ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಗೂ ಐತಿ... ನವಲೂರಿನ ಪ್ಯಾಟಿ ಸಂತಿ

Last Updated 6 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಅವಳಿ ನಗರವನ್ನೇ ತಮ್ಮತ್ತ ನೋಡುವಂತೆ ಮಾಡಲು ಇಲ್ಲಿನ ‘ಫ್ರೆಂಡ್ಸ್ ಗ್ರೋಥ್‌ ಅಸೋಸಿಯೇಷನ್‌’ನ ಗೆಳೆಯರು ಯೋಜನೆ ರೂಪಿಸಿದರು. ಅದುವೇ ನವಲೂರಿನ ‘ಭಾನುವಾರ ಪ್ಯಾಟಿ ಸಂತಿ’.

ಸುಮಾರು 25ರಿಂದ 30 ಸಾವಿರ ಜನಸಂಖ್ಯೆ ಇರುವ ನವಲೂರು ಗ್ರಾಮದಲ್ಲಿರುವ ಬಹುತೇಕ ಕುಟುಂಬಗಳ ರೈತಾಪಿ ಕೆಲಸ ಮಾಡುವವರೇ.. ಊರು ಅಂದಮೇಲೆ ಅಲ್ಲೊಂದು ಗೆಳೆಯರ ಗುಂಪು ಇರಲೇಬೇಕು. ಆದರೆ ಆ ಗುಂಪು ಊರಿನ ಶ್ರೇಯೋಭಿವೃದ್ಧಿಯತ್ತ ಯೋಚಿಸಿದರೆ, ಅದು ಹೇಗೆ ಗ್ರಾಮದ ದಿಸೆಯನ್ನೇ ಬದಲಿಸಬಹುದು ಎಂಬುದಕ್ಕೆ ನವಲೂರಿನಲ್ಲಿ ಪ್ರತಿ ಭಾನುವಾರ ನಡೆಯುವ ‘ಭಾನುವಾರ ಪ್ಯಾಟಿ ಸಂತಿ’ಯೇ ಸಾಕ್ಷಿ.

ಬಿಆರ್‌ಟಿಎಸ್‌ ಯೋಜನೆಯಿಂದಾಗಿ, ಎದುರು ಕೋಟೆಯಂತ ಮೇಲ್ಸೇತುವೆ ನಿರ್ಮಾಣದಿಂದಾಗಿ ಊರಿನ ಅಂದವೇ ಕಳೆದುಹೋಯಿತು ಎಂದು ತಲೆಮೇಲೆ ಕೈಹೊತ್ತು ಕುಳಿತಿದ್ದ ಸಂದರ್ಭ. ಜತೆಗೆ ಈ ಊರಿನಲ್ಲಿ ಬೆಳೆದ ತರಕಾರಿ, ಕಾಳು ಕಡಿಯನ್ನು ದೂರದ ಪೇಟೆಗೆ ಒಯ್ದು ಮಾರಬೇಕಾದ ಅನಿವಾರ್ಯತೆ ಇಲ್ಲಿನ ರೈತರದ್ದಾಗಿತ್ತು. ಇದಕ್ಕೊಂದು ಪರಿಹಾರವೆಂಬಂತೆ, ಅವಳಿ ನಗರವನ್ನೇ ತಮ್ಮತ್ತ ನೋಡುವಂತೆ ಮಾಡಲು ಇಲ್ಲಿನ ‘ಫ್ರೆಂಡ್ಸ್ ಗ್ರೋಥ್‌ ಅಸೋಸಿಯೇಷನ್‌’ನ ಗೆಳೆಯರು ಯೋಜನೆ ರೂಪಿಸಿದರು. ಅದುವೇ ನವಲೂರಿನ ‘ಭಾನುವಾರ ಪ್ಯಾಟಿ ಸಂತಿ’.

ಒಂದೆಡೆ ಸ್ವಚ್ಛಂದ, ವಿಶಾಲವಾದ ನವಲೂರು ಕೆರೆ, ಮತ್ತೊಂದೆಡೆ ಗ್ರಾಮದ ಮೈಲಾರನ ಗುಡಿ. ಆ ಮುಖ್ಯರಸ್ತೆಗೆ ಹೊಂದಿಕೊಂಡಂತೆ ನವಲೂರು ಸಂತೆ, ನಗರದಲ್ಲೂ ಹಳ್ಳಿಯ ಸೊಗಡನ್ನು ಉಣಬಿಸುವಂತಿದೆ. ಹುಬ್ಬಳ್ಳಿ ಧಾರವಾಡ ನಡುವಿನ ನವಲೂರು ಗ್ರಾಮ ನಗರದ ಸಾಮೀಪ್ಯದೊಂದಿಗೆ ಗ್ರಾಮೀಣ ಸೊಗಡು ಹೊದ್ದ ಊರು. ಈಗ ಪ್ಯಾಟಿ ಸಂತಿ ಮೂಲಕ ಪ್ರತಿ ಭಾನುವಾರ ಇಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಈ ಕುರಿತು ಮಾಹಿತಿ ನೀಡಿದ ಗೆಳೆಯರ ಬಳಗದಲ್ಲಿ ಒಬ್ಬರಾದ ವೆಂಕಟೇಶ ವೆರ್ಣೇಕರ್, ‘ನಮ್ಮೂರಿನ ಉತ್ಪನ್ನ ಹೊರಹೋಗುತ್ತಿರುವುದು ಒಂದೆಡೆ. ಮತ್ತೊಂದೆಡೆ, ನಮ್ಮೂರಿನವರೇ ಗ್ರಾಹಕರಾಗಿ ಅವುಗಳನ್ನು ಖರೀದಿಸುತ್ತ ಇಬ್ಬರಿಗೂ ಸಂಬಂಧವೇ ಇಲ್ಲದಂತೆ ಇದ್ದೇವೆ. ಅದರ ಬದಲು, ಊರಿನ ವಸ್ತುಗಳನ್ನು ಊರಿನವರೇ ಖರೀದಿಸಿದರೆ, ಮಾರುವವರಿಗೆ ದೂರ ಹೋಗುವುದು ತಪ್ಪಲಿದೆ, ಖರೀದಿಸುವವರಿಗೆ ಹತ್ತಿರದಲ್ಲೇ ಕಡಿಮೆ ದರಕ್ಕೆ ಬೇಕಾದ ವಸ್ತುಗಳು ಸಿಗಲಿದೆ. ಈ ಪರಿಕಲ್ಪನೆಯಲ್ಲಿ ಈ ಸಂತೆಯನ್ನು ಆಯೋಜಿಸುವ ಇಂಗಿತ ವ್ಯಕ್ತಪಡಿಸಿದೆವು. ಇದಕ್ಕೆ ಎಲ್ಲರಿಂದಲೂ ಸಹಮತ ವ್ಯಕ್ತವಾಯಿತು’ ಎಂದು ವಿವರಿಸಿದರು.

ಧಾರವಾಡ ಕೃಷಿ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾದ ಮಹಾವೀರ ಜೈನ್ ಅವರೂ ಇದೇ ಊರಿನರೇ ಆಗಿರುವುದರಿಂದ ಅವರ ಸಹಕಾರವೂ ದೊರೆಯಿತು. ಇದಕ್ಕೊಂದು ಸ್ಥಳ ನಿಗದಿ ಮಾಡಲು ಹೊರಟಾಗ, ಮೈಲಾರ ದೇವರ ಗುಡಿ ಪಕ್ಕದ ಜಾಗವೇ ಸೂಕ್ತ ಎಂದು ಎಲ್ಲರೂ ನಿರ್ಧರಿಸಿದರು. ಸುಮಾರು ಏಳು ಸಾಲಿನಲ್ಲಿ ವ್ಯಾಪಾರಿಗಳು ಕೂರಲು ವ್ಯವಸ್ಥೆ ಮಾಡಲಾಯಿತು. ದೀಪದ ಬೆಳಕು, ರಸ್ತೆಯ ದೂಳು ಏಳದಂತೆ ನೀರು ಹಾಯಿಸುವ ವ್ಯವಸ್ಥೆ ಮಾಡಿದೆವು. ಆರಂಭದಲ್ಲಿ ವ್ಯಾಪಾರಕ್ಕೆ ಹಿಂಜರಿದ ರೈತರು, ಒಬ್ಬೊಬ್ಬರಾಗಿ ಮುಂದೆ ಬಂದರು. ಮತ್ತೊಂದೆಡೆ ಖರೀದಿಗೆ ಮಹಿಳೆಯರೂ ಮುಂದಾದರು. ಹೀಗಾಗಿ ಊರಿನೊಳಗೆ ಮಾರಾಟ, ಖರೀದಿ ಆರಂಭಗೊಂಡಿತು’ ಎಂದರು.

ಏನೇನಿದೆ ಸಂತೆಯಲ್ಲಿ
ಸಂತೆಯಲ್ಲಿ ಊರಿನಲ್ಲೇ ಬೆಳೆದ ಟೊಮೆಟೊ, ಈರುಳ್ಳಿ, ಬದನೆಕಾಯಿ, ಕೊತ್ತೊಂಬರಿ, ಮೆಣಸು, ಸಬ್ಬಸಿಗೆ, ಗೆಣಸು ಇತ್ಯಾದಿ ತರಕಾರಿಗಳ ಜತೆಗೆ, ಇಲ್ಲಿನ ರೈತರ ಹೊಲದ ಹಕ್ಕರಿಕೆ, ಪುಂಡಿ ಸೊಪ್ಪು, ಮೆಂತೆ ತಪ್ಲ, ಜವಾರಿ ಮೂಲಂಗಿ ಇತ್ಯಾದಿಗಳೂ ಲಭ್ಯ. ಗ್ರಾಮದ ಅಜ್ಜಿಯರೇ ಹಸನು ಮಾಡಿದ ತರಹೇವಾರಿ ಕಾಳುಗಳು ಸಿಗುತ್ತಿವೆ.

ಇಷ್ಟು ಮಾತ್ರವಲ್ಲ, ದಿನಸಿ ವಸ್ತುಗಳು ಒಂದು, ಅರ್ಧ, ಕಾಲು ಕಿಲೋ ಪೊಟ್ಟಣಗಳಲ್ಲಿಟ್ಟು ಇಲ್ಲಿ ಮಾರುತ್ತಾರೆ. ಚುರುಮುರಿ ಜತೆಗೆ ಮಿರ್ಚಿ ಸವಿಯುವವರಿಗೆ ಬಿಸಿಬಿಸಿ ಮಿರ್ಚಿ ಬಜ್ಜಿ ಇಲ್ಲಿ ಲಭ್ಯ. ಮಹಿಳೆಯರಿಗೆ ಅಗತ್ಯವಿರುವ ಸೌಂದರ್ಯ ಸಾಧನಗಳೂ ಸಂತೆಯಲ್ಲಿ ಲಭ್ಯ. ತಾಯಂದಿರೊಂದಿಗೆ ಬರುವ ಮಕ್ಕಳಿ ಆಟಿಕೆಗಳೂ ಇಲ್ಲಿವೆ. ಇಷ್ಟೇ ಏಕೆ, ಮನೆಗೆ ಬೇಕಾದ ಹಾಸಿಗೆ, ಹೊದಿಕೆ, ಪಾತ್ರೆ, ಪ್ಲಾಸ್ಟಿಕ್ ವಸ್ತುಗಳು ನವಲೂರಿನ ಸಂತೆಯಲ್ಲಿ ಲಭ್ಯ.

ಇಲ್ಲಿನ ವಹಿವಾಟನ್ನು ಫ್ರೆಂಡ್ಸ್‌ ಗ್ರೋಥ್ ಅಸೋಸಿಯೇಷನ್ ಸದಸ್ಯರು ಸೂಕ್ಷ್ಮವಾಗಿ ಗಮನಿಸುತ್ತಲೇ ಇರುತ್ತಾರೆ. ತೂಕದಲ್ಲಿ ಯಾವುದೇ ಮೋಸವಾಗದಂತೆ ವ್ಯಾಪಾರಸ್ಥರ ನಡುವೆ ಯಾವುದೇ ಮನಸ್ಥಾಪವಾಗದಂತೆಯೂ ಎಚ್ಚರವಹಿಸುತ್ತಾರೆ. ತೂಕದಲ್ಲಿ ಯಾವುದೇ ಗೊಂದಲ ಇದ್ದರೆ, ಅದನ್ನು ಪರಿಹರಿಸಿಕೊಳ್ಳಲು ಈ ಗೆಳಯರೇ ತಕ್ಕಡಿಯನ್ನು ಇಟ್ಟಿದ್ದಾರೆ. ಅದರಲ್ಲಿ ಮರು ತೂಕ ಮಾಡಿಸಿ ಸಂದೇಹ ಪರಿಹರಿಸಿಕೊಳ್ಳಬಹುದು.

ಈಗಾಗಲೇ ನಾಲ್ಕು ವಾರಗಳನ್ನು ಪೂರೈಸಿರುವ ಸಂತೆಗೆ ವಾರದಿಂದ ವಾರಕ್ಕೆ ವ್ಯಾಪಾರಸ್ಥರು ಮತ್ತು ಖರೀದಿದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎನ್ನುವುದು ಗೆಳೆಯರ ಮಾತು. ವ್ಯಾಪಾರ ನಡೆಸುವವರು ಅವರ ಆಧಾರ್ ಕಾರ್ಡ್ ಪ್ರತಿಯನ್ನು ಆಯೋಜಕರಿಗೆ ನೀಡಬೇಕು. ಮೊದಲು ಬಂದವರಿಗೆ ಮೊದಲ ಆಧ್ಯತೆಯಂತೆ ಸ್ಥಳ ಹಂಚಿಕೆ ಮಾಡಲಾಗುತ್ತಿದೆ. ವಾರಪೂರ್ತಿ ಬೇರೆಡೆ ವ್ಯಾಪಾರ ಮಾಡುವ ಕೆಲ ಹೊರಗಿನ ವ್ಯಾಪಾರಿಗಳೂ ಇಲ್ಲಿ ತಮ್ಮ ವಹಿವಾಟು ವಿಸ್ತರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT