ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಪ ಬಿಡಿ, ಕಾಲಮಿತಿಯಲ್ಲಿ ಕೆಲಸ ಮುಗಿಸಿ

ಅಧಿಕಾರಿಗಳಿಗೆ ಸಚಿವ ಮುನೇನಕೊಪ್ಪ ಸೂಚನೆ; ಸ್ಮಾರ್ಟ್‌ ಸಿಟಿ ಕಾಮಗಾರಿಗಳ ಪರಿಶೀಲನೆ
Last Updated 2 ನವೆಂಬರ್ 2021, 16:58 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಅವಳಿನಗರದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ನೆಪವೊಡ್ಡದೆಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು’ ಎಂದು ಸಚಿವ ಶಂಕರಪಾಟೀಲ ಮುನೇನಕೊಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ವಿವಿಧೆಡೆ ನಡೆಯುತ್ತಿರುವ ಸ್ಮಾರ್ಟ್‌ ಸಿಟಿ ಕಾಮಗಾರಿಗಳನ್ನು ಮಂಗಳವಾರ ಪರಿಶೀಲಿಸಿದ ಬಳಿಕ, ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ನಿಧಾನಗತಿಯ ಕಾಮಗಾರಿಗಳಿಂದಾಗಿ ಜನ ಅಸಮಾಧಾನಗೊಂಡಿದ್ದಾರೆ. ಒಂದು ವರ್ಷ ಕೋವಿಡ್‌ನಿಂದ ವಿಳಂಬವಾಗಿದ್ದ ಕಾಮಗಾರಿಗಳು, ಈಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿಳಂಬವಾಗುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘2018ರಲ್ಲೇ ಕೊಪ್ಪಿಕರ ರಸ್ತೆ ಅಭಿವೃದ್ಧಿಗೆ ಕಾರ್ಯಾದೇಶ ನೀಡಿ, 2019ರ ನವೆಂಬರ್‌ನಲ್ಲಿ ಮುಗಿಸಬೇಕು ಸೂಚಿಸಲಾಗಿತ್ತು. ಆದರೂ, ಕಾಮಗಾರಿ ಪೂರ್ಣಗೊಂಡಿಲ್ಲ. ಜನಸಂದಣಿ ಹೆಚ್ಚಿರುವ ಈ ರಸ್ತೆಯ ಕಾಂಕ್ರೀಟ್‌ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದರು.

‘ಶಾಸಕ ಜಗದೀಶ ಶೆಟ್ಟರ್ ಸೇರಿದಂತೆ, ವಿವಿಧ ಜನಪ್ರತಿನಿಧಿಗಳು ತೋಳನಕೆರೆಗೆ ಭೇಟಿ ನೀಡಿ, ಕೆರೆಯ ಒಡಲು ಸೇರುತ್ತಿರುವ ಕೊಳಚೆ ನೀರು ತಡೆಯಲು ಕ್ರಮ ಕೈಗೊಳ್ಳಿ ಎಂದು ಹಲವು ಬಾರಿ ಸೂಚನೆ ನೀಡಿದ್ದಾರೆ. ಆದರೂ, ಕೊಳಚೆ ನೀರು ಹರಿಯುವುದು ನಿಂತಿಲ್ಲ. ಈ ಸಮಸ್ಯೆಗೆ ತಿಂಗಳೊಳಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಬಳಿಕ, ನಾನೇ ಖುದ್ದಾಗಿ ಬಂದು ಪರಿಶೀಲನೆ ಮಾಡುತ್ತೇನೆ. 24X7 ನಿರಂತರ ಕುಡಿಯುವ ನೀರು ಸರಬರಾಜು ಕಾರ್ಯವನ್ನು ನಗರ ನೀರು ಸರಬರಾಜು ಮಂಡಳಿಯಿಂದ ಎಲ್ ಅಂಡ್ ಟಿ ಸಂಸ್ಥೆಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಮಾತನಾಡಿ, ‘ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಷರತ್ತು ವಿಧಿಸಲಾಗುತ್ತದೆ. ತಾಂತ್ರಿಕ ಕಾರಣ ನೀಡಿ, ಒಂದು ಬಾರಿ ಕಾಲಮಿತಿ ವಿಸ್ತರಿಸಬಹುದು. ಆದರೆ, ಸ್ಟೇಷನ್‌ ರಸ್ತೆ ಕಾಂಕ್ರೀಟಿಕರಣ ಮಾಡಲು ಮೂರು ಬಾರಿ ಅವಧಿ ವಿಸ್ತರಣೆ ಮಾಡಿಕೊಂಡಿದ್ದೀರಿ. ಆದರೂ, ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜನತಾ ಬಜಾರ್, ಹಳೇ ಬಸ್ ನಿಲ್ದಾಣ, ಕೊಪ್ಪಿಕರ ರಸ್ತೆ ಹಾಗೂ ಸ್ಟೇಷನ್ ರಸ್ತೆಯಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಮುನೇನಕೊಪ್ಪ ಪರಿಶೀಲಿಸಿದರು.ಪೊಲೀಸ್‌ ಕಮಿಷನರ್‌ ಲಾಬೂರಾಮ್‌, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ್, ಸ್ಮಾರ್ಟ್ ಸಿಟಿ ಯೋಜನೆಯ ತಾಂತ್ರಿಕ ವಿಭಾಗದ ಪ್ರಧಾನ ವ್ಯವಸ್ಥಾಪಕ ಬಿ.ಎಸ್. ಚಂದ್ರಶೇಖರ, ಹುಡಾ ಆಯುಕ್ತ ಎನ್.ಬಿ. ಕುಮ್ಮಣ್ಣವರ, ಶ್ರೀನಿವಾಸ ಪಾಟೀಲ, ಚನ್ನಬಸವರಾಜು ಇದ್ದರು.

ಮೇಲ್ಸೇತುವೆ ನಕ್ಷೆ ಶೀಘ್ರ ತಯಾರಿ: ಡಿ.ಸಿ

‘ಚನ್ನಮ್ಮ ವೃತ್ತದ ಸುತ್ತಲಿನ ಮೇಲ್ಸೇತುವೆ ಯೋಜನೆ ಕುರಿತು ಎದ್ದಿರುವ ಅಪಸ್ವರದ ಹಿನ್ನೆಲೆಯಲ್ಲಿ ರಚಿಸಿದ್ದ 10 ಮಂದಿ ತಜ್ಞರ ಸಮಿತಿ, ಯೋಜನೆಯ ಸಾಧಕ–ಬಾಧಕಗಳ ಕುರಿತು ಚರ್ಚಿಸಿದೆ. ಮೂರು ಬಾರಿ ಸಭೆ ನಡೆಸಿ ಪರಿಶೀಲನೆ ನಡೆಸಿರುವ ತಜ್ಞರು, ಕೆಲ ಬದಲಾವಣೆಗೆ ಸೂಚಿಸಿದ್ದಾರೆ’ ಎಂದು ನಿತೇಶ್ ಪಾಟೀಲ ತಿಳಿಸಿದರು.

‘ಒಂದೆರಡು ದಿನಗಳಲ್ಲಿ ಎಂಜಿನಿಯರ್ ಮೇಲ್ಸೇತುವೆಯ ನಕ್ಷೆ ಸಿದ್ಧಪಡಿಸಿ ನೀಡಲಿದ್ದಾರೆ. ಅದನ್ನು ಸಾರ್ವಜನಿಕರ ಮುಂದಿಟ್ಟು, ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಆದರೆ, ಮೇಲ್ಸೇತುವೆ ಯೋಜನೆ ಬೇಕೋ ಬೇಡವೋ ಎನ್ನುವ ಕುರಿತು ಜನಪ್ರತಿನಿಧಿಗಳು ನಿರ್ಣಯ ತೆಗೆದುಕೊಳ್ಳುತ್ತಾರೆ’ ಎಂದರು.

ಅಧಿಕಾರಿಗಳ ವಿರುದ್ಧ ಸಚಿವಗರಂ

ಸಭೆಯಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಮಾಹಿತಿಯ ಪುಸ್ತಕ ನೋಡಿದ ಸಚಿವ ಮುನೇನಕೊಪ್ಪ, ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

‘ಕಾಟಾಚಾರಕ್ಕೆ ಮಾಹಿತಿ ಪುಸ್ತಕ ನೀಡಿದರೆ ಪ್ರಯೋಜನವಿಲ್ಲ. ಯಾವ ಕಾಮಗಾರಿ ಯಾವಾಗ ಆರಂಭವಾಗಿದೆ, ಮುಕ್ತಾಯ ದಿನಾಂಕ ಯಾವಾಗ, ಪ್ರಗತಿಯ ಮಾಹಿತಿ ಪುಸ್ತಕದಲ್ಲಿರಬೇಕು. ಸಭೆಗೆ ಬರುವಾಗ ಸಂಪೂರ್ಣ ದಾಖಲೆಯೊಂದಿಗೆ ಬರಬೇಕು. ಬೇಜವಾಬ್ದಾರಿಯಿಂದ ಬಂದರೆ ಹೇಗೆ?’ ಎಂದು ಗರಂ ಆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT