ಚನ್ನಮ್ಮನ ಬಂಧಿಸಿಟ್ಟ ಸ್ಥಳ ರಾಷ್ಟ್ರೀಯ ಸ್ಮಾರಕವಾಗಲಿ

ಧಾರವಾಡ: ‘ಕಿತ್ತೂರು ಚನ್ನಮ್ಮ ಅವರನ್ನು ಬಂಧಿಸಿಟ್ಟ ಧಾರವಾಡದ ಜಿಲ್ಲಾಧಿಕಾರಿ ಕಚೇರಿಯನ್ನು ರಾಷ್ಟ್ರೀಯ ಸ್ಮಾರಕ ಸ್ಥಳವನ್ನಾಗಿ ಅಭಿವೃದ್ಧಿಪಡಿಸಬೇಕು’ ಎಂದು ಬೈಲೂರು ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮೀಜಿ ಹೇಳಿದರು.
ಧಾರವಾಡ ರಂಗಾಯಣ ಸಿದ್ಧಪಡಿಸಿರುವ ವೀರರಾಣಿ ಕಿತ್ತೂರು ಚನ್ನಮ್ಮ ನಾಟಕದ 2ನೇ ದಿನದ ಪ್ರದರ್ಶನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಸತ್ಯ ಹರಿಶ್ಚಂದ್ರ ನಾಟಕ ನೋಡಿದ ಗಾಂಧೀಜಿ ಅವರ ಬದುಕಿನ ದೃಷ್ಟಿಕೋನವೇ ಬದಲಾಯಿತು. ಹಾಗೆಯೇ ಚನ್ನಮ್ಮ ಅವರ ನಾಟಕವನ್ನು ನೋಡುವ ಮೂಲಕ ನಮ್ಮ ಯುವ ಸಮುದಾಯದ ಆದರ್ಶಗಳು ಇನ್ನಷ್ಟು ಬಲವಾಗಬೇಕು. ಎಲ್ಲರಲ್ಲೂ ದೇಶಾಭಿಮಾನದ ಛಲ ಮೂಡಬೇಕು’ ಎಂದರು.
‘ಇಂದಿನ ಅತ್ಯಾಧುನಿಕ ಯುಗದ ಎಲ್ಲಾ ತಂತ್ರಜ್ಞಾನಗಳನ್ನು ಬಳಸಿಕೊಂಡು ಈ ನಾಟಕ ಸಿದ್ಧಪಡಿಸಲಾಗಿದೆ. ಇದನ್ನು ಇತರ ಭಾಷೆಗಳಿಗೂ ಭಾಷಾಂತರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಬೇಕು. ಆ ಮೂಲಕ ಚನ್ನಮ್ಮ ಅವರ ಇತಿಹಾಸ ಇಡೀ ವಿಶ್ವವೇ ನೋಡುವಂತಾಗಬೇಕು’ ಎಂದರು.
ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಯಬಸವ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ‘ಛತ್ರಪತಿ ಶಿವಾಜಿ ಹಾಗೂ ಚನ್ನಮ್ಮರ ನಾಟಕಗಳು ಅಂದು ಸ್ವಾತಂತ್ರ್ಯ ಚಳವಳಿಗೆ ಯುವಕರನ್ನು ಪ್ರೇರೇಪಿಸಿದವು. ಇಂದು ರಂಗಾಯಣದ ಈ ಚನ್ನಮ್ಮ ನಾಟಕದ ಮೂಲಕ ನವಭಾರತದ ನಿರ್ಮಾಣ ಸಾಧ್ಯವಾಗಲಿದೆ’ ಎಂದರು.
‘ಚನ್ಮಮ್ಮ ಅವರ ಹೋರಾಟ ಇಡೀ ದೇಶಕ್ಕೇ ಮಾದರಿಯಾದರೂ, ಅವರ ಇತಿಹಾಸ ಹೆಚ್ಚು ಪ್ರಚಾರವಾಗದಂತೆ ವ್ಯವಸ್ಥಿತ ಸಂಚನ್ನು ಕೆಲವರು ರೂಪಿಸಿದರು. ಚನ್ನಮ್ಮನ ಇತಿಹಾಸ ಅರಿತರೆ ಕನ್ನಡಿಗರು ಸ್ವಾಭಿಮಾನಿಗಳಾಗುವ ಸಾಧ್ಯತೆ ಇದೆ ಎಂಬ ಆತಂಕ ಅವರಲ್ಲಿ ಕಾಡುತ್ತಿದೆ. ಹೀಗಾಗಿ ಈ ನಾಟಕವನ್ನು ಹೆಚ್ಚು ಪ್ರದರ್ಶಿಸುವ ಮೂಲಕ ಎಲ್ಲೆಡೆ ಚನ್ನಮ್ಮ ಅವರ ಹೋರಾಟದ ಇತಿಹಾಸವನ್ನು ಅರಿಯಲು ಸಾಧ್ಯ’ ಎಂದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಅರವಿಂದ ಬೆಲ್ಲದ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.