ಭಾನುವಾರ, ಸೆಪ್ಟೆಂಬರ್ 26, 2021
25 °C
ರಾಜ್ಯದ 29 ಜಿಲ್ಲೆಗಳಲ್ಲೂ ಭೂ ಸರ್ವೇಕ್ಷಣೆ

ಭೂ ಸಂಪನ್ಮೂಲ ಕಾರ್ಡ್: ರಾಜ್ಯಕ್ಕೆ ವಿಸ್ತರಣೆ

ಇ. ಎಸ್. ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ಬರಗಾಲವನ್ನು ಸಮರ್ಥವಾಗಿ ಎದುರಿಸಲು ‘ಸುಜಲ–3‘ ಯೋಜನೆಯ ಮಾದರಿಯಲ್ಲೇ ರಾಜ್ಯದ 29 ಜಿಲ್ಲೆಗಳಲ್ಲೂ ಭೂ ಸರ್ವೇಕ್ಷಣೆ ಕೈಗೊಂಡು, ಭೂ ಸಂಪನ್ಮೂಲ ಕಾರ್ಡ್ ವಿತರಿಸಲು ಸರ್ಕಾರ ಮುಂದಾಗಿದೆ. 

ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳು, ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ಭೂ ಸರ್ವೇಕ್ಷಣೆ ಮತ್ತು ಭೂ ಬಳಕೆ ಯೋಜನೆ ಸಂಸ್ಥೆಯ ಪ್ರಾದೇಶಿಕ ಕೇಂದ್ರದ ಆಶ್ರಯದಲ್ಲಿ ರಾಜ್ಯದ ಕಿರು ಜಲಾನಯನ ಪ್ರದೇಶದಲ್ಲಿ ಈ ಸಮೀಕ್ಷೆ ನಡೆಯಲಿದೆ. ಹಿಂದೆ ವಿಶ್ವಬ್ಯಾಂಕ್ ನೆರವಿನಲ್ಲಿ ಪ್ರಾಯೋಗಿಕವಾಗಿ ರಾಜ್ಯದ 11 ಜಿಲ್ಲೆಗಳಲ್ಲಿ ಈ ಯೋಜನೆ ಕೈಗೊಳ್ಳಲಾಗಿತ್ತು. ಇದರಲ್ಲಿ ಸುಮಾರು 2,500 ಜಲಾನಯನ ಪ್ರದೇಶದಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಅದನ್ನೂ ಒಳಗೊಂಡು ರಾಜ್ಯದ ಉಳಿದ ಭಾಗಗಳಿಗೆ ಈ ಯೋಜನೆಯನ್ನು ಈಗ ವಿಸ್ತರಿಸಲಾಗಿದೆ.

ಬೆಂಗಳೂರು ನಗರ ಜಿಲ್ಲೆ ಹೊರತುಪಡಿಸಿ ರಾಜ್ಯದ ಇತರ ಜಿಲ್ಲೆಗಳ 4.76ಲಕ್ಷ ಹೆಕ್ಟೇರ್ ಕೃಷಿ ಜಮೀನಿನ ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.  

‘ಮುಂಗಾರು ಹಂಗಾಮಿನಲ್ಲಿ ಪ್ರತಿ ಕಿರು ಜಲಾನಯನ ಪ್ರದೇಶಗಳಲ್ಲಿ ಪ್ರತಿ 310 ಮೀಟರ್ ಅಂತರದಲ್ಲಿ ಮೇಲ್ಮೈ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ, ಪ್ರಯೋಗಾಲಯದಲ್ಲಿ ಅಧ್ಯಯನ ನಡೆಸಲಾಗುವುದು. ಮಣ್ಣಿನ ರಸಸಾರ, ಲವಣಾಂಶ, ಸಾವಯವ ಅಂಶ ಮತ್ತು ಪೋಷಕಾಂಶಗಳ ನಕ್ಷೆಗಳನ್ನು ತಯಾರಿಸಲಾಗುವುದು. ಇದರಿಂದ ಮಣ್ಣಿನ ಗುಣಲಕ್ಷ್ಮಣ ಮತ್ತು ನೀರಿನ ಗುಣಧರ್ಮಗಳಿಗೆ ಅನುಗುಣವಾಗಿ ಅಲ್ಲಿ ಬೆಳೆಯಬಹುದಾದ ಬೆಳೆಗಳ ಕುರಿತೂ ಸಲಹೆ ನೀಡಲಾಗುವುದು. ಕೃಷಿಗೆ ಯೋಗ್ಯವಲ್ಲದ ಜಮೀನುಗಳ ಪಟ್ಟಿಯನ್ನೂ ಸಿದ್ಧಪಡಿಸಿ ವರದಿ ಸಲ್ಲಿಸಲಾಗುವುದು’ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಯೋಜನಾ ನಿರ್ದೇಶಕ ಡಾ. ಪಿ.ಎಲ್.ಪಾಟೀಲ ವಿವರಿಸಿದರು.

‘ಪ್ರತಿ ಕೃಷಿ ಜಮೀನಿನ ನಕ್ಷೆಯನ್ನು ತಯಾರು ಮಾಡಲಾಗುವುದು. ಕೃಷಿ ವಿಶ್ವವಿದ್ಯಾಲಯಗಳು ತಮ್ಮ ವ್ಯಾಪ್ತಿಯಲ್ಲಿ ಈ ಸಮೀಕ್ಷೆ ನಡೆಸಲಿವೆ. ಒಂದು ವರ್ಷ ಅವಧಿಯಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕಿದೆ’ ಎಂದು ತಿಳಿಸಿದರು.

ಭೂ ಸಂಪನ್ಮೂಲ ಕಾರ್ಡ್ ಯೋಜನೆ...

ಯೋಜನೆಯಲ್ಲಿ ಪ್ರತಿ 500ರಿಂದ ಒಂದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿರುವ ಕಿರು ಜಲಾನಯನ ಪ್ರದೇಶದಲ್ಲಿನ ಮಣ್ಣಿನ ಆಳ, ಜಾಗದಲ್ಲಿರುವ ಇಳಿಜಾರು, ಮಣ್ಣಿನ ಕೊಚ್ಚಿಕೊಂಡು ಹೋಗುವ ಪ್ರಮಾಣ, ಗಡಸುತನ ಹಾಗೂ ಮಣ್ಣಿನಲ್ಲಿನ ಪೋಷಕಾಂಶಗಳನ್ನು ಸಮೀಕ್ಷೆ ವೇಳೆ ಪತ್ತೆ ಮಾಡಿ ಭೂ ಸಂಪನ್ಮೂಲ ಮಾಹಿತಿ ಕಾರ್ಡ್‌ ಅನ್ನು ರೈತರಿಗೆ ವಿತರಿಸುವುದು ಈ ಯೋಜನೆಯ ಭಾಗ.

ಈ ಯೋಜನೆಗೆ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಸಂಸ್ಥೆ, ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರವೂ ನೆರವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು