ಸೋಮವಾರ, ಡಿಸೆಂಬರ್ 6, 2021
24 °C

ಧಾರವಾಡ | ಪರಿಷತ್ ಚುನಾವಣೆ: ಬಿಜೆಪಿಗೆ ಮತ ಕೇಳುವ ನೈತಿಕತೆ ಇಲ್ಲ -ಕಾಂಗ್ರೆಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ದಿನಬಳಕೆಯ ವಸ್ತುಗಳ ಬೆಲೆ ಏರಿಕೆ, ಭ್ರಷ್ಟಾಚಾರ, ಆಡಳಿತ ವೈಫಲ್ಯ, ರೈತ ಹಾಗೂ ಜನ ವಿರೋಧಿ ನೀತಿಗಳಿಂದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಡಳಿತ ವಿರೋಧಿ ಅಲೆ ಎದುರಿಸುತ್ತಿವೆ. ಇವೇ ಈ ಬಾರಿಯ ಚುನಾವಣಾ ವಿಷಯಗಳಾಗಿದ್ದು, ಬಿಜೆಪಿಯವರಿಗೆ ಮತ ಕೇಳುವ ನೈತಿಕತೆಯೇ ಇಲ್ಲ’ ಎಂದು ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಸಲೀಂ ಅಹ್ಮದ್ ಟೀಕಿಸಿದರು.

‘ರಾಜ್ಯದಲ್ಲಿರುವುದು ನಿರ್ಜೀವ ಸರ್ಕಾರ. ಅಕಾಲಿಕ ಮಳೆಗೆ ರಾಜ್ಯದಾದ್ಯಂತ ಬೆಳೆ ಹಾಗೂ ಮನೆಗಳ ಹಾನಿಯಾಗಿ ಜನ ಸಂಕಷ್ಟದಲ್ಲಿದ್ದಾರೆ. ಆದರೆ, ಸಚಿವರು ಹಾಗೂ ಶಾಸಕರು ರೈತರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಇವೆಲ್ಲವೂ ಚುನಾವಣೆಯ ಮೇಲೆ ಪರಿಣಾಮ ಬೀರಲಿವೆ’ ಎಂದು ಗುರುವಾರ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹೆಚ್ಚಿನ ಅಂತರದಲ್ಲಿ ಗೆಲುವು: ‘ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸುವೆ. 25 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಹಿಂದೆ 14 ಸ್ಥಾನ ಗೆದ್ದಿದ್ದ ಪಕ್ಷ, ಈ ಬಾರಿ ಅದಕ್ಕಿಂತಲೂ ಹೆಚ್ಚಿನ ಸ್ಥಾನ ಗಳಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ರಾಜ್ಯ ಸರ್ಕಾರ ಪಂಚಾಯ್ತಿ ಚುನಾವಣೆಗಳನ್ನು ಮುಂದೂಡಿಕೊಂಡು ಬರುವ ಮೂಲಕ, ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸಡಿಲಗೊಳಿಸುತ್ತಿದೆ. ಗ್ರಾಮ ಪಂಚಾಯ್ತಿಯ ಅಧಿಕಾರವನ್ನು ಮೊಟಕುಗೊಳಿಸಲಾಗುತ್ತಿದೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡಿರುವ ಸ್ಥಳೀಯ ಜನಪ್ರತಿನಿಧಿಗಳು, ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದರು.

ಹಾವೇರಿ ಕರ್ಮಭೂಮಿ: ‘ನಾನು ಹೊರಗಿನವನಲ್ಲ. ಹಾವೇರಿ ನನ್ನ ಕರ್ಮಭೂಮಿ. 20 ವರ್ಷಗಳಿಂದ ಅಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ಎರಡು ಸಲ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದೇನೆ. ವಿಧಾನ ಪರಿಷತ್ ಸದಸ್ಯನಾಗಿ ಕ್ಷೇತ್ರಕ್ಕೆ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ’ ಎಂದು ಹೇಳಿದರು.

