ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾಪ್ರದೇಶ ವಿಸ್ತಾರಕ್ಕೆ ಕೆರೆಗೆ ಮಣ್ಣು

ಕೆರೆಗಳ ಬೀಡು ನವಲೂರಿನಲ್ಲಿ ರಕ್ಷಣೆಗಿಲ್ಲ ಆಸಕ್ತಿ
Last Updated 10 ಫೆಬ್ರುವರಿ 2020, 4:07 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅಭಿವೃದ್ಧಿ ಎಂದ ಕೂಡಲೇ ಕೆರೆ–ಕುಂಟೆಗಳಿಗೆ ಮಹತ್ವವೇ ಉಳಿಯುವುದಿಲ್ಲ. ಅದರಲ್ಲೂ ಇದೀಗ ಪಾಲಿಕೆ ವ್ಯಾಪ್ತಿಗೆ ಬಂದಿರುವ ಪ್ರದೇಶಗಳಲ್ಲಂತೂ ಅಭಿವೃದ್ಧಿಯಾದರೆ ಸಾಕು, ಅದಕ್ಕೆ ಯಾವುದಾದರೂ ಸಮಾಧಿಯಾದರೂ ಪರವಾಗಿಲ್ಲ ಎಂಬ ಭಾವನೆ ಜನಮಾನಸದಲ್ಲೂ ಇದೆ. ಇಂತಹ ಪರಿಸ್ಥಿತಿಯಿಂದಲೇ ನಲುಗುತ್ತಿವೆ ನವಲೂರಿನ ಕೆರೆಗಳು. ಶಾಲಾ–ಕಾಲೇಜಿನ ಹೆಸರಲ್ಲಿ ಕೆರೆಗೆ ಕಣ್ಣ ಮುಂದೆಯೇ ಮಣ್ಣು ಸುರಿಯಲಾಗುತ್ತಿದ್ದರೂ ಜನರು, ಜನಪ್ರತಿನಿಧಿಗಳು ಸುಮ್ಮನೆಯೇ ಇದ್ದಾರೆ.

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ಖ್ಯಾತಿ ನವಲೂರಿನದ್ದು. ಪಾಲಿಕೆಗೆ ಸೇರಿದ್ದರೂ ಇನ್ನೂ ಹಳ್ಳಿಯಸೊಗಡಿನಿಂದ ಹೊರಬರದ ನವಲೂರಿನಲ್ಲಿ ಎಂಪ್ರಿ ಪ್ರಕಾರ, 19 ಕೆರೆ–ಕುಂಟೆಗಳಿವೆ. ಇದರಲ್ಲಿ ನಾಲ್ಕು ಅವನತಿಯ ಹಾದಿಯಲ್ಲಿರುವುದು ಶೋಚನೀಯ. ಈ ಕೆರೆಗಳಲ್ಲಿ ನವಲೂರು ಕೆರೆ ಸರ್ವೆ ನಂ. 192ರಲ್ಲಿ 68.2 ಎಕರೆ ಪ್ರದೇಶದಲ್ಲಿ ಇಂದಿಗೂ ಅತಿಹೆಚ್ಚು ಕಲ್ಮಶವಿಲ್ಲದೆ ನಳನಳಿಸುತ್ತಿದೆ. ಆದರೆ, ಈ ಕೆರೆ ಅಭಿವೃದ್ಧಿ ಕಾರ್ಯ ಅಭಿವೃದ್ಧಿಯ ತೀರ ದೂರ ಉಳಿದಿದೆ. ಪದಗಟ್ಟಿ ಕೆರೆ, ನವಲೂರು ಕೆರೆ, ಹೆಗ್ಗೇರಿ ಎಂದೆಲ್ಲ ಹೆಸರು ಹೊಂದಿದ್ದು, ಕೃಷಿಗೆ ಸಾಕಷ್ಟು ನೀರು ಒದಗಿಸುತ್ತಿರುವ ಕೆರೆಯಾಗಿದ್ದರೂ, ಸಣ್ಣ ನೀರಾವರಿ ಇಲಾಖೆ ಸುಪರ್ದಿಯಲ್ಲಿರುವ ಈ ಕೆರೆಯ
ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಯಾರೂ ಮುಂದಾಗಿಲ್ಲ.

ನವಲೂರು ಕೆರೆ–1 ಊರ ಹೊರಭಾಗದಲ್ಲಿದೆ. 2.5 ಮೀಟರ್‌ನಷ್ಟು ಆಳ ಹೊಂದಿರುವ ಈ ಕೆರೆ, ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದೆ. ಮೂರು ಎಕರೆಗೂ ಹೆಚ್ಚಿನ ವ್ಯಾಪ್ತಿಯಲ್ಲಿದ್ದು, ತ್ಯಾಜ್ಯ ಸುರಿಯುವುದು, ಮನುಷ್ಯರಿಂದ ಮಲಿನಗೊಳ್ಳುತ್ತಿರುವುದುಬೇಲಿ ಕಾಣದ ಈ ಕೆರೆಯ ದುಃಸ್ಥಿತಿ.

ನವಲೂರಿನ ಕೆರೆ–2 ಅಂದರೆ ಬಸಪ್ಪನ ಕೆರೆ ಇಲ್ಲಿನ ಜನರ ಧಾರ್ಮಿಕ ತಾಣ. ಗುಡ್ಡದ ಮೇಲಿರುವ ಬಸವಣ್ಣನ ದೇವಾಲಯದ ಕೆಳಭಾಗದಲ್ಲಿರುವುದೇ ಈ ಕೆರೆ. ಉಳವಿ ಬಸವಣ್ಣನ ಮೂರ್ತಿಗೆ ಇದು ಎದುರಬದುರಾಗಿದೆ ಎಂಬ ಪ್ರತೀತಿ ಇದೆ. ಇಂತಹ ಬಸಪ್ಪನ ಕೆರೆ ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ಕೆರೆ, ಎಲ್ಲ ಕಾಲದಲ್ಲೂ ನೀರಿನ ಸಂಗ್ರಹ ಹೊಂದಿ, ಜಾನುವಾರುಗಳಿಗೆ ಆಸರೆಯಾಗಿದೆ. ಮೂರು ಮೀಟರ್‌ನಷ್ಟು ಆಳ ಹೊಂದಿರುವ,ಸುತ್ತೂರು ಕಾಲೊನಿ ಸಮೀಪವಿರುವ ಈ ಕೆರೆಯ ಸುತ್ತಮುತ್ತ, ದೇವಸ್ಥಾನ, ಅರಣ್ಯ ಪ್ರದೇಶವಿದೆ.

ನವಲೂರಿನ ಕೆರೆ–3 ಶಾಲೆಗಾಗಿ ತನ್ನ ಜೀವ ಕಳೆದುಕೊಳ್ಳುತ್ತಿದೆ. ಸರ್ಕಾರಿ ಶಾಲೆ–ಕಾಲೇಜಿನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಈಗಾಗಲೇ ಶೇ 15ರಷ್ಟು ಕೆರೆ ಪ್ರದೇಶವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಇದೀಗ ಮತ್ತೆ ಅದೇ ಕೆರೆಗೆ ಮತ್ತಷ್ಟು ಮಣ್ಣು ತುಂಬಲಾಗುತ್ತಿದೆ.ಕಟ್ಟಡ ತ್ಯಾಜ್ಯ ಹಾಗೂ ಕೃಷಿ ತ್ಯಾಜ್ಯ ಸುರಿಯುವ ತಾಣವಾಗಿರುವ ಈ ಕೆರೆ ನಾಲ್ಕು ಮೀಟರ್‌ನಷ್ಟು ಆಳ ಹೊಂದಿದೆ.

ನವಲೂರು ಕೆರೆ, ಪದಗಟ್ಟಿ ಕೆರೆ, ಹೆಗ್ಗೇರಿ ಎಂದು ಹಲವು ಹೆಸರಿನಲ್ಲಿ ಕರೆಯಲಾಗುವ ಕೆರೆ–4 ಅತ್ಯಂತ ವಿಸ್ತಾರವಾಗಿದೆ. ಗೃಹ-ಕಟ್ಟಡ ತ್ಯಾಜ್ಯ ಸುರಿಯಲಾಗುತ್ತಿರುವ ಈ ಕೆರೆ ಮೂರು ಮೀಟರ್‌
ನಷ್ಟು ಆಳ ಹೊಂದಿದೆ. ಒಳಚರಂಡಿ ನೀರು ಇಲ್ಲಿಗೆ ಹರಿಯುತ್ತಿದ್ದು, ಮಾಲಿನ್ಯದ ಮೂಲ ಕಾರಣವಾಗಿದೆ. ಈ ಕೆರೆಗೆ ಮೂರನೇ ಕೆರೆ ಹೊಂದಿಕೊಂಡಂತಿದೆ. ಮೂರನೇ ಕೆರೆ ಕೋಡಿ ಬಿದ್ದರೆ ನಾಲ್ಕನೇ ಕೆರೆಗೇ ಹರಿಯುವುದು. ಕಳೆದ ಬಾರಿ ಭಾರಿ ಮಳೆಯಿಂದ ಮೂರನೇ ಕೆರೆ ಕೋಡಿ ಬಿದ್ದು, ಏರಿ ಒಡೆದುಹೋಗಿತ್ತು. ಅದನ್ನು ಈವರೆಗೆ ದುರಸ್ತಿ ಮಾಡಿಲ್ಲ. ಅದಾದರೆ, ಕೆರೆ ಉಳಿದುಕೊಂಡರೆ ಶಾಲೆ ಕಟ್ಟಡ ಆಗುವುದಿಲ್ಲ ಎಂಬುದು ಕೆಲವು ಸ್ಥಳೀಯರ ಮಾತು.

ನವಲೂರು ಕುಂಟೆ–11 ಗಾಂಧಿನಗರದಲ್ಲಿ ಬಯಲು ಪ್ರದೇಶವಾಗಿ ಒತ್ತುವರಿಯಾಗಿದ್ದರೆ,ಕುಂಟೆ–12ಬಡಾವಣೆ, ಕಟ್ಟಡ/ಮನೆಗಳಿಂದ ಕೆರೆ ಸಂಪೂರ್ಣ ಒತ್ತುವರಿಯಾಗಿದೆ. ನವಲೂರು ಕೆರೆಗೆ ಎದುರುಭಾಗದಲ್ಲಿ ಸೇತುವೆಯ ನಂತರವಿರುವ ಕುಂಟೆ–13ಒಂದು ಮೀಟರ್‌ನಷ್ಟು ಆಳ ಹೊಂದಿರುವ ಈ ಕೆರೆ, ತ್ಯಾಜ್ಯ ಸುರಿಯುವ ತಾಣವಾಗಿದೆ. ಕಟ್ಟಡ ತ್ಯಾಜ್ಯ, ಕೃಷಿ ತ್ಯಾಜ್ಯ ಇಲ್ಲಿ ಕಾಣುತ್ತದೆ. ಅಂಬೇಡ್ಕರ್ ನಗರ, ಯಾಲಕ್ಕಿ ಶೆಟ್ಟರ್ ಕಾಲೊನಿಯಲ್ಲಿ ಅರ್ಧ ಮೀಟರ್‌ನಷ್ಟು ಆಳ ಹೊಂದಿರುವ ಕುಂಟೆ–14ರಲ್ಲಿ ಮನೆಗಳು ಹಾಗೂ ದೇವಸ್ಥಾನಕ್ಕಾಗಿ ಶೇ 45ರಷ್ಟು ಒತ್ತುವರಿಯಾಗಿದೆ. ಇನ್ನು ನವಲೂರಿಗೆ ಕುಡಿಯಲು ನೀರು ಕೊಟ್ಟು ಕುಡಿ ಹೊಂಡ ಎಂದೇ ಹೆಸರು ಹೊಂದಿದ್ದ ಕುಂಟೆ–15 ಇದೀಗ ಅಕ್ಷರಶಃ ಕಲ್ಮಶದ ಹೊಂಡವಾಗಿದೆ.ದೇವಸ್ಥಾನ, ಮನೆಗಳು ಮತ್ತು ರಸ್ತೆಗಾಗಿ ಶೇ 8.5ರಷ್ಟು ಕೆರೆ ಒತ್ತುವರಿಯಾಗಿದೆ.

ನವಲೂರಿನಲ್ಲಿ 19 ಕೆರೆಗಳಲ್ಲಿ ನಾಲ್ಕು ಕೆರೆಗಳು ದುರ್ಬಳಕೆ ಆಗಿದ್ದರೂ, ಅವುಗಳನ್ನು ಪುನರುಜ್ಜೀವನಗೊಳಿಸುವ ಎಲ್ಲ ಸಾಧ್ಯತೆಗಳೂ ಇವೆ. ಆದರೆ, ಅಭಿವೃದ್ಧಿ ಸಂದರ್ಭದಲ್ಲಿ ಇವೆಲ್ಲವನ್ನು ಗಣನೆಗೆ ತೆಗೆದುಕೊಂಡರೆ ಇದು ವಾಸ್ತವವಾಗುವಲ್ಲಿ ಸಂದೇಹವಿಲ್ಲ.

ನವಲೂರು

ಕೆರೆ–1lಜೀವಂತ

ವಿಸ್ತಾರ: ಸರ್ವೆ ನಂ. 419/ಎ; 3 ಎಕರೆ 27 ಗುಂಟೆ

ನಿರ್ಮಾಣ: 1876

ಎಲ್ಲಿದೆ?:ನವಲೂರು ಊರಹೊರಭಾಗ

ಕೆರೆ–2 / ಬಸಪ್ಪನ ಕೆರೆlಜೀವಂತ

ವಿಸ್ತಾರ: ಸರ್ವೆ ನಂ. 419/ಎ; 2 ಎಕರೆ 22 ಗುಂಟೆ

ನಿರ್ಮಾಣ: 1876

ಎಲ್ಲಿದೆ?: ಸುತ್ತೂರು ಕಾಲೊನಿ,ನವಲೂರು

ಕೆರೆ–3lಜೀವಂತ

ವಿಸ್ತಾರ: ಸರ್ವೆ ನಂ.20;7ಎಕರೆ37 ಗುಂಟೆ

ನಿರ್ಮಾಣ: 1876

ಎಲ್ಲಿದೆ?: ಸರ್ಕಾರಿ ಶಾಲೆ,ನವಲೂರು

ನವಲೂರು ಕೆರೆ–4 / ಪದಗಟ್ಟಿ ಕೆರೆlಜೀವಂತ

ವಿಸ್ತಾರ: ಸರ್ವೆ ನಂ.97;68 ಎಕರೆ38 ಗುಂಟೆ

ನಿರ್ಮಾಣ: 1876

ಎಲ್ಲಿದೆ?: ಹೆದ್ದಾರಿ ಪಕ್ಕ,ನವಲೂರು

ಕುಂಟೆ–11lದುರ್ಬಳಕೆ

ವಿಸ್ತಾರ: ಸರ್ವೆ ನಂ.75;2ಎಕರೆ

ನಿರ್ಮಾಣ: 1876

ಎಲ್ಲಿದೆ?:ಗಾಂಧಿನಗರ, ಧಾರವಾಡ

ಕುಂಟೆ–12lದುರ್ಬಳಕೆ

ವಿಸ್ತಾರ: ಸರ್ವೆ ನಂ.73;2ಎಕರೆ26 ಗುಂಟೆ

ನಿರ್ಮಾಣ: 1876

ಎಲ್ಲಿದೆ?:ಗಾಂಧಿನಗರ,, ಧಾರವಾಡ

ಕುಂಟೆ–13lಜೀವಂತ

ವಿಸ್ತಾರ: ಸರ್ವೆ ನಂ.83;1ಎಕರೆ36 ಗುಂಟೆ

ನಿರ್ಮಾಣ: 1876

ಎಲ್ಲಿದೆ?:ನವಲೂರು ಕೆರೆ/ಹೆದ್ದಾರಿ ಎದುರು

ಕುಂಟೆ–14lಜೀವಂತ

ವಿಸ್ತಾರ: ಸರ್ವೆ ನಂ.85;34 ಗುಂಟೆ

ನಿರ್ಮಾಣ: 1876

ಎಲ್ಲಿದೆ?:ಅಂಬೇಡ್ಕರ್ ನಗರ,
ಯಾಲಕ್ಕಿ ಶೆಟ್ಟರ್ ಕಾಲೊನಿ, ಧಾರವಾಡ

ಕುಂಟೆ–15lಜೀವಂತ

ವಿಸ್ತಾರ: ಸರ್ವೆ ನಂ.19;3ಎಕರೆ29 ಗುಂಟೆ

ನಿರ್ಮಾಣ: 1876

ಎಲ್ಲಿದೆ?:ನವಲೂರು ಶಾಲೆ ಸಮೀಪ

(ಎಂಪ್ರಿ ಅಧ್ಯಯನದ ಪ್ರಕಾರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT