ಹುಬ್ಬಳ್ಳಿ: ಇಲ್ಲಿನ ಹಳೇ ಬಸ್ ನಿಲ್ದಾಣ (ಕೇಂದ್ರ ಬಸ್ ನಿಲ್ದಾಣ) ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು, ಡಿಸೆಂಬರ್ ಅಥವಾ ಜನವರಿ ಮೊದಲ ವಾರದಲ್ಲಿ ಉದ್ಘಾಟನೆಗೆ ಸಿದ್ಧವಾಗಲಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿದ ನಂತರ ಅವರು ಮಾತನಾಡಿದರು. ಮುಂಬರುವ ದಿನಗಳಲ್ಲಿ ಈ ಬಸ್ ನಿಲ್ದಾಣವನ್ನು ಬಿ.ಆರ್.ಟಿ.ಎಸ್, ನಗರ ಸಾರಿಗೆ, ಗ್ರಾಮೀಣ ಸಾರಿಗೆ ಸೇರಿ ಸುಸಜ್ಜಿತ ಬಸ್ ನಿಲ್ದಾಣವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಅವರು ತಿಳಿಸಿದರು.
ಸಾಕಷ್ಟು ಬಸ್‌ಗಳಿಗೆ ನಿಲುಗಡೆ ಮಾಡಲು ಸ್ಥಳಾವಕಾಶ ಕೊಡಲಾಗಿದೆ. ಇದರ ಜೊತೆಗೆ 5 ಅಂತಸ್ತಿನವರೆಗೆ ಅಭಿವೃದ್ಧಿಪಡಿಸಲು ಅವಕಾಶವಿದೆ. ಪೇ ಪಾರ್ಕಿಂಗ್, ಸಿಬ್ಬಂದಿ ಕೊಠಡಿ, ವಾಣಿಜ್ಯ ಕಟ್ಟಡ ನಿರ್ಮಿಸಲು ಅವಕಾಶ ಕಲ್ಪಿಸಲಾಗಿದೆ. ವಾಹನಗಳು ಒಳ ಬರಲು ಹಾಗೂ ಹೊರಹೋಗಲು ಯಾವುದೇ ತೊಂದರೆಯಾಗದಂತೆ ನಿಗಾ ವಹಿಸಲಾಗಿದೆ ಎಂದು ಅವತು ಹೇಳಿದರು.
ಕಾಮಗಾರಿ ಇದೇ ತಿಂಗಳು ಪೂರ್ಣಗೊಳ್ಳಬೇಕಾಗಿತ್ತು. ಆದರೆ, ಕೆಲವೊಂದು ತಾಂತ್ರಿಕ ಕಾರಣಗಳಿಂದ ಹಾಗೂ ಮಳೆಯ ಕಾರಣದಿಂದಾಗಿ ವಿಳಂಬವಾಗಿದೆ. ಈಗ ಮುಕ್ಕಾಲು ಭಾಗ ಮುಗಿದಿದ್ದು, ಇನ್ನುಳಿದ ಕಾಮಗಾರಿಯನ್ನು ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದರು.
ಆಗಲೂ ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು. ಕಳಪೆ ಕಾಮಗಾರಿ ಕಂಡುಬಂದಲ್ಲಿ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮಕ್ಕೆ ಶಿಫಾರಸ್ಸು ಮಾಡುತ್ತೇನೆ ಎಂದು ಹೇಳಿದರು.
ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಆಗಿರುವ ಕಾಮಗಾರಿಗಳು ಸಮರ್ಪಕವಾಗಿಲ್ಲ. ಅಲ್ಲದೇ ಸಾಕಷ್ಟು ವಿಳಂಬವಾಗಿ ಕಾಮಗಾರಿಗಳು ನಡೆಯುತ್ತಿವೆ. ಸರ್ಕಾರದ ನಿರ್ದೇಶನದ ಮೇರೆಗೆ ಕೆಲವು ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಪಾಲಿಕೆಗೆ ಹಸ್ತಾಂತರಿಸಲಾಗಿದೆ ಎಂದರು.
ಕಾಮಗಾರಿ ವಿಳಂಬಕ್ಕೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು. ಕಾಮಗಾರಿ ಸರಿಯಾಗಿಲ್ಲವೆಂದರೆ ಗುತ್ತಿಗೆದಾರರ ಮೇಲೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರುದ್ರೇಶ ಗಾಳಿ ಮಾತನಾಡಿ, ಮೂರು ತಿಂಗಳುಗಳ ಕಾಲ ಕಾಮಗಾರಿ ವಿಳಂಬವಾಗಿದೆ. ಎರಡು ಎಸ್ಕುಲೇಟರ್, ಲಿಫ್ಟ್ ಅಳವಡಿಸುವ ಕುರಿತು ವಿಳಂಬವಾಗಿತ್ತು. ಇದನ್ನು ಬಿಟ್ಟರೆ ಗುತ್ತಿಗೆದಾರರ ವಿಳಂಬಕ್ಕೆ ನೋಟಿಸ್ ನೀಡಿ ದಂಡ ವಿಧಿಸಲಾಗಿದೆ ಎಂದರು.
ಪಾಲಿಕೆ ಸದಸ್ಯೆ ಮೀನಾಕ್ಷಿ ವಂಟಮೂರಿ, ಬಿಜೆಪಿ ಮುಖಂಡ ರವಿ ನಾಯಕ, ಎಂಜಿನಿಯರ್ ಶ್ರೀನಿವಾಸ ಸೇರಿದಂತೆ ಇತರರು ಇದ್ದರು.
ಬಸ್ ನಿಲ್ದಾಣದಲ್ಲಿ ಆಟೋ ಚಾಲಕರಿಗೆ ನಿಲ್ದಾಣ ಒದಗಿಸಬೇಕು ಎಂದು ಇದೇ ಸಂದರ್ಭದಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಅವರು ಶಾಸಕರಿಗೆ ಮನವಿ ಮಾಡಿದರು. ಶಾಸಕರು ಅಳವಡಿಸುವುದಾಗಿ ಭರವಸೆ ನೀಡಿದರು.
ಹುಬ್ಬಳ್ಳಿ: ‘ಪಕ್ಷದ ಮುಖಂಡರಾದ ಬಸನಗೌಡ ಪಾಟೀಲ ಯತ್ನಾಳ ಮತ್ತು ರಮೇಶ ಜಾರಕಿಹೊಳಿ ಅವರು ಪಾದಯಾತ್ರೆ ಮಾಡಲು ಮುಂದಾಗಿರುವುದು ಪಕ್ಷ ಬಲವರ್ಧನೆಗಾಗಿ ಆಗಿದೆ. ಇದರಲ್ಲಿ ಯಾವುದೇ ಭಿನ್ನಮತ ಕದ್ದು ಮುಚ್ಚಿ ಮಾಡುತ್ತಿಲ್ಲ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು. ಮೈಸೂರು ಪಾದಯಾತ್ರೆಯಲ್ಲಿ ವೈಯಕ್ತಿಕ ಕಾರಣಗಳ ಹಿನ್ನಲೆಯಲ್ಲಿ ಯತ್ನಾಳ ರಮೇಶ ಜಾರಕಿಹೊಳಿ ಅವರು ಭಾಗವಹಿಸದೇ ಇರಬಹುದು. ಮುಂದೆ ಪಕ್ಷ ಯಾವ ನಿರ್ಧಾರ ಕೈಗೊಳ್ಳುತ್ತದೆ ಅದಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.