‘ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ವಿಧಾನ ಪರಿಷತ್ ಸದಸ್ಯರೂ ಆದ ಹುಬ್ಬಳ್ಳಿಯ ಎ.ಎಂ. ಹಿಂಡಸಗೇರಿ ಅವರಿಗೆ ಪಕ್ಷದಲ್ಲಿ ಉತ್ತಮ ಸ್ಥಾನ ನೀಡುವ ಕುರಿತು ಚರ್ಚೆ ನಡೆಯುತ್ತಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸ್ವಂತ ಕಟ್ಟಡಕ್ಕೆ ಮನವಿ: ನಂತರ ನಡೆದ ಮಹಾನಗರ ಮತ್ತು ಗ್ರಾಮೀಣ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಮಾತನಾಡಿದ ಮುಖಂಡ ಎಫ್‌.ಎಚ್. ಜಕ್ಕಪ್ಪನವರ, ‘ಜಿಲ್ಲೆಯಲ್ಲಿ ಪಕ್ಷದ ಕಚೇರಿಗೆ ಸ್ವಂತ ಕಟ್ಟಡವಿಲ್ಲ. ಚುನಾವಣೆ ಬಳಿಕ ಸಲೀಂ ಅಹ್ಮದ್ ಅವರು ಕೆಪಿಸಿಸಿ ವತಿಯಿಂದ ಸ್ವಂತ ಕಟ್ಟಡ ನಿರ್ಮಿಸುವ ವಾಗ್ದಾನ ನೀಡಬೇಕು. ಇದಕ್ಕೆ ನಾನೂ ಸೇರಿದಂತೆ ಪಕ್ಷದ ಎಲ್ಲಾ ಮುಖಂಡರು ಕೈ ಜೋಡಿಸಲಿದ್ದೇವೆ’ ಎಂದರು.

ಶಾಸಕ ಶ್ರೀನಿವಾಸ ಮಾನೆ, ಮುಖಂಡರಾದ ಸಂತೋಷ್ ಲಾಡ್, ಎಂ.ಎಸ್. ಅಕ್ಕಿ, ನಾಗರಾಜ ಛಬ್ಬಿ, ಸಯೀದ್ ಅಹ್ದಮ್, ಆರ್.ವಿ. ವೆಂಕಟೇಶ್, ಅನಿಲಕುಮಾರ ಪಾಟೀಲ, ಅಲ್ತಾಫ ಕಿತ್ತೂರ, ಅಲ್ತಾಫ ಹಳ್ಳೂರ, ಸದಾನಂದ ಡಂಗನವರ, ನಾಗರಾಜ ಗೌರಿ, ಬಂಗಾರೇಶ ಹಿರೇಮಠ, ಮಹಾನಗರ ಹಾಗೂ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಪಾಲಿಕೆ ಸದಸ್ಯರು ಇದ್ದರು.

‘ಮನ್ ಕಿ ಬಾತ್ ಬೇಡ, ಜನ್‌ ಕಿ ಬಾತ್ ಬೇಕು’
‘ಪ್ರಧಾನಿ ನರೇಂದ್ರ ಮೋದಿ ಅವರ ಸುಳ್ಳು ಆಶ್ವಾಸನೆಗಳಿಂದ ಜನ ಬೇಸತ್ತಿದ್ದಾರೆ. ಜನರಿಗೆ ಮೋದಿ ಅವರ ಮನ್ ಕಿ ಬಾತ್ ಬೇಡ, ಬದಲಿಗೆ ಜನ್‌ ಕಿ ಬಾತ್ ಬೇಕು. 56 ಇಂಚಿನ ಎದೆ ಇದ್ದರೆ ಸಾಲದು, ಜನರ ಸಂಕಷ್ಟಕ್ಕೆ ಸ್ಪಂದಿಸುವ ಹೃದಯ ಇರಬೇಕು’ ಎಂದು ಸಲೀಂ ಅಹ್ಮದ್ ಟೀಕಿಸಿದರು.

‘ರೈತರಿಗೆ ಬೇಡವಾದ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಸರ್ಕಾರಕ್ಕೆ ಒಂದು ವರ್ಷ ಬೇಕಾಯಿತು. ಈ ಅವಧಿಯಲ್ಲಿ 700ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಅವರ ಕುಟುಂಬಕ್ಕೆ ಸರ್ಕಾರ ತಲಾ ₹25 ಲಕ್ಷ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು