ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಜಗದೀಶ ಶೆಟ್ಟರ್‌ ಬಿಜೆಪಿಗೆ ಮರಳಿದರೂ ಬೆಂಬಲಿಗರು ಅತಂತ್ರ!

ಮರು ಸೇರ್ಪಡೆಗೆ ಬಿಜೆಪಿ ಸ್ಥಳೀಯ ನಾಯಕರ ಅಸಹಕಾರ
Published 26 ಫೆಬ್ರುವರಿ 2024, 6:32 IST
Last Updated 26 ಫೆಬ್ರುವರಿ 2024, 6:32 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಜಗದೀಶ ಶೆಟ್ಟರ್‌ ಬಿಜೆಪಿಗೆ ಮರು ಸೇರ್ಪಡೆಯಾಗಿ ಒಂದು ತಿಂಗಳಾಯಿತು. ಆದರೆ, ಅವರ ಬೆಂಬಲಿಗರನ್ನು ವಾಪಸ್‌ ಪಕ್ಷಕ್ಕೆ ಸೇರಿಸಿಕೊಳ್ಳಲು ಜಿಲ್ಲಾ ನಾಯಕರು ಆಸಕ್ತಿ ತೋರುತ್ತಿಲ್ಲ. ಹೀಗಾಗಿ 90 ಮಂದಿ ಬೆಂಬಲಿಗರು ಅತಂತ್ರರಾಗಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್‌ ನಿರಾಕರಿಸಿದ್ದರಿಂದ ಶೆಟ್ಟರ್‌ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದರು. ಅವರ ಜೊತೆ ಬೆಂಬಲಿಗರೂ ಕಾಂಗ್ರೆಸ್‌ ಸೇರಿದ್ದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಬಿ.ಎಸ್‌. ಯಡಿಯೂರಪ್ಪ ಅವರ ಮಧ್ಯಸ್ಥಿಕೆಯಲ್ಲಿ ಶೆಟ್ಟರ್‌ ಅವರು ದೆಹಲಿಯಲ್ಲಿ ರಾಷ್ಟ್ರೀಯ ನಾಯಕರ ಉಪಸ್ಥಿತಿಯಲ್ಲಿ ಪಕ್ಷಕ್ಕೆ ವಾಪಸ್‌ ಆದರು. ‘ಶೆಟ್ಟರ್ ಬೆಂಬಲಿಗರನ್ನು ಸ್ಥಳೀಯವಾಗಿ ಸೇರಿಸಿಕೊಳ್ಳಿ’ ಎಂದು ಬಿ.ವೈ.ವಿಜಯೇಂದ್ರ ನಾಯಕರಿಗೆ ಸೂಚಿಸಿದ್ದರು. ಆದರೆ, ಅದು ಕಾರ್ಯರೂಪಕ್ಕೆ ಬಂದಿಲ್ಲ.

ಮೂಲ ಕಾರ್ಯಕರ್ತರ ವಿರೋಧ: ‘ಸ್ಥಳೀಯ ನಾಯಕರ ಜೊತೆ ಚರ್ಚಿಸದೇ ಶೆಟ್ಟರ್ ಅವರು ರಾಜ್ಯ ಹಾಗೂ ರಾಷ್ಟ್ರೀಯ ನಾಯಕರನ್ನು ನೇರ ಸಂಪರ್ಕಿಸಿ ಪಕ್ಷಕ್ಕೆ ಮರಳಿದ್ದಾರೆ. ಇದು ಸ್ಥಳೀಯ ನಾಯಕರಲ್ಲಿ ಅಸಮಾಧಾನ ಮೂಡಿಸಿದೆ. ಜೊತೆಗೆ ಕೆಲವರ ಮರುಸೇರ್ಪಡೆಗೆ ಬೂತ್‌ ಮಟ್ಟದ ಕಾರ್ಯಕರ್ತರ ವಿರೋಧವಿದೆ’ ಎಂದು ಮೂಲಗಳು ತಿಳಿಸಿವೆ.

‘ಕಾಂಗ್ರೆಸ್‌ ಸೇರಿದ ಸಂದರ್ಭದಲ್ಲಿ ಶೆಟ್ಟರ್‌ ಮತ್ತು ಅವರ ಬೆಂಬಲಿಗರು ಬಿಜೆಪಿ ಮತ್ತು ಸ್ಥಳೀಯ ಮುಖಂಡರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.ಇದು ಪಕ್ಷ ಹಾಗೂ ಮುಖಂಡರ ವರ್ಚಸ್ಸಿಗೆ ಧಕ್ಕೆ ತಂದಿದೆ’ ಎಂದು ಪಕ್ಷದವರು ಹೇಳುತ್ತಾರೆ.

ಬಿಜೆಪಿ ನಾಯಕರ ವರ್ತನೆಯಿಂದ ಬೇಸರಗೊಂಡು ಶೆಟ್ಟರ್‌ ಅವರು ಪಕ್ಷದ ಸಭೆ, ಕಾರ್ಯಕ್ರಮಗಳಿಂದ ದೂರ ಉಳಿದಿದ್ದಾರೆ. ಜಿಲ್ಲಾ ಮಟ್ಟದ ಕಾರ್ಯಕಾರಿಣಿ ಮತ್ತು ಲೋಕಸಭಾ ಚುನಾವಣಾ ಸಿದ್ಧತೆ ಸಭೆಗೂ ಗೈರಾದರು. ‘ಬೆಂಬಲಿಗರನ್ನು ವಾಪಸ್‌ ಸೇರಿಸಿಕೊಳ್ಳುವವರೆಗೆ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸಲ್ಲ ಎಂಬ ಸಂದೇಶ ರಾಷ್ಟ್ರೀಯ ನಾಯಕರಿಗೆ ಶೆಟ್ಟರ್ ರವಾನಿಸಿದ್ದಾರೆ’ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆದಿದೆ.

‘ಶೆಟ್ಟರ್ ಹೊರ ಹೋಗಿ ಪುನಃ ಮರಳುವವರೆಗಿನ ಅವಧಿಯಲ್ಲಿ ಪಕ್ಷದಲ್ಲಿ ಮೂಡಿದ ಬಿರುಕನ್ನು ‘ಮುಚ್ಚಲು’ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ಪ್ರಯತ್ನ ನಡೆಸಿದ್ದಾರೆ. ಆದರೆ, ಅದು ಫಲಪ್ರದವಾಗಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ, ಲೋಕಸಭಾ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಬಹುದು’ ಎಂಬ ಆತಂಕ ಪಕ್ಷದ ನಾಯಕರಲ್ಲಿದೆ.

ಬಿಜೆಪಿಗೆ ನನ್ನ ಬೆಂಬಲಿಗರ ಮರುಸೇರ್ಪಡೆ ಈ ವಾರದಲ್ಲಿ ನಡೆಯುವ ವಿಶ್ವಾಸವಿದೆ. ಯಾಕೆ ವಿಳಂಬ ಆಗುತ್ತಿದೆ ಎಂಬುದರ ಬಗ್ಗೆ ಈಗಲೇ ನಾನು ಏನೂ ಹೇಳಲ್ಲ
– ಜಗದೀಶ ಶೆಟ್ಟರ್‌ ಬಿಜೆಪಿ ಮುಖಂಡ
ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳಲು ಬೆಂಬಲಿಗರ ಪಟ್ಟಿಯನ್ನು ಶೆಟ್ಟರ್‌ ನೀಡಿದ್ದಾರೆ. ಇವರಲ್ಲಿ 8 ರಿಂದ 10 ಜನರ ಬಗ್ಗೆ ಬೂತ್‌ ಮಟ್ಟದ ಕಾರ್ಯಕರ್ತರಲ್ಲಿ ಅಸಮಾಧಾನವಿದೆ. ಇದನ್ನು ಬಗೆಹರಿಸಿ ಸೇರಿಸಿಕೊಳ್ಳುತ್ತೇವೆ.
– ತಿಪ್ಪಣ್ಣ ಮಜ್ಜಗಿ ಅಧ್ಯಕ್ಷ ಬಿಜೆಪಿ ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT