ಹುಬ್ಬಳ್ಳಿ: ‘ಬಿಜೆಪಿಯವರು ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಮಾಡುವುದನ್ನು ಬಿಟ್ಟು, ಮೊದಲು ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡುವತ್ತ ಗಮನ ಹರಿಸಲಿ’ ಎಂದು ಶಾಸಕ ಲಕ್ಷ್ಮಣ ಸವದಿ ಲೇವಡಿ ಮಾಡಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯವರು ಕಾಂಗ್ರೆಸ್ ಕಡೆ ಒಂದು ಬೆರಳು ತೋರಿಸುತ್ತಿದ್ದರೆ, ನಾಲ್ಕು ಬೆರಳುಗಳು ಅವರತ್ತಲೇ ತಿರುಗಿವೆ ಎಂಬುದನ್ನು ಅರಿತುಕೊಳ್ಳಲಿ. ಹೇಳಿಕೆ ನೀಡುವ ಮೊದಲು ತಮ್ಮ ಸಮಸ್ಯೆ ಸರಿ ಮಾಡಿಕೊಂಡು, ನಂತರ ನಮ್ಮತ್ತ ನೋಡಲಿ’ ಎಂದು ಟೀಕಿಸಿದರು.
‘ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಹರಸಾಹಸ ಪಡುವ ಪ್ರಶ್ನೆಯೇ ಇಲ್ಲ. ನಿಜವಾಗಿ ಬಿಜೆಪಿಯವರೇ ಸ್ಥಾನ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ರಾಜ್ಯದ ಜನ 135 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಿಸಿ, ಸುಭದ್ರ ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗಾಗಿ, ಸರ್ಕಾರಕ್ಕೆ ಯಾವುದೇ ಭೀತಿ ಇಲ್ಲ’ ಎಂದು ಹೇಳಿದರು.
‘ಮಳೆಯಿಂದ ಹಾನಿಯಾದ ಬಗ್ಗೆ ವರದಿ ತರಿಸಿಕೊಂಡು, ಸೂಕ್ತ ಪರಿಹಾರ ನೀಡಲಾಗುತ್ತದೆ. ಬಿಜೆಪಿ ಸರ್ಕಾರವಿದ್ದಾಗ ಕುಸಿದ ಮನೆಗೆ ₹5 ಲಕ್ಷ ಪರಿಹಾರ ನೀಡುವ ಘೋಷಣೆ ಮಾಡಿತ್ತು. ಹೆಚ್ಚಿನವರಿಗೆ ಈ ಪರಿಹಾರ ಸಿಕ್ಕಿಲ್ಲ’ ಎಂದು ಹೇಳಿದರು.
‘ಮುಂಬರುವ ಲೋಕಸಭಾ ಚುನಾವಣೆ ಸಿದ್ಧತೆ ಕುರಿತು ಆಗಸ್ಟ್ 2ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಭೆ ಕರೆದಿದ್ದಾರೆ. ಈಚೆಗೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿವರು ಹಾಗೂ ಶಾಸಕರ ನಡುವಿನ ಅಂತರ ಕೊನೆಗೊಳಿಸುವ, ಸೌಹಾರ್ದ ವಾತಾವರಣ ನಿರ್ಮಿಸುವ ವಿಚಾರ ಪ್ರಸ್ತಾಪವಾಯಿತು. ಅಸಮಾಧಾನ, ಭಿನ್ನಾಭಿಪ್ರಾಯ ವ್ಯಕ್ತವಾಗಿಲ್ಲ’ ಎಂದು ಸ್ಪಷ್ಟಪಡಿಸಿದರು.