ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಲೋಕಸಭಾ ಚುನಾವಣೆ: ಪ್ರಲ್ಹಾದ ಜೋಶಿ ಸತತ 5ನೇ ಬಾರಿ ಜಯ

Published 5 ಜೂನ್ 2024, 6:17 IST
Last Updated 5 ಜೂನ್ 2024, 6:17 IST
ಅಕ್ಷರ ಗಾತ್ರ

ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರು ಸತತ ಐದನೇ ಬಾರಿ ಗೆಲುವು ಸಾಧಿಸಿದ್ದಾರೆ. ಕ್ಷೇತ್ರದಲ್ಲಿ ಐದು ಬಾರಿ ಗೆಲುವು ಸಾಧಿಸಿದ ಮೊದಲಿಗರಾಗಿದ್ಧಾರೆ.

ಜೋಶಿ ಅವರು 7.1‌6 ಲಕ್ಷ ಮತಗಳನ್ನು ಪಡೆದಿದ್ಧಾರೆ. ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ವಿನೋದ ಕೆ.ಅಸೂಟಿ ಅವರನ್ನು 97,324 ಮತಗಳ ಅಂತರದಿಂದ ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ. ಈ ಹಿಂದೆ ಕ್ಷೇತ್ರದಲ್ಲಿ (ಆಗ ಧಾರವಾಡ ಉತ್ತರ ಕ್ಷೇತ್ರ) ಸರೋಜಿನಿ ಮಹಿಷಿ, ಡಿ.ಕೆ.ನಾಯಕರ್‌ ಅವರು ನಾಲ್ಕು ಬಾರಿ ಗೆದ್ದಿದ್ದ ದಾಖಲೆ ಮುರಿದು ಹೊಸ ದಾಖಲೆ ನಿರ್ಮಿಸಿದ್ದಾರೆ.

ಜೋಶಿ ಅವರು 2004ರಲ್ಲಿ ಕಾಂಗ್ರೆಸ್‌ನ ಬಿ.ಎಸ್‌.ಪಾಟೀಲ ಅವರನ್ನು ಪರಾಭವಗೊಳಿಸಿ ಮೊದಲ‌ ಬಾರಿಗೆ ಲೋಕಸಭೆ ಪ್ರವೇಶಿಸಿದರು. ನಂತರ 2009ರಲ್ಲಿ ಕಾಂಗ್ರೆಸ್‌ನ ಕುನ್ನೂರು ಮಂಜುನಾಥ ಚನ್ನಪ್ಪ, 2014 ಮತ್ತು 2019ರಲ್ಲಿ ಕಾಂಗ್ರೆಸ್‌ನ ವಿನಯ ಕುಲಕರ್ಣಿ ಅವರನ್ನು ಸೋಲಿಸಿದರು. ಕೇಂದ್ರದಲ್ಲಿ ಗಣಿ ಮತ್ತು ಕಲ್ಲಿದ್ದಲು, ಸಂಸದೀಯ ವ್ಯವಹಾರಗಳ ಸಚಿವ ಸ್ಥಾನಗಳನ್ನು ನಿರ್ವಹಿಸಿದ್ದಾರೆ. ರಾಜಕಾರಣದದಲ್ಲಿ ಎರಡೂ ದಶಕಗಳಿಗೂ ಹೆಚ್ಚಿನ ಅನುಭವ ಹೊಂದಿದ್ಧಾರೆ.

ಕ್ಷೇತ್ರದಲ್ಲಿ 1996ರಿಂದ ಕಾಂಗ್ರೆಸ್‌ ಸತತವಾಗಿ ಸೋಲುಂಡಿದೆ. ಕಾಂಗ್ರೆಸ್‌ ಗ್ಯಾರಂಟಿ ಕಾರ್ಯಕ್ರಮಗಳು ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕೈಹಿಡಿಯಲಿವೆ ಎಂಬ ಬಲವಾದ ನಂಬಿಕೆ ಫಲಿಸಿಲ್ಲ.

ಕಾಂಗ್ರೆಸ್‌ ಅಭ್ಯರ್ಥಿ ವಿನೋದ ಅಸೂಟಿ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಮೊದಲ ಬಾರಿ. ವಿನೋದ ಅವರದ್ದು ಹೊಸ ಮುಖ. ಪ್ರಥಮ ಯತ್ನದಲ್ಲಿ 6.18 ಲಕ್ಷ ಮತಗಳನ್ನು ಪಡೆದಿದ್ಧಾರೆ. ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಪಡೆದಿದ್ದಕ್ಕಿಂತ ಹೆಚ್ಚು ಮತ ಪಡೆದು ಗಮನ ಸೆಳೆದಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌, ಶಾಸಕರು ಮತ್ತು ಕಾಂಗ್ರೆಸ್‌ ಮುಖಂಡರು ಕ್ಷೇತ್ರದ ಹೊಣೆ ಹೊತ್ತಿದ್ದರು. ಪಕ್ಷದ ಅಭ್ಯರ್ಥಿ ಪರ ಪ್ರಚಾರ, ಸಭೆ, ಸಮಾವೇಶ ನಡೆಸಿ ಶ್ರಮಿಸಿದ್ದರು. ಅವರ ಲೆಕ್ಕಾಚಾರ ಕೈಗೂಡಿಲ್ಲ. ಹುಬ್ಬಳ್ಳಿಯಲ್ಲಿ ಈಚೆಗೆ ನಡೆದ ಯುವತಿಯರ ಕೊಲೆ ಪ್ರಕರಣದ ರಾಜಕೀಯ ‘ಲೇಪನ’ ಪಡೆದದ್ದು ಕಾಂಗ್ರೆಸ್‌ನ ಸೋಲಿಗೆ ಒಂದು ಕಾರಣ.

ಕ್ಷೇತ್ರದ ಬಹುನಿರೀಕ್ಷೆಯ ಮಹಾದಾಯಿ ಯೋಜನೆ ಕಾರ್ಯಗತವಾಗದಿರುವುದು ಬಿಜೆಪಿ ಅಭ್ಯರ್ಥಿಗೆ ವ್ಯತಿರಿಕ್ತ ಪರಿಣಾಮ ಬೀರಿಲ್ಲ. ಧಾರವಾಡ ಕ್ಷೇತ್ರದ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದ ಜಗದೀಶ ಶೆಟ್ಟರ್‌ ಅವರಿಗೆ ಪಕ್ಕದ ಬೆಳಗಾವಿ ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ಮಾಡಿದ್ದು ಶೆಟ್ಟರ್‌ ಅವರಿಗೆ ಅನುಕೂಲವೇ ಆಗಿದೆ.

ಕೆಲ ತಿಂಗಳುಗಳ ಹಿಂದೆಯೇ ಚುನಾವಣೆ ನಿಟ್ಟಿನಲ್ಲಿ ಸಿದ್ಧತೆ ಕೈಗೊಂಡಿದ್ದು, ಕ್ಷೇತ್ರ ಪರ್ಯಟನೆ ಮಾಡಿದ್ದು, ನಾಲ್ಕು ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು, ಕ್ಷೇತ್ರದಲ್ಲಿ ಬಿರುಸಿನ ಅಬ್ಬರದ ಪ್ರಚಾರ ಮಾಡಿದ್ದು, ‘ಧಾರವಾಡ ಲೋಕಸಭಾ ಕ್ಷೇತ್ರದ ಪ್ರಗತಿಯ ನೋಟ 2014–2024’ ಕಿರುಪುಸ್ತಿಕೆ ಪ್ರಕಟಿಸಿ ಕ್ಷೇತ್ರದ ಮನೆಮನೆಗೆ ತಲುಪಿಸಿದ್ದು ಬಿಜೆಪಿ ಅಭ್ಯರ್ಥಿ ಜೋಶಿ ಅವರ ಕೈಹಿಡಿದಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಫಲಿಸದ ದಿಂಗಾಲೇಶ್ವರ ಸ್ವಾಮೀಜಿ ಯತ್ನ

ಶಿರಹಟ್ಟಿಯ ಭಾವೈಕ್ಯ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರು ಈ ಚುನಾವಣೆಯಲ್ಲಿ ಜೋಶಿ ಅವರನ್ನು ಸೋಲಿಸುವುದೇ ಗುರಿ ಎಂದು ಘೋಷಿಸಿದ್ದರು. ಸ್ವಾಮೀಜಿ ನಾಮಪತ್ರ ಸಲ್ಲಿಸಿ ಕೊನೆಕ್ಷಣದಲ್ಲಿ ವಾಪಸ್‌ ಪಡೆದಿದ್ದರು. ನಾಮಪತ್ರ ‌ಹಿಂಪಡೆದರೂ ನಿಲುವು ಬದಲಾಗಲ್ಲ ಎಂದು ಸ್ವಾಮೀಜಿ ಹೇಳಿದ್ದರು. ಸ್ವಾಮೀಜಿ ಅವರ ಯತ್ನವೂ ಫಲಿಸಿಲ್ಲ.

ಈ ಬಾರಿ ಗೆಲುವಿನ ಅಂತರ ಕಡಿಮೆ

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಗೆಲುವಿನ ಓಟ ಮುಂದುವರಿದಿದೆ. ಅವರು ಸತತ ಐದನೇ ಬಾರಿಗೆ ಗೆಲು‌ವು ಸಾಧಿಸಿದ್ದಾರೆ, ಈ ಬಾರಿ ಗೆಲುವಿನ ಅಂತರ ಕಡಿಮೆಯಾಗಿದೆ.

ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರು ಈ ಚುನಾವಣೆಯಲ್ಲಿ 7.16 ಲಕ್ಷ ಮತ ಪಡೆದಿದ್ಧಾರೆ. ಕಳೆದ ಬಾರಿ 2019ರ ಚುನಾವಣೆಯಲ್ಲಿ ಅವರು 6.84 ಲಕ್ಷ ಮತ ಪಡೆದಿದ್ದರು. ಕಳೆದ ಬಾರಿಗಿಂತ ಮತ ಗಳಿಕೆ ಹೆಚ್ಚಾಗಿದೆ, ಆದರೆ ಗೆಲುವಿನ ಅಂತರ ಕಡಿಮೆಯಾಗಿದೆ.

ಜೋಶಿ ಅವರು ಈ ಬಾರಿಯ ಚುನಾವಣೆಯಲ್ಲಿ ಪ್ರತಿಸ್ಪರ್ಧಿಯನ್ನು 97,324 ಮತಗಳ ಅಂತರದಿಂದ ಸೋಲಿಸಿದ್ದಾರೆ. 2019ರ ಚುನಾವಣೆಯಲ್ಲಿ ಗೆಲುವಿನ ಅಂತರ 2,05,072 ಇತ್ತು. ಕಳೆ ಬಾರಿಗಿಂತ ಈ ಬಾರಿ ಗೆಲುವಿನ ಅಂತರ ಬರೋಬ್ಬರಿ 1.07 ಲಕ್ಷ ಮತ ಕಡಿಮೆಯಾಗಿದೆ. ಈ ಬಾರಿ ಮೂರು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ದಾಖಲಿಸುವ ಅವರ ಗುರಿ ಸಾಕಾರವಾಗಿಲ್ಲ.

ಹಿಂದಿನ ನಾಲ್ಕೂ ಚುನಾವಣೆಗಳಲ್ಲಿ ಪ್ರಲ್ಹಾದ ಜೋಶಿ ಅವರ ಗೆಲುವಿನ ಅಂತರ ಚುನಾವಣೆಯಿಂದ ಚುನಾವಣೆಗೆ ಏರಿಕೆಯಾಗಿತ್ತು. 2004ರ ಲೋಕಸಭಾ ಚುನಾವಣೆಯಲ್ಲಿ ಜೋಶಿ ಮೊದಲ ಬಾರಿಗೆ ಸ್ಪರ್ಧಿಸಿದಾಗ 3,85,084 ಮತಗಳನ್ನು ಪಡೆದು ಜಯಗಳಿಸಿದ್ದರು. ಈ ಚುನಾವಣೆಯಲ್ಲಿ ಗೆಲುವಿನ ಅಂತರ 83,078 ಇತ್ತು.

2009ರಲ್ಲಿ ಎರಡನೇ ಬಾರಿ ಸ್ಪರ್ಧೆಯಲ್ಲಿ ಜೋಶಿ ಅವರು 4,46,786 ಮತಗಳನ್ನು ಪಡೆದಿದ್ದರು. ಗೆಲುವಿನ ಅಂತರ 1,37663ಮತಗಳಿಗೆ ಏರಿಕೆಯಾಗಿತ್ತು.

2014ರ ಚುನಾವಣೆಯಲ್ಲಿ 5,45,395 ಮತಗಳನ್ನು ಪಡೆದಿದ್ದರು. ಗೆಲುವಿನ ಅಂತರ 1,13,657ಮತಗಳಿಗೆ ಏರಿಕೆಯಾಗಿತ್ತು.

ಹಿಂದಿನ ಸತತ ನಾಲ್ಕು ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿ ಜೋಶಿ ಅವರು ಗೆಲುವಿನ ಅಂತರದಲ್ಲಿ ಹೆಚ್ಚಳ ಕಾಯ್ದುಕೊಂಡಿದ್ದರು. ಈ ಬಾರಿ ಅದು ‌ಸಾಧ್ಯವಾಗಿಲ್ಲ.

ಕ್ಷೇತ್ರದಲ್ಲಿ 1996ರಿಂದ ಬಿಜೆಪಿ ಸತತವಾಗಿ ಗೆಲುವಿನ ಹಾದಿಯಲ್ಲಿದೆ.1996ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿಜಯ ಸಂಕೇಶ್ವರ ಅವರು 2.28 ಲಕ್ಷ ಮತ ಪಡೆದು ಜಯಗಳಿಸಿದ್ದರು. ಗೆಲುವಿನ ಅಂತರ 40351 ಇತ್ತು. 1998ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿಜಯ ಸಂಕೇಶ್ವರ ಅವರು 3.39 ಲಕ್ಷ ಮತ ಪಡೆದು ಗೆದ್ದಿದ್ದರು. ಗೆಲುವಿನ ಅಂತರ 1.29 ಲಕ್ಷ ಇತ್ತು. 1999ರ ಚುನಾವಣೆಯಲ್ಲೂ ವಿಜಯ ಸಂಕಶ್ವೇರ ಅವರು 3.45 ಲಕ್ಷ ಮತ ಪಡೆದಿದ್ದರು. ಗೆಲುವಿನ ಅಂತರ 41,602 ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT