ಅನುಕಂಪ ಆಧಾರಿತ ನೌಕರಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ: ಸುರೇಶ್ ಕುಮಾರ್

ಧಾರವಾಡ: ಐದು ವರ್ಷಗಳ ಹಿಂದೆ ಪಾರ್ಶ್ವವಾಯು ಪೀಡಿತರಾಗಿ ಶೇ.100 ರಷ್ಟು ಅಂಗವೈಕಲ್ಯದಿಂದ ಸಂಪೂರ್ಣವಾಗಿ ಹಾಸಿಗೆ ಹಿಡಿದಿರುವ ಕೆಇಎಸ್ ಅಧಿಕಾರಿ, ಬೆಳಗಾವಿ ಡಯಟ್ ಹಿರಿಯ ಉಪನ್ಯಾಸಕ ಮಹದೇವ ಬ.ಮಾಳಗಿ ಅವರ ಇಲ್ಲಿನ ನಿಸರ್ಗ ಲೇಔಟ್ ನಿವಾಸಕ್ಕೆ ಪ್ರಾಥಮಿಕ, ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಎಸ್.ಸುರೇಶ್ ಕುಮಾರ್ ಗುರುವಾರ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು. ಜತೆಗೆ ಅಧಿಕಾರಿಯ ಸ್ವಯಂ ನಿವೃತ್ತಿ ಆದೇಶವನ್ನು ಹಸ್ತಾಂತರಿಸಿದರು.
‘1999 ಬ್ಯಾಚಿನ ಕೆಇಎಸ್ ಅಧಿಕಾರಿಯಾಗಿರುವ ಮಹದೇವ ಮಾಳಗಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ, ಕ್ಷೇತ್ರ ಶಿಕ್ಷಣಾಧಿಕಾರಿ ಡಯಟ್ ಹಿರಿಯ ಉಪನ್ಯಾಸಕರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. 2015 ರ ಜನವರಿ 15 ರಂದು ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿರುವುದರಿಂದ, ಅವರ ದೈಹಿಕ ಸಾಮರ್ಥ್ಯ ಇಲ್ಲದಿರುವದನ್ನು ಪರಿಗಣಿಸಿ ಸರ್ಕಾರ ಸ್ವಯಂ ನಿವೃತ್ತಿ ಆದೇಶ ನೀಡಿದೆ. ಇದರಿಂದ ಅವರಿಗೆ ನಿವೃತ್ತಿ ನಂತರದ ಎಲ್ಲಾ ಸೌಲಭ್ಯಗಳು ದೊರೆಯಲಿವೆ. ಕುಟುಂಬದ ಸದಸ್ಯರು ಅನುಕಂಪ ಆಧಾರಿತ ನೌಕರಿಗೆ ಮನವಿ ಮಾಡಿದ್ದಾರೆ. ಇದು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರವಾಗಬೇಕಾದ ವಿಷಯವಾಗಿರುವದರಿಂದ ಮುಂಬರುವ ದಿನಗಳಲ್ಲಿ ವಿಷಯವನ್ನು ಸಭೆಗೆ ಮಂಡಿಸಲು ತಮ್ಮ ಶಕ್ತಿಮೀರಿದ ಪ್ರಯತ್ನ ಮಾಡುತ್ತೇನೆ, ಮುಖ್ಯಮಂತ್ರಿಗಳು ಈ ಕುರಿತು ನಿರ್ಣಯ ಕೈಗೊಳ್ಳುವ ಅಧಿಕಾರ ಹೊಂದಿದ್ದಾರೆ’ ಎಂದು ಸಚಿವರಾದ ಸುರೇಶಕುಮಾರ್ ಹೇಳಿದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ‘ಅಧಿಕಾರಿಯ ವೈದ್ಯಕೀಯ ವೆಚ್ಚದ ಮರುಪಾವತಿಗೆ ತ್ವರಿತ ಕ್ರಮ ಕೈಗೊಳ್ಳಬೇಕು’ ಎಂದರು.
ಮಹದೇವ ಮಾಳಗಿ ಅವರ ಪತ್ನಿ ಪ್ರಭಾವತಿ, ಮಕ್ಕಳಾದ ಸಮೀಕ್ಷಾ, ಸಂಪದಾ ತಮ್ಮ ಸಂಕಷ್ಟಗಳನ್ನು ಸಚಿವರಿಗೆ ನಿವೇದಿಸಿಕೊಂಡರು.
ಎಸ್.ವಿ.ಸಂಕನೂರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ, ಉಪನಿರ್ದೇಶಕ ಮೋಹನಕುಮಾರ್ ಹಂಚಾಟೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಎ.ಖಾಜಿ, ಉಮೇಶ್ ಬೊಮ್ಮಕ್ಕನವರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.