ಭಾನುವಾರ, ಜುಲೈ 25, 2021
22 °C
ಜೆಡಿಎಸ್‌, ಬಿಜೆಪಿಯಲ್ಲಿ ಸಿಕ್ಕಿಲ್ಲ ಮನ್ನಣೆ

ವಿಧಾನ ಪರಿಷತ್‌ ಆಕಾಂಕ್ಷಿಗಳಿಗೆ ನಿರಾಸೆ

ಬಸವರಾಜ ಹವಾಲ್ದಾರ‌ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ರಾಜ್ಯಸಭೆಯಂತೆ ಸಾಮಾನ್ಯ ಕಾರ್ಯಕರ್ತರಿಗೂ ವಿಧಾನ ಪರಿಷತ್‌ ಟಿಕೆಟ್‌ ದೊರೆಯಬಹುದು ಎಂದು ಹಲವಾರು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಧಾರವಾಡ ಜಿಲ್ಲೆಯ ಹಲವು ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ.

ಪರಿಷತ್‌ ಪ್ರವೇಶಕ್ಕಾಗಿ ತಮ್ಮ ರಾಜಕೀಯ ನಾಯಕರ ಮೂಲಕ ಟಿಕೆಟ್‌ಗಾಗಿ ಲಾಬಿ ನಡೆಸಿದ್ದ ಜಿಲ್ಲೆಯ ಅರ್ಧ ಡಜನ್‌ಗೂ ಹೆಚ್ಚು ನಾಯಕರಿಗೆ ಟಿಕೆಟ್‌ ದೊರೆತಿಲ್ಲ. ವಲಸಿಗರಿಗೆ ಹಾಗೂ ಪಕ್ಷದ ಹಳೆಯ ಮುಖಗಳಿಗೆ ಮನ್ನಣೆ ನೀಡಲಾಗಿದೆ.

ಮುಂಬೈ ಕರ್ನಾಟಕ ಭಾಗದ ಆರ್‌. ಶಂಕರ್‌ ಅವರಿಗೆ ಮಾತ್ರ ಅವಕಾಶ ಸಿಕ್ಕಿದ್ದು, ಅವರಿಗೂ ವಿಧಾನಸಭೆಯ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿರಲಿಲ್ಲ ಎಂಬ ಕಾಣರಕ್ಕೆ ನೀಡಲಾಗಿದೆ. ಜೊತೆಗೆ ಅವರು ಮೂಲತಃ ಬೆಂಗಳೂರಿನವರಾಗಿದ್ದಾರೆ.

ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಧಾರವಾಡ ವಿಭಾಗೀಯ ಪ್ರಭಾರಿ ಲಿಂಗರಾಜ ಪಾಟೀಲ, ಮುಖಂಡ ಶಂಕರಣ್ಣ ಮುನವಳ್ಳಿ, ಮಾಜಿ ಶಾಸಕರಾದ ಅಶೋಕ ಕಾಟವೆ, ಸೀಮಾ ಮಸೂತಿ, ಎಸ್‌.ಐ. ಚಿಕ್ಕನಗೌಡರ, ವೀರಭದ್ರಪ್ಪ ಹಾಲಹರವಿ ಸೇರಿದಂತೆ ಹಲವರು ಟಿಕೆಟ್‌ಗೆ ತೆರೆಮರೆಯಲ್ಲಿ ಪ್ರಯತ್ನ ನಡೆಸಿದ್ದರು.

ಮೂರು ದಶಕಗಳಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಲಿಂಗರಾಜ ಪಾಟೀಲ ಪಕ್ಷದ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದು, ಈಗ ಧಾರವಾಡ ವಿಭಾಗೀಯ ಪ್ರಭಾರಿಯಾಗಿದ್ದಾರೆ. ಹಾಗಾಗಿ, ಪರಿಷತ್‌ಗೆ ಟಿಕೆಟ್‌ ಸಿಗಬಹುದು ಎಂದು ಅವರ ಬೆಂಬಲಿಗರು ಲೆಕ್ಕ ಹಾಕಿದ್ದರು.

ರಾಜ್ಯ ಕಾರ್ಯದರ್ಶಿ ಮಹೇಶ ಅವರಿಗೆ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಲಘಟಗಿ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಘೋಷಣೆಯಾಗಿತ್ತು. ಕೊನೆಗಳಿಗೆಯಲ್ಲಿ ಕೈ ತಪ್ಪಿತ್ತು. ಜೊತೆಗೆ ಅವರು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ ಅವರ ಆಪ್ತಕೂಟದಲ್ಲಿದ್ದಾರೆ ಎನ್ನುವ ಕಾರಣಕ್ಕೆ ನಿರೀಕ್ಷೆಗಳು ಗರಿಗೆದರಿದ್ದವು. ಆದರೆ, ಈ ಲೆಕ್ಕಾಚಾರ ಕೈಕೊಟ್ಟಿದೆ.

ಕೆಎಲ್‌ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಹುಬ್ಬಳ್ಳಿಯ ಪೂರ್ವ ವಿಧಾನಸಭಾ ಕ್ಷೇತ್ರದ ಟಿಕೆಟ್‌ ತಪ್ಪಿಸಿಕೊಂಡಿದ್ದ ವೀರಭದ್ರಪ್ಪ ಹಾಲಹರವಿ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಸಂಬಂಧಿ ಎಸ್‌.ಐ. ಚಿಕ್ಕನಗೌಡರ ಸೇರಿದಂತೆ ಹಲವರು ಯತ್ನ ನಡೆಸಿದ್ದರು.

ವಿಧಾನಸಭೆಯಿಂದ ವಿಧಾನ ಪರಿಷತ್‌ ಪ್ರವೇಶ ಪಡೆಯುವ ಕನಸು ಭಗ್ನಗೊಂಡಿದೆ. ಮುಂದಿನ ದಿನಗಳಲ್ಲಿ ಐವರನ್ನು ನಾಮ ನಿರ್ದೇಶನ ಮಾಡಬೇಕಿದೆ. ಆಗಲಾದರೂ, ಅವಕಾಶ ಸಿಗಬಹುದು ಎಂದು ಕಾಯುತ್ತಿದ್ದಾರೆ ಈ ಭಾಗದ ನಾಯಕರು.

ಉತ್ತರ ಕರ್ನಾಟಕ ಭಾಗದವರಿಗೆ ಅವಕಾಶ ನೀಡಬೇಕು ಎಂಬ ಕೂಗು ಜೆಡಿಎಸ್‌ನಲ್ಲಿ ಕೇಳಿ ಬಂದಿತ್ತು. ತಮಗೆ ಅವಕಾಶ ನಿಡಬೇಕು ಎಂದು ರಾಜ್ಯ ಘಟಕದ ಉಪಾಧ್ಯಕ್ಷ ಗುರುರಾಜ ಹುಣಸಿಮರದ ಆಗ್ರಹಿಸಿದ್ದರು. ಆದರೆ, ಆ ಪಕ್ಷದ ನಾಯಕರು ಇತ್ತ ತಿರುಗಿ ನೋಡಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.