ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏತ ನೀರಾವರಿ ಯೋಜನೆಗಿಲ್ಲ ಕಾನೂನು ತೊಡಕು: ವಕೀಲ‌ ಮೋಹನ ಕಾತರಕಿ

ಮಹದಾಯಿ, ಕಳಸಾ–ಬಂಡೂರಿ ಯೋಜನೆ ಸ್ವರೂಪ ಬದಲಾವಣೆ: ವಕೀಲ‌ ಮೋಹನ ಕಾತರಕಿ ಅಭಿಪ್ರಾಯ
Last Updated 23 ಅಕ್ಟೋಬರ್ 2022, 12:24 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಮಹದಾಯಿ, ಕಳಸಾ–ಬಂಡೂರಿ ಏತ ನೀರಾವರಿ ಯೋಜನೆಗೆ ಕಾನೂನಿನ ಯಾವುದೇ ತೊಡಕಿಲ್ಲ. ಯೋಜನೆಯ ಸ್ವರೂಪದ ಬದಲಾವಣೆಯಿಂದ ಅರಣ್ಯ ಮುಳುಗಡೆ ಮತ್ತು ಯೋಜನಾ ವೆಚ್ಚದ ಪ್ರಮಾಣವೂ ತಗ್ಗಲಿದೆ. ಹಾಗಾಗಿ, ಯೋಜನೆಗೆ ವಿರೋಧ ಸರಿಯಲ್ಲ’ ಎಂದು ಯೋಜನೆಯ ಕರ್ನಾಟಕ ಪರ ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಮೋಹನ ಕಾತರಕಿ ಅಭಿಪ್ರಾಯಪಟ್ಟರು.

ಮಹದಾಯಿ ಹೋರಾಟ ಸಮಿತಿ ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ‘ಮಹದಾಯಿ, ಕಳಸಾ-ಬಂಡೂರಿ ಯೋಜನೆ ಸ್ವರೂಪ ಬದಲಾವಣೆ’ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಕಾಲುವೆ ಮೂಲಕ ನೀರು ಹರಿಸುವ ಹಿಂದಿನ ಯೋಜನೆಯಿಂದ 300–400 ಹೆಕ್ಟೇರ್ ಅರಣ್ಯ ಮುಳುಗಡೆಯಾಗುತ್ತಿತ್ತು. ಕೇಂದ್ರ ಪರಿಸರ ಇಲಾಖೆ ಅನುಮತಿ ಸೇರಿದಂತೆ ವಿವಿಧ ಇಲಾಖೆಗಳ ಅನುಮತಿ‌ ಪಡೆಯಬೇಕಿತ್ತು.‌ ಅನುಮತಿ ಸಿಕ್ಕರೂ, ಸುಪ್ರೀಂಕೋರ್ಟ್‌ನಲ್ಲಿ ಗೋವಾ ಪ್ರಶ್ನಿಸುವ ಸಾಧ್ಯತೆ ಇತ್ತು. ಯೋಜನೆ ಕಾರ್ಯಗತವಾಗಲು ಬಹಳ ಸಮಯ‌ ಬೇಕಾಗುತ್ತಿತ್ತು’ ತ್ತದೆ’ ಎಂದರು.

‘ಏತ ನೀರಾವರಿಯಿಂದ ಅರಣ್ಯ ಮುಳುಗಡೆ ಪ್ರಮಾಣ ಸುಮಾರು 50 ಹೆಕ್ಟೇರ್‌ಗೆ ತಗ್ಗಲಿದೆ. ವೆಚ್ಚ ಅಂದಾಜು ₹600 ಕೋಟಿಯಷ್ಟು ಇಳಿಕೆಯಾಗಲಿದೆ. ಯೋಜನೆಗೆ ಕೇಂದ್ರ ಪರಿಸರ ಇಲಾಖೆ ಬದಲು, ರಾಜ್ಯ ಅರಣ್ಯ ಇಲಾಖೆ ಅನುಮತಿ ನೀಡಬೇಕಾಗುತ್ತದೆ. ಯೋಜನೆ ವಿಳಂಬವಾಗುವುದಿಲ್ಲ. ಹಿಂದಿನಂತೆ ಏತ ನೀರಾವರಿಗೆ ಈಗ ವಿದ್ಯುತ್ ಕೊರತೆ ಇಲ್ಲ’ ಎಂದು ಹೇಳಿದರು.

‘ನ್ಯಾಯಾಧೀಕರಣದಿಂದ ಹಂಚಿಕೆಯಾಗಿರುವ 13.42 ಟಿಎಂಸಿ ಅಡಿ ನೀರಿನ ಜೊತೆಗೆ, ಕೃಷಿಗಾಗಿ 7 ಟಿಎಂಸಿ ಅಡಿ ನೀರಿಗಾಗಿ ನಾವು ಸುಪ್ರೀಂಕೋರ್ಟ್‌ನಲ್ಲಿ ಹೋರಾಡುತ್ತಿದ್ದೇವೆ. ಇದಕ್ಕೆ ಗೋವಾ ತಕರಾರು ಮಾಡಿದ್ದರೂ, ನಮ್ಮ ಪರ ತೀರ್ಪು ಬರುವ ವಿಶ್ವಾಸವಿದೆ’ ಎಂದು ತಿಳಿಸಿದರು.

ಮಾಜಿ ಶಾಸಕ ಎನ್.‌ಎಚ್. ಕೋನರಡ್ಡಿ, ‘ರಾಜ್ಯದಲ್ಲಿ ಶೇ 40ರಷ್ಟು ಏತ ನೀರಾವರಿ ಯೋಜನೆಗಳು ವಿಫಲವಾಗಿವೆ. ಮಹದಾಯಿ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ಇರುತ್ತದೆ. ಹೀಗಿರುವಾಗ, ಏತ ನೀರಾವರಿ ಮೂಲಕ‌ ನೀರು ಕೊಡಲು ಹೇಗೆ ಸಾಧ್ಯ? ಹಿಂದಿನ ಡಿಪಿಆರ್‌ನಂತೆ, ಕಾಲುವೆ ನಿರ್ಮಾಣ ಆರಂಭವಾಗಿರುವಾಗ, ಯೋಜನೆಯನ್ನು ಏತ ನೀರಾವರಿ ಯೋಜನೆಯಾಗಿ ಬದಲಿಸಲು ಕಾರಣ ಏನು?’ ಎಂದು ಪ್ರಶ್ನಿಸಿದರು.

ಕಾರ್ಯಾಗಾರದ ಸಾನ್ನಿಧ್ಯ ವಹಿಸಿದ್ದ ಫಕ್ಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ, ನೀರಾವರಿ ಇಲಾಖೆಯ ನಿವೃತ್ತ ಎಂಜಿನಿಯರ್‌ಗಳು ಸಹ ಏತ ನೀರಾವರಿ ಪರ ಅಭಿಪ್ರಾಯ ವ್ಯಕ್ತಪಡಿಸಿದರು.

ಗೋವಾದ ಧೋರಣೆಗೆ ಬೇಸರ

‘ನದಿ ನೀರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆಗೆದುಕೊಂಡು ಹೋಗುವುದು ಕಾನೂನಾತ್ಮಕವಾಗಿ ಅಷ್ಟು ಸುಲಭವಲ್ಲ. ರಾಜ್ಯಗಳು ಈ ವಿಷಯದಲ್ಲಿ ಹೆಚ್ಚು ಯಶಸ್ವಿಯಾಗಿಲ್ಲ. ಹಾಗಾಗಿಯೇ, ರಾಜ್ಯದ ಮಹದಾಯಿ ಯೋಜನೆ ವಿರುದ್ಧ ಗೋವಾದಲ್ಲಿ ಇಲ್ಲದ ವಾದಗಳು ಹುಟ್ಟಿಕೊಂಡವು. ಯೋಜನೆ ವಿಷಯದಲ್ಲಿ ಗೋವಾ ತೋರಿದ ಧೋರಣೆ ಅತ್ಯಂತ ಕೆಟ್ಟದಾಗಿತ್ತು. ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಜೊತೆಗೂ ನಾವು ಜಲ ವಿವಾದ ಹೊಂದಿದ್ದೇವೆ. ಆದರೆ, ಅವರು ತೋರಿದಂತಹ ಧೋರಣೆಯನ್ನು ಗೋವಾ ತೋರಲಿಲ್ಲ. ಅವರ ವಕೀಲರು ಲಿಂಬೆ ಹಣ್ಣು ತಂದು ಮಂತ್ರ ಹಾಕುವುದು ಸೇರಿದಂತೆ, ಪ್ರಕರಣದಿಂದ ನಮ್ಮನ್ನು ಹಿಮ್ಮೆಟ್ಟಿಸಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಿದ್ದರು’ ಎಂದು ಮೋಹನ ಕಾತರಕಿ ಗಮನ ಸೆಳೆದರು.

ರಾಜಕಾರಣ ಮಾಡಬಾರದು: ಜೋಶಿ

‘ರಾಜ್ಯ ಸರ್ಕಾರ ಮಹದಾಯಿ, ಕಳಸಾ–ಬಂಡೂರಿ ಯೋಜನೆಯ ಸ್ವರೂಪ ಬದಲಾಯಿಸಿರುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಕೇಂದ್ರ ಜಲ ಆಯೋಗದ (ಸಿಡಬ್ಲ್ಯುಸಿ) ಅನುಮತಿ ಸಿಕ್ಕರೆ ಒಂದು ವರ್ಷದಲ್ಲಿ ನೀರು ಸಿಗುತ್ತದೆ. ಹೆಚ್ಚುವರಿ ನೀರು ಹಂಚಿಕೆಯಾದರೆ, ಅದರ ಬಳಕೆಗೂ ಅನುಕೂಲವಾಗುತ್ತದೆ. ಈ ವಿಷಯದಲ್ಲಿ ರಾಜಕಾರಣ ಮಾಡಬಾರದು. ರೈತರಿಗೆ ನೀರು ಕೊಡುವುದು ಮುಖ್ಯ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹುಬ್ಬಳ್ಳಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT