ಮಂಗಳವಾರ, ಸೆಪ್ಟೆಂಬರ್ 28, 2021
20 °C
ನಿರ್ವಾಹಕ ಕರಿಗಾರ, ಚಾಲಕ ಹುಬ್ಬಳ್ಳಿ ಪ್ರಾಮಾಣಿಕತೆಗೆ ಮೆಚ್ಚುಗೆ

ಮೊಬೈಲ್, ಹಣ ಹಿಂದಿರುಗಿಸಿದ ಸಿಬ್ಬಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಪ್ರಯಾಣಿಕರೊಬ್ಬರು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಬಸ್ಸಿನಲ್ಲಿ ಮರೆತು ಹೋಗಿದ್ದ ಹಣ, ಮೊಬೈಲ್ ಹಾಗೂ ಮಹತ್ವದ ದಾಖಲೆಗಳಿದ್ದ ಬ್ಯಾಗನ್ನು ಹುಬ್ಬಳ್ಳಿ ಗ್ರಾಮಾಂತರ ವಿಭಾಗದ 1ನೇ ಘಟಕದ ಚಾಲಕ ಎಚ್‌.ಎ. ಹುಬ್ಬಳ್ಳಿ ಮತ್ತು ನಿರ್ವಾಹಕ ಎ.ಐ. ಕರಿಗಾರ ಅವರು, ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಸೊಲ್ಲಾಪುರ- ಹುಬ್ಬಳ್ಳಿ ಬಸ್‌ನಲ್ಲಿ ಧಾರವಾಡದ ನಾರಾಯಣಪುರದ ನಿವಾಸಿ ಹಾಗೂ ಕೆನರಾ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕರೂ ಆಗಿರುವ ನೀಲಕಂಠ ಹೊಸಮನಿ, ಶನಿವಾರ ರಾತ್ರಿ ವಿಜಯಪುರದಿಂದ ಹುಬ್ಬಳ್ಳಿಗೆ ಬಂದಿದ್ದರು. ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ ತಮ್ಮ ಬ್ಯಾಗನ್ನು ಸೀಟಿನಲ್ಲೇ ಮರೆತು ಬಸ್ ಇಳಿದಿದ್ದರು.

ನಿಲ್ದಾಣದಿಂದ ಬಸ್ ಡಿಪೊಗೆ ಹೊರಡುವಾಗ ನಿರ್ವಾಹಕ ಕರಿಗಾರ ಅವರು ಬಸ್ಸನ್ನು ಪರಿಶೀಲಿಸಿದಾಗ, ಹೊಸಮನಿ ಅವರು ಮರೆತಿದ್ದ ಬ್ಯಾಗ್ ಪತ್ತೆಯಾಯಿತು. ಈ ವಿಷಯವನ್ನು ಚಾಲಕ ಹುಬ್ಬಳ್ಳಿ ಅವರಿಗೆ ತಿಳಿಸಿದರು. ಬಳಿಕ ಇಬ್ಬರೂ, ಬ್ಯಾಗ್ ಕುರಿತು ಡಿಪೊ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದರು. ಬ್ಯಾಗ್‌ನಲ್ಲಿದ್ದ ಮೊಬೈಲ್ ಫೋನ್‌ನಲ್ಲಿ ದೊರೆತ ಕವರ್‌ನಲ್ಲಿದ್ದ ಸಂಪರ್ಕ ಸಂಖ್ಯೆಗೆ ಕರೆ ಮಾಡಿ ವಾರಸುದಾರರಿಗೆ ವಿಷಯ ತಿಳಿಸಿದರು. ಬಳಿಕ ಹೊಸಮನಿ ಅವರು ಡಿಪೊಗೆ ಬಂದು ಚಾಲಕ, ನಿರ್ವಾಹಕ ಹಾಗೂ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ತಮ್ಮ ಬ್ಯಾಗ್ ಮರಳಿ ಪಡೆದರು.

‘ಮಹತ್ವದ ದಾಖಲೆಗಳಿದ್ದ ಬ್ಯಾಗ್ ಕಳೆದು ಹೋಗಿದ್ದಕ್ಕೆ ಮನಸ್ಸಿಗೆ ತುಂಬಾ ನೋವಾಗಿತ್ತು. ಸಾರಿಗೆ ಸಿಬ್ಬಂದಿ ಕರೆ ಮಾಡಿ ಬಸ್ಸಿನಲ್ಲಿ ಬ್ಯಾಗ್ ಸಿಕ್ಕಿರುವ ವಿಷಯ ತಿಳಿಸಿದಾಗ, ನೆಮ್ಮದಿಯ ನಿಟ್ಟುಸಿರುವ ಬಿಟ್ಟೆ. ಅದರಲ್ಲಿ ₹10 ಸಾವಿರ ನಗದು, ಮೊಬೈಲ್ ಫೋನ್, ಮೂಲ ಚಾಲನಾ ಪರವಾನಿಗೆ, ಆಧಾರ ಕಾರ್ಡ್, ಪ್ಯಾನ್ ಕಾರ್ಡ್, ಉಳಿತಾಯ ಪತ್ರ, ಮನೆಯ ಕೀಲಿ ಕೈ ಸೇರಿದಂತೆ ಹಲವು ವಸ್ತುಗಳಿದ್ದವು. ಎಲ್ಲವೂ ಸುರಕ್ಷಿತವಾಗಿ ಸಿಕ್ಕಿವೆ. ಚಾಲಕ ಮತ್ತು ನಿರ್ವಾಹಕರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು’ ಎಂದು ನೀಲಕಂಠ ಹೊಸಮನಿ ಕೃತಜ್ಞತೆ ಸಲ್ಲಿಸಿದರು.

ಪ್ರಾಮಾಣಿಕತೆ ಮೆರೆದ ಚಾಲಕ ಮತ್ತು ನಿರ್ವಾಹಕನ ಬಗ್ಗೆ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮೆಚ್ಚುಗೆ ವ್ಯಕ್ತಪಡಿಸಿದರು. ಎಂಜಿನಿಯರ್ ಎಸ್.ವಿ. ಅಂಗಡಿ, ಕಾರ್ಮಿಕ ಕಲ್ಯಾಣ ಅಧಿಕಾರಿ ಶಂಕರ ಆಲಮೇಲ, ಆಡಳಿತಾಧಿಕಾರಿ ನಾಗಮಣಿ, ಲೆಕ್ಕಾಧಿಕಾರಿ ಸುನೀಲ ವಾಡೇಕರ, ಸಹಾಯಕ ಸಂಚಾರ ವ್ಯವಸ್ಥಾಪಕಿ ರೋಹಿಣಿ ಬೇವಿನಕಟ್ಟಿ ಹಾಗೂ ಸಂಚಾರ ಅಧೀಕ್ಷಕ ಟಿ.ಎಸ್. ಮುನ್ನಾಸಾಬ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು