೆ ಅಂಗಳಕ್ಕೆ ನೀರು ಹರಿಯುವಂತೆ ಮೂರು ಕಡೆಗಳಲ್ಲಿ ದೊಡ್ಡ ಕೊಳವೆ, ಕೆರೆ ಭರ್ತಿಯಾದರೆ ನೀರು ಹೊರಕ್ಕೆ ಹರಿಯಲು ವ್ಯವಸ್ಥೆ ಮಾಡಲಾಗಿದೆ. ಕೆರೆಯೊಳಗೆ ಒಂದು ಎಕರೆ ವಿಸ್ತೀರ್ಣದಲ್ಲಿ ಸುಮಾರು ನಾಲ್ಕು ಅಡಿ ಆಳದ ಗುಂಡಿ ನಿರ್ಮಿಸಿ ನೀರು ಸಂಗ್ರಹಿಸಲಾಗಿದೆ.

‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಪ್ರತಿ ವರ್ಷ ತಾಲ್ಲೂಕಿನ ಒಂದು ಕೆರೆ ಪುನಶ್ಚೇತನಗೊಳಿಸುತ್ತೇವೆ. 2023–24ನೇ ಸಾಲಿನಲ್ಲಿ ದುಬ್ಬನಮರಡಿಯ 12 ಎಕರೆ ವಿಸ್ತೀರ್ಣದ ಕೆರೆಯನ್ನು ಯೋಜನೆಯಿಂದ ₹9 ಲಕ್ಷ ಹಾಗೂ ಪಂಚಾಯ್ತಿಯಿಂದ ₹8 ಲಕ್ಷ ವೆಚ್ಚ ಮಾಡಿ ಸುಮಾರು 38 ದಿನಗಳಲ್ಲಿ ಅಭಿವೃದ್ಧಿಪಡಿಸಿದ್ದೇವೆ. ಮಾರ್ಚ್‌ 8ರಂದು ಕೆರೆಗೆ ಬಾಗಿನ ಅರ್ಪಿಸಿ ನಾಮಫಲಕ ಅನಾವರಣಗೊಳಿಸಲಾಗಿದೆ’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಕೃಷಿ ಮೇಲ್ವಿಚಾರಕ ಶಂಕರಯ್ಯ ಎಸ್‌.ಹಿರೇಮಠ ತಿಳಿಸಿದರು.

ಗ್ರಾಮ ಪಂಚಾಯಿತಿಯ ಕೊಳವೆ ಬಾವಿಗಳಿಂದ ಗ್ರಾಮದಲ್ಲಿನ ತೊಂಬೆಗಳಿಗೆ (ಮಿನಿ ಟ್ಯಾಂಕ್‌) ಸಂಪರ್ಕ ಕಲ್ಪಿಸಲಾಗಿದೆ. ಈ ತೊಂಬೆಗಳು ತುಂಬಿದ ನಂತರ ನೀರು ಕೆರೆ ಗುಂಡಿಗೆ ಹರಿಯುವಂತೆ ವ್ಯವಸ್ಥೆ ಮಾಡಲಾಗಿದೆ.

ಬೇಸಿಗೆಯ ಬಿರು ಬಿಸಿಲಿನ ತಾಪಕ್ಕೆ ಬಾಯಾರಿದ ಪಕ್ಷಿಗಳು, ಪ್ರಾಣಿಗಳು ದಾಹವನ್ನು ತಣಿಸಿಕೊಳ್ಳುತ್ತವೆ. ಗ್ರಾಮದ ಹುಡುಗರು ಮಧ್ಯಾಹ್ನ ವೇಳೆಯಲ್ಲಿ ಕೆರೆ ಗುಂಡಿಯಲ್ಲಿ ಈಜಾಡುತ್ತಾರೆ.

‘ಮಿನಿ ಟ್ಯಾಂಕ್‌ಗಳು ತುಂಬಿದ ನಂತರ ನಾಲ್ಕು ಗಂಟೆ ಕೆರೆಗೆ ಗುಂಡಿಗೆ ನೀರು ಹರಿಸಲಾಗುತ್ತದೆ. ಎರಡು ದಿನ ಖಾಸಗಿ (ರೈತರ) ಕೊಳವೆ ಬಾವಿಗಳಿಂದ ನೀರು ಹರಿಸಿ ಗುಂಡಿ ತುಂಬಿಸಿದ್ದೇವೆ’ ಎಂದು ಹಂಗರಕಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಠ್ಠಲ ಪೂಜಾರಿ ತಿಳಿಸಿದರು.

ಧಾರವಾಡ ತಾಲ್ಲೂಕಿನ ದುಬ್ಬನಮರಡಿ ಗ್ರಾಮದ ಕೆರೆಗೆ ನೀರು ಕುಡಿಯಲು ಬಂದಿದ್ದ ಕುರಿಗಳು  –ಪ್ರಜಾವಾಣಿ ಚಿತ್ರ/ಬಿ.ಎಂ.ಕೇದಾರನಾಥ 
ಧಾರವಾಡ ತಾಲ್ಲೂಕಿನ ದುಬ್ಬನಮರಡಿ ಗ್ರಾಮದ ಕೆರೆಗೆ ನೀರು ಕುಡಿಯಲು ಬಂದಿದ್ದ ಕುರಿಗಳು  –ಪ್ರಜಾವಾಣಿ ಚಿತ್ರ/ಬಿ.ಎಂ.ಕೇದಾರನಾಥ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT