ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

224 ಸ್ಥಾನ ಗೆಲ್ಲುವುದು ನಮ್ಮ ಗುರಿ: ಡಿ.ಕೆ ಶಿವಕುಮಾರ್‌

ಹುಬ್ಬಳ್ಳಿಯಲ್ಲಿ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ
Last Updated 30 ಜುಲೈ 2021, 13:48 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ನಮ್ಮ ಗುರಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 224 ಸ್ಥಾನಗಳನ್ನು ಗೆಲ್ಲುವುದಾಗಿದೆ.ಈ ದೇಶ ಮತ್ತು ರಾಜ್ಯವನ್ನು ಕಾಂಗ್ರೆಸ್ ಪಕ್ಷ ಆಳುವ ದಿನಗಳು ದೂರವಿಲ್ಲ. ಪಕ್ಷದಲ್ಲಿ ಹಿರಿಯರು ಮತ್ತು ಕಿರಿಯರು ಎಂಬುದಿಲ್ಲ. ಸಿದ್ಧಾಂತ ಹಾಗೂ ನಾಯಕತ್ವ ಮಾತ್ರ ಮುಖ್ಯ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ಮಾಜಿ ಶಾಸಕ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಎಸ್. ಬಂಗಾರಪ್ಪ ನನ್ನ ರಾಜಕೀಯ ಗುರು. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದಾಗ, ಬೇರೆ ಪಕ್ಷಕ್ಕೆ ಹೋಗುವ ಆಲೋಚನೆಯಲ್ಲಿದ್ದರು. ಆಗ ನಾನೇನು ಮಾಡಬೇಕು ಎಂದು ಕೇಳಿದಾಗ, ಕಾಂಗ್ರೆಸ್‌ನಲ್ಲೇ ಎಸ್.ಎಂ. ಕೃಷ್ಣ ಜೊತೆ ಇರು ಎಂದು ಸಲಹೆ ನೀಡಿದ್ದರು. ಅವರ ಮಾತಿನಿಂದಾಗಿ ನಾನು ಇಲ್ಲಿದ್ದೇನೆ. ಇಲ್ಲದಿದ್ದರೆ ಎಲ್ಲಿರುತ್ತಿದ್ದೆನೊ’ ಎಂದು ನೆನೆದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ, ‘ಬಂಗಾರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ರೈತರು, ಬಡವರು ಸೇರಿದಂತೆ ಎಲ್ಲಾ ಸಮುದಾಯಗಳ ಪರವಾಗಿ ಕೆಲಸ ಮಾಡಿದರು. ಮಧು ಅವರಿಗೂ ಸೋನಿಯಾ ಗಾಂಧಿ ಮತ್ತುರಾಹುಲ್ ಗಾಂಧಿ ಅವರ ಆಶೀರ್ವಾದ ಇದ್ದು, ಒಳ್ಳೆಯ ಕೆಲಸಗಳನ್ನು ಮಾಡಿ’ ಎಂದು ಶುಭ ಕೋರಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಬಂಗಾರಪ್ಪ ಅವರು ಎಲ್ಲಾ ಸಮುದಾಯಗಳ ನಾಯಕರಾಗಿದ್ದರು. ಅವರು ಬಿಜೆಪಿಗೆ ಹೋಗದಿದ್ದಿದ್ದರೆ ಇಂದು ಆ ಪಕ್ಷ ಅಧಿಕಾರದಲ್ಲಿ ಇರುತ್ತಿರಲಿಲ್ಲ. 2004ರಲ್ಲಿ ಆ ಪಕ್ಷಕ್ಕೆ 79 ಸ್ಥಾನ ಸಿಗಲು ಬಂಗಾರಪ್ಪ ಅವರ ಶಕ್ತಿ ಕಾರಣ’ ಎಂದು ಗಮನ ಸೆಳೆದರು.

‘ಸೋಷಿಯಲಿಸ್ಟ್ ಪಕ್ಷದ ಹಿನ್ನೆಲೆಯ ಅವರಿಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇತ್ತು. ಬಡವರು, ಪರಿಶಿಷ್ಟರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಬಗ್ಗೆ ಬದ್ಧತೆ ಇತ್ತು. ಹಾಗಾಗಿ, ಶಿವಮೊಗ್ಗಕ್ಕಷ್ಟೇ ಸೀಮಿತವಾಗದೆ ರಾಜ್ಯದಾದ್ಯಂತ ಅನುಯಾಯಿಗಳನ್ನು ಹೊಂದಿದ್ದರು. ಮಧು ಅವರಿಗೂ ಆ ಶಕ್ತಿ ಇದ್ದು, ಪರಂಪರೆಯನ್ನು ಮುಂದುವರಿಸಬೇಕು’ ಎಂದು ಸಲಹೆ ನೀಡಿದರು.

ಸಿದ್ದರಾಮಯ್ಯ ಅವರು ಭಾಷಣ ಮಾಡಲು ಬರುತ್ತಿದ್ದಂತೆ, ಸಭಿಕರು‘ಹುಲಿಯಾ’ ಎಂಬ ಕೂಗಿದರು. ‘ಏಯ್ ಸಾಕು ಸುಮ್ಮನಿರ್ರಪ್ಪ’ ಎಂದು ಸಿದ್ದರಾಮಯ್ಯ ಮಾತು ಆರಂಭಿಸಿದರು.

ರಾರಾಜಿಸಿದ ಕಟೌಟ್‌ಗಳು
ಗೋಕುಲ ರಸ್ತೆಯುದ್ದಕ್ಕೂ ಮಧು ಬಂಗಾರಪ್ಪ ಹಾಗೂ ಕಾಂಗ್ರೆಸ್‌ ನಾಯಕರ ಕಟೌಟ್‌ಗಳು ಮತ್ತು ಬಾವುಟಗಳು ರಾರಾಜಿಸಿದವು. ಕಾರ್ಯಕ್ರಮ ಮುಗಿದ ತಕ್ಷಣ ಕಾರ್ಯಕರ್ತರು ತೆರವುಗೊಳಿಸಿದರು. ಕಾರ್ಯಕ್ರಮಕ್ಕೆ ವಿವಿಧ ಜಿಲ್ಲೆಗಳಿಂದ ಬಂಗಾರಪ್ಪ ಅವರ ಬೆಂಬಲಿಗರು ಹಾಗೂ ಈಡಿಗ ಸಮುದಾಯದ ಮುಖಂಡರು ಬಂದಿದ್ದರು.

ತಂದೆ ಸ್ಥಾನದಲ್ಲಿ ಸಿದ್ದರಾಮಯ್ಯ: ಬಂಗಾರಪ್ಪ

ಡಿ.ಕೆ. ಶಿವಕುಮಾರ್ ಅಣ್ಣನವರೇ ಎಂದು ಮಾತು ಆರಂಭಿಸಿದ ಮಧು ಬಂಗಾರಪ್ಪ, ‘ತಂದೆ ಸಿ.ಎಂ ಆಗಿದ್ದಾಗ ನಾನು ವಿಧಾನಸೌಧಕ್ಕೆ ಹೋಗಲಿಲ್ಲ. ನಾನು ಶಾಸಕನಾದಾಗ ತಂದೆ ಇರಲಿಲ್ಲ. ಆದರೆ, ಅವರ ಸ್ಥಾನದಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ನೋಡಿದೆ’ ಎಂದು ಹೇಳಿದರು.

ಜೆಡಿಎಸ್ ಹೇಳಿಕೆಗೆ ಪ್ರತಿಕ್ರಿಯಿಸಲ್ಲ

‘ಪಕ್ಷ ಬಿಡುವುದು ಮಧು ಬಂಗಾರಪ್ಪ ಅವರ ವೈಯಕ್ತಿಕ ನಿರ್ಧಾರ’ ಎಂಬ ಜೆಡಿಎಸ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಯಾವುದೇ ಪಕ್ಷದ ಮುಖಂಡರು ವೈಯಕ್ತಿಕವಾಗಿಯೇ ಬೆಂಬಲಿಗರೊಂದಿಗೆ ಪಕ್ಷ ತೊರೆಯುತ್ತಾರೆ. ಎಲ್ಲಾ ಸಮುದಾಯಗಳ ದನಿಯಾಗುವ ಪಕ್ಷದಲ್ಲಿ ಇರಬೇಕು ಅಂದುಕೊಂಡು ಬೆಂಬಲಿಗರೊಂದಿಗೆ ಚರ್ಚಿಸಿ, ಈ ನಿರ್ಧಾರ ಕೈಗೊಂಡಿದ್ದೇನೆ. ಜೆಡಿಎಸ್ ಗೌರವಿಸುವೆ. ಅವರ ಹೇಳಿಕೆಗೆ ಪ್ರತಿಕ್ರಿಯಿಸಲ್ಲ. ಹೊಸ ದಾರಿಯತ್ತ ಗಮನ ಹರಿಸುತ್ತೇನೆ’ ಎಂದರು.

ಜೇನುಗೂಡಿಗೆ ಕೈ ಹಾಕಿದಂತೆ

‘ಸಿಂಗದೂರು ಚೌಡೇಶ್ವರಿ ದೇವಸ್ಥಾನದ ಆಡಳಿತದ ವಿಷಯದಲ್ಲಿ ಯಾರೂ ತಲೆ ಹಾಕಬಾರದು. ಜೇನುಗೂಡಿಗೆ ಕೈ ಹಾಕಿದರೆ ಕಚ್ಚುತ್ತೆ ಎಂದು ಈಗಾಗಲೇ ಹೇಳಿದ್ದೇನೆ.ದೇವಸ್ಥಾನಕ್ಕೆ ಎಲ್ಲಾ ಸಮುದಾಯದ ಭಕ್ತರೂ ಇದ್ದಾರೆ. ಅವರೆಲ್ಲರ ಪರವಾಗಿ ಹಾಗೂ ನನ್ನ ಸಮಾಜದ ಪ್ರತಿನಿಧಿಯಾಗಿ ದನಿ ಎತ್ತಿದ್ದೇನೆ. ಕೆಲವರು ದುರುದ್ದೇಶದಿಂದ ದೇವಸ್ಥಾನದ ವಿಷಯದಲ್ಲಿ ವಿವಾದ ಸೃಷ್ಟಿಸಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT