ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ:‌ ‘ಸುದೀರ್ಘ ಅವಧಿ’; ಇದು ಎರಡನೇ ಬಾರಿ

1973ರಿಂದ ಒಂಬತ್ತೂವರೆ ವರ್ಷ ಜನಪ್ರತಿನಿಧಿಗಳ ಆಡಳಿತದಿಂದ ದೂರವಿದ್ದ ಪಾಲಿಕೆ
Last Updated 17 ಆಗಸ್ಟ್ 2021, 16:36 IST
ಅಕ್ಷರ ಗಾತ್ರ

ಹುಬ್ಬಳ್ಳಿ:‌ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಗೆ ಸೆ.3ರಂದು ಚುನಾವಣೆ ನಡೆಯುತ್ತದೆ. ಪದೇ ಪದೇ ಚುನಾವಣೆ ಮುಂದೂಡಿದ್ದರಿಂದ ಪಾಲಿಕೆಗೆ ಚುನಾವಣೆ ನಡೆದು ಎರಡೂವರೆ ವರ್ಷಗಳೇ ಉರುಳಿವೆ. ಪಾಲಿಕೆ ಚುನಾವಣಾ ಇತಿಹಾಸದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಜನಪ್ರತಿನಿಧಿಗಳು ಕಾದ ಎರಡನೇ ‘ಸುದೀರ್ಘ ಅವಧಿ’ ಇದಾಗಿದೆ.

1855ರಲ್ಲಿ ಧಾರವಾಡ ಮತ್ತು 1856ರಲ್ಲಿ ಹುಬ್ಬಳ್ಳಿಯಲ್ಲಿ ಪ್ರತ್ಯೇಕ ಪುರಸಭೆ ಸ್ಥಾಪಿಸಲಾಯಿತು. ಇವುಗಳನ್ನು ಒಂದುಗೂಡಿಸಿ 1962ರಲ್ಲಿ ಮಹಾನಗರ ಪಾಲಿಕೆ ರಚಿಸಲಾಯಿತು. 1965ರ ಆಸುಪಾಸಿನಲ್ಲಿ ಶಾಸಕ ಜಗದೀಶ ಶೆಟ್ಟರ್‌ ಅವರ ತಂದೆ ಶಿವಪ್ಪ ಶೆಟ್ಟರ್‌ ಜನಸಂಘದಿಂದ ಮೇಯರ್‌ ಆಗಿ ಆಯ್ಕೆಯಾಗಿದ್ದರು.

ಆಗ ಕಾಂಗ್ರೆಸ್‌ ಆಡಳಿತದ ಕಾಲವಿತ್ತು. ಕಾಂಗ್ರೆಸ್‌ ನಾಯಕರು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಬಂದರೆ ಸ್ಥಳೀಯ ಸಂಸ್ಥೆಗಳ ಜನಸಂಘದ ಮುಖಂಡರು ಬೇರೆ ಪಕ್ಷಗಳ ನಾಯಕರ ಭೇಟಿಗೆ ಹೆಚ್ಚಾಗಿ ಹೋಗುತ್ತಿರಲಿಲ್ಲ. ಇದೇ ಅಸಮಾಧಾನ ಮತ್ತು ಬೇರೆ, ಬೇರೆ ಕಾರಣಗಳನ್ನು ಮುಂದಿಟ್ಟು ಆಗಿನ ಮುಖ್ಯಮಂತ್ರಿ ದೇವರಾಜು ಅರಸು ಅವರು 1973ರಲ್ಲಿ ಮಹಾನಗರ ಪಾಲಿಕೆ ‘ಸೂಪರ್‌ ಸೀಡ್‌’ ಮಾಡಿದ್ದರು. ಅದಾದ ನಂತರ ಒಂಬತ್ತುವರೆ ವರ್ಷಗಳ ನಂತರ ಚುನಾವಣೆ ನಡೆದಿರಲಿಲ್ಲ.

ಇದನ್ನು ಹೊರತುಪಡಿಸಿ ಗರಿಷ್ಠ ಒಂದರಿಂದ, ಒಂದೂವರೆ ವರ್ಷಗಳವರೆಗೆ ಕೆಲವು ಬಾರಿ ಚುನಾವಣೆ ನಡೆದಿಲ್ಲ. ಈಗಿನ 30 ತಿಂಗಳ ಅವಧಿ ಜನಪ್ರತಿನಿಧಿಗಳಿಗೆ ದೀರ್ಘ ಕಾಯುವಿಕೆಯಾಗಿದೆ. 2013ರಲ್ಲಿ ಪಾಲಿಕೆಗೆ ಕೊನೆಯದಾಗಿ ಚುನಾವಣೆ ನಡೆದು, 2018ರ ಫೆಬ್ರುವರಿಯಲ್ಲಿ ಅವಧಿ ಪೂರ್ಣಗೊಂಡಿತ್ತು. ವಾರ್ಡ್‌ಗಳ ಮರುವಿಂಗಡಣೆ ಹಾಗೂ ಮೀಸಲಾತಿ ಸಂಬಂಧ ಹಲವರು ಕೋರ್ಟ್‌ ಮೆಟ್ಟಿಲೇರಿದ್ದರಿಂದ ಚುನಾವಣೆ ಮೇಲಿಂದ ಮೇಲೆ ಮುಂದೂಡಲಾಗಿತ್ತು.

ಇತಿಹಾಸದ ನೆನಪುಗಳನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡ ಇಲ್ಲಿನ ಪಾಲಿಕೆಯ ಮಾಜಿ ಮೇಯರ್ ಪಾಂಡುರಂಗ ಪಾಟೀಲ ‘ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳು ನಡೆಯದ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಮಕೃಷ್ಣ ಹೆಗಡೆ ಅವರು ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಘೋಷಿಸಿದ್ದರು. ಅವರು ಮುಖ್ಯಮಂತ್ರಿ ಆದ ಬಳಿಕ ಚುನಾವಣೆ ನಡೆಸಿದರು’ ಎಂದರು. ಪಾಟೀಲ ಅವರು ಐದು ಬಾರಿ ಪಾಲಿಕೆ ಸದಸ್ಯರಾಗಿದ್ದಾರೆ.

‘ಒಂಬತ್ತೂವರೆ ವರ್ಷಗಳ ಸುದೀರ್ಘ ಸೂಪರ್‌ ಸೀಡ್‌ ಬಳಿಕ 1983ರಲ್ಲಿ ಇಲ್ಲಿನ ಮಹಾನಗರ ಪಾಲಿಕೆಗೆ ಮತ್ತೆ ಚುನಾವಣೆ ನಡೆಯಿತು. ಆಗ ನಾನೂ ಸ್ಪರ್ಧಿಸಿದ್ದೆ. ಇದನ್ನು ಹೊರತುಪಡಿಸಿದರೆ ಪಾಲಿಕೆಯಲ್ಲಿ ಜನಪ್ರತಿನಿಧಿಗಳಿಲ್ಲದ ಎರಡನೇ ಸುದೀರ್ಘ ಅವಧಿ ಈಗಿನದ್ದೇ ಆಗಿದೆ’ ಎಂದು ನೆನಪಿಸಿಕೊಂಡರು.

1962ರಲ್ಲಿ ಹು–ಧಾ ಮಹಾನಗರ ಪಾಲಿಕೆಯಾಗಿ ಬಡ್ತಿ

2013ರಲ್ಲಿ ಕೊನೆಯದಾಗಿ ನಡೆದಿದ್ದ ಹು–ಧಾ ಪಾಲಿಕೆ ಚುನಾವಣೆ

ವಾರ್ಡ್‌ ವಿಂಗಡಣೆ, ಮೀಸಲಾತಿ ಕಾರಣಕ್ಕಾಗಿ ವಿಳಂಬ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT