ಭಾನುವಾರ, ಅಕ್ಟೋಬರ್ 25, 2020
28 °C
ಬದುಕಿನ ಪ್ರತಿ ದೈಹಿಕ ಚಟುವಟಿಕೆಯೂ ಕ್ರೀಡೆಯ ಭಾಗ

PV Web Exclusive: ಗಾಂಧಿ ದೃಷ್ಟಿ; ಕ್ರೀಡೆಯೆಂದರೆ ಆಟವಷ್ಟೇ ಅಲ್ಲ!

ಪ್ರಮೋದ‌ Updated:

ಅಕ್ಷರ ಗಾತ್ರ : | |

Prajavani

ಕ್ರೀಡೆಯೆಂದರೆ ಏನು? ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದಷ್ಟೇ ಕ್ರೀಡೆಯೇ? ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದರಷ್ಟೇ ಕ್ರೀಡಾಪಟುವೇ?

ಹಾಗಾದರೆ ಮತ್ತದೇ ಪ್ರಶ್ನೆ, ಕ್ರೀಡೆಯ ವ್ಯಾಖ್ಯಾನವೇನು? ಇದಕ್ಕೆ ನೂರಾರು ಸಾಧಕರು, ವಿವಿಧ ಕ್ಷೇತ್ರಗಳ ಗಣ್ಯರು ತಮ್ಮದೇ ಆದ ವಿವರಣೆಗಳನ್ನು ನೀಡಿದ್ದಾರೆ. ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಆತ್ಮಕಥೆ ‘ಪ್ಲೇಯಿಂಟ್‌ ಇಟ್ ಮೈ ವೇ’ ಕೃತಿಯಲ್ಲಿ ‘ಸೋಲು, ಗೆಲುವಿನ ಲೆಕ್ಕಾಚಾರ ಬದಿಗಿಟ್ಟು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಕ್ರೀಡೆ’ ಎಂದಿದ್ದಾರೆ. ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಕಪಿಲ್‌ ದೇವ್‌ ‘ನಿಮ್ಮ ಶಿಕ್ಷಣ ಮತ್ತು ಆರೋಗ್ಯ ಚೆನ್ನಾಗಿರಬೇಕಾದರೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ’ ಎಂದು ಸಲಹೆ ನೀಡಿದ್ದಾರೆ.

ಹೀಗೆ ಪ್ರತಿ ಗಣ್ಯರಂತೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕೂಡ ಕ್ರೀಡೆಯ ಬಗ್ಗೆ ತಮ್ಮದೇ ಆದ ವ್ಯಾಖ್ಯಾನ ನೀಡಿದ್ದಾರೆ. ಬದುಕಿನ ಪ್ರತಿ ದೈಹಿಕ ಚಟುವಟಿಕೆಯೂ ಕ್ರೀಡೆಯ ಭಾಗವೇ ಎಂಬುದು ಅವರ ಬಲವಾದ ನಂಬಿಕೆಯಾಗಿತ್ತು. ಭಾರತದಲ್ಲಿ ಪಠ್ಯ ಮತ್ತು ಕ್ರೀಡೆ ಬೇರೆ, ಬೇರೆಯಾಗಿದ್ದು ಸರಿಯಲ್ಲ. ಪಠ್ಯದಲ್ಲಿ ಆಟವಲ್ಲ, ಆಟವಾಡುತ್ತಲೇ ಕಲಿಯುವುದು ಪಠ್ಯ ಎಂದು ಪ್ರತಿಪಾದಿಸಿದ್ದರು.

ಶಿಕ್ಷಣದ ಬಗ್ಗೆ ಅತ್ಯಂತ ಸ್ಪಷ್ಟ ನಿಲುವು ಹೊಂದಿದ್ದ ಗಾಂಧೀಜಿ ಪಾರಂಪರಿಕ ಶಿಕ್ಷಣಕ್ಕೆ ಪರ್ಯಾಯವಾಗಿ ಹೊಸ ತರಬೇತಿ ಪದ್ಧತಿ ಬೆಳೆಯಬೇಕು. ತರಬೇತಿ, ಮನಸ್ಸು ಮತ್ತು ಆತ್ಮ ಮೂರೂ ಸಮತೋಲಿತವಾಗಿ ಅಭಿವೃದ್ಧಿಯಾಗಬೇಕು. ಮನುಷ್ಯನ ವಿಕಾಸಕ್ಕೆ ಬೌದ್ಧಿಕ ಬೆಳವಣಿಗೆ ಹೇಗೆ ಮುಖ್ಯವೊ, ಶಾರೀರಿಕ ಬೆಳವಣಿಗೆಯೂ ಅಷ್ಟೇ ಮುಖ್ಯ. ಆದ್ದರಿಂದ ನಮ್ಮ ಶಿಕ್ಷಣ ಆಟದಂತೆ ಇರಬೇಕು, ಆಟ ಶಿಕ್ಷಣದ ಅವಿಭಾಜ್ಯ ಅಂಗವಾಗಿರಬೇಕು. ಶಿಕ್ಷಣ ಎಂದೂ ಶಿಕ್ಷೆಯಾಗಬಾರದು ಎಂದಿದ್ದರು.

ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಕರೆ ನೀಡಿರುವ ಫಿಟ್‌ ಇಂಡಿಯಾ ಅಭಿಯಾನ ಗಾಂಧೀಜಿ ಆ ಕಾಲದಲ್ಲೇ ರೂಪಿಸಿದ್ದರು. ಸಶಕ್ತ ದೇಹದಿಂದ ಮಾತ್ರ ಸಶಕ್ತ ಮನಸ್ಸು, ಸದೃಢ ರಾಷ್ಟ್ರ ಎನ್ನುವುದು ಅವರ ಪರಿಕಲ್ಪನೆಯಾಗಿತ್ತು. ಕ್ರೀಡೆ ಆಯ್ಕೆ ವಿಷಯವಲ್ಲ; ಆದ್ಯತೆ ವಿಷಯವಾಗಿರಬೇಕೆಂದು ಬಯಸಿದ್ದರು ಎಂದು ಪುಸ್ತಕಗಳಲ್ಲಿ ದಾಖಲಾಗಿದೆ.

ಕ್ರೀಡೆಯ ವ್ಯಾಖ್ಯಾನದ ಕುರಿತು ಗಾಂಧೀಜಿ ಹೊಂದಿದ್ದ ಬಲವಾದ ನಂಬಿಕೆಗಳನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಶಿವಾನಂದ ಶೆಟ್ಟರ್ ‘ಭಾರತದಲ್ಲಿ ಸರಿಯಾಗಿ ಕ್ರೀಡಾ ಸಂಸ್ಕೃತಿಯೆಂಬುದೇ ಇಲ್ಲ ಎನ್ನುವುದು ಗಾಂಧೀಜಿ ಅವರ ವಾದವಾಗಿತ್ತು. ಅವರ ಮಾತುಗಳು ಸುಳ್ಳೇನೂ ಅಲ್ಲ. ಏಕೆಂದರೆ ಈಗಲೂ ಎಷ್ಟೋ ಶಾಲೆಗಳಲ್ಲಿ ಆಟದ ಮೈದಾನಗಳೇ ಇಲ್ಲ! ಆದ್ದರಿಂದ ಎಲ್ಲರಿಗೂ ನೇರವಾಗಿ ಕ್ರೀಡೆಗಳಲ್ಲಿ ಪಾಲ್ಗೊಂಡು ದೈಹಿಕ ಶ್ರಮ ಪಡಲು ಆಗುತ್ತಿರಲಿಲ್ಲ. ಎಲ್ಲೇ ಇದ್ದರೂ ಶ್ರಮ ಪಡುವುದು, ಶರೀರ ಸೌಷ್ಟವ ಕಾಯ್ದುಕೊಳ್ಳುವುದು ಕೂಡ ಕ್ರೀಡೆ ಎಂದಿದ್ದರು’ ಎಂದರು.

‘ದೈಹಿಕ ಶ್ರಮದ ಭಾಗವೇ ಆದ ನಡಿಗೆಗೆ ಗಾಂಧೀಜಿ ವಿಶೇಷ ಪ್ರಾಮುಖ್ಯತೆ ಕೊಟ್ಟಿದ್ದರು. ಇದರ ಬಗ್ಗೆ ಗಟ್ಟಿ ನಂಬಿಕೆ ಹೊಂದಿದ್ದರು, ಅದರಲ್ಲಿ ಪ್ರಯೋಗ ಮಾಡಿ ಯಶಸ್ಸು ಕೂಡ ಕಂಡರು. ಶರೀರ ಶ್ರಮದ ಕೊರತೆ ಇರುವವರಲ್ಲಿ ಬೌದ್ಧಿಕ ಶ್ರಮದ ಕೊರತೆಯೂ ಇರುತ್ತದೆ ಎಂದು ಪ್ರತಿಪಾದಿಸಿದ್ದರು. 1930ರಲ್ಲಿ ಉಪ್ಪಿನ ಸತ್ಯಾಗ್ರಹ ವೇಳೆ ಅಹಮದಾಬಾದ್‌ನ ಸಾಬರಮತಿ ಆಶ್ರಮದಿಂದ ದಾಂಡಿವರೆಗೆ ನಡೆದುಕೊಂಡೇ ಹೋಗಿದ್ದರು. ಇದು ಅವರಲ್ಲಿನ ಕ್ರೀಡಾಶಕ್ತಿಯನ್ನು ತೋರಿಸುತ್ತದೆ. ನಡಿಗೆ ಮೂಲಕವೇ ದೇಶವನ್ನು ಸುತ್ತಿದವರಲ್ಲಿ ಅವರೇ ಅಗ್ರಗಣ್ಯರು. ಈ ನಡಿಗೆಯೇ ಈಗ ಕಾಮನ್‌ವೆಲ್ತ್‌, ಏಷ್ಯನ್‌ ಕ್ರೀಡಾಕೂಟ ಮತ್ತು ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆಗಳಾಗಿ ಸ್ಥಾನ ಪಡೆದಿವೆ’ ಎಂದು ಶೆಟ್ಟರ್‌ ನೆನಪಿಸಿಕೊಂಡರು.


2015ರಲ್ಲಿ ನಡೆದ ಭಾರತ–ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮಹಾತ್ಮ ಗಾಂಧಿ–ನೆಲ್ಸನ್‌ ಮಂಡೇಲಾ ಟೆಸ್ಟ್‌ ಸರಣಿಯ ಪಂದ್ಯದ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗಾಂಧಿ ಪ್ರತಿಮೆ

ಕ್ರಿಕೆಟ್‌ನಲ್ಲಿ 17ನೇ ಆಟಗಾರ

ಕ್ರೀಡೆಯ ಜೊತೆಗೆ ಮಹಾತ್ಮ ಗಾಂಧೀಜಿ ಹೊಂದಿದ್ದ ನೇರ ಸಂಬಂಧದ ಬಗ್ಗೆ ದೇಶಿ ಕ್ರಿಕೆಟ್‌ನ ಅಂಕಿ ಅಂಶ ತಜ್ಞ ಬೆಂಗಳೂರಿನ ಚನ್ನಗಿರಿ ಕೇಶವಮೂರ್ತಿ ಅವರು ಬರೆದ ‘ಭಾರತೀಯ ಕ್ರಿಕೆಟ್‌ ಇತಿಹಾಸ’ ಪುಸ್ತಕ (144ನೇ ಪುಟ) ಬೆಳಕು ಚೆಲ್ಲುತ್ತದೆ.

ಗಾಂಧೀಜಿ ಅವರಿಗೆ ಕ್ರಿಕೆಟ್‌ನೊಂದಿಗೆ ನೇರ ಸಂಬಂಧವಿತ್ತು ಎಂದು ಕೆಲವು ದಾಖಲೆಗಳು ಹೇಳುತ್ತವೆ. ಭಾರತದ ಮಾಜಿ ಟೆಸ್ಟ್‌ ಆಟಗಾರ ವಿಜಯ ಮರ್ಚೆಂಟ್‌ ಅವರ ಸಹೋದರಿ ಲಕ್ಷ್ಮಿ ಮರ್ಚಂಟ್‌‌ ಬಳಿಯಿದ್ದ ಲಿಖಿತ ದಾಖಲೆ ಇದಕ್ಕೆ ಸಾಕ್ಷಿ ಒದಗಿಸುತ್ತದೆ. 1933–34ರಲ್ಲಿ ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಗಾಂಧೀಜಿ ಇಂಗ್ಲೆಂಡ್ ತಂಡದ 17ನೇ ಆಟಗಾರರಾಗಿ ಸಹಿ ಹಾಕಿದ್ದರು. ಗಾಂಧೀಜಿ ಅವರ ಬಳಿ ಲಕ್ಷ್ಮಿ ಮರ್ಚಂಟ್‌ ಆಗ ಹಸ್ತಾಕ್ಷರ ಪಡೆದಿದ್ದರು. ಇದು ಈಗಲೂ ಲಾರ್ಡ್ಸ್‌ನ ಮೆರಿಲ್‌ಬೋನ್‌ ಕ್ರಿಕೆಟ್‌ ಕ್ಲಬ್‌ನಲ್ಲಿ (ಎಂಸಿಸಿ) ಅಪೂರ್ವ ವಸ್ತುವಾಗಿದೆ.

ಗಾಂಧೀಜಿ ಅವರಿಗೆ ಬ್ರಿಟಿಷರ ಜೊತೆ ಭಾರತದ ಸ್ವಾತಂತ್ರ್ಯದ ಸಲುವಾಗಿ ಹೋರಾಡುವ ತಮ್ಮ ಮನೋಭಾವ ಅಚಲವಾಗಿದ್ದರೂ, ಈ ಬಗ್ಗೆ ಕ್ರಿಕೆಟ್ ಆಟ ಇಬ್ಬರ ನಡುವೆ ಸೌಹಾರ್ದ ಮೂಡಿಸುವಂತಾದಲ್ಲಿ ತಾವು ಯಾವುದೇ ತಂಡದ ಸದಸ್ಯರಾಗಲೂ ಸಿದ್ಧ ಎಂದು ಹೇಳಿದ್ದರಂತೆ ಎನ್ನುವ ಮಾಹಿತಿ ಪುಸ್ತಕದಲ್ಲಿ ದಾಖಲಾಗಿದೆ.

ಗಾಂಧೀಜಿ–ಮಂಡೇಲಾ ಹೆಸರಲ್ಲಿ ಫ್ರೀಡಂ ಟ್ರೋಫಿ‌
ಗಾಂಧೀಜಿ ಮತ್ತು ನೆಲ್ಸನ್‌ ಮಂಡೇಲಾ ಅವರು ಅಹಿಂಸೆ ಮತ್ತು ಅಸಹಕಾರ ಚಳವಳಿಗಳ ಮೂಲಕ ತಮ್ಮ ರಾಷ್ಟ್ರಗಳಿಗೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಇವರ ಅಹಿಂಸಾತ್ಮಕ ಹೋರಾಟಗಳು ಗಮನ ಸೆಳೆದವು ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ಬಣ್ಣಿಸಿವೆ.

ಇವರಿಗೆ ಗೌರವ ಸಲ್ಲಿಸುವ ಸಲುವಾಗಿ ಉಭಯ ರಾಷ್ಟ್ರಗಳು 2015ರಲ್ಲಿ ಮೊದಲ ಬಾರಿಗೆ ‘ಮಹಾತ್ಮ ಗಾಂಧಿ-ನೆಲ್ಸನ್ ಮಂಡೇಲಾ ಕ್ರಿಕೆಟ್‌ ಸರಣಿ; ಫ್ರೀಡಂ ಟ್ರೋಫಿ’ ಆಯೋಜಿಸಿದ್ದವು. ಈ ಎರಡೂ ರಾಷ್ಟ್ರಗಳ ನಡುವಿನ ಎಲ್ಲಾ ದ್ವಿಪಕ್ಷೀಯ ಟೆಸ್ಟ್‌ ಸರಣಿಗಳಿಗೆ ‘ಫ್ರೀಡಂ ಟ್ರೋಫಿ’ ಎಂದು ಕರೆಯಲಾಗುತ್ತದೆ.


ನಡಿಗೆ ಕೂಡ ಕ್ರೀಡೆಯ ಭಾಗ ಎಂದು ಭಾವಿಸಿದ್ದ ಮಹಾತ್ಮ ಗಾಂಧೀಜಿ ಚಿತ್ರ/ಪ್ರಜಾವಾಣಿ ಆರ್ಕೈವ್‌

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